
Year Ender 2025: ಈ ವರ್ಷ ಚಂದನವನದಲ್ಲಿ ಎರಡು ದಾಖಲೆ; ಗರಿಷ್ಠ ಮಟ್ಟ ಮುಟ್ಟಿದ ಸಿನಿಮಾಗಳು
ಕನ್ನಡ ಚಿತ್ರರಂಗ ಎರಡು ದಾಖಲೆ ಬರೆದಿದೆ. 91 ವರ್ಷಗಳ ಇತಿಹಾಸದಲ್ಲಿ ಇದುವರೆಗೂ 6,000ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಈ ವರ್ಷ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಒಟ್ಟು 256!
2025 ಮುಗಿಯುತ್ತಾ ಬಂದಿದೆ. ಕನ್ನಡ ಚಿತ್ರರಂಗದ ಲೆಕ್ಕಾಚಾರ ಶುರುವಾಗಿದೆ. ಈ ವರ್ಷ ಎರಡು ಕಾರಣಗಳಿಗೆ ಬಹಳ ಪ್ರಮುಖವಾದ ವರ್ಷವಾಗಿತ್ತು. ಈ ವರ್ಷ ಚಿತ್ರಮಂದಿರಗಳಲ್ಲಿ ಮತ್ತು ಓಟಿಟಿಯಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಒಟ್ಟು 256 ಆಗಿದ್ದು, ಇಲ್ಲಿಯವರೆಗಿನ ಗರಿಷ್ಠವಾಗಿದೆ.
ಇದು ಈ ಹಿಂದಿನ ವರ್ಷಗಳಿಗಿಂತ ಅತ್ಯಂತ ಹೆಚ್ಚು. ಇದರ ಜೊತೆಗೆ ಕನ್ನಡ ಚಿತ್ರರಂಗವು ಆರು ಸಾವಿರದ ಗಡಿ ದಾಟಿದೆ. 91 ವರ್ಷಗಳ ಇತಿಹಾಸವಿರುವ ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಆರು ಸಾವಿರಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ.
ಮುಂಚೆಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರಗಳನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತಿತ್ತು. ಕನ್ನಡವಲ್ಲದೆ ಪ್ರಾದೇಶಿಕ ಭಾಷೆಗಳಾದ ತುಳು, ಕೊಡವ, ಕೊಂಕಣಿ, ಬಂಜಾರ ಮತ್ತು ಅರೆಭಾಷೆಯ ಚಿತ್ರಗಳನ್ನು ಸಹ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ನಂತರ ಟಿವಿ ಮತ್ತು ಓಟಿಟಿಗಳಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆಯೂ ಸೇರಿಕೊಂಡಿತು.
ಈಗ ಬೇರೆ ಭಾಷೆಗಳಿಂದ ಕನ್ನಡಕ್ಕೆ ಡಬ್ ಆದ ಚಿತ್ರಗಳನ್ನು ಸಹ ಲೆಕ್ಕಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಆ ನಿಟ್ಟಿನಲ್ಲಿ ನೋಡಿದರೆ, ಈ ವರ್ಷ 280 ಪ್ಲಸ್ ಚಿತ್ರಗಳಾಗುತ್ತವೆ. ಆದರೆ, ಇಲ್ಲಿ ಪ್ರಾದೇಶಿಕ ಭಾಷೆಗಳ ಚಿತ್ರಗಳು, ಡಬ್ ಆದ ಚಿತ್ರಗಳನ್ನು ಪಕ್ಕಕ್ಕಿಟ್ಟು, ಬರೀ ಚಿತ್ರಮಂದಿರಗಳಲ್ಲಿ ಮತ್ತು ಓಟಿಟಿಗಳಲ್ಲಿ ಬಿಡುಗಡೆಯಾದ ಚಿತ್ರಗಳನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. ಈ ಪೈಕಿ 248 ಚಿತ್ರಗಳು (ಡಿ. 25ರಂದು ಬಿಡುಗಡೆಯಾಗಬೇಕಿರುವ ’45’ ಮತ್ತು ‘ಮಾರ್ಕ್’ ಚಿತ್ರಗಳನ್ನು ಹೊರತುಪಡಿಸಿ) ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೆ, ಎಂಟು ಚಿತ್ರಗಳೂ ಡಿಜಿಟಲ್ ವೇದಿಕೆಗಳಲ್ಲಿ ಬಿಡುಗಡೆಯಾಗಿವೆ.
ದೊಡ್ಡ ಗಳಿಕೆ ಮಾಡಿದ್ದು ಎರಡೇ ಚಿತ್ರಗಳು
ಕೆಲವು ವರ್ಷಗಳ ಹಿಂದೆ ಪ್ರತೀ ವರ್ಷ ಬಿಡುಗಡೆಯಾಗುವ ಚಿತ್ರಗಳ ಪೈಕಿ ಗೆಲುವಿನ ಪ್ರಮಾಣ ಕೇವಲ ಶೇ. 10ರಷ್ಟು ಇರುತ್ತಿತ್ತು. ಇದೀಗ ಆ ಪ್ರಮಾಣ ಕುಸಿದಿದ್ದು, ಶೇ. 2ಕ್ಕೆ ಇಳಿದಿದೆ. ಈ 256 ಚಿತ್ರಗಳ ಪೈಕಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳೆಂದರೆ ಅದು ‘ಸು ಫ್ರಮ್ ಸೋ’ ಮತ್ತು ರಿಷಭ್ ಶೆಟ್ಟಿ ನಿರ್ದೇಶನದ ‘ಕಾಂತಾರ – ಚಾಪ್ಟರ್ 1’ ಚಿತ್ರಗಳು ಪ್ರಮುಖವಾದವು. ಈ ಪೈಕಿ, ‘ಕಾಂತಾರ – ಚಾಪ್ಟರ್ 1’ ಚಿತ್ರವು ಜಾಗತಿಕವಾಗಿ 883 ಕೋಟಿ ರೂ. ಗಳಿಕೆ ಮಾಡಿದೆ ಎಂದು ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿದೆ. ಇನ್ನು, ಎರಡೂವರೆ ಮೂರು ಕೋಟಿ ರೂ.ಗಳಲ್ಲಿ ನಿರ್ಮಾಣವಾದ ‘ಸು ಫ್ರಮ್ ಸೋ’ ಚಿತ್ರವು ಜಾಗತಿಕವಾಗಿ 120 ಕೋಟಿ ರೂ. ಗಳಿಕೆ ಮಾಡಿದೆ ಎಂಬ ಮಾಹಿತಿ ಇದೆ.
ಲಾಭ ಕಂಡಿದ್ದೂ ಅದೇ ಎರಡು ಚಿತ್ರಗಳು
ಬರೀ ಗಳಿಕೆ ವಿಷಯದಲ್ಲಷ್ಟೇ ದೊಡ್ಡ ಲಾಭ ಕಂಡ ಚಿತ್ರಗಳ ಸಾಲಿನಲ್ಲೂ ಅದೇ ‘ಸು ಫ್ರಮ್ ಸೋ’ ಮತ್ತು ‘ಕಾಂತಾರ – ಚಾಪ್ಟರ್ 1’ ಚಿತ್ರಗಳಿವೆ. 125 ಕೋಟಿ ರೂ. ಬಜೆಟ್‍ನಲ್ಲಿ ನಿರ್ಮಾಣವಾದ ಚಿತ್ರವು ಚಿತ್ರಮಂದಿರಗಳಲ್ಲಿನ ಗಳಿಕೆಯ ಜೊತೆಗೆ ಡಿಜಿಟಲ್, ಸ್ಯಾಟಿಲೈಟ್, ಡಬ್ಬಿಂಗ್ ಮತ್ತು ವಿತರಣೆ ಹಕ್ಕುಗಳಿಂದ 700 ಕೋಟಿ ರೂ. ಲಾಭ ಮಾಡಿದೆ ಎಂದು ಅಂದಾಜಿಸಲಾಗಿದೆ. ಅದೇ ರೀತಿ, ‘ಸು ಫ್ರಮ್ ಸೋ’ ಚಿತ್ರ ಸಹ ಚಿತ್ರಮಂದಿರಗಳಲ್ಲಿನ ಪ್ರದರ್ಶನ ಮತ್ತು ಎಲ್ಲಾ ಹಕ್ಕುಗಳಿಂದ ಸೇರಿ ನೂರು ಕೋಟಿ ರೂ. ಲಾಭ ಮಾಡಿರುವ ಅಂದಾಜಿದೆ. ಒಟ್ಟಾರೆ, ಈ ಎರಡು ಚಿತ್ರಗಳಿಂದಲೇ ಈ ವರ್ಷ 800 ಕೋಟಿ ರೂ. ಲಾಭವಾಗಿದೆ ಎಂದು ಹೇಳಲಾಗುತ್ತಿದೆ. ಹಲವು ಚಿತ್ರಗಳು ಮಾಡಬೇಕಾದ ಸಾಧನೆ, ಈ ಎರಡೇ ಚಿತ್ರಗಳು ಮಾಡಿರುವುದು ಗಮನಾರ್ಹ.
ಈ ಚಿತ್ರಗಳಿಗೆ ದೊಡ್ಡ ಲಾಭವೂ ಇಲ್ಲ, ನಷ್ಟವೂ ಇಲ್ಲ
ಮಿಕ್ಕಂತೆ ಈ ವರ್ಷ ಕೆಲವು ದೊಡ್ಡ ಲಾಭವಲ್ಲದಿದ್ದರೂ, ಕೆಲವು ಚಿತ್ರಗಳು ಹಾಕಿದ ಬಂಡವಾಳವನ್ನು ಪಡೆದಿವೆ. ಈ ಪೈಕಿ ಶರಣ್ ಅಭಿನಯದ ‘ಛೂ ಮಂತರ್’, ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’, ರವಿ ಬಸ್ರೂರು ನಿರ್ದೇಶನದ ‘ವೀರ ಚಂದ್ರಹಾಸ’, ಯುವ ರಾಜಕುಮಾರ್ ಅಭಿನಯದ ‘ಎಕ್ಕ’, ಕೃಷ್ಣ ಅಭಿನಯದ ‘ಬ್ರ್ಯಾಟ್’, ರಂಗಾಯಣ ರಘು ಅಭಿನಯದ ‘ಅಜ್ಞಾತವಾಸಿ’ ಚಿತ್ರಗಳು ದೊಡ್ಡ ಲಾಭವಲ್ಲದಿದ್ದರೂ, ಹಾಕಿದ ಬಂಡವಾಳವನ್ನು ಪಡೆಯುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಲಾಗುತ್ತಿದೆ.
ಆದರೆ, ಬರೀ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಿ ಮಾತ್ರವಲ್ಲ, ಒಟ್ಟಾರೆ ಬೇರೆ ಹಕ್ಕುಗಳಿಂದ ಹಾಕಿದ ಬಂಡವಾಳವನ್ನು ವಾಪಸ್ಸು ಪಡೆದಿವೆ. ಮಿಕ್ಕಂತೆ ಕೆಲವು ಚಿತ್ರಗಳು 100 ದಿನ, 25 ದಿನ ಪೂರೈಸಿವೆ ಎಂಬ ಸುದ್ದಿಯಾದರೂ, ಹಾಕಿದ ಬಂಡವಾಳವೂ ವಾಪಸ್ಸು ಬಂದಿಲ್ಲ ಎನ್ನುವುದು ಗಮನಾರ್ಹ.
ಒಂದಿಷ್ಟು ವಿಭಿನ್ನ ಪ್ರಯೋಗಗಳು
ಈ ವರ್ಷ ಬಿಡುಗಡೆಯಾದ ಕಮರ್ಷಿಯಲ್ ಚಿತ್ರಗಳ ಜೊತೆಗೆ ಒಂದಿಷ್ಟು ಬೇರೆ ತರಹದ ಸಿನಿಮಾಗಳು ಗಮನ ಸೆಳೆದಿವೆ. ವರ್ಷದ ಆರಂಭದಲ್ಲಿ ಬಿಡುಗಡೆಯಾದ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಅಂಥದ್ದೊಂದು ಪ್ರಯತ್ನವಾಗಿತ್ತು. ಅದಲ್ಲದೆ, ‘ಪಪ್ಪಿ’, ‘ಹೆಬ್ಬುಲಿ ಕಟ್’, ‘ನೋಡಿದವರು ಏನಂತಾರೆ’, ‘ಕೈಟ್ ಬ್ರದರ್ಸ್’, ‘ವೀರ ಚಂದ್ರಹಾಸ’, ‘ಅನಾಮಧೇಯ ಅಶೋಕ್‍ಕುಮಾರ್’, ‘ಬಿಳಿಚುಕ್ಕಿ ಹಳ್ಳಿ ಹಕ್ಕಿ’, ‘ಮಂಕುತ್ತಿಮ್ಮನ ಕಗ್ಗ’, ‘ತಿಮ್ಮನ ಮೊಟ್ಟೆಗಳು’, ‘ಪದ್ಮಗಂಧಿ’, ‘ಕಪಟ ನಾಟಕ ಸೂತ್ರಧಾರಿ’, ‘ಸೀಸ್ ಕಡ್ಡಿ’ ಮುಂತಾದ ಚಿತ್ರಗಳು ಮಾಮೂಲಿ ಅದೇ ಶೈಲಿಯ ಚಿತ್ರಗಳಿಂದ ಹೊರತಾಗಿದ್ದವು.
ಜನಪ್ರಿಯ ನಟರ ಚಿತ್ರಗಳಿಂದ ಪ್ರಯೋಜನವಾಗಿಲ್ಲ
ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಸ್ಟಾರ್ ನಟರ ಅಥವಾ ನಿರೀಕ್ಷೆಯ ಚಿತ್ರಗಳು ಬಿಡುಗಡೆಯಾಗಲೇ ಇಲ್ಲ. ಹಾಗೆ ಮೊದಲು ಬಂದವರು ರಿಷಭ್ ಶೆಟ್ಟಿ. ‘ದುನಿಯಾ’ ವಿಜಯ್ (ಮಾರುತ), ದರ್ಶನ್ (ದಿ ಡೆವಿಲ್) ಮಾತ್ರ ಇದುವರೆಗೂ ದರ್ಶನ ಕೊಟ್ಟಿದ್ದಾರೆ. ಶಿವರಾಜಕುಮಾರ್, ಸುದೀಪ್ ಮತ್ತು ಉಪೇಂದ್ರ ಅಭಿನಯದ ಚಿತ್ರಗಳು ಕೊನೆಯ ವಾರ ಬಿಡುಗಡೆ ಆಗಲಿವೆ.
ಮಿಕ್ಕಂತೆ ಈ ವರ್ಷ ಶರಣ್, ಪ್ರಜ್ವಲ್, ಯೋಗಿ, ವಿಜಯ್ ರಾಘವೇಂದ್ರ, ಅಜೇಯ್ ರಾವ್, ವಿನೋದ್ ಪ್ರಭಾಕರ್, ಕೃಷ್ಣ, ಕೋಮಲ್, ಧರ್ಮ ಕೀರ್ತಿರಾಜ್, ಪೃಥ್ವಿ ಅಂಬಾರ್, ಧರ್ಮ ಕೀರ್ತಿರಾಜ್, ವಿನಯ್ ರಾಜಕುಮಾರ್ ಮುಂತಾದ ಹಲವು ನಟರ ಚಿತ್ರಗಳ ಚಿತ್ರಗಳು ಬಿಡುಗಡೆಯಾದರೂ, ಯಾರೂ ದೊಡ್ಡ ಗೆಲುವು ನೋಡುವುದಕ್ಕೆ ಸಾಧ್ಯವಾಗಲಿಲ್ಲ. ಇನ್ನು, ಯಶ್, ಗಣೇಶ್, ಶ್ರೀಮುರಳಿ, ಧ್ರುವ ಸರ್ಜಾ, ರಕ್ಷಿತ್ ಶೆಟ್ಟಿ, ನೀನಾಸಂ ಸತೀಶ್ ಮುಂತಾದ ನಟರ ಯಾವುದೇ ಚಿತ್ರಗಳು ಬಿಡುಗಡೆಯಾಗಲಿಲ್ಲ.

