
ಚಂದನವನಕ್ಕೆ ಕಾಂತಾರಾ ಇಂಪ್ಯಾಕ್ಟ್; ಬಿಡುಗಡೆ ಗೊಂದಲದಲ್ಲಿ ಸಾಲುಸಾಲು ಚಿತ್ರಗಳು
ಡಿಸೆಂಬರ್ ತಿಂಗಳಲ್ಲಿ ಮೂರು ಪ್ರಮುಖ ದೊಡ್ಡ ಚಿತ್ರಗಳು ಇರುವುದರಿಂದ, ಆ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡಿದರೆ, ಸ್ಪರ್ಧೆ ಜೊತೆಗೆ ಚಿತ್ರಮಂದಿರಗಳು ಸಿಗುತ್ತವೋ ಇಲ್ಲವೋ ಎಂಬ ಭಯ ನಿರ್ಮಾಪಕರನ್ನು ಕಾಡುತ್ತಿದೆ.
ರಿಷಭ್ ಶೆಟ್ಟಿ ಅಭಿನಯದ ‘ಕಾಂತಾರ – ಚಾಪ್ಟರ್ 1’ ಬಿಡುಗಡೆಯಾಗಿ 11 ದಿನಗಳಾದರೂ ಹವಾ ತಗ್ಗಿಲ್ಲ. ಚಿತ್ರವು ಜಗತ್ತಿನಾದ್ಯಂತ 655 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡಿ ಮುನ್ನುಗುತ್ತಲಿದೆ. ಈ ಮಧ್ಯೆ, ಯಾವುದೇ ದೊಡ್ಡ ಚಿತ್ರಗಳ ಸ್ಪರ್ಧೆ ಇಲ್ಲದಿರುವುದರಿಂದ ಚಿತ್ರವು 1000 ಕೋಟಿ ರೂ. ಗಳಿಕೆ ಮಾಡುವ ನಿರೀಕ್ಷೆ ಇದೆ.
ಮೂರು ವಾರಗಳಲ್ಲಿ ಬಿಡುಗಡೆಯಾಗಿದ್ದು ಮೂರೇ ಚಿತ್ರಗಳು
‘ಕಾಂತಾರ – ಚಾಪ್ಟರ್ 1’ನಂತಹ ದೊಡ್ಡ ಚಿತ್ರ ಬಿಡುಗಡೆಯಾದ್ದರಿಂದ ಚಿತ್ರಮಂದಿರಗಳು ಸಿಗುತ್ತದೋ ಇಲ್ಲವೋ ಎಂಬ ಭಯದಿಂದ ಕಳೆದ ಶುಕ್ರವಾರ (ಅಕ್ಟೋಬರ್ 10) ಯಾವುದೇ ಚಿತ್ರ ಬಿಡುಗಡೆಯಾಗಲಿಲ್ಲ. ಇನ್ನು, ‘ಕಾಂತಾರ – ಚಾಪ್ಟರ್ 1’ ಬಿಡುಗಡೆಯಾದ ಹಿಂದಿನ ಶುಕ್ರವಾರ (ಸೆಪ್ಟೆಂಬರ್ 26) ಕೇವಲ್ಲ ‘ಕುಂಟೆಬಿಲ್ಲೆ’ ಎಂಬ ಚಿತ್ರ ಮಾತ್ರ ಬಿಡುಗಡೆಯಾಗಿತ್ತು. ಇನ್ನು, ದೊಡ್ಡ ಕನ್ನಡ ಚಿತ್ರಗಳು ಬಿಡುಗಡೆ ಆಗುವುದೇನಿದ್ದರೂ ಡಿಸೆಂಬರ್ ತಿಂಗಳಲ್ಲೇ.
ಡಿಸೆಂಬರ್ ತಿಂಗಳಲ್ಲಿ ದೊಡ್ಡ ಚಿತ್ರಗಳ ಭಯ
ಡಿಸೆಂಬರ್ ತಿಂಗಳಲ್ಲಿ ಕನ್ನಡದ ಮೂರು ದೊಡ್ಡ ಬಜೆಟ್‍ನ ಮತ್ತು ಪ್ರಮುಖ ಹೀರೋಗಳ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಡಿಸೆಂಬರ್ 12ರಂದು ದರ್ಶನ್ ಅಭಿನಯದ ‘ದಿ ಡೆವಿಲ್’ ಚಿತ್ರ ಬಿಡುಗಡೆಯಾಗುವುದಾಗಿ ಈಗಾಗಲೇ ಘೋಷಣೆಯಾಗಿದೆ. ಅದಾಗಿ ಎರಡು ವಾರಗಳಿಗೆ, ಅಂದರೆ ಡಿಸೆಂಬರ್ 25ರಂದು ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಅಭಿನಯದ ‘45’ ಹಾಗೂ ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರಗಳು ಬಿಡುಗಡೆಯಾಗಲಿವೆ. ಕ್ರಿಸ್ಮಸ್ ಮತ್ತು ವರ್ಷಾಂತ್ಯದ ರಜೆಯಾದ್ದರಿಂದ ಅನುಕೂಲವಾಗುತ್ತದೆ ಎಂಬ ನಿಟ್ಟಿನಲ್ಲಿ ಎರಡೂ ಚಿತ್ರಗಳನ್ನು ಒಂದೇ ದಿನ ಬಿಡುಗಡೆ ಮಾಡಲಾಗುತ್ತಿದೆ.
ಅದಕ್ಕೂ ಮೊದಲೇ ಹಲವು ಚಿತ್ರಗಳ ಮೆರವಣಿಗೆ
ಡಿಸೆಂಬರ್ ತಿಂಗಳಲ್ಲಿ ಮೂರು ಪ್ರಮುಖ ದೊಡ್ಡ ಚಿತ್ರಗಳು ಇರುವುದರಿಂದ, ಆ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡಿದರೆ, ಸ್ಪರ್ಧೆ ಜೊತೆಗೆ ಚಿತ್ರಮಂದಿರಗಳು ಸಿಗುತ್ತವೋ ಇಲ್ಲವೋ ಎಂಬ ಭಯ ನಿರ್ಮಾಪಕರನ್ನು ಕಾಡುತ್ತಿದೆ. ಅದೇ ಕಾರಣಕ್ಕೆ ತಮ್ಮ ಚಿತ್ರಗಳನ್ನು ಡಿಸೆಂಬರ್ 12ಕ್ಕೂ ಮೊದಲೇ ಬಿಡುಗಡೆ ಮಾಡಬೇಕೆಂದು ಹಲವರು ಪೈಪೋಟಿ ನಡೆಸಿದ್ದಾರೆ. ಅದಕ್ಕೆ ಪೂರಕವಾಗಿ ಮುಂದಿನ ಎರಡು ತಿಂಗಳಲ್ಲಿ ಹಲವು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ.
ಈ ತಿಂಗಳಲ್ಲೇ 10ಕ್ಕೂ ಹೆಚ್ಚು ಚಿತ್ರಗಳ ಬಿಡುಗಡೆ
ಈ ಪೈಪೋಟಿ ಇದೇ ಶುಕ್ರವಾರ (ಅಕ್ಟೋಬರ್ 17)ರಿಂದ ಶುರುವಾಗಲಿದೆ. ಈ ಶುಕ್ರವಾರದಂದು ‘ಟೈಮ್ ಪಾಸ್’ ಮತ್ತು ‘ಪ್ರೇಮಿಗಳ ಗಮನಕ್ಕೆ’ ಚಿತ್ರಗಳು ಬಿಡುಗಡೆಯಾಗಲಿವೆ. ಅಕ್ಟೋಬರ್ 23ರಂದು ‘ಗ್ರೀನ್’, ‘ದಿಲ್ಮಾರ್’ ಮತ್ತು ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರಗಳು ಬಿಡುಗಡೆಯಾಗಲಿದ್ದು, ಅ.31ರಂದು ಎಸ್. ನಾರಾಯಣ್ ನಿರ್ದೇಶನದ ‘ಮಾರುತ’ ಮತ್ತು ಶಶಾಂಕ್ ನಿರ್ದೇಶನದ ‘ಬ್ರ್ಯಾಟ್’ ಚಿತ್ರಗಳು ಬಿಡುಗಡೆಯಾಗಲಿವೆ. ‘ಮಾರುತ’ ಚಿತ್ರದಲ್ಲಿ ‘ದುನಿಯಾ’ ವಿಜಯ್ ಮತ್ತು ಶ್ರೇಯಸ್ ಮಂಜು ನಟಿಸಿದರೆ, ‘ಬ್ರ್ಯಾಟ್’ ಚಿತ್ರದಲ್ಲಿ ಕೃಷ್ಣ ಅಭಿನಯಿಸಿದ್ದಾರೆ.
ನವೆಂಬರ್ ತಿಂಗಳಲ್ಲಿ ಇನ್ನಷ್ಟು ಮತ್ತಷ್ಟು …
ನವೆಂಬರ್ 14ರಂದು ‘ಸಿಂಪಲ್’ ಸುನಿ ನಿರ್ದೇಶನದ ‘ಗತವೈಭವ’ ಚಿತ್ರ ಬಿಡುಗಡೆ ಆಗತ್ತಿರುವ ಘೋಷಣೆ ಈಗಾಗಲೇ ಆಗಿದೆ. ನವೆಂಬರ್ 13ರಂದು ಪೃಥ್ವಿ ಅಂಬಾರ್ ಅಭಿನಯದ ಮತ್ತು ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್’ ಬಿಡುಗಡೆಯಾಗುವ ನಿರೀಕ್ಷೆ ಇದೆ. ನವೆಂಬರ್ 21ರಂದು ರಿತ್ವಿಕ್ ಅಭಿನಯದ ‘ಮಾರ್ನಮಿ’ ಬಿಡುಗಡೆಯಾಗುವ ಸಾಧ್ಯತೆ ಇದೆ.
ವರ್ಷಾಂತ್ಯಕ್ಕೆ 220 ಪ್ಲಸ್ ಚಿತ್ರಗಳು
ಇದಲ್ಲದೆ, ‘ಗ್ಯಾಂಗ್ಸ್ ಆಫ್ ಯುಕೆ’, ‘ಲವ್ ಯೂ ಮುದ್ದು’, ‘ಪೀಟರ್’, ‘ಪಾಠಶಾಲಾ’ ಮುಂತಾದ ಹಲವು ಚಿತ್ರಗಳು ಬಿಡುಗಡೆಯಾಗಲು ಸಿದ್ಧತೆ ನಡೆಸಿದ್ದು, ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ. ಈಗಾಗಲೇ, ಈ ವರ್ಷ ಅಕ್ಟೋಬರ್ 12ರವರೆಗೂ 190ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿದ್ದು, ತಿಂಗಳು ಮುಗಿಯುವ ಹೊತ್ತಿಗೆ ದ್ವಿಶತಕ ಬಾರಿಸಿದಂತಾಗುತ್ತದೆ. ಮುಂದಿನ ಎರಡು ತಿಂಗಳ ಲೆಕ್ಕ ನೋಡಿದರೆ, ಈ ವರ್ಷ ಒಟ್ಟಾರೆ 220 ಪ್ಲಸ್ ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.
ಸದ್ಯಕ್ಕೆ ಬಿಡುಗಡೆಯಾಗಿರುವ ಚಿತ್ರಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ದುಡ್ಡು ಮಾಡಿರುವ ಚಿತ್ರಗಳು ಬೆರಳಣಿಕೆಯಷ್ಟು ಮಾತ್ರ ಸಿಗುತ್ತದೆ. ಅದರಲ್ಲೂ ‘ಸು ಫ್ರಮ್ ಸೋ’ ಮತ್ತು ‘ಕಾಂತಾರ – ಚಾಪ್ಟರ್ 1’ ಚಿತ್ರಗಳು ಬ್ಲಾಕ್‍ಬಸ್ಟರ್ ಆಗಿ ಹೊರಹೊಮ್ಮಿದ್ದು ಬಿಟ್ಟರೆ, ಮಿಕ್ಕಂತೆ ಕೆಲವು ಚಿತ್ರಗಳು ನಿರ್ಮಾಪಕರು ಹಾಕಿದ ದುಡ್ಡಿಗೆ ಮೋಸ ಮಾಡಿಲ್ಲ. ಮುಂದಿನ ಎರಡೂವರೆ ತಿಂಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳು ಕನ್ನಡ ಚಿತ್ರರಂಗವನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.