
ಕನ್ನಡದ ಎವರ್‌ಗ್ರೀನ್ ಕ್ಲಾಸಿಕ್ ‘ಅಮೆರಿಕ ಅಮೆರಿಕ’ ಚಿತ್ರಕ್ಕೆ 29ರ ಸಂಭ್ರಮ
America America 2| ಅಮೆರಿಕ ಅಮೆರಿಕ ಸಿನಿಮಾಗೆ 29 ವರ್ಷ; ಶೀಘ್ರದಲ್ಲೇ ‘ಅಮೆರಿಕ ಅಮೆರಿಕ 2’
ಕನ್ನಡದ ಎವರ್‌ಗ್ರೀನ್ ಕ್ಲಾಸಿಕ್ ‘ಅಮೆರಿಕ ಅಮೆರಿಕ’ ಚಿತ್ರಕ್ಕೆ 29ರ ಸಂಭ್ರಮ! ಶೀಘ್ರದಲ್ಲೇ ಬರಲಿದೆ ಈ ಚಿತ್ರದ ಸೀಕ್ವೆಲ್. ನಾಗತಿಹಳ್ಳಿ ಚಂದ್ರಶೇಖರ್ ಈ ಬಗ್ಗೆ ಘೋಷಣೆ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ‘ಅಮೆರಿಕ ಅಮೆರಿಕ’ ಬಿಡುಗಡೆಯಾಗಿ ಇಂದಿಗೆ (ಏಪ್ರಿಲ್ 11) ಬರೋಬ್ಬರಿ 29 ವರ್ಷಗಳು ಸಂದಿವೆ. 1997ರ ಏಪ್ರಿಲ್ 11ರಂದು ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಚಿತ್ರದ 29ನೇ ವರ್ಷದ ಸಂಭ್ರಮದ ನಡುವೆಯೇ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ‘ಅಮೆರಿಕ ಅಮೆರಿಕ 2’ ಶೀಘ್ರದಲ್ಲೇ ತೆರೆಗೆ ಬರಲಿದೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.
ಈ ಬಗ್ಗೆ ನಾಗತಿಹಳ್ಳಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. "ನಾನು ಅದನ್ನು ಸೃಷ್ಟಿಸಲಿಲ್ಲ; ಆ ಸಿನಿಮಾ ನನ್ನನ್ನು ರೂಪಿಸಿತು! ಲಕ್ಷಾಂತರ ಕಣ್ಣುಗಳಿಗೆ ಕನಸು ನೀಡಿದ, ಹೃದಯಗಳಲ್ಲಿ ಹೆಮ್ಮೆ ತುಂಬಿದ ಈ ಚಿತ್ರಕ್ಕೆ ಸಾಟಿಯಿಲ್ಲ. ಅಸಂಖ್ಯಾತ ಕನ್ನಡಿಗರಿಗೆ ನನ್ನ ಕೋಟಿ ಧನ್ಯವಾದಗಳು" ಎಂದು ಬರೆಯುವ ಮೂಲಕ ಸೀಕ್ವೆಲ್ ಸಿದ್ಧವಾಗುತ್ತಿರುವ ಸುಳಿವು ನೀಡಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಅವರ ಪೋಸ್ಟ್‌ಗೆ ನೆಟ್ಟಿಗರು ವಿವಿಧ ರೀತಿಯ ಕಮೆಂಟ್ ಮಾಡುತ್ತಿದ್ದು, ಒಬ್ಬ ಬಳಕೆದಾರ, "ದಯವಿಟ್ಟು ಈ ಚಿತ್ರದ ಎರಡನೇ ಭಾಗವನ್ನು ಮಾಡಬೇಡಿ. ಹಾಗೆ ಮಾಡುವುದರಿಂದ ನಿಮ್ಮ ಶ್ರೇಷ್ಠತೆಯ ಘನತೆ ಕಡಿಮೆಯಾಗಬಹುದು, ದಯವಿಟ್ಟು ಆ ನಿರ್ಧಾರ ಬೇಡ ಸರ್" ಎಂದು ಒಬ್ಬರು ವಿನಂತಿಸಿದ್ದಾರೆ.
"ಆ ಕಾಲದ ಅದ್ಭುತ ಸಂಗೀತವನ್ನು ಈಗ ಮತ್ತೆ ನೀಡಲು ಸಾಧ್ಯವಿಲ್ಲ. ಅಂದಿನ ಪೀಳಿಗೆಯ ಅಭಿರುಚಿಯೇ ಬೇರೆ, ಇಂದಿನದ್ದೇ ಬೇರೆ. ಹಾಗಾಗಿ ಅದನ್ನು ಅಲ್ಲಿಗೇ ಬಿಟ್ಟುಬಿಡುವುದು ಒಳ್ಳೆಯದು" ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
"ಇದು ಒಂದು 'ಕಲ್ಟ್ ಕ್ಲಾಸಿಕ್' ಸಿನಿಮಾ. ಇಂದಿನ ಕಾಲದ ಪ್ರೇಮ ಮತ್ತು ಪ್ರಣಯದ ಕಲ್ಪನೆಗಳ ನಡುವೆ ಈ ಚಿತ್ರದ ಎರಡನೇ ಭಾಗವು ವಿಫಲವಾಗುವ ಸಾಧ್ಯತೆಯಿದೆ. 'ನೂರು ಜನ್ಮಕೂ' ಅಂತಹ ಹಾಡುಗಳು ಮತ್ತು ಅವು ಬೀರಿದ ಪ್ರಭಾವ ಮತ್ತೆ ಮರುಕಳಿಸಲು ಸಾಧ್ಯವಿಲ್ಲ" ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
ವಿದೇಶಿ ವ್ಯಾಮೋಹ ಹಾಗೂ ತಾಯ್ನಾಡಿನ ಮಣ್ಣಿನ ಗುಣದ ನಡುವಿನ ಸಂಘರ್ಷವನ್ನು ಕಟ್ಟಿಕೊಟ್ಟಿದ್ದ ಈ ಚಿತ್ರವು ಅಂದು ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ಅವರು ಈ ಸಿನಿಮಾದಲ್ಲಿ ನಟಿಸಿದ್ದರು. ಮನೋ ಮೂರ್ತಿ ಅವರ ಸಂಗೀತ ನೀಡಿದ್ದರು. ವಿಶೇಷವಾಗಿ 'ನೂರು ಜನ್ಮಕೂ..' ಹಾಡು ಇಂದಿಗೂ ಪ್ರೇಮಿಗಳ ಫೇವರೆಟ್ ಸಾಂಗ್ ಆಗಿ ಉಳಿದಿದೆ. ಅಂದು ಅಮೆರಿಕದ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡು ಕನ್ನಡಿಗರನ್ನು ಮಂತ್ರಮುಗ್ಧರನ್ನಾಗಿಸಿದ್ದ ಈ ಸಿನಿಮಾ ಈಗ ಎರಡನೇ ಭಾಗವಾಗಿ ಬರಲಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

