
ಮಗಳು ಐರಾ, ಮಗ ಯಥರ್ವ ಹಾಗೂ ತಮ್ಮ ತಾಯಿಯ ಜೊತೆಗೂಡಿ ಹೊಸ ವರ್ಷವನ್ನು ರಾಧಿಕಾ ಬರಮಾಡಿಕೊಂಡಿದ್ದಾರೆ.
ರಾಧಿಕಾ ಪಂಡಿತ್ ಯುಗಾದಿ ಸಂಭ್ರಮ: ಹಬ್ಬದ ಫೋಟೋದಲ್ಲಿ ಮಿಸ್ಸಿಂಗ್ 'ರಾಕಿ ಭಾಯ್'
ನಟಿ ರಾಧಿಕಾ ಪಂಡಿತ್ ಅವರು ತಮ್ಮ ಮಕ್ಕಳು ಹಾಗೂ ತಾಯಿಯೊಂದಿಗೆ ಸಾಂಪ್ರದಾಯಿಕವಾಗಿ ಯುಗಾದಿ ಆಚರಿಸಿದ್ದಾರೆ. ಆದರೆ ಈ ಫೋಟೋಗಳಲ್ಲಿ ಯಶ್ ಕಾಣಿಸದಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ನಟಿ ರಾಧಿಕಾ ಪಂಡಿತ್ ಅವರು ಪ್ರತಿ ಹಬ್ಬವನ್ನೂ ಅತ್ಯಂತ ಸಾಂಪ್ರದಾಯಿಕವಾಗಿ ಮತ್ತು ಸಡಗರದಿಂದ ಆಚರಿಸುವಲ್ಲಿ ಮುಂದು. ಇತ್ತೀಚೆಗಷ್ಟೇ ಮಾರ್ಚ್ 7ರಂದು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದ ಅವರು, ಈಗ ಯುಗಾದಿ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದಾರೆ. ಮಗಳು ಐರಾ, ಮಗ ಯಥರ್ವ ಹಾಗೂ ತಮ್ಮ ತಾಯಿಯ ಜೊತೆಗೂಡಿ ಹೊಸ ವರ್ಷವನ್ನು ಬರಮಾಡಿಕೊಂಡಿರುವ ರಾಧಿಕಾ, ಹಬ್ಬದ ಸುಂದರ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ದೇವಸ್ಥಾನಕ್ಕೆ ಭೇಟಿ ನೀಡಿ, ಬೇವು-ಬೆಲ್ಲ ಸವಿಯುವ ಮೂಲಕ ಭಾರತೀಯ ಸಂಪ್ರದಾಯದಂತೆ ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿ ಯುಗಾದಿಯನ್ನು ಅವರು ಆಚರಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ಎಲ್ಲರಿಗೂ ಯುಗಾದಿ ಹಾಗೂ ಹೊಸ ವರ್ಷದ ಶುಭಾಶಯಗಳು. ಈ ವರ್ಷ ಎಲ್ಲರ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ" ಎಂದು ನಾಡಿನ ಜನತೆಗೆ ಹಾರೈಸಿದ್ದಾರೆ. ಹಂಚಿಕೊಂಡಿರುವ ಫೋಟೋಗಳಲ್ಲಿ ಕುಟುಂಬದ ಸದಸ್ಯರ ಮುಖದಲ್ಲಿ ಹಬ್ಬದ ಕಳೆ ಎದ್ದು ಕಾಣುತ್ತಿದೆ.
ಆದರೆ, ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಒಂದು ಸಣ್ಣ ಕೊರತೆ ಅಭಿಮಾನಿಗಳಿಗೆ ಕಾಡುತ್ತಿದೆ. ಸಾಧಾರಣವಾಗಿ ಎಲ್ಲಾ ವಿಶೇಷ ದಿನಗಳಲ್ಲಿ ರಾಧಿಕಾ ಅವರ ಜೊತೆಗಿರುತ್ತಿದ್ದ 'ರಾಕಿ ಭಾಯ್' ಯಶ್ ಅವರು ಈ ಯುಗಾದಿ ಸಂಭ್ರಮದ ಫೋಟೋಗಳಲ್ಲಿ ಎಲ್ಲೂ ಕಾಣಿಸಿಕೊಂಡಿಲ್ಲ. ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಯಶ್ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುವ ಕಾರಣ ಹಬ್ಬಕ್ಕೆ ಗೈರಾಗಿರಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.
ಇನ್ನು ರಾಧಿಕಾ ಅವರ ಜನ್ಮದಿನದ ವಿಚಾರಕ್ಕೆ ಬಂದರೆ, ಅಂದು ಅವರು ಸಖತ್ ಮಾಡರ್ನ್ ಅವತಾರದಲ್ಲಿ ಮಿಂಚಿದ್ದರು. ಯಶ್ ಹಾಗೂ ಅವರ ಸ್ನೇಹಿತರ ಬಳಗ ಆಯೋಜಿಸಿದ್ದ ಆ ಬರ್ತ್‌ಡೇ ಪಾರ್ಟಿಯಲ್ಲಿ ನಿರ್ದೇಶಕ ಪ್ರಶಾಂತ್ ನೀಲ್, ಅಭಿಷೇಕ್ ಅಂಬರೀಶ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಹಲವು ಗಣ್ಯರು ಭಾಗವಹಿಸಿದ್ದರು. ಅಂದಿನ ಪಾರ್ಟಿಯ ಕಲರ್‌ಫುಲ್ ವಿಡಿಯೋಗಳನ್ನು ರಾಧಿಕಾ ಅವರು ಕೆಲ ದಿನಗಳ ಹಿಂದಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಸದ್ಯ ಅವರು ತಮ್ಮ ಕುಟುಂಬ ಹಾಗೂ ಮಕ್ಕಳ ಆರೈಕೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

