Court breaks release of Boss; stay order issued against film based on Renukaswamy case
x

ನಟ ದರ್ಶನ್‌ ಹಾಗೂ ಮೃತ ರೇಣುಕಾಸ್ವಾಮಿ

ರೇಣುಕಾಸ್ವಾಮಿ ಪ್ರಕರಣ ಆಧರಿಸಿದ ʼಬಾಸ್‌ʼ ಚಿತ್ರಕ್ಕೆ ನ್ಯಾಯಾಲಯ ತಡೆ

ದರ್ಶನ್ ಮತ್ತು ವಿಜಯಲಕ್ಷ್ಮಿ ಸಲ್ಲಿಸಿದ್ದ ದಾವೆಯನ್ನು ಆಲಿಸಿದ 17ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಎಂ. ಅನಿತಾ ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ.


Click the Play button to hear this message in audio format

ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರ ಖಾಸಗಿ ಜೀವನ ಹಾಗೂ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿದೆ ಎನ್ನಲಾದ 'ಬಾಸ್' (Boss) ಸಿನಿಮಾದ ಬಿಡುಗಡೆಗೆ ಬೆಂಗಳೂರಿನ ಸೆಷನ್ಸ್‌ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಚಿತ್ರವನ್ನು ಚಿತ್ರಮಂದಿರ ಅಥವಾ ಓಟಿಟಿ (OTT) ಸೇರಿದಂತೆ ಯಾವುದೇ ವೇದಿಕೆಗಳಲ್ಲಿ ಬಿಡುಗಡೆ ಮಾಡದಂತೆ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ನ್ಯಾಯಾಲಯದ ಆದೇಶವೇನು?

ದರ್ಶನ್ ಮತ್ತು ವಿಜಯಲಕ್ಷ್ಮಿ ಸಲ್ಲಿಸಿದ್ದ ದಾವೆಯನ್ನು ಆಲಿಸಿದ 17ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಎಂ. ಅನಿತಾ ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಚಿತ್ರದ ನಿರ್ಮಾಣ, ಚಿತ್ರೀಕರಣ, ಸಂಕಲನ, ಪ್ರಚಾರ ಬಿಡುಗಡೆ ಮತ್ತು ಹಂಚಿಕೆಯನ್ನು ಮುಂದಿನ ವಿಚಾರಣೆವರೆಗೆ ಸ್ಥಗಿತಗೊಳಿಸಬೇಕು. ಅರ್ಜಿದಾರರ ಖಾಸಗಿ ಜೀವನ, ಕುಟುಂಬದ ಘನತೆ, ವ್ಯಕ್ತಿತ್ವದ ಹಕ್ಕುಗಳು ಅಥವಾ ನ್ಯಾಯಾಂಗದ ಪರಿಶೀಲನೆಯಲ್ಲಿರುವ ಕ್ರಿಮಿನಲ್ ಪ್ರಕರಣದ ಅಂಶಗಳನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಳಸುವಂತಿಲ್ಲ ಎಂದು ತಿಳಿಸಿದೆ.

ಪ್ರಚಾರಕ್ಕೆ ತಡೆ

ಪೋಸ್ಟರ್, ಟೀಸರ್, ಮಾಧ್ಯಮ ಗೋಷ್ಠಿ ಅಥವಾ ಸಂದರ್ಶನಗಳಲ್ಲಿ ದರ್ಶನ್ ದಂಪತಿಯ ಉಲ್ಲೇಖ ಮಾಡಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಆದೇಶವು ಸಿನಿಮಾ ಮಾತ್ರವಲ್ಲದೆ ವೆಬ್ ಸರಣಿಗಳಿಗೂ ಅನ್ವಯಿಸಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿರಿ ಪ್ರೊಡಕ್ಷನ್ಸ್, ವಿ ಲಾವಾ, ಸೆನ್ಸಾರ್ ಮಂಡಳಿ (CBFC), ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಗೂಗಲ್, ಮೆಟಾ (ಫೇಸ್‌ಬುಕ್), ಎಕ್ಸ್ ಕಾರ್ಪ್ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳಿಗೆ ನ್ಯಾಯಾಲಯವು ಸಮನ್ಸ್ ಹಾಗೂ ನೋಟಿಸ್ ಜಾರಿ ಮಾಡಿದೆ.

'ಬಾಸ್' ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇತ್ತು. ಆದರೆ, ನ್ಯಾಯಾಲಯದ ಈ ಆದೇಶದಿಂದಾಗಿ ಚಿತ್ರತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಲಾಗಿದೆ.

Read More
Next Story