
ಮೇಘನಾರಾಜ್
`ಜೈಲರ್ -2' ತಂಡ ಸೇರಿದ ಸ್ಯಾಂಡಲ್‌ವುಡ್ ನಟಿ ಮೇಘನಾ ಸರ್ಜಾ
ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ತನ್ನ ಅಭಿನಯಕ್ಕೆ ಹೆಸರುವಾಸಿಯಾಗಿರುವ ಮೇಘನಾ ಅವರು ಜೈಲರ್-2 ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ಚಿತ್ರ 'ಜೈಲರ್- 2' ತಂಡಕ್ಕೆ ನಟಿ ಮೇಘನಾ ರಾಜ್ ಸರ್ಜಾ ಸೇರ್ಪಡೆಯಾಗಿದ್ದಾರೆ.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಮತ್ತು 2023ರ ಬ್ಲಾಕ್‌ಬಸ್ಟರ್ 'ಜೈಲರ್' ಚಿತ್ರದ ಈ ಎರಡನೇ ಭಾಗ ಇದಾಗಿದ್ದು, ಭಾರತೀಯ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮೇಘನಾ ರಾಜ್ ಅವರು ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಒಂದು ದಶಕದ ನಂತರ ಮತ್ತೆ ತಮಿಳು ಚಿತ್ರರಂಗಕ್ಕೆ ಮರಳುತ್ತಿದ್ದಾರೆ.
ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ತನ್ನ ಅಭಿನಯದಿಂದ ಹೆಸರು ಮಾಡಿರುವ ಮೇಘನಾ ಸರ್ಜಾ ಅವರು ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಅವರು ಈಗಾಗಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಅವರ ಪಾತ್ರದ ಬಗ್ಗೆ ಹೆಚ್ಚಿನ ವಿವರಗಳು ಗೌಪ್ಯವಾಗಿವೆ. ಈ ಸಿನಿಮಾವು ಮೇಘನಾ ಅವರ ತಮಿಳು ಚಿತ್ರರಂಗದ ಪುನರಾಗಮನ ಮತ್ತು ಅವರ ಪ್ಯಾನ್ ಇಂಡಿಯಾ ನಟಿಯ ಸ್ಥಾನಮಾನ ವಿಸ್ತರಿಸುವಲ್ಲಿ ಪ್ರಮುಖ ಹೆಜ್ಜೆಯಾಗಲಿದೆ ಎನ್ನಲಾಗುತ್ತಿದೆ.
ಕಲಾನಿಧಿ ಮಾರನ್ ಅವರ ಸನ್ ಪಿಕ್ಚರ್ಸ್ ನಿರ್ಮಿಸುತ್ತಿರುವ 'ಜೈಲರ್- 2' ಚಿತ್ರದಲ್ಲಿ ರಮ್ಯಾ ಕೃಷ್ಣನ್, ಯೋಗಿ ಬಾಬು ಮತ್ತು ಮಿರ್ನಾ ಅವರೊಂದಿಗೆ ಹಿಂದಿನ ಭಾಗದಲ್ಲಿ ಮಿಂಚಿದ್ದ ಶಿವರಾಜ್‌ಕುಮಾರ್ ಮತ್ತು ಮೋಹನ್‌ಲಾಲ್ ಅವರೂ ಮುಂದುವರಿಯಲಿದ್ದಾರೆ. ಇದಲ್ಲದೆ, ಎಸ್.ಜೆ. ಸೂರ್ಯ, ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್ ಮತ್ತು ಸಂತಾನಂ ಸಹ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದಾಗಿ 'ಜೈಲರ್- 2' ಭಾರೀ ಹೆಚ್ಚು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.
ಮೇಘನಾ ಅವರು ಕನ್ನಡದಲ್ಲಿ 'ಅಮರ್ಥ' ಮತ್ತು ಮಲಯಾಳಂನಲ್ಲಿ 'ಒಟ್ಟಕೊಂಬನ್' ಚಿತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ.

