
ವನ್ಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಸದ್ದು ಮಾಡುತ್ತಿದೆ.
ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಜನರ ಗಮನ ಸೆಳೆಯುತ್ತಿರುವ ಕನ್ನಡದ ವನ್ಯಾ
ನೈಜ ಘಟನೆಯಿಂದ ಪ್ರೇರಣೆಗೊಂಡು ನಿರ್ಮಾಣವಾಗಿರುವ ಕನ್ನಡದ ಚಿತ್ರ ವನ್ಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಸದ್ದು ಮಾಡುತ್ತಿದೆ.
ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಚಿತ್ರಗಳ ಅಬ್ಬರದ ನಡುವೆ, ಹೊಸಬರ, ಪ್ರಯೋಗಾತ್ಮಕ ಮತ್ತು ಜೀವನಕ್ಕೆ ಹತ್ತಿರವಾದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಚಿತ್ರಗಳೂ ತಯಾರಾಗಿ ಪ್ರೇಕ್ಷಕರ ಮನ ಗೆಲ್ಲುತ್ತಿವೆ. ಅಂತಹ ಪ್ರಯೋಗಾತ್ಮಕ ನೈಜ ಘಟನೆಯಿಂದ ಪ್ರೇರಣೆಗೊಂಡು ನಿರ್ಮಾಣವಾಗಿರುವ ಚಿತ್ರ ವನ್ಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಸದ್ದು ಮಾಡುತ್ತಿದೆ.
2025 ರಲ್ಲಿ ತಯಾರಾಗಿರುವ ಚಿತ್ರ ಈಗಾಗಲೇ ಗೋವಾ ಅಂತಾರಾಷ್ಟ್ರೀಯ ಫಿಲ್ಮ್‌ಫೆಸ್ಟಿವಲ್, ಮುಂಬೈ ಫಿಲಂ ಫೆಸ್ಟಿವಲ್, ಜಾರ್ಖಂಡನ ಧರ್ತಿ ಅಬ್ಬಾ ಫಿಲ್ಮ್ ಫೆಸ್ಟಿವಲ್, ಪುಣೆ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ, ಗೋವಾ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಂಡು ಜನರ ಮೆಚ್ಚುಗೆ ಪಡೆದಿದೆ.
ಅರಣ್ಯವಾಸಿ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಹಲವಾರು ಕಲಾತ್ಮಕ ಹಾಗೂ ಕಮರ್ಷಿಯಲ್ ಚಲನಚಿತ್ರಗಳು ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಬಂದು ಹೋಗಿವೆ. ಆದರೆ, ವನ್ಯಾ ಚಿತ್ರದ ದೃಷ್ಟಿಕೋನ ಮತ್ತು ನಿರೂಪಣಾ ಶೈಲಿ ವ್ಯವಸ್ಥೆಯ ವಿರುದ್ಧದ ಹೋರಾಟದ ಹೊಸ ರೂಪವನ್ನು ಪರಿಚಯಿಸುತ್ತದೆ.
ನಿರ್ದೇಶಕ ಬಡಿಗೇರ ದೇವೇಂದ್ರ ವ್ಯವಸ್ಥೆಯ ಲೋಪಗಳನ್ನು ಸೂಕ್ಷ್ಮವಾಗಿ ಗಮನಿಸಿ ಚಿತ್ರದ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ. ವನ್ಯಾ ಮೂರು ತಲೆಮಾರುಗಳಿಗೆ ಸಂಬಂಧಿಸಿದ ವಿಷಯವನ್ನು ಒಳಗೊಂಡಿದ್ದು, ಪ್ರಸ್ತುತ ಮೂರು ತಲೆಮಾರುಗಳ ಜನರಿಗೆ ಕಾಡಿನ ಬಗ್ಗೆ, ಹಾಗೂ ಪ್ರಾಯೋಗಿಕವಾಗಿ ಅಲ್ಲಿ ಜೀವನ ನಡೆಸಲು ಇರುವ ಅವ್ಯವಸ್ಥೆಯ ಬಗ್ಗೆ ಅದರಿಂದ ಹೊರ ಬಂದು ನಗರ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಳ್ಳಲು ನಡೆಸುತ್ತಿರುವ ಸಂಘರ್ಷವನ್ನು ನಿರ್ದೇಶಕರು ಸರಳ ಮಾರ್ಗದಲ್ಲಿ ಹೇಳಿದ್ದಾರೆ. ಚಿತ್ರದ ಅಂತ್ಯದಲ್ಲಿ ಮೂರನೇ ತಲೆಮಾರು ಮತ್ತೆ ಕಾಡಿನ ಬಗ್ಗೆ ಆಸಕ್ತಿ ತೋರುವ ಆಶಾವಾದವನ್ನು ಮೂಡಿಸುವ ಮೂಲಕ ಭವಿಷ್ಯದಲ್ಲಿ ಕಾಡಿನ. ರಕ್ಷಣೆಯ ಬಗ್ಗೆ ಭರವಸೆ ಇಟ್ಟುಕೊಳ್ಳುವಂತೆ ಮಾಡಿದ್ದಾರೆ.
ಚಿತ್ರದ ಮುಖ್ಯ ಪಾತ್ರ ಕರಿಯಪ್ಪನ ಪಾತ್ರದಲ್ಲಿ ಹಿರಿಯ ನಟ ವೈಜನಾಥ ಬಿರಾದಾರ ಮನೀಜ್ಞವಾಗಿ ಅಭಿನಯಿಸಿದ್ದಾರೆ. ಬಹುತೇಕ ಚಿತ್ರಗಳಲ್ಲಿ ಹಾಸ್ಯ ನಟರಾಗಿ ಅಭಿನಯಿಸಿರುವ ವೈಜನಾಥ ಬಿರಾದಾರ ಅವರು ಗಂಭೀರ ಪಾತ್ರದಲ್ಲಿ ಅಭಿನಯಿಸಿದ್ದಯ, ಅವರ ನೈಜ ಅಭಿನಯ ಇಡೀ ಚಿತ್ರವನ್ನು ಗಟ್ಟಿಯಾಗಿ ಇಟ್ಟುಕೊಂಡು ಹೋಗುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಬಿರಾದಾರ ಅವರ ಮಗಳ ಪಾತ್ರದಲ್ಲಿ ಮೇಘನಾ ಬೆಳವಾಡಿ ಪಾತ್ರಕ್ಕೆ ಜೀವ ತುಂಬಿದ್ದು, ಅವರ ಸಹಜ ಅಭಿನಯ ಪ್ರೇಕ್ಷಕರ ಹೃದಯ ಕಲುಕುತ್ತದೆ. ಬೇಬಿ ಧಾತ್ರಿ ಭಟ್ ಮೂರನೇ ತಲೆಮಾರಿನ ಕುಡಿಯಾಗಿ ತನ್ನ ಮುಗ್ಧತೆಯಿಂದ ಗಮನ ಸೆಳೆಯುತ್ತಾಳೆ.
ಫಾರೆಸ್ಟ್ ಅಧಿಕಾರಿಯಾಗಿ ಅಶ್ವಿನ್ ಹಾಸನ ಹಾಗೂ ಹಾಡಿಯ ಯುವಕ ರುದ್ರನಾಗಿ ಯಶವಂತ ಕುಚಬಾಳ ಅವರ ಜುಗಲ್ ಬಂದಿ ಚಿತ್ರದಲ್ಲಿ ಲವಲವಿಕೆ ಜೀವಂತವಾಗಿರುವಂತೆ ಮಾಡಿದೆ. ಜಿಲ್ಲಾಧಿಕಾರಿಯಾಗಿ ನಟ ಶ್ರೀಕಾಂತ್, ಫಾರೆಸ್ಟ್ ಆಫೀಸರ್ ಆಗಿ ಅಭಿಜಿತ್ ಶೆಟ್ಟಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮಹದೇವ ಹಡಪದ ಅವರ ಸಂಗೀತದಲ್ಲಿ ಪ್ರಕಾಶ ಬೆಳವಾಡಿ ಅವರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಚಿಕ್ಕಂದಿನ ಚಿಕ್ಕ ಆಸೆ ಹಾಡು ಮನ ತಟ್ಟುವುದಷ್ಟೇ ಅಲ್ಲ, ಗುಣುಗುವಂತಿದೆ.
ನಿರ್ದೇಶಕರು ಆದಿವಾಸಿಗಳ ಕಥೆಯನ್ನು ಅವರ ನೆಲದಲ್ಲಿಯೇ ಅವರನ್ನೂ ಒಳಗೊಂಡು ಚಿತ್ರ ಮಾಡಿರುವುದು ನೈಜತೆ ಎದ್ದು ಕಾಣುತ್ತದೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿರುವ ವನ್ಯಾ ಚಿತ್ರ ಜನವರಿ 29ರಿಂದ ಆರಂಭವಾಗುವ ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಕನ್ನಡ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ಜನವರಿ 31 ರಂದು ಸಂಜೆ 6 ಗಂಟೆಗೆ ಚಾಮರಾಜಪೇಟೆಯ ಡಾ. ರಾಜಕುಮಾರ ಭವನದಲ್ಲಿ ಹಾಗೂ ಫೆಬ್ರವರಿ 1 ರಂದು ಸಿನಿಪೊಲಿಸ್ ಲುಲು ಮಾಲ್ ನಲ್ಲಿ 12.40 ಕ್ಕೆ ಪ್ರದರ್ಶನ ಕಾಣುತ್ತಿದೆ. ಕುಟುಂಬ ಸಮೇತರಾಗಿ ಸದಭಿರುಚಿಯ ಚಿತ್ರ ನೋಡಬೇಕೆನ್ನುವವರು, ಪರಿಸರದ ಬಗ್ಗೆ ಕಾಳಜಿ ಇರುವವರು ಕಾದು ಚಿತ್ರವನ್ನು ನೋಡಲಡ್ಡಿಯಿಲ್ಲ.

