
ಆಗಸ್ಟ್ 26ಕ್ಕೆ ವಿಶ್ವದಾದ್ಯಂತ ತೆರೆಗೆ ಬರಲಿರುವ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ.
"ಸ್ವಲ್ಪ ಸಮಾಧಾನ ಮಾಡ್ಕೊಳ್ಳಿ, ಲೇಡೀಸ್ ಬರ್ತಾರೆ" - 'ಟಾಕ್ಸಿಕ್' ಅಪ್ಡೇಟ್ ಕೊಟ್ಟ ರಾಕಿಂಗ್ ಸ್ಟಾರ್
ರಾಕಿ ಭಾಯ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಸ್ಟಾರ್ ನಾಯಕಿಯರ ಅಧಿಕೃತ ಪರಿಚಯ ಜುಲೈ 1ರ ಬೆಳಿಗ್ಗೆ 11.33ಕ್ಕೆ ಪ್ರೋಮೋ ಮೂಲಕ ಹೊರಬರಲಿದ್ದು, ಸಿನಿಮಾ ಆಗಸ್ಟ್ 26, ರಂದು ರಿಲೀಸ್ ಆಗಲಿದೆ.
ಕನ್ನಡ ಚಿತ್ರರಂಗದ ಖ್ಯಾತ ನಟ ಯಶ್ ತಮ್ಮ ಮುಂಬರುವ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಬಗ್ಗೆ ಅಪ್ಡೇಟ್ ಒಂದನ್ನು ಹಂಚಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿತ್ರದ ಬಗ್ಗೆ ಹೊರಬಂದ ಬಹುತೇಕ ಅಪ್ಡೇಟ್‌ಗಳು ಕೇವಲ ಯಶ್ ಮತ್ತು ಅವರ ಪಾತ್ರದ ಮೇಲೆಯೇ ಗಮನ ಹರಿಸಿದ್ದವು. ಚಿತ್ರದಲ್ಲಿ ಬಲಿಷ್ಠ ಮಹಿಳಾ ತಾರಾಗಣವಿದ್ದರೂ, ಚಿತ್ರತಂಡ ಈ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಆದರೆ ಈಗ ಸ್ವತಃ ಯಶ್ ಅವರೇ 'ಟಾಕ್ಸಿಕ್' ಚಿತ್ರದ ನಾಯಕಿಯರ ಪರಿಚಯ ಯಾವಾಗ ಆಗಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಚಿತ್ರದ ನಿರ್ಮಾಣ ಸಂಸ್ಥೆಯು, "ಲೇಡೀಸ್ ಎಲ್ಲಿದ್ದಾರೆ ಯಶ್?" ಎಂದು ತಮಾಷೆಯಾಗಿ ಪೋಸ್ಟ್ ಮಾಡಿತ್ತು. ಇದಕ್ಕೆ ಯಶ್ ಅಷ್ಟೇ ತಮಾಷೆಯಾಗಿ ಮರುಪೋಸ್ಟ್ ಮಾಡಿದ್ದು, "ಸ್ವಲ್ಪ ಸಮಾಧಾನ ಮಾಡಿಕೊಳ್ಳಿ! ಲೇಡೀಸ್ ಬರೋಕೆ ಸ್ವಲ್ಪ ಸಮಯ ತಗೋತಾರೆ! ನಾಳೆ ಅಂದರೆ ಜುಲೈ 1ರ ಬೆಳಿಗ್ಗೆ 11.33ಕ್ಕೆ ಸಿಗೋಣ" ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಜುಲೈ 1ರ ಬೆಳಿಗ್ಗೆ 11.33ಕ್ಕೆ ಚಿತ್ರದ ಮಹಿಳಾ ಪಾತ್ರಗಳ ಝಲಕ್ ಒಳಗೊಂಡ ಹೊಸ ಪ್ರೋಮೋ ಬಿಡುಗಡೆಯಾಗಲಿದೆ ಎಂಬುದು ಖಚಿತವಾಗಿದೆ.
ಐವರು ನಾಯಕಿಯರ ಪಾತ್ರಗಳ ವಿವರ
ಗೀತು ಮೋಹನ್ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರು ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದ್ದು, ನಯನತಾರಾ 'ಗಂಗಾ' ಆಗಿ, ಕಿಯಾರಾ ಅಡ್ವಾಣಿ 'ನಾಡಿಯಾ' ಆಗಿ, ಹುಮಾ ಖುರೇಷಿ 'ಎಲಿಜಬೆತ್' ಆಗಿ, ರುಕ್ಮಿಣಿ ವಸಂತ್ 'ಮೆಲಿಸ್ಸಾ' ಪಾತ್ರದಲ್ಲಿ ಮತ್ತು ತಾರಾ ಸುತಾರಿಯಾ 'ರೆಬೆಕ್ಕಾ' ಪಾತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರದ ಬಿಡುಗಡೆಯ ಬಗ್ಗೆ ನೋಡುವುದಾದರೆ, ಆರಂಭದಲ್ಲಿ ಚಿತ್ರವನ್ನು ಮಾರ್ಚ್ 19 ರಿಂದ ಜೂನ್ 4 ಕ್ಕೆ ಮುಂದೂಡಲಾಗಿತ್ತು. ಆದರೆ ಇತ್ತೀಚೆಗೆ 'ಸಿನಿಮಾಕಾನ್' ಪ್ರದರ್ಶನದಲ್ಲಿ ಚಿತ್ರಕ್ಕೆ ಸಿಕ್ಕ ಭರ್ಜರಿ ಪ್ರತಿಕ್ರಿಯೆಯ ನಂತರ ಚಿತ್ರತಂಡ ಬಿಡುಗಡೆಯ ಯೋಜನೆಯನ್ನು ಬದಲಾಯಿಸಿದೆ. ಹೊಸ ಪ್ರಕಟಣೆಯ ಪ್ರಕಾರ, ಸಿನಿಮಾ ಆಗಸ್ಟ್ 26, 2026 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ.
ಚಿತ್ರದ ಉಳಿದ ತಾರಾಗಣದಲ್ಲಿ ಅಕ್ಷಯ್ ಒಬೆರಾಯ್, ಸುದೇವ್ ನಾಯರ್, ಅಮಿತ್ ತಿವಾರಿ ಸೇರಿದಂತೆ ಹಲವು ಪ್ರಮುಖ ನಟರಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಅಂತರರಾಷ್ಟ್ರೀಯ ಸಾಹಸ ಸಂಯೋಜಕ ಜೆಜೆ ಪೆರ್ರಿ ಮತ್ತು ಅನ್ಬರಿವ್ ಜೋಡಿ ಚಿತ್ರದ ಸಾಹಸ ದೃಶ್ಯಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ. ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗುತ್ತಿದ್ದು, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

