
ನಟ ರಕ್ಷಿತ್ ಶೆಟ್ಟಿ ಅವರು ತಮ್ಮ ಫೇಸ್‌ಬುಕ್ ಕವರ್ ಫೋಟೋವಾಗಿ '777 ಚಾರ್ಲಿ' ಸಿನಿಮಾದ ಭಾವನಾತ್ಮಕ ಮತ್ತು ಬೇಸರದ ದೃಶ್ಯವೊಂದನ್ನು ಅಪ್‌ಲೋಡ್ ಮಾಡಿರುವುದು ಸಖತ್ ವೈರಲ್ ಆಗಿದೆ.
ರಶ್ಮಿಕಾ-ವಿಜಯ್ ಮದುವೆ ಬೆನ್ನಲ್ಲೇ 'ಚಾರ್ಲಿ'ಯ ಭಾವುಕ ಚಿತ್ರ ಹಂಚಿಕೊಂಡ ರಕ್ಷಿತ್ ಶೆಟ್ಟಿ
ರಕ್ಷಿತ್ ಮತ್ತು ರಶ್ಮಿಕಾ ಈ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡು ನಂತರ ದೂರಾಗಿದ್ದರು. ಈಗ ರಶ್ಮಿಕಾ ಮದುವೆಯಾದ ಸಮಯದಲ್ಲಿ ರಕ್ಷಿತ್ ಅವರು ಇಂತಹ ಫೋಟೋ ಹಂಚಿಕೊಂಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅವರು ರಾಜಸ್ಥಾನದ ಉದಯಪುರದಲ್ಲಿ ಇತ್ತೀಚೆಗಷ್ಟೇ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಯ ಬೆನ್ನಲ್ಲೇ, ಕನ್ನಡದ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಅವರು ತಮ್ಮ ಫೇಸ್‌ಬುಕ್ ಖಾತೆಯ ಕವರ್ ಫೋಟೋವನ್ನು ಬದಲಾಯಿಸಿದ್ದು, '777 ಚಾರ್ಲಿ' ಸಿನಿಮಾದ ಭಾವುಕ ದೃಶ್ಯವೊಂದನ್ನು ಅಪ್‌ಲೋಡ್ ಮಾಡಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಈ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡು, ಆ ಬಳಿಕ ಬೇರೆಯಾಗಿದ್ದರು. ಇದೀಗ ರಶ್ಮಿಕಾ ಮದುವೆಯಾದ ಬೆನ್ನಲ್ಲೇ ರಕ್ಷಿತ್ ಶೆಟ್ಟಿ ಇಂಥದ್ದೊಂದು ಫೋಟೋ ಹಂಚಿಕೊಂಡಿರುವುದು ಹಲವು ಕುತೂಹಲಕಾರಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಸ್ತುತ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ 'ರಿಚರ್ಡ್ ಆಂಟನಿ' ಸ್ಕ್ರಿಪ್ಟ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ರಕ್ಷಿತ್, ಬಹಳ ದಿನಗಳಿಂದ ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಂಡಿದ್ದರು. ದಿಢೀರನೆ ಭಾವುಕ ಫೋಟೋವೊಂದನ್ನು ಹಂಚಿಕೊಂಡಿರುವುದನ್ನು ಕಂಡ ಅಭಿಮಾನಿಗಳು, "ಹಳೆಯದನ್ನು ಮರೆತು ಹೊಸ ಜೀವನ ಆರಂಭಿಸಿ" ಎಂದು ಅವರಿಗೆ ಕಾಮೆಂಟ್‌ಗಳ ಮೂಲಕ ಸ್ಫೂರ್ತಿ ತುಂಬುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ಅವರು 2025ರ ಏಪ್ರಿಲ್‌ನಲ್ಲಿ ಕೊನೆಯದಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಬಹಳ ದಿನಗಳ ಕಾಲ ಯಾವುದೇ ಅಪ್‌ಡೇಟ್ ನೀಡದ ಕಾರಣಕ್ಕಾಗಿಯೇ ಅವರು ಇದೀಗ ಕವರ್ ಫೋಟೋ ಬದಲಾಯಿಸಿರಬಹುದು ಎಂತಲೂ ಊಹಿಸಲಾಗುತ್ತಿದೆ. ಮತ್ತೆ ಕೆಲವರು, ರಕ್ಷಿತ್ ಅವರಿಗೆ ತಮ್ಮ ನೆಚ್ಚಿನ 'ಚಾರ್ಲಿ' ಸಿನಿಮಾದ ನೆನಪಾಗಿ ಈ ಫೋಟೋ ಹಾಕಿರಬಹುದು ಎಂದು ವಿಶ್ಲೇಷಿಸುತ್ತಿದ್ದಾರೆ.
ಕಿರಿಕ್ ಪಾರ್ಟಿ ಮೂಲಕ ಪದಾರ್ಪಣೆ
ರಿಷಬ್ ಶೆಟ್ಟಿ ನಿರ್ದೇಶನದ ಹಾಗೂ ರಕ್ಷಿತ್ ಶೆಟ್ಟಿ ನಟನೆಯ ಬ್ಲಾಕ್‌ಬಸ್ಟರ್ 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡಿದ್ದರು. ಈ ಚಿತ್ರದ ಚಿತ್ರೀಕರಣದ ವೇಳೆ ಇವರಿಬ್ಬರ ನಡುವೆ ಸ್ನೇಹ ಚಿಗುರಿ, ಬಳಿಕ ಅದು ಪ್ರೀತಿಗೆ ತಿರುಗಿತ್ತು. ತದನಂತರ ಈ ಜೋಡಿ 2017ರ ಜುಲೈ 3ರಂದು ವಿರಾಜಪೇಟೆಯ ರಶ್ಮಿಕಾ ಅವರ ನಿವಾಸದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿತ್ತು. ಈ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು ಹಾಗೂ ಕುಟುಂಬಸ್ಥರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದರು.
ಆದರೆ, ನಿಶ್ಚಿತಾರ್ಥವಾದ ಒಂದು ವರ್ಷದ ಬಳಿಕ ಈ ಜೋಡಿಯ ಸಂಬಂಧದಲ್ಲಿ ಬಿರುಕು ಮೂಡಿತ್ತು. ವೈಯಕ್ತಿಕ ಕಾರಣಗಳು ಹಾಗೂ ವೃತ್ತಿಜೀವನದ ಒತ್ತಡದಿಂದಾಗಿ ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ನಿಶ್ಚಿತಾರ್ಥವನ್ನು ಮುರಿದುಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದರು. ಈ ಸುದ್ದಿ ಅಂದು ಅವರ ಅಭಿಮಾನಿಗಳಿಗೆ ತೀವ್ರ ಬೇಸರ ತರಿಸಿತ್ತು. ಆ ಬಳಿಕ ಮದುವೆಯ ನಿರ್ಧಾರದಿಂದ ಹಿಂದೆ ಸರಿದ ಇಬ್ಬರೂ ತಮ್ಮ ವೃತ್ತಿಜೀವನದತ್ತ ಸಂಪೂರ್ಣ ಗಮನ ಹರಿಸಿದ್ದರು.
ಪ್ರಸ್ತುತ ರಶ್ಮಿಕಾ ಮಂದಣ್ಣ ಅವರು ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆದಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ನ್ಯಾಷನಲ್ ಕ್ರಶ್' ಆಗಿ ಹೊರಹೊಮ್ಮಿದ್ದಾರೆ.

