
ಹೊಂಬಾಳೆ ಮ್ಯೂಸಿಕ್‌ನಿಂದ 'ಕೃಷ್ಣ ಎನಬಾರದೆ' ಬಿಡುಗಡೆ
Hobbale Films| ಹೊಂಬಾಳೆ ಮ್ಯೂಸಿಕ್‌ನಿಂದ 'ಕೃಷ್ಣ ಎನಬಾರದೆ' ಲೋಕಾರ್ಪಣೆ
ಹೊಂಬಾಳೆ ಮ್ಯೂಸಿಕ್‌ನಿಂದ 'ಕೃಷ್ಣ ಎನಬಾರದೆ' ಬಿಡುಗಡೆ! ಆಧುನಿಕ ವಿಎಫ್‌ಎಕ್ಸ್ ಮತ್ತು ಫ್ಯೂಚರಿಸ್ಟಿಕ್ ಕಲ್ಪನೆಯಲ್ಲಿ ಮೂಡಿಬಂದಿರುವ ಈ ಮ್ಯೂಸಿಕ್ ವಿಡಿಯೋ ಪುರಾಣ ಮತ್ತು ತಂತ್ರಜ್ಞಾನದ ಅದ್ಭುತ ಸಂಗಮ.
ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಸಂಸ್ಥೆ ರಾಮನವಮಿಯ ಅಂಗವಾಗಿ, ʻಕೃಷ್ಣ ಎನಬಾರದೇʼ ಎಂಬ ವಿನೂತನ ಮ್ಯೂಸಿಕ್ ವಿಡಿಯೋವನ್ನು ಬಿಡುಗಡೆ ಮಾಡಿದೆ.
ಸಾಂಪ್ರದಾಯಿಕ ಕಥೆಗಳಿಗೆ ಕಲ್ಪನಾತೀತ 'ಫ್ಯೂಚರಿಸ್ಟಿಕ್' ಸ್ಪರ್ಶ ನೀಡಿರುವುದು ಈ ವಿಡಿಯೋದ ಪ್ರಮುಖ ಆಕರ್ಷಣೆಯಾಗಿದೆ. ವಿಶೇಷವಾಗಿ ಕಲ್ಕಿ ಅವತಾರದ ಕೃಷ್ಣ ಹಾಗೂ ಕಾಳಿಂಗ ಮರ್ದನದಂತಹ ಪುರಾಣ ಪ್ರಸಂಗಗಳನ್ನು ಅಂತರಾಷ್ಟ್ರೀಯ ಮಟ್ಟದ ವಿಎಫ್‌ಎಕ್ಸ್ ತಂತ್ರಜ್ಞಾನದ ಮೂಲಕ ತೆರೆಯ ಮೇಲೆ ತರಲಾಗಿದ್ದು, 'ಹಳೆಯ ಬೇರು ಹೊಸ ಚಿಗುರು' ಎಂಬಂತೆ ಇಂದಿನ ತಲೆಮಾರಿಗೆ ಹತ್ತಿರವಾಗುವಂತೆ ಚಿತ್ರಿಸಲಾಗಿದೆ.
ಈ ಹಾಡಿನ ಬಿಡುಗಡೆಯ ಸಮಯವೂ ಕೂಡ ವಿಶೇಷ ಅರ್ಥವನ್ನು ಒಳಗೊಂಡಿದೆ. ಮಧ್ಯಾಹ್ನ ಸರಿಯಾಗಿ 12:05ಕ್ಕೆ ಈ ಗೀತೆಯನ್ನು ಹೊರತರಲಾಗಿದ್ದು, ಇದು ಶ್ರೀಕೃಷ್ಣ ಭೂಮಿಯ ಮೇಲೆ ಕಳೆದ 125 ವರ್ಷಗಳ ಸಂಕೇತ ಹಾಗೂ ಶ್ರೀರಾಮನ ಜನ್ಮ ಸಮಯವಾದ ಮಧ್ಯಾಹ್ನದ ಮುಹೂರ್ತಕ್ಕೆ ಹೊಂದಿಕೆಯಾಗುವಂತೆ ಅತ್ಯಂತ ಜಾಣ್ಮೆಯಿಂದ ಯೋಜಿಸಲಾಗಿದೆ. ಸಂಗೀತ ನಿರ್ದೇಶಕ ಅನಿರುದ್ಧ ಶಾಸ್ತ್ರಿ ಅವರು ಈ ಹಾಡಿಗೆ ಸಾಹಿತ್ಯ ಬರೆದು ಸ್ವರಸಂಯೋಜನೆ ಮಾಡಿದ್ದು, ಖ್ಯಾತ ಗಾಯಕ ವಿಜಯ್ ಪ್ರಕಾಶ್, ನರಹರಿ ಆಚಾರ್ ಅವರೊಂದಿಗೆ ಧ್ವನಿಗೂಡಿಸಿದ್ದಾರೆ. ಮೆಗ್-ಅ-ವಾಟ್ ಅವರ ರ‍್ಯಾಪ್ ಮತ್ತು ಶಾಂಡಿಲ್ಯ ಪಿಸಾಪತಿ ಅವರ ಪಿಟೀಲು ವಾದನವು ಹಾಡಿಗೆ ಜಾಗತಿಕ ಮಟ್ಟದ ಮೆರುಗು ನೀಡಿದ್ದು, ಸಂಗೀತ ಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ.
ಮೇಘರಾಜ್ ಮತ್ತು ಸುನೀತ್ ಶೆಟ್ಟಿ ಅವರ ಕ್ರಿಯೇಟಿವ್ ಡೈರೆಕ್ಷನ್‌ನಲ್ಲಿ ಅಸ್ತ್ರ ಸ್ಟುಡಿಯೋಸ್ ಈ ದೃಶ್ಯವೈಭವವನ್ನು ಸಿದ್ಧಪಡಿಸಿದೆ. ಭಾರತೀಯ ಪುರಾಣಗಳನ್ನು ಕೇವಲ ಧಾರ್ಮಿಕ ಚೌಕಟ್ಟಿನಲ್ಲಿರಿಸದೆ, ಅದನ್ನು ತಾಂತ್ರಿಕವಾಗಿ ಶ್ರೀಮಂತಗೊಳಿಸಿ ಜಾಗತಿಕ ಮಟ್ಟದ ಗುಣಮಟ್ಟದಲ್ಲಿ ಕಟ್ಟಿಕೊಡುವ ಹೊಂಬಾಳೆ ಮ್ಯೂಸಿಕ್‌ನ ಈ ಧೈರ್ಯದ ಹೆಜ್ಜೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆಧುನಿಕತೆಯ ನಡುವೆ ನಮ್ಮ ಸಂಸ್ಕೃತಿಯನ್ನು ಹೆಮ್ಮೆಯಿಂದ ಬಿಂಬಿಸುತ್ತಿರುವ ಈ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಭಾರತೀಯ ಕಲೆ ಮತ್ತು ತಂತ್ರಜ್ಞಾನದ ಶಕ್ತಿಯನ್ನು ಸಾರುತ್ತಿದೆ.

