
ನಟಿ ರಮ್ಯಾ
Actor Ramya| ಅಶ್ಲೀಲ ಸಂದೇಶ ಪ್ರಕರಣ-ಕೋರ್ಟ್‌ಗೆ ಹಾಜರಾದ ನಟಿ ರಮ್ಯಾ
ರಮ್ಯಾ ಅವರು ಸಿನಿಮಾ ಮತ್ತು ರಾಜಕೀಯ ಕ್ಷೇತ್ರದಲ್ಲಿನ ತಮ್ಮ ವೃತ್ತಿಜೀವನ, ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಸಕ್ರಿಯತೆ ಹಾಗೂ ಆರೋಪಿಗಳು ಕಳುಹಿಸಿದ ಸಂದೇಶಗಳ ಕುರಿತು ವಿವರವಾದ ಮಾಹಿತಿಯನ್ನು ಒದಗಿಸಿದರು.
ಸ್ಯಾಂಡಲ್‌ವುಡ್ ನಟಿ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬೆಂಗಳೂರಿನ 46ನೇ ಸಿಸಿಎಚ್ ನ್ಯಾಯಾಲಯದಲ್ಲಿ ಮಹತ್ವದ ವಿಚಾರಣೆ ನಡೆದಿದೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅವಹೇಳನಕಾರಿ ಮತ್ತು ಅಶ್ಲೀಲ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ 11 ಆರೋಪಿಗಳ ವಿರುದ್ಧ ಸಾಕ್ಷ್ಯ ನುಡಿಯಲು ರಮ್ಯಾ ಅವರು ನ್ಯಾಯಾಧೀಶರಾದ ಇ. ರಾಜೀವ್ ಗೌಡ ಅವರ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದರು.
ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ ನ್ಯಾಯಾಲಯವು ವಿಚಾರಣೆಯನ್ನು ಇನ್-ಕ್ಯಾಮರಾ (ಮುಚ್ಚಿದ ಕೋಣೆಯಲ್ಲಿ) ನಡೆಸಿತು. ಈ ವೇಳೆ ರಮ್ಯಾ ಅವರು ಸಿನಿಮಾ ಮತ್ತು ರಾಜಕೀಯ ಕ್ಷೇತ್ರದಲ್ಲಿನ ತಮ್ಮ ವೃತ್ತಿಜೀವನ, ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಸಕ್ರಿಯತೆ ಹಾಗೂ ಆರೋಪಿಗಳು ಕಳುಹಿಸಿದ ಸಂದೇಶಗಳ ಕುರಿತು ವಿವರವಾದ ಮಾಹಿತಿಯನ್ನು ಒದಗಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಪೊಲೀಸರು ಈಗಾಗಲೇ 11 ಮಂದಿಯನ್ನು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಇದೀಗ ಅಧಿಕೃತವಾಗಿ ವಿಚಾರಣೆ ಆರಂಭವಾಗಿದೆ.
ನ್ಯಾಯಾಲಯದ ಕಲಾಪದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಮ್ಯಾ ಅವರು, ನ್ಯಾಯಾಲಯದ ಸೂಚನೆಯಂತೆ ಇಂದು ಅಗತ್ಯ ಸಾಕ್ಷ್ಯಗಳನ್ನು ನೀಡಿದ್ದೇನೆ ಮತ್ತು ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಕ್ರಾಸ್ ಎಕ್ಸಮಿನೇಶನ್ ಎದುರಿಸುವುದಾಗಿ ತಿಳಿಸಿದರು. ಈ ಹೋರಾಟವು ಕೇವಲ ವೈಯಕ್ತಿಕ ಸೇಡಿಗಾಗಿ ಅಲ್ಲ, ಬದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧದ ಧ್ವನಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರಿಗೆ ನಿರಂತರವಾಗಿ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಅಶ್ಲೀಲ ಚಿತ್ರಗಳನ್ನು ಕಳುಹಿಸಲಾಗುತ್ತಿದೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದ್ದು, ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸುವ ಉದ್ದೇಶದಿಂದ ಈ ಕೇಸನ್ನು ಮುಂದುವರಿಸುತ್ತಿದ್ದೇನೆ.ಇದು ಕೇವಲ ನನಗಾಗಿ ಆಗಿದ್ದರೆ ಈ ಹಿಂದೆಯೇ ದೂರನ್ನು ವಾಪಸ್ ಪಡೆಯುತ್ತಿದ್ದೆ, ಆದರೆ ಭವಿಷ್ಯದಲ್ಲಿ ಇಂತಹ ಕೃತ್ಯಗಳು ಮರುಕಳಿಸಬಾರದು ಎಂಬ ಕಾರಣಕ್ಕೆ ನ್ಯಾಯಕ್ಕಾಗಿ ಹೋರಾಡುತ್ತಿದ್ದೇನೆ ಎಂದು ರಮ್ಯಾ ಅಭಿಪ್ರಾಯಪಟ್ಟರು.
ಪ್ರಕರಣದ ಹಿನ್ನೆಲೆ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಅವರು ತಮ್ಮ 'ಎಕ್ಸ್' ಖಾತೆಯಲ್ಲಿ, "ಭಾರತದ ಸಾಮಾನ್ಯ ಜನರಿಗೆ ಸುಪ್ರೀಂಕೋರ್ಟ್ ಒಂದು ಭರವಸೆಯ ಕಿರಣವಾಗಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂಬ ಸಂಪೂರ್ಣ ನಂಬಿಕೆ ಇದೆ," ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ನಿಂದ ಕೆರಳಿದ ದರ್ಶನ್ ಅಭಿಮಾನಿಗಳಲ್ಲಿ ಕೆಲವರು ರಮ್ಯಾ ಅವರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮತ್ತು ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ರಮ್ಯಾ ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದರು. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.

