Goggayya Movie| ಚಿಣ್ಣರ ಹೆದರಿಸುವ ಗೊಗ್ಗಯ್ಯ ಈಗ ಬೆಳ್ಳಿತೆರೆಯಲ್ಲಿ: ಏಪ್ರಿಲ್ 10ಕ್ಕೆ ಸಿನಿಮಾ ಬಿಡುಗಡೆ
x

ನಿರ್ದೇಶಕ ವಸಂತ್ ಅವರ ಸಾರಥ್ಯದಲ್ಲಿ ಮೂಡಿಬಂದಿರುವ ಈ ಚಿತ್ರವು ಹಾರರ್ ಮತ್ತು ಕಾಮಿಡಿಯ ಕಚಗುಳಿಯನ್ನು ನೀಡಲಿದೆ.

Goggayya Movie| ಚಿಣ್ಣರ ಹೆದರಿಸುವ 'ಗೊಗ್ಗಯ್ಯ' ಈಗ ಬೆಳ್ಳಿತೆರೆಯಲ್ಲಿ: ಏಪ್ರಿಲ್ 10ಕ್ಕೆ ಸಿನಿಮಾ ಬಿಡುಗಡೆ

ಗೊಗ್ಗಯ್ಯ" ಸಿನಿಮಾ ಏಪ್ರಿಲ್ 10 ರಂದು ಬಿಡುಗಡೆಯಾಗುತ್ತಿದೆ. ವಸಂತ್ ನಿರ್ದೇಶಿಸಿ, ನಟಿಸಿರುವ ಈ ಚಿತ್ರದಲ್ಲಿ ಕಾಮಿಡಿ, ಹಾರರ್ ಮತ್ತು ಸೆಂಟಿಮೆಂಟ್ ಮಿಶ್ರಿತವಾಗಿದೆ. ಕೈಲಾಶ್ ಖೇರ್ ಹಾಡಿರುವ ಹನುಮಂತನ ಸಾಂಗ್ ಈಗಲೇ ವೀಕ್ಷಿಸಿ.


Click the Play button to hear this message in audio format

ಸಾಮಾನ್ಯವಾಗಿ ಮನೆಯಲ್ಲಿ ಮಕ್ಕಳು ಹಠ ಮಾಡಿ ಊಟ ಮಾಡದಿದ್ದಾಗ, ತಾಯಂದಿರು "ಊಟ ಮಾಡು ಕಂದ, ಇಲ್ಲದಿದ್ದರೆ ಗೊಗ್ಗಯ್ಯ ಬರುತ್ತಾನೆ" ಎಂದು ಬೆದರಿಸುವುದು ವಾಡಿಕೆ. ದಶಕಗಳಿಂದಲೂ ಕೇಳಿ ಬರುತ್ತಿರುವ ಈ ಪರಿಚಿತ ಹೆಸರನ್ನೇ ಶೀರ್ಷಿಕೆಯಾಗಿಟ್ಟುಕೊಂಡು ಈಗ ಸ್ಯಾಂಡಲ್‌ವುಡ್‌ನಲ್ಲಿ ನೂತನ ಚಿತ್ರವೊಂದು ಸಿದ್ಧವಾಗಿದ್ದು, ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.

ವಂದನ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಾ ಜೆ ಅವರು ನಿರ್ಮಾಣ ಮಾಡಿರುವ `ಗೊಗ್ಗಯ್ಯ' ಚಿತ್ರವು ಇದೇ ಏಪ್ರಿಲ್ 10 ರಂದು ರಾಜ್ಯಾದ್ಯಂತ ತೆರೆಕಾಣಲಿದ್ದು, ಇತ್ತೀಚೆಗೆ ಚಿತ್ರದ ಹಾಡು ಬಿಡುಗಡೆ ಸಮಾರಂಭವು ಅದ್ಧೂರಿಯಾಗಿ ನೆರವೇರಿತು.

ಈ ಸಮಾರಂಭದಲ್ಲಿ ಮಾತನಾಡಿದ ಚಿತ್ರದ ನಾಯಕ ಹಾಗೂ ನಿರ್ದೇಶಕ ವಸಂತ್ ಅವರು, ತಮಗೆ ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ ಹಾಗೂ ನಿರ್ದೇಶಕನಾಗಿ ಕೆಲಸ ಮಾಡಿದ ಸುದೀರ್ಘ ಅನುಭವವಿದೆ ಎಂದು ಹಂಚಿಕೊಂಡರು.

ಈ ಚಿತ್ರಕ್ಕೆ ತಾವೇ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ, ಸಂಗೀತ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತು ನಾಯಕನಾಗಿ ನಟಿಸಿರುವುದಾಗಿ ತಿಳಿಸಿದರು. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು, ರಾಮನವಮಿಯ ವಿಶೇಷವಾಗಿ ಹನುಮಂತನ ಕುರಿತಾದ "ನೀ ಹೆದರದಿರು ಕಂದ" ಎಂಬ ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ಗೀತೆಯನ್ನು ಖ್ಯಾತ ಗಾಯಕ ಕೈಲಾಶ್ ಖೇರ್ ಹಾಡಿದ್ದು, ತನ್ಮಯ್ ಎಸ್ ಆನಂದ್ ಕುಮಾರ್ ಸಾಹಿತ್ಯ ಬರೆದಿದ್ದಾರೆ.

ಸಿರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ಮೂಲಕ ಈ ಹಾಡು ಈಗಾಗಲೇ ಜನಪ್ರಿಯತೆ ಗಳಿಸುತ್ತಿದೆ. ಕಾಮಿಡಿ, ಹಾರರ್ ಹಾಗೂ ಸೆಂಟಿಮೆಂಟ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪ್ರೇಕ್ಷಕರು ಪ್ರೋತ್ಸಾಹ ನೀಡಬೇಕೆಂದು ವಸಂತ್ ಮನವಿ ಮಾಡಿದರು.

ನಿರ್ಮಾಪಕಿ ರಾಧಾ ಮಾತನಾಡಿ, ತಾಯಂದಿರು ಮಕ್ಕಳಿಗೆ ನೀಡುವ ಎಚ್ಚರಿಕೆಯ ಈ 'ಗೊಗ್ಗಯ್ಯ' ಹೆಸರನ್ನೇ ತಾವೇ ನಿರ್ದೇಶಕರಿಗೆ ಸೂಚಿಸಿದ್ದಾಗಿ ಮತ್ತು ಕಥೆಯು ಈ ಶೀರ್ಷಿಕೆಗೆ ಪೂರಕವಾಗಿ ಮೂಡಿಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದ ಚಿತ್ರಕಥೆ, ಸಂಭಾಷಣೆ, ಗೀತರಚನೆ ಹಾಗೂ ನೃತ್ಯ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವ ತನ್ಮಯ್ ಎಸ್ ಆನಂದ್ ಕುಮಾರ್ ಅವರು ನಿರ್ಮಾಣದ ಮೇಲ್ವಿಚಾರಣೆಯನ್ನೂ ನೋಡಿಕೊಂಡಿದ್ದಾರೆ. ಚಿತ್ರತಂಡದ ಸದಸ್ಯರಾದ ನಾಯಕಿ ಸ್ನೇಹ, ನಟರಾದ ಕೌರವ ವೆಂಕಟೇಶ್, ವೈಭವ ನಾಗರಾಜ್ ಹಾಗೂ ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದು ಚಿತ್ರದ ಯಶಸ್ಸಿಗೆ ಹಾರೈಸಿದರು.

Read More
Next Story