
ವರ್ಷ ಮುಗಿಯುತ್ತಾ ಬಂದಿದೆ; ಚಂದನವನದ ಹೀರೋಗಳು ಮಾಯವಾಗಿದ್ದೆಲ್ಲಿ?
ಈ ವರ್ಷದ ಲೆಕ್ಕಾಚಾರವೇನೋ ಮುಗಿಯಿತು. ಮುಂದಿನ ವರ್ಷ ಯಾರೆಲ್ಲಾ ಆ್ಯಬ್ಸೆಂಟ್ ಆಗುತ್ತಾರೆ ಎಂಬುದು ಮುಂದಿನ ವರ್ಷದ ಕೊನೆಗೆ ಕಾದು ನೋಡಬೇಕು.
2025ರ 10 ತಿಂಗಳುಗಳು ಮುಗಿದಿವೆ. ಈ 10 ತಿಂಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳು ಮುಗಿದಿವೆ. ಈ 200 ಚಿತ್ರಗಳಲ್ಲಿ ಹಲವು ಜನಪ್ರಿಯ ನಟರು ಚಿತ್ರಗಳು ಬಿಡುಗಡೆಯಾಗಿವೆ. ಆದರೆ, ಇನ್ನೂ ಕೆಲವು ಜನಪ್ರಿಯ ಹೀರೋಗಳ ಚಿತ್ರಗಳು ಇದುವರೆಗೂ ಬಿಡುಗಡೆಯಾಗಿಲ್ಲ. ಅಷ್ಟೇ ಅಲ್ಲ, ಈ ವರ್ಷ ಬಿಡುಗಡೆಯಾಗುವುದೂ ಇಲ್ಲ.
ಸ್ಟಾರ್ ನಟರು ಅಭಿನಯದ ಎರಡ್ಮೂರು ಚಿತ್ರಗಳು ವರ್ಷಕ್ಕೆ ಬಿಡುಗಡೆಯಾದರೆ, ಚಿತ್ರಮಂದಿರಗಳಿಗೆ ಪ್ರೇಕ್ಷಕರು ನಿರಂತರವಾಗಿ ಬರುತ್ತಾರೆ, ಇದರಿಂದ ಚಿತ್ರಮಂದಿರಗಳಿಗೆ ಸಮಸ್ಯೆ ಇರುವುದಿಲ್ಲ ಎಂದು ಹಲವು ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರು ಹೇಳುತ್ತಲೇ ಬಂದಿದ್ದಾರೆ. ಆದರೆ, ಕೆಲವು ನಟರ ಚಿತ್ರಗಳು ಮುಗಿದು ಬಿಡುಗಡೆಯಾಗುವುದಕ್ಕೆ ಕನಿಷ್ಠ ಎರಡ್ಮೂರು ವರ್ಷಗಳು ಬೇಕು. ಹಾಗಾಗಿ, ಪ್ರತೀ ವರ್ಷ ಅವರ ಚಿತ್ರಗಳು ಬಿಡುಗಡೆಯಾಗುತ್ತವೆ ಎಂದು ಹೇಳುವುದು ಕಷ್ಟ. ಈ ವರ್ಷ ಸಹ ಕೆಲವು ನಟರ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ ಮತ್ತು ಅವರ ಗೈರು ಹಾಜರಿ ಎದ್ದು ಕಾಣುತ್ತಿದೆ.
ನಾಲ್ಕು ವರ್ಷಗಳ ನಂತರ ಮುಂದಿನ ವರ್ಷ ಯಶ್ ಚಿತ್ರ
ಈ ಪಟ್ಟಿಯಲ್ಲಿ ಪ್ರಮುಖವಾಗಿ ಕಾಣುವುದು ಯಶ್ ಅವರ ಹೆಸರು. 2022ರಲ್ಲಿ ಯಶ್ ಅಭಿನಯದ ‘ಕೆಜಿಎಫ್ 2’ ಚಿತ್ರ ಬಿಡುಗಡೆಯಾಗಿತ್ತು. ಆ ನಂತರ ಅವರ ಮುಂದಿನ ಚಿತ್ರ ಯಾವುದು ಎಂದು ಗೊತ್ತಾಗುವುದಕ್ಕೆ ಒಂದೂವರೆಗ ವರ್ಷಗಳು ಬೇಕಾದವು. ಕೊನೆಗೂ 2024ರಲ್ಲಿ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರ ಪ್ರಾರಂಭವಾಯಿತು. ಚಿತ್ರವು 2025ರ ಏಪ್ರಿಲ್ 10ರಂದು ಬಿಡುಗಡೆ ಆಗುತ್ತದೆ ಎಂದು ಘೋಷಣೆ ಆಗಿತ್ತು. ಆದರೆ, ಅಂದುಕೊಂಡಂತೆ ಆಗಲಿಲ್ಲ. ಆ ನಂತರ ಚಿತ್ರವು 2026ರ ಮಾರ್ಚ್ 19ರಂದು ಬಿಡಗುಡೆಯಾಗಲಿದೆ ಎಂದು ಹೇಳಲಾಯ್ತು. ಕೆಲವು ದಿನಗಳ ಹಿಂದೆ, ಚಿತ್ರ ತಡವಾಗುತ್ತಿದ್ದು, ಅಂದುಕೊಂಡಂತೆ ಬಿಡುಗಡೆಯಾಗುವುದಿಲ್ಲ ಎಂಬ ಗುಸುಗುಸು ಕೇಳಿ ಬಂತು. ಆದರೆ, ಇತ್ತೀಚೆಗೆ ಚಿತ್ರತಂಡ ಚಿತ್ರವು ಅಂದುಕೊಂಡಂತೆಯೇ 2026ರ ಮಾರ್ಚ್ 19ರಂದು ಬಿಡಗುಡೆಯಾಗಲಿದೆ ಎಂದು ಸ್ಪಷ್ಟಪಡಿಸಿದೆ. ಅಲ್ಲಿಗೆ, ನಾಲ್ಕು ವರ್ಷಗಳ ನಂತರ ಮುಂದಿನ ವರ್ಷ ಕೊನೆಗೂ ಯಶ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗಲಿದೆ.
‘ಸಪ್ತ ಸಾಗರದಾಚೆ’ ಕಥೆ ಬರೆಯುತ್ತಿರುವ ರಕ್ಷಿತ್
ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರವು 2023ರ ನವೆಂಬರ್ 17ರಂದು ಬಿಡುಗಡೆಯಾಗಿತ್ತು. ಅಲ್ಲಿಗೆ ಈ ನವೆಂಬರ್ 17ಕ್ಕೆ ಎರಡು ವರ್ಷಗಳಾಗಲಿವೆ. ಈ ಎರಡು ವರ್ಷಗಳಲ್ಲಿ ಅವರ ಮುಂದಿನ ಚಿತ್ರ ಬಿಡುಗಡೆಯಾಗಿಲ್ಲ ಎನ್ನುವುದು ಒಂದು ಕಡೆಯಾದರೆ, ಅವರ ಮುಂದಿನ ಚಿತ್ರ ಯಾವುದು ಎಂಬುದೇ ಸ್ಪಷ್ಟವಿಲ್ಲ ಎಂಬುದು ವಿಶೇಷ. ‘ಪುಣ್ಯಕೋಟಿ’, ‘ರಿಚರ್ಡ್ ಆ್ಯಂಟೋನಿ’ ಬಗ್ಗೆ ರಕ್ಷಿತ್ ಕೆಲವು ಸಮಯದಿಂದ ಮಾತಾಡುತ್ತಲೇ ಬಂದಿದ್ದಾರೆ. ಎರಡು ಚಿತ್ರಗಳ ಪೈಕಿ ‘ರಿಚರ್ಡ್ ಆ್ಯಂಟೋನಿ’ ಮೊದಲು ಪ್ರಾರಂಭವಾಗುವ ಸಾಧ್ಯತೆ ಇದೆ. ‘ಸದ್ಯದಲ್ಲೇ ಶೂಟಿಂಗ್‍ಗೆ ಹೊರಟೆ …’ ಎಂದು ರಕ್ಷಿತ್ ಕಳೆದ ವರ್ಷವೇ ಹೇಳಿದ್ದರು. ಆದರೆ, ಚಿತ್ರೀಕರಣ ಪ್ರಾರಂಭವಾಗುವುದಿರಲಿ, ಇನ್ನೂ ಚಿತ್ರಕಥೆಯೇ ಅಂತಿಮವಾಗಿಲ್ಲ ಎಂದು ಹೇಳಲಾಗುತ್ತದೆ. ಸದ್ಯಕ್ಕೆ ರಕ್ಷಿತ್, ಅಮೇರಿಕಾದಲ್ಲಿ ಕೂತು ಚಿತ್ರಕಥೆ ಬರೆಯುತ್ತಿರುವ ಸುದ್ದಿ ಇದೆ. ಇದಕ್ಕೂ ಮೊದಲು 2023ರಲ್ಲೂ ಅವರು ಅಮೇರಿಕಾಗೆ ಚಿತ್ರಕಥೆ ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದರು ಎಂಬ ಸುದ್ದಿ ಇತ್ತು. ರಕ್ಷಿತ್ ಯಾವಾಗ ಬರೆದು ಮುಗಿಸುತ್ತಾರೋ? ಯಾವಾಗ ಚಿತ್ರೀಕರಣ ಮಾಡುತ್ತಾರೋ? ಚಿತ್ರ ಬಿಡುಗಡೆಯಾಗುವುದಕ್ಕೆ ಎಷ್ಟು ಸಮಯವಾಗುತ್ತದೋ? ಗೊತ್ತಿಲ್ಲ.
‘ಕೆಡಿ’ ಬರೋದೇನಿದ್ದರೂ ಮುಂದಿನ ವರ್ಷವೇ
ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಬಿಡುಗಡೆಯಾಗಿ ಒಂದು ವರ್ಷವಾಗಿದೆ. ಈ ವರ್ಷ ಧ್ರುವ ಅಭಿನಯದ ಮತ್ತು ‘ಜೋಗಿ’ ಪ್ರೇಮ್ ನಿರ್ದೇಶನದ ‘ಕೆಡಿ – ದಿ ಡೆವಿಲ್’ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಅದ್ಯಾಕೆ ತಡವಾಗುತ್ತಿದೆಯೋ, ಪ್ರೇಮ್ ಯಾವಾಗ ಚಿತ್ರವನ್ನು ರೆಡಿ ಮಾಡಿ ಬಿಡುಗಡೆ ಮಾಡುತ್ತಾರೋ ಗೊತ್ತಿಲ್ಲ. ಈ ಕುರಿತು ನಟ ಸುದೀಪ್ ಸಹ ‘ಬ್ರ್ಯಾಟ್’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕಾಲೆಳೆದಿದ್ದರು. ‘ಕೊನೆಯದಾಗಿ ಒಂದು ಡೇಟ್ ಹೇಳಿದ್ದಾರೆ. ಆ ದಿನದಂದು ಬಿಡುಗಡೆ ಮಾಡುತ್ತಾರಂತೆ. ಅದನ್ನು ಸದ್ಯದಲ್ಲೇ ಘೋಷಣೆ ಮಾಡುತ್ತಾರಂತೆ. ಹಾಗೆ ಘೋಷಣೆ ಮಾಡುವುದಕ್ಕೂ ಧೈರ್ಯ ಬೇಕು. ಏಕೆಂದರೆ, ಪ್ರೇಮ್ ಮುಂದಿನ ವರಮಹಾಲಕ್ಷ್ಮೀ ಹಬ್ಬದಂದು ಬಿಡುಗಡೆ ಮಾಡುತ್ತೀನಿ ಎಂದು ಹೇಳಿದರೂ ಆಶ್ಚರ್ಯವಿಲ್ಲ’ ಎಂದು ತಮಾಷೆ ಮಾಡಿದ್ದರು.
ಒಟ್ಟಿನಲ್ಲಿ ಈ ವರ್ಷವಂತೂ ಧ್ರುವ ಅಭಿನಯದ ಚಿತ್ರ ಬಿಡುಗಡೆಯಾಗುತ್ತಿಲ್ಲ. ಇನ್ನೇನಿದ್ದರೂ ಮುಂದಿನ ವರ್ಷವೇ ಸರಿ. ಹೋಗಲಿ, ಈ ಒಂದು ವರ್ಷದಲ್ಲಿ ಧ್ರುವ ಎಷ್ಟು ಚಿತ್ರಗಳನ್ನು ಒಪ್ಪಿದ್ದಾರೆ ಎಂಬ ಕುರಿತೂ ಮಾಹಿತಿ ಇಲ್ಲ. ಧ್ರುವಗಾಗಿ ‘ಭೈರತಿ ರಣಗಲ್’ ನಿರ್ದೇಶಿಸಿದ್ದ ನರ್ತನ್, ‘ಕೆರೆಬೇಟೆ’ ನಿರ್ದೇಶಿಸಿದ್ದ ರಾಜ್‍ಗುರು ಮತ್ತು ‘ದುನಿಯಾ’ ಸೂರಿ ಕಥೆ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ. ಆದರೆ, ಸದ್ಯಕ್ಕಂತೂ ಯಾವುದೇ ಚಿತ್ರ ಸೆಟ್ಟೇರಿಲ್ಲ. ‘ಕೆಡಿ – ದಿ ಡೆವಿಲ್’ ಮುಂದಿನ ವರ್ಷ ಬಿಡುಗಡೆಯಾದರೆ, ಹೊಸ ಚಿತ್ರ ಯಾವಾಗ ಶುರುವಾಗಿ, ಯಾವಾಗ ಮುಗಿದು, ಯಾವಾಗ ಬಿಡುಗಡೆಯಾಗುತ್ತದೋ ಗೊತ್ತಿಲ್ಲ.
ನಟನೆಯಲ್ಲಿ ಬ್ಯುಸಿ; ಚಿತ್ರ ಮಾತ್ರ ಬಿಡುಗಡೆ ಇಲ್ಲ
ಶ್ರೀಮುರಳಿ ಅಭಿನಯದ ‘ಬಘೀರ’ ಒಂದು ವರ್ಷವಾಗಿದೆ. ಮೊದಲ 10 ತಿಂಗಳಲ್ಲಿ ಶ್ರೀಮುರಳಿ ಹೊಸ ಚಿತ್ರದ ಬಗ್ಗೆ ಸುಳಿವೇ ಇರಲಿಲ್ಲ. ಕಳೆದ ತಿಂಗಳಲ್ಲೇ ‘ಪರಾಕ್’ ಮತ್ತು ‘ಉಗ್ರಾಯುಧಂ’ ಚಿತ್ರಗಳು ಸೆಟ್ಟೇರಿವೆ. ಈ ಪೈಕಿ, ‘ಉಗ್ರಾಯುಧಂ’ ಮೊದಲು ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂದು ಸ್ವತಃ ಶ್ರೀಮುರಳಿ ಹೇಳಿಕೊಂಡಿದ್ದಾರೆ. 2026ರಲ್ಲಿ ‘ಉಗ್ರಾಯುಧಮ್’ ಬಂದರೆ, 2027ರಲ್ಲಿ ‘ಪರಾಕ್’ ಬರಬಹುದು. ಕಳೆದ ಒಂದು ವರ್ಷದಲ್ಲಿ ಗಣೇಶ್ ಅಭಿನಯದ ಮೂರು ಚಿತ್ರಗಳ ಮುಹೂರ್ತವಾಗಿವೆ. ಆದರೆ, ಯಾವುದೂ ಈ ವರ್ಷ ಬಿಡುಗಡೆಯಾಗುವುದಿಲ್ಲ. ‘ದುನಿಯಾ’ ವಿಜಯ್ ಅಭಿನಯದ ‘ಲ್ಯಾಂಡ್‍ಲಾರ್ಡ್’ ಚಿತ್ರವು ಈ ವರ್ಷ ಬಿಡುಗಡೆಯಾಗಬೇಕಿದ್ದು, ಅದು ಮುಂದಿನ ವರ್ಷದ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಧನಂಜಯ್ ಅಭಿನಯದ ಒಂದೆರಡು ಚಿತ್ರಗಳಾದರೂ ಪ್ರತೀ ವರ್ಷ ಬಿಡುಗಡೆಯಾಗುತ್ತಿದ್ದವು. ಈ ವರ್ಷ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ, ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದರೂ, ಸದ್ಯ ಯಾವುದೂ ಬಿಡುಗಡೆಯಾಗುತ್ತಿಲ್ಲ.
10 ತಿಂಗಳಲ್ಲಿ ಬರದವರು ಮುಂದಿನ ಎರಡು ತಿಂಗಳಲ್ಲಿ!
ಇನ್ನು, ಶಿವರಾಜಕುಮಾರ್, ಸುದೀಪ್, ದರ್ಶನ್, ಉಪೇಂದ್ರ ಮುಂತಾದವರ ಅಭಿನಯದ ಯಾವುದೇ ಚಿತ್ರವೂ ಈ 10 ತಿಂಗಳಲ್ಲಿ ಬಿಡುಗಡೆಯಾಗಿಲ್ಲ. ಹಾಗಂತ ಈ ವರ್ಷ ಇವರ ಚಿತ್ರಗಳು ಇಲ್ಲ ಎಂದಲ್ಲ. ಮುಂದಿನ ಎರಡು ತಿಂಗಳಲ್ಲಿ ಈ ನಾಲ್ವರು ಹಾಜರಿ ಹಾಕಲಿದ್ದಾರೆ. ಡಿಸೆಂಬರ್‍ನಲ್ಲಿ ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಅಭಿನಯದ ‘45’ ಬಿಡುಗಡೆಯಾಗಲಿದೆ. ಇದಲ್ಲದೆ ಉಪೇಂದ್ರ ಅಭಿನಯದ 18 ವರ್ಷಗಳ ಹಿಂದೆ ಶುರುವಾಗಿದ್ದ ‘ರಕ್ತ ಕಾಶ್ಮೀರ’ ಸಹ ಬಿಡುಗಡೆಯಾಗುವ ಸಾಧ್ಯತೆ ಇದೆ. ಅದೇ ರೀತಿ ಡಿ. 12ರಂದು ದರ್ಶನ್ ಅಭಿನಯದ ‘ದಿ ಡೆವಿಲ್’ ಮತ್ತು ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರವು ಡಿ. 25ರಂದು ಬಿಡುಗಡೆಯಾಗುತ್ತಿದೆ.
ಅಲ್ಲಿಗೆ, ಈ ವರ್ಷ ಒಂದಿಷ್ಟು ಹೀರೋಗಳು ಪ್ರೇಕ್ಷಕರಿಗೆ ಮುಖ ತೋರಿಸಿದರೆ, ಇನ್ನೂ ಕೆಲವರು ತೋರಿಸಿಲ್ಲ. ಅವರೆಲ್ಲ ಮುಂದಿನ ವರ್ಷ ದರ್ಶನ ಕೊಡಬಹುದು. ಆದರೆ, ಈ ವರ್ಷ ಕಾಣಿಸಿಕೊಂಡ ಹೀರೋಗಳು ಮುಂದಿನ ವರ್ಷ ಕಾಣಿಸಿಕೊಳ್ಳದಿರುವ ಸಾಧ್ಯತೆಯೂ ಇದೆ. ಈ ವರ್ಷದ ಲೆಕ್ಕಾಚಾರವೇನೋ ಮುಗಿಯಿತು. ಮುಂದಿನ ವರ್ಷ ಯಾರೆಲ್ಲಾ ಆ್ಯಬ್ಸೆಂಟ್ ಆಗುತ್ತಾರೆ ಎಂಬುದು ಮುಂದಿನ ವರ್ಷದ ಕೊನೆಗೆ ಕಾದು ನೋಡಬೇಕು.

