ಸಿದ್ದರಾಮಯ್ಯ ಆಪ್ತ ರೇವಣ್ಣ ಪುತ್ರನ ಸಿನಿಮಾಕ್ಕೆ Fan of CM ಟೈಟಲ್‌:‌ ಕನಕರಾಜನ ಹಿಂದೆ ರಾಜಕೀಯ ಲೆಕ್ಕಾಚಾರ?
x
ಹೆಚ್.ಎಂ. ರೇವಣ್ಣ ಅವರ ಪುತ್ರ ಅನೂಪ್ ರೇವಣ್ಣ ಅಭಿನಯದ ಹೊಸ ಸಿನಿಮಾ

ಸಿದ್ದರಾಮಯ್ಯ ಆಪ್ತ ರೇವಣ್ಣ ಪುತ್ರನ ಸಿನಿಮಾಕ್ಕೆ 'Fan of CM' ಟೈಟಲ್‌:‌ 'ಕನಕರಾಜ'ನ ಹಿಂದೆ ರಾಜಕೀಯ ಲೆಕ್ಕಾಚಾರ?

ಸಿಎಂ ಸಿದ್ದರಾಮಯ್ಯ ಪರಮಾಪ್ತ ಹೆಚ್.ಎಂ. ರೇವಣ್ಣ ಪುತ್ರ ಅನೂಪ್ ರೇವಣ್ಣ ನಟನೆಯ 'ಕನಕರಾಜ' ಚಿತ್ರದ ಶೂಟಿಂಗ್ ಉತ್ತರ ಕರ್ನಾಟಕದಲ್ಲಿ ಭರ್ಜರಿಯಾಗಿ ಸಾಗಿದೆ.


ರಾಜಕೀಯ ಮತ್ತು ಚಿತ್ರರಂಗದ ನಡುವಿನ ನಂಟು ಹಳೆಯದು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಹಾಗೂ ಹಿರಿಯ ಮುಖಂಡರಾದ ಹೆಚ್.ಎಂ. ರೇವಣ್ಣ ಅವರ ಪುತ್ರ ಅನೂಪ್ ರೇವಣ್ಣ ಅಭಿನಯದ ಹೊಸ ಸಿನಿಮಾ ಈಗ ರಾಜ್ಯ ರಾಜಕೀಯ ಮತ್ತು ಗಾಂಧಿನಗರದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಈ ಚಿತ್ರದ ಶೀರ್ಷಿಕೆ 'ಕನಕರಾಜ' ಎಂದಿದ್ದರೂ, ಅದರ ಕೆಳಗಿರುವ 'FAN OF CM' ಎಂಬ ಅಡಿಬರಹ ಎಲ್ಲರ ಗಮನ ಸೆಳೆಯುತ್ತಿದೆ.

ಸಿದ್ಧರಾಮಯ್ಯ ಬೆಂಬಲಿಗನ ಪುತ್ರನಿಂದ 'ಸಿಎಂ ಅಭಿಮಾನಿ'ಯ ಕಥೆ!

ಹೆಚ್.ಎಂ. ರೇವಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈಗ ಅವರ ಪುತ್ರ ಅನೂಪ್ ರೇವಣ್ಣ ಅವರು ತೆರೆಯ ಮೇಲೆ ಮುಖ್ಯಮಂತ್ರಿಗಳ ಅಭಿಮಾನಿಯ ಕಥೆಯನ್ನು ಹೊತ್ತು ಬರುತ್ತಿರುವುದು ವಿಶೇಷ. ಚಿತ್ರದ ಹೆಸರಿನಲ್ಲಿರುವ 'ಕನಕ' ಪದ ಮತ್ತು 'ಸಿಎಂ ಅಭಿಮಾನಿ' ಎಂಬ ಅಡಿಬರಹವು ಸಿದ್ದರಾಮಯ್ಯ ಅವರ ರಾಜಕೀಯ ಹಿನ್ನೆಲೆ ಹಾಗೂ ಸಿದ್ಧಾಂತಗಳಿಗೆ ಹತ್ತಿರವಾಗಿದೆಯೇ ಎಂಬ ಕುತೂಹಲ ಈಗ ಮೂಡಿದೆ.

ಚಿತ್ರದ ಶೀರ್ಷಿಕೆಯಲ್ಲಿರುವ 'ಕನಕರಾಜ' ಎಂಬ ಹೆಸರೇ ಒಂದು ವಿಶೇಷ ಸಂದೇಶವನ್ನು ರವಾನಿಸುತ್ತಿದೆ. ಕುರುಬ ಸಮುದಾಯದ ಆರಾಧ್ಯ ದೈವ, ದಾರ್ಶನಿಕ ಕನಕದಾಸರ ಹೆಸರಿನ ಪ್ರತಿಬಿಂಬದಂತೆ ಈ ಶೀರ್ಷಿಕೆ ಕಾಣಿಸುತ್ತಿದೆ. ಸಿದ್ದರಾಮಯ್ಯ ಅವರು ಕುರುಬ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವಾಗ, ಅವರ ಆಪ್ತ ಬೆಂಬಲಿಗರ ಪುತ್ರನ ಚಿತ್ರಕ್ಕೆ ಇಂತಹ ಹೆಸರಿಟ್ಟಿರುವುದು ಕೇವಲ ಕಾಕತಾಳೀಯವಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಸಮುದಾಯದ ಭಾವನೆಗಳನ್ನು ಮತ್ತು ಯುವಕರನ್ನು ಸೆಳೆಯಲು ಈ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

ಉತ್ತರ ಕರ್ನಾಟಕದಲ್ಲಿ ಬಿರುಸಿನ ಚಿತ್ರೀಕರಣ

ಸದ್ಯ 'ಕನಕರಾಜ' ಚಿತ್ರದ ಎರಡನೇ ಹಂತದ ಚಿತ್ರೀಕರಣ ಉತ್ತರ ಕರ್ನಾಟಕದ ಬೆಳಗಾವಿ ಮತ್ತು ಗೋಕಾಕ್ ಸುತ್ತಮುತ್ತ ಅದ್ಧೂರಿಯಾಗಿ ನಡೆಯುತ್ತಿದೆ. ಸುಮಾರು 15 ದಿನಗಳ ಕಾಲ ಇಲ್ಲಿ ಪ್ರಮುಖ ಸಾಹಸ ಸನ್ನಿವೇಶಗಳು, ಸಂಭಾಷಣೆ ಹಾಗೂ ಹಾಡುಗಳ ಚಿತ್ರೀಕರಣ ನಡೆಯಲಿದೆ. ಮೊದಲ ಹಂತದ ಶೂಟಿಂಗ್ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.


ತಾಂತ್ರಿಕ ವರ್ಗ ಮತ್ತು ತಾರಾಗಣ

ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್.ಆರ್. ಸನತ್ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಖ್ಯಾತ ಸಾಹಿತಿ ಡಾ. ವಿ. ನಾಗೇಂದ್ರಪ್ರಸಾದ್ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಂಗೀತವನ್ನೂ ನೀಡುತ್ತಿದ್ದಾರೆ. ಆರ್. ರವೀಂದ್ರ ಅವರು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ತಾರಾಬಳಗದಲ್ಲಿ ಘಟಾನುಘಟಿಗಳು: ಅನೂಪ್ ರೇವಣ್ಣ ಅವರಿಗೆ ಜೋಡಿಯಾಗಿ ನಿಮಿಷ ನಟಿಸುತ್ತಿದ್ದು, ಹಿರಿಯ ಕಲಾವಿದರಾದ ಶ್ರೀನಾಥ್, ರಾಮಕೃಷ್ಣ, ಪದ್ಮಾವಾಸಂತಿ, ಯಮುನಾ ಶ್ರೀನಿಧಿ ಹಾಗೂ ಗಿರೀಶ್ ಜತ್ತಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಖಳನಾಯಕನಾಗಿ ಮಂಜುನಾಥ್ ಅರಸ್ ಮಿಂಚುತ್ತಿದ್ದಾರೆ. ಚಿತ್ರಕ್ಕೆ ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿದೆ.

ರಾಜಕೀಯ ಪ್ರಭಾವದ ಅಡಿಯಲ್ಲಿ ಮೂಡಿಬರುತ್ತಿರುವ ಈ 'ಕೌಟುಂಬಿಕ ಕಥಾಹಂದರ'ದ ಸಿನಿಮಾ, ಸಿಎಂ ಅಭಿಮಾನಿಗಳ ವಲಯದಲ್ಲಿ ಯಾವ ರೀತಿ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Read More
Next Story