ತಂದೆಯ ಪ್ರೀತಿಯ ಹಿಂದೆ ಕನ್ನಡ ಚಿತ್ರರಂಗ; ಹೆಚ್ಚಾಗುತ್ತಿದೆ ಅಪ್ಪನ ಸೆಂಟಿಮೆಂಟ್‍!
x

ತಾಯಿ ಸೆಂಟಿಮೆಂಟ್‍ ಚಿತ್ರಗಳ ಬದಲು ಇದೀಗ ತಂದೆ ಸೆಂಟಿಮೆಂಟ್‍ನ ಚಿತ್ರಗಳು ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ. 

ತಂದೆಯ ಪ್ರೀತಿಯ ಹಿಂದೆ ಕನ್ನಡ ಚಿತ್ರರಂಗ; ಹೆಚ್ಚಾಗುತ್ತಿದೆ ಅಪ್ಪನ ಸೆಂಟಿಮೆಂಟ್‍!

ಕನ್ನಡ ಚಿತ್ರರಂಗದಲ್ಲಿ ಬದಲಾಗುತ್ತಿರುವ ಸೆಂಟಿಮೆಂಟ್ ಟ್ರೆಂಡ್. ಡಾ. ರಾಜ್‌ಕುಮಾರ್ ಅವರ ‘ಅಮ್ಮ’ ಚಿತ್ರದಿಂದ ಹಿಡಿದು ಇತ್ತೀಚಿನ ‘ತೀರ್ಥರೂಪ ತಂದೆಯವರಿಗೆ’ ವರೆಗೆ, ತಾಯಿ ಮತ್ತು ತಂದೆ ಸೆಂಟಿಮೆಂಟ್ ಚಿತ್ರಗಳ ಸುದೀರ್ಘ ಇತಿಹಾಸದ ಕುರಿತು ಆಪ್ತ ನೋಟ ಇಲ್ಲಿದೆ.


Click the Play button to hear this message in audio format

ಕನ್ನಡದಲ್ಲಿ ಸೆಂಟಿಮೆಂಟ್‍ ಚಿತ್ರಗಳಿಗೆ ದೊಡ್ಡ ಇತಿಹಾಸವೇ ಇದೆ. ಅದರಲ್ಲೂ ಕನ್ನಡದಲ್ಲಿ ಸಾಕಷ್ಟು ತಾಯಿ ಸೆಂಟಿಮೆಂಟ್ ಚಿತ್ರಗಳು ನಿರ್ಮಾಣವಾಗಿವೆ. 60ರ ದಶಕದಲ್ಲಿ ಬ್ಲಾಕ್‍ ಆ್ಯಂಡ್‍ ವೈಟ್‍ನಲ್ಲಿ ತಯಾರಾದ ಡಾ. ರಾಜಕುಮಾರ್ ಅಭಿನಯದ ‘ಅಮ್ಮ’ ಚಿತ್ರದಿಂದ ಮೊದಲ್ಗೊಂಡು ನೂರಾರು ತಾಯಿ ಸೆಂಟಿಮೆಂಟ್‍ ಚಿತ್ರಗಳು ಕನ್ನಡದಲ್ಲಿ ನಿರ್ಮಾಣವಾಗಿವೆ.

‘ತಾಯಿಗೆ ತಕ್ಕ ಮಗ’, ‘ತಾಯಿಗಿಂತ ದೇವರಿಲ್ಲ’, ‘ತಾಯಿ ದೇವರು’, ‘ತಾಯಿಯ ಕರಳು’, ‘ತಾಯಿಯ ಮಡಿಲಲ್ಲಿ’, ‘ತಾಯಿ ಮಮತೆ’, ‘ತಾಯಿಯ ನುಡಿ’, ‘ತಾಯಿಯ ಮಡಿಲು’, ‘ಮಾತೃವಾತ್ಸಲ್ಯ’, ‘ಹೆತ್ತಕರಳು’, ‘ಹೂವು ಹಣ್ಣು’, ‘ಅಮ್ಮಾ ಐ ಲವ್‍ ಯೂ’, ‘ಕೆಜಿಎಫ್‍’ ಸೇರಿದಂತೆ ಹಲವು ತಾಯಿ ಸೆಂಟಿಮೆಂಟ್‍ನ ಚಿತ್ರಗಳು ಕನ್ನಡದಲ್ಲಿ ತಯಾರಾಗಿವೆ.

ಸಾಲುಸಾಲು ತಂದೆ-ಸೆಂಟಿಮೆಂಟ್‍ ಚಿತ್ರಗಳು

ಈಗ್ಯಾಕೆ ಈ ಮಾತು ಎಂದರೆ, ತಾಯಿ ಸೆಂಟಿಮೆಂಟ್‍ ಚಿತ್ರಗಳೇ ಹೆಚ್ಚಾಗಿ ಬರುತ್ತಿದ್ದ ಕನ್ನಡ ಚಿತ್ರರಂಗದಲ್ಲಿ ಸ್ವಲ್ಪ ಟ್ರೆಂಡ್ ಬದಲಾಗಿದೆ. ತಾಯಿ ಸೆಂಟಿಮೆಂಟ್‍ ಚಿತ್ರಗಳ ಬದಲು ಇದೀಗ ತಂದೆ ಸೆಂಟಿಮೆಂಟ್‍ನ ಚಿತ್ರಗಳು ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ. ಮೊನ್ನೆ ಶುಕ್ರವಾರ ಬಿಡುಗಡೆಯಾದ ‘ಸೀತಾ ಪಯಣ’, ಕಳೆದ ವಾರ ಬಿಡುಗಡೆಯಾದ ‘ಜೆಸಿ’ ಮತ್ತು ‘ಅಮೃತಾ ಅಂಜನ್‍’, ಅದಕ್ಕೂ ಒಂದು ವಾರ ಮುಂಚೆ ಬಿಡುಗಡೆಯಾದ ‘ಚೌಕಿದಾರ್’, ಈ ವರ್ಷದ ಮೊದಲ ಚಿತ್ರವಾದ ‘ತೀರ್ಥರೂಪ ತಂದೆಯವರಿಗೆ’ … ಇವೆಲ್ಲವೂ ತಂದೆ ಸೆಂಟಿಮೆಂಟ್‍ನ ಕುರಿತಾದ ಚಿತ್ರಗಳೇ. ಇತ್ತೀಚಿನ ದಿನಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಬರುತ್ತಿವೆ ಅಷ್ಟೇ.

50ರ ದಶಕದಲ್ಲೇ ಶುರುವಾಯ್ತು ತಂದೆ ಪ್ರೀತಿ

ಕನ್ನಡದಲ್ಲಿ ತಾಯಿ ಸೆಂಟಿಮೆಂಟ್‍ ಚಿತ್ರಗಳಂತೆ ತಂದೆ ಸೆಂಟಿಮೆಂಟ್‍ ಚಿತ್ರಗಳಿಗೂ ದೊಡ್ಡ ಇತಿಹಾಸವೇ ಇದೆ. ತಂದೆ ಸೆಂಟಿಮೆಂಟ್ ಚಿತ್ರಗಳಲ್ಲಿ ಮೊದಲಿಗೆ ನೆನಪಿಗೆ ಬರುವ ಹೆಸರು ಬಿ.ಆರ್. ಪಂತುಲು ಅಭಿನಯದ ಮತ್ತು ನಿರ್ದೇಶನದ ‘ಸ್ಕೂಲ್‍ ಮಾಸ್ಟರ್’. ಈ ಚಿತ್ರದಲ್ಲಿ ತಂದೆ ಪಾತ್ರ ಮತ್ತು ಸೆಂಟಿಮೆಂಟ್‍ ಪ್ರಮುಖವಾಗಿತ್ತು. ಆ ನಂತರ ಹಲವು ಚಿತ್ರಗಳಲ್ಲಿ ತಂದೆ ಪಾತ್ರಗಳು ಪ್ರಮುಖವಾಗಿದ್ದವು. 70ರ ದಶಕದಲ್ಲಿ ಬಂದ ‘ತಂದೆ ಮಕ್ಕಳು’, ‘ಬಡವರ ಬಂಧು’, ‘ಶಂಕರ್‍ ಗುರು’, ‘ಸನಾದಿ ಅಪ್ಪಣ್ಣ’ … ಇದೇ ಸಾಲಿನಲ್ಲಿ ಬಂದ ಕೆಲವು ಪ್ರಮುಖ ಚಿತ್ರಗಳಾಗಿದ್ದವು.

ದಾರಿ ತಪ್ಪಿದ ಮಗನ ಸುತ್ತ ಹಲವು ಚಿತ್ರಗಳು

ಆ ನಂತರ ‘ನೀ ಬರೆದ ಕಾದಂಬರಿ’, ‘ದೇವತಾ ಮನುಷ್ಯ’, ‘ಮೋಡದ ಮರೆಯಲ್ಲಿ’, ‘ಹಲೋ ಡ್ಯಾಡಿ’, ‘ಅಂಡಮಾನ್’, ‘ತಂದೆಗೆ ತಕ್ಕ ಮಗ’, ‘ಸೂರ್ಯವಂಶ’, ‘ಸಿಂಹಾದ್ರಿಯ ಸಿಂಹ’, ‘ದಿಗ್ಗಜರು’, ‘ಏಕಾಂಗಿ’, ‘ಸುಗ್ರೀವ’, ಸೇರಿದಂತೆ ಹಲವು ಚಿತ್ರಗಳಲ್ಲಿ ತಂದೆ-ಮಗನ ಸಂಬಂಧ ಮತ್ತು ಬಾಂಧವ್ಯದ ಬಗ್ಗೆ ಹೇಳಲಾಯಿತಾದರೂ, ಈ ಟ್ರೆಂಡ್‍ ಮುನ್ನೆಲೆಗೆ ಬಂದಿದ್ದು ಸುಮಾರು ಒಂದು ದಶಕದ ಹಿಂದೆ. ಯಶ್‍ ಅಭಿನಯದ ‘ಮಿಸ್ಟರ್ ಆ್ಯಂಡ್‍ ಮಿಸಸ್‍ ರಾಮಾಚಾರಿ’ ಚಿತ್ರವು ಒಂದು ಪ್ರೇಮಕಥೆಯಾದರೂ, ಹಿನ್ನೆಲೆಯಲ್ಲಿ ತಂದೆ-ಮಗನ ಸೆಂಟಿಮೆಂಟ್‍ ಪ್ರಮುಖ ಪಾತ್ರ ವಹಿಸಿತ್ತು. ಅಲ್ಲಿಂದ ಕನ್ನಡದಲ್ಲಿ ದಾರಿ ತಪ್ಪಿದ ಮಗ ಮತ್ತು ಶಿಸ್ತುಬದ್ಧ ತಂದೆಯ ಚಿತ್ರಗಳು ಹೆಚ್ಚಾಗಿವೆ. ಮಗ ಆರಂಭದಲ್ಲಿ ದಾರಿ ತಪ್ಪಿ, ಕೊನೆಗೆ ತಂದೆಯ ಪ್ರೇರಣೆಯಿಂದ ಜವಾಬ್ದಾರಿಯುತ ಮಗನಾಗಿ ಬದಲಾಗುವ ಚಿತ್ರಗಳು ಬರುತ್ತಲೇ ಇವೆ. ಇತ್ತೀಚೆಗೆ ಬಿಡುಗಡೆಯಾದ ‘ಕಲ್ಟ್’, ‘ಚೌಕಿದಾರ್’, ‘ಜೆಸಿ’ ಇವೆಲ್ಲವೂ ಇಂಥದ್ದೇ ಚಿತ್ರಗಳು.

ಆಪ್ತವಾದ ಬೇರೆಬೇರೆ ಪ್ರಯತ್ನಗಳು

ಇದಲ್ಲದೆ ಅಪ್ಪ-ಮಗನ ಬಾಂಧವ್ಯ ಸಾರುವ ಕೆಲವು ಭಾವನಾತ್ಮಕ ಚಿತ್ರಗಳೂ ಇತ್ತೀಚಿನ ವರ್ಷಗಳಲ್ಲಿ ಬಂದಿವೆ. ಈ ಪೈಕಿ ಪ್ರಮುಖವಾದ ಚಿತ್ರವೆಂದರೆ, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’. ಅನಂತ್ ನಾಗ್‍ ಮತ್ತು ರಕ್ಷಿತ್‍ ಶೆಟ್ಟಿ ಅಭಿನಯದ ಈ ಚಿತ್ರವು ಅಲ್ಜೈಮರ್ ಖಾಯಿಲೆಯಿಂದ ಬಳಲುತ್ತಿರುವ ತಂದೆ ಮತ್ತು ಆತನ ಮಗನ ಕುರಿತದ್ದಾಗಿತ್ತು. 2017ರಲ್ಲಿ ಬಿಡುಗಡೆಯಾದ ‘ಪುಷ್ಪಕ ವಿಮಾನ’ ಚಿತ್ರ ಸಹ ತಂದೆ ಮತ್ತು ಪುಟ್ಟ ಮಗಳ ಬಾಂಧವ್ಯದ ಕುರಿತಾದ ಚಿತ್ರವಾದರೆ, ‘ಚೌಕ’ ಚಿತ್ರವು ಮಗಳ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದಕ್ಕೆ ತಂದೆ ಏನೆಲ್ಲಾ ಮಾಡುತ್ತಾನೆ ಎಂದು ಹೇಳಲಾಗಿತ್ತು. ಈ ಚಿತ್ರದ ‘ಅಪ್ಪಾ ಐ ಲವ್‍ ಯೂ’ ಹಾಡು ಜನಪ್ರಿಯವಾಗುವುದರ ಜೊತೆಗೆ, ಕಳೆದ ವರ್ಷ ಅದೇ ಹೆಸರಿನಲ್ಲಿ ಚಿತ್ರವೊಂದು ಬಿಡುಗಡೆ ಸಹ ಆಗಿತ್ತು. ಈ ಚಿತ್ರದಲ್ಲಿ ತಬಲಾ ನಾಣಿ, ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಈ ವರ್ಷದ ಆರಂಭದಲ್ಲಿ ‘ತೀರ್ಥರೂಪ ತಂದೆಯವರಿಗೆ’ ಚಿತ್ರ ಬಿಡುಗಡೆಯಾಗಿದ್ದು, ಅಲ್ಲಿಂದ ವಾರಕ್ಕೊಂದರಂತೆ ಕೆಲವು ಚಿತ್ರಗಳು ಬಿಡುಗಡೆ ಆಗುತ್ತಿವೆ. ಇದುವರೆಗೂ ತಾಯಿಯ ಮಮತೆ ಬಗ್ಗೆ ಮಾತನಾಡಿದ್ದ ಕನ್ನಡ ಚಿತ್ರಗಳು, ಈಗ ತಂದೆಯ ಮಮತೆಯ ಜೊತೆಗೆ ಹೊಣೆ, ಜವಾಬ್ದಾರಿ, ಕರ್ತವ್ಯದ ಕುರಿತು ಮಾತನಾಡುತ್ತಿವೆ. ಈ ಟ್ರೆಂಡ್‍ ಎಷ್ಟು ದಿನಗಳ ಕಾಲ ಮುಂದುವರೆಯುತ್ತವೋ ನೋಡಬೇಕು.

Read More
Next Story