
ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನವನ್ನು 'ಸ್ಫೂರ್ತಿ ದಿನ' ಎಂದು ಆಚರಿಸುವ ಸರ್ಕಾರದ ಘೋಷಣೆ ಬರೀ ಕಾಗದಕ್ಕೆ ಸೀಮಿತವಾಯಿತೇ
ಸರ್ಕಾರಕ್ಕೆ ಮರೆತೇ ಹೋಯಿತೇ ಅಪ್ಪು ಜನ್ಮದಿನದ 'ಸ್ಫೂರ್ತಿ ದಿನ'ದ ಘೋಷಣೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಶುಭಾಶಯ ಸಂದೇಶಗಳಲ್ಲಿ 'ಸ್ಫೂರ್ತಿ ದಿನ'ದ ಹೆಸರೇ ನಾಪತ್ತೆಯಾಗಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪವರ್ ಸ್ಟಾರ್, ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನವನ್ನು ರಾಜ್ಯಾದ್ಯಂತ ಪ್ರತಿವರ್ಷ 'ಸ್ಫೂರ್ತಿ ದಿನ'ವನ್ನಾಗಿ ಆಚರಿಸುವುದಾಗಿ ಸ್ವತಃ ರಾಜ್ಯ ಸರ್ಕಾರವೇ ಈ ಹಿಂದೆ ಘೋಷಿಸಿತ್ತು. ಆದರೆ ಇಂದು ಅಪ್ಪು ಅವರ ಜನ್ಮದಿನದ ಸಂದರ್ಭದಲ್ಲಿ ಸರ್ಕಾರದ ನಡವಳಿಕೆ ನೋಡಿದರೆ, ತಾನು ನೀಡಿದ್ದ ಆಶ್ವಾಸನೆಯನ್ನೇ ಮರೆತುಬಿಟ್ಟಿದೆಯೇ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಇಡೀ ನಾಡು ಹೆಮ್ಮೆಯಿಂದ ಕಾಣುವ ಡಾ. ರಾಜ್‌ಕುಮಾರ್ ಕುಟುಂಬದ ಕುರಿತು ರಾಜಕೀಯವಾಗಿ ಮಾತನಾಡುವ ನಾಯಕರಿಗೆ, ಅಧಿಕೃತವಾಗಿ ಘೋಷಿತವಾದ 'ಸ್ಫೂರ್ತಿ ದಿನ'ದ ನೆನಪಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಮುಖ್ಯಮಂತ್ರಿಗಳ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳು ಮಾತ್ರವಲ್ಲದೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪೇಜ್‌ಗಳಲ್ಲೂ ಅಪ್ಪು ಜನ್ಮದಿನದ ಶುಭಾಶಯ ಸಲ್ಲಿಕೆಯಾಗಿದೆಯೇ ಹೊರತು ಅಲ್ಲಿ 'ಸ್ಫೂರ್ತಿ ದಿನ'ದ ಹೆಸರೇ ನಾಪತ್ತೆಯಾಗಿದೆ ಎಂದು ಅಪ್ಪು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಅಚ್ಚರಿಯ ವಿಷಯವೆಂದರೆ, ಅಣ್ಣಾವ್ರ ಕುಟುಂಬದೊಂದಿಗೆ ಅತ್ಯಂತ ನಿಕಟವಾದ ಕೌಟುಂಬಿಕ ಬಾಂಧವ್ಯ ಹೊಂದಿರುವ ಸಚಿವ ಮಧು ಬಂಗಾರಪ್ಪ ಅವರ ಸೋಷಿಯಲ್ ಮೀಡಿಯಾ ವಾಲ್‌ಗಳಲ್ಲೂ ಕೇವಲ ಜನ್ಮದಿನದ ಶುಭಾಶಯಗಳು ರಾರಾಜಿಸುತ್ತಿವೆ. ಅಲ್ಲಿಯೂ ಸರ್ಕಾರದ ಅಧಿಕೃತ ಘೋಷಣೆಯಾದ 'ಸ್ಫೂರ್ತಿ ದಿನ'ದ ಪ್ರಸ್ತಾಪವೇ ಇಲ್ಲದಿರುವುದು ಅಪ್ಪಟ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಸರ್ಕಾರವೇ ಒಂದು ದಿನವನ್ನು ವಿಶೇಷ ಹೆಸರಿನಡಿ ಆಚರಿಸುವುದಾಗಿ ಘೋಷಿಸಿ, ನಂತರ ಪ್ರಮುಖ ನಾಯಕರೇ ಆ ಹೆಸರನ್ನು ಬಳಸಲು ಮರೆತಿರುವುದು ಸರ್ಕಾರದ ಅವಜ್ಞೆ ಮತ್ತು ವಿಸ್ಮೃತಿಗೆ ಹಿಡಿದ ಕನ್ನಡಿಯಂತಿದೆ. ಸ್ವತಃ ಸರ್ಕಾರವೇ ರೂಪಿಸಿದ ಆದೇಶಕ್ಕೆ ಬೆಲೆ ಇಲ್ಲದಂತಾಗಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸ್ಯಾಂಡಲ್‌ವುಡ್‌ನ ಧ್ರುವತಾರೆ, ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಅಗಲಿ ವರ್ಷಗಳೇ ಕಳೆದಿದ್ದರೂ, ಅವರ ಸ್ಮರಣೆ ಮಾತ್ರ ಇಂದಿಗೂ ಹಸಿರಾಗಿದೆ. ಇಂದು ಮಾರ್ಚ್ 17, ಅಪ್ಪು ಅವರ 51ನೇ ಜನ್ಮದಿನ. ಈ ದಿನವನ್ನು ಅಭಿಮಾನಿಗಳು ಕೇವಲ ಹಬ್ಬವಾಗಿ ಆಚರಿಸದೆ, ಅವರು ಹಾಕಿಕೊಟ್ಟ ದಾರಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ 'ಸ್ಫೂರ್ತಿಯ ದಿನ'ವನ್ನಾಗಿ ಆಚರಿಸುತ್ತಿದ್ದಾರೆ. ಬಾಲನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, 'ಬೆಟ್ಟದ ಹೂವು' ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಲೋಹಿತ್, ಮುಂದೆ 'ಅಪ್ಪು' ಚಿತ್ರದ ಮೂಲಕ 'ಪವರ್ ಸ್ಟಾರ್' ಆಗಿ ಹೊರಹೊಮ್ಮಿದರು. 'ಅಭಿ', 'ವೀರ ಕನ್ನಡಿಗ', 'ಮೌರ್ಯ'ದಂತಹ ಚಿತ್ರಗಳಿಂದ ಅಭಿಮಾನಿಗಳ ಮನಗೆದ್ದ ಅವರು, 'ರಾಜಕುಮಾರ' ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟಿದ್ದರು. 'ಪವರ್', 'ನಟಸಾರ್ವಭೌಮ', 'ಯುವರತ್ನ' ಚಿತ್ರಗಳಲ್ಲಿ ಅವರ ಎನರ್ಜಿಟಿಕ್ ನೃತ್ಯ ಮತ್ತು ನಟನೆ ಇಂದಿಗೂ ಯುವ ನಟರಿಗೆ ಸ್ಫೂರ್ತಿ. ಅವರ ಕೊನೆಯ ಚಿತ್ರ 'ಜೇಮ್ಸ್' ಬಿಡುಗಡೆಯಾದಾಗ ಚಿತ್ರಮಂದಿರಗಳಲ್ಲಿ ತುಂಬಿದ್ದ ಪ್ರೇಕ್ಷಕರ ಕಣ್ಣಾಲಿಗಳು ತುಂಬಿದ್ದವು.

