25 ವರ್ಷ ಬಳಿಕ ʻಕೋಟಿಗೊಬ್ಬʼ ಹೈಟೆಕ್‌  ರೀ-ರಿಲೀಸ್;  ವಿಷ್ಣು ಅಭಿಮಾನಿಗಳ ಸಡಗರ
x

'ಕೋಟಿಗೊಬ್ಬ' 25ರ ಸಂಭ್ರಮ! ಹೈಟೆಕ್ ಸ್ಪರ್ಶದೊಂದಿಗೆ ರೀ-ರಿಲೀಸ್ ಆದ ವಿಷ್ಣುದಾದಾ ಸಿನಿಮಾ ನೋಡಲು ಪ್ರಸನ್ನ ಥಿಯೇಟರ್‌ನಲ್ಲಿ ಅಭಿಮಾನಿಗಳ ಸಾಗರ.

25 ವರ್ಷ ಬಳಿಕ ʻಕೋಟಿಗೊಬ್ಬʼ ಹೈಟೆಕ್‌ ರೀ-ರಿಲೀಸ್; ವಿಷ್ಣು ಅಭಿಮಾನಿಗಳ ಸಡಗರ

'ಕೋಟಿಗೊಬ್ಬ' 25ರ ಸಂಭ್ರಮ! ಹೈಟೆಕ್ ಸ್ಪರ್ಶದೊಂದಿಗೆ ರೀ-ರಿಲೀಸ್ ಆದ ವಿಷ್ಣುದಾದಾ ಸಿನಿಮಾ ನೋಡಲು ಪ್ರಸನ್ನ ಥಿಯೇಟರ್‌ನಲ್ಲಿ ಅಭಿಮಾನಿಗಳ ಸಾಗರ.


Click the Play button to hear this message in audio format

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೈಲಿಗಲ್ಲು ಸೃಷ್ಟಿಸಿದ್ದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಲೆಜೆಂಡರಿ ಸಿನಿಮಾ 'ಕೋಟಿಗೊಬ್ಬ' ತೆರೆಕಂಡು ಇಂದಿಗೆ 25 ವರ್ಷಗಳು ಸಂದಿವೆ. ಈ ವಿಶೇಷ ಸಂದರ್ಭವನ್ನು ಸ್ಮರಿಸಲು ಚಿತ್ರತಂಡವು ಲೇಟೆಸ್ಟ್ ಡಿಜಿಟಲ್ ತಂತ್ರಜ್ಞಾನದೊಂದಿಗೆ ಸಿನಿಮಾವನ್ನು ಮರು-ಬಿಡುಗಡೆ ಮಾಡಿದ್ದು, ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಇಂದು ಹಬ್ಬದ ವಾತಾವರಣ ಮನೆಮಾಡಿದೆ.

ಮುಂಜಾನೆಯಿಂದಲೇ ನೂರಾರು ಅಭಿಮಾನಿಗಳು ಚಿತ್ರಮಂದಿರದ ಮುಂದೆ ಜಮಾಯಿಸಿದ್ದು, ವಿಷ್ಣುದಾದಾ ಮೇಲಿರುವ ತಮ್ಮ ಅಚಲ ಪ್ರೀತಿಯನ್ನು ಪ್ರದರ್ಶಿಸಿದ್ದಾರೆ.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರ ಇಂದು ವಿಷ್ಣು ಅಭಿಮಾನಿಗಳ ಪಾಲಿಗೆ ದೇವಸ್ಥಾನದಂತೆ ಕಂಗೊಳಿಸುತ್ತಿತ್ತು. ಚಿತ್ರಮಂದಿರದ ಆವರಣದಲ್ಲಿ ವಿಷ್ಣುವರ್ಧನ್‌ ಅವರ ಮಂಟಪವನ್ನು ಅದ್ದೂರಿಯಾಗಿ ಸಿಂಗರಿಸಲಾಗಿತ್ತು. ಈ ಸಂಭ್ರಮದಲ್ಲಿ ಮಹಿಳಾ ಅಭಿಮಾನಿಗಳ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿತ್ತು. ಸುಮಾರು 101 ತೆಂಗಿನಕಾಯಿಗಳನ್ನು ಹೊಡೆಯುವ ಮೂಲಕ ಸಿನಿಮಾ ಮರುಬಿಡುಗಡೆಗೆ ಚಾಲನೆ ನೀಡಿದ ಮಹಿಳೆಯರು, ಕೇಕ್ ಕತ್ತರಿಸಿ ಸಂಭ್ರಮಿಸಿದರು. ಅಷ್ಟೇ ಅಲ್ಲದೆ, ಚಿತ್ರಮಂದಿರಕ್ಕೆ ಬಂದ ಸಾರ್ವಜನಿಕರಿಗೆ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ ಹಾಗೂ ಸಿಹಿತಿಂಡಿಗಳನ್ನು ವಿತರಿಸುವ ಮೂಲಕ ಅನ್ನದಾನ ಮಾಡಿದ್ದು ವಿಶೇಷವಾಗಿತ್ತು.

ಅಂದು ಚಾಕು ತೋರಿಸಿ ಟಿಕೆಟ್ ಕಿತ್ತಿದ್ದರು

ಸಿನಿಮಾ ನೋಡಲು ಬಂದಿದ್ದ ಅಭಿಮಾನಿಗಳು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು. ಅಭಿಮಾನಿ ನಿತಿನ್ ಕುಮಾರ್ ಬಿ.ಜಿ. ಅವರು ʼ ದ ಫೆಡರಲ್‌ ಕರ್ನಾಟಕʼ ಅಂದಿನ ಕಹಿ-ಸಿಹಿ ಘಟನೆಯನ್ನು ನೆನಪಿಸಿಕೊಳ್ಳುತ್ತಾ, " 25 ವರ್ಷದ ಹಿಂದೆ ಹೇಗಿತ್ತೋ ಅದಕ್ಕಿಂತ ಡಬಲ್ ಕ್ರೇಜ್ ಈಗಿದೆ. ಅಂದು ನಾವು ನವರಂಗ್ ಥಿಯೇಟರ್‌ನಲ್ಲಿ ಚಿಕ್ಕ ಹುಡುಗರಾಗಿದ್ದಾಗ ಫಸ್ಟ್ ಶೋ ಟಿಕೆಟ್ ತಗೊಂಡಿದ್ವಿ. ಆದರೆ ಯಾರೋ ಚಾಕು ತೋರಿಸಿ ನಮ್ಮ ಹತ್ತಿರವಿದ್ದ ಟಿಕೆಟ್ ಕಿತ್ತುಕೊಂಡು ಹೋಗಿದ್ದರು. ಆ ವ್ಯಕ್ತಿ ವಾಪಸ್ ಬಂದು ನಮಗೆ 20 ರೂಪಾಯಿ ಕೊಟ್ಟು ಹೋಗಿದ್ದ. ಇಂದು ಅದೇ ಫಸ್ಟ್ ಶೋ ನೋಡಲು ಸ್ನೇಹಿತ ಕುಮಾರಸ್ವಾಮಿ ಜೊತೆ ಬಂದಿದ್ದೇನೆʼʼ ಎಂದು ತಮ್ಮ ಹಳೆಯ ಘಟನೆಯನ್ನು ಮೆಲುಕು ಹಾಕಿದ್ದಾರೆ.

ಮತ್ತೊಬ್ಬ ಅಭಿಮಾನಿ ಯಾದಗಿರಿಯ ನಾಗರಾಜ್ ʼ ದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡುತ್ತಾ, "ನಾನು ಯಾದಗಿರಿಯಿಂದ ಈ ಸಿನಿಮಾ ನೋಡಲೆಂದೇ ರಜೆ ಹಾಕಿಕೊಂಡು ಬಸ್‌ನಲ್ಲಿ ಬಂದಿದ್ದೇನೆ. ಊರಲ್ಲಿ ಟಿವಿಯಲ್ಲಿ 7-8 ಬಾರಿ ನೋಡಿದ್ದರೂ, ಥಿಯೇಟರ್‌ನಲ್ಲಿ ವಿಷ್ಣು ಸರ್ ಅವರನ್ನು ನೋಡುವ ಆತುರ ಇದೆ. ಅದರಲ್ಲೂ ʼಆ ಹೋಯ್ ಕರೇಗಾ ಜೋ ಕರೇಗಾ' ಅನ್ನೋ ಡೈಲಾಗ್ ಕೇಳಲು ಕಾಯುತ್ತಿದ್ದೇನೆ," ಎಂದು ತಿಳಿಸಿದರು.

ಸಿ.ವಿ. ರಾಮನ್ ನಗರದಿಂದ ಬಂದಿದ್ದ ಅಭಿಮಾನಿ ಅರುಣಾ, "ನಾನು ಈ ಹಿಂದೆ ಟಿವಿಯಲ್ಲಿ ಮಾತ್ರ ಸಿನಿಮಾ ನೋಡಿದ್ದೆ. ಥಿಯೇಟರ್‌ನಲ್ಲಿ ವಿಷ್ಣು ಸರ್ ಅವರ ಸಿನಿಮಾ ನೋಡುವ ಅನುಭವ ಹೇಗಿರುತ್ತದೆ ಎಂದು ತಿಳಿಯಲು ಇಂದು ಬಂದಿದ್ದೇನೆ. ಅದರಲ್ಲೂ ಈ ಸಿನಿಮಾದ ಹಾಡುಗಳೆಂದರೆ ನನಗೆ ಪಂಚಪ್ರಾಣ," ಎಂದರು.

ಹೈಟೆಕ್ ಡಿಜಿಟಲ್ ಸ್ಪರ್ಶ

2001ರಲ್ಲಿ ತೆರೆಕಂಡಿದ್ದ 'ಕೋಟಿಗೊಬ್ಬ' ತಮಿಳಿನ 'ಬಾಷಾ' ಚಿತ್ರದ ರಿಮೇಕ್ ಆದರೂ, ವಿಷ್ಣುವರ್ಧನ್ ಅವರು ತಮ್ಮ ನಟನೆಯ ಮೂಲಕ ನಂಜುಂಡ ಮತ್ತು ಜಯಸಿಂಹ ಪಾತ್ರಗಳಿಗೆ ಜೀವ ತುಂಬಿದ್ದರು. ನಾಗಣ್ಣ ನಿರ್ದೇಶನದ ಈ ಚಿತ್ರ ಇಂದು ಹೈಟೆಕ್ ಡಿಜಿಟಲ್ ಸ್ಪರ್ಶದೊಂದಿಗೆ ಬಿಡುಗಡೆಯಾಗಿದ್ದು, ಯುವ ಪೀಳಿಗೆಯನ್ನೂ ಆಕರ್ಷಿಸುತ್ತಿದೆ. ಒಟ್ಟಿನಲ್ಲಿ 'ಕೋಟಿಗೊಬ್ಬ' ಕೇವಲ ಚಿತ್ರವಲ್ಲ, ಅದು ಕನ್ನಡಿಗರ ಪಾಲಿನ ಎಮೋಷನ್ ಎಂಬುದನ್ನು ಈ ಸಂಭ್ರಮ ಸಾಬೀತುಪಡಿಸಿದೆ. ಭಾನುವಾರದಂದು 100 ಅಡಿ ಕಟೌಟ್ ನಿಲ್ಲಿಸುವ ಮೂಲಕ ಮತ್ತಷ್ಟು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.

Read More
Next Story