200 ಗಡಿ ದಾಟಿದ ಚಂದನವನ; ಸೋಲು-ನಷ್ಟದ ತೂಗುಯ್ಯಾಲೆಯಲ್ಲಿ ಕನ್ನಡ ಚಿತ್ರರಂಗ
ಕನ್ನಡ ಚಿತ್ರರಂಗ ಸದ್ದಿಲ್ಲದೆ 200ರ ಕ್ಲಬ್‍ಗೆ ಸೇರಿದೆ. 200ರ ಕ್ಲಬ್ ಎಂದರೆ 200 ಕೋಟಿ ಕ್ಲಬ್ ಎಂಬ ತೀರ್ಮಾನಕ್ಕೆ ಬರಬೇಡಿ. ಈ ವರ್ಷ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 200 ದಾಟಿದೆ.
ಕನ್ನಡ ಚಿತ್ರರಂಗ ಸದ್ದಿಲ್ಲದೆ 200ರ ಕ್ಲಬ್‍ಗೆ ಸೇರಿದೆ. 200ರ ಕ್ಲಬ್ ಎಂದರೆ 200 ಕೋಟಿ ಕ್ಲಬ್ ಎಂಬ ತೀರ್ಮಾನಕ್ಕೆ ಬರಬೇಡಿ. ಈ ವರ್ಷ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 200 ದಾಟಿದೆ. ಇನ್ನು, ಬಾಕಿ ಇರುವ ವಾರಗಳಲ್ಲಿ ಒಂದಿಷ್ಟು ಚಿತ್ರಗಳು ಬಿಡುಗಡೆ ಆಗಲಿಕ್ಕಿದ್ದು, ಕಳೆದ ವರ್ಷದಂತೆ ಈ ವರ್ಷವೂ 230 ದಾಟುವ ಸಾಧ್ಯತೆ ಇದೆ.
ಕಳೆದ ವಾರು ಒಟ್ಟು ಏಳು ಚಿತ್ರಗಳು ಬಿಡುಗಡೆಯಾಗಿವೆ. ಈ ಏಳು ಚಿತ್ರಗಳಲ್ಲಿ ಯಾವ ಚಿತ್ರ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಒಂದೆರಡು ಚಿತ್ರಗಳು ಕಳೆದ ವಾರಾಂತ್ಯದಲ್ಲಿ ಒಳ್ಳೆಯ ಪ್ರದರ್ಶನ ಕಂಡರೂ, ಸೋಮವಾರದಿಂದ ಮಂಕಾಗಿವೆ. ಈ ಪೈಕಿ ಪ್ರೇಕ್ಷಕರ ಅಭಾವದಿಂದ ಕೆಲವು ಚಿತ್ರಗಳ ಪ್ರದರ್ಶನ ರದ್ದಾಗಿದ್ದೂ ಇದೆ. ಹೀಗಿರುವಾಗಲೇ, ಈ ವಾರ ಇನ್ನೂ ಏಳು ಚಿತ್ರಗಳು ಬಿಡುಗಡೆ ಆಗುವುದಕ್ಕೆ ಸಜ್ಜಾಗುತ್ತಿವೆ.
ಈ ಮಧ್ಯೆ, ಈ ವರ್ಷ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಕಳೆದ ವಾರ 200 ಮೀರಿದೆ. ಈ ಪೈಕಿ 201 ಚಿತ್ರಗಳು ಚಿತ್ರಮಂದಿರಗಳಲ್ಲಿ ನೇರವಾಗಿ ಬಿಡುಗಡೆಯಾದರೆ, ನಾಲ್ಕು ಚಿತ್ರಗಳು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿವೆ. ಇವೆಲ್ಲದರ ಲೆಕ್ಕ ತೆಗೆದುಕೊಂಡರೆ ಒಟ್ಟಾರೆ ಇದುವರೆಗೂ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 205 ಆಗುತ್ತಿದೆ. ವರ್ಷ ಮುಗಿಯುವುದಕ್ಕೆ ಇನ್ನೂ ಐದು ವಾರಗಳಿದ್ದು, ಈ ಅವಧಿಯಲ್ಲಿ 15 ಚಿತ್ರಗಳು ಬಿಡುಗಡೆ ಆಗುವ ಸಾಧ್ಯತೆ ಇದೆ. ತುಳು ಸೇರಿದಂತೆ ಪ್ರಾದೇಶಿಕ ಭಾಷೆಗಳ ಲೆಕ್ಕವನ್ನೂ ಸೇರಿಸಿದರೆ, ಒಟ್ಟಾರೆ ಈ ವರ್ಷ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 230 ದಾಟುತ್ತದೆ. ಕಳೆದ ವರ್ಷವೂ ಹೆಚ್ಚೂಕಡಿಮೆ ಅಷ್ಟೇ ಸಂಖ್ಯೆಯ ಚಿತ್ರಗಳು ಬಿಡುಗಡೆಯಾಗಿದ್ದವು ಎಂಬುದು ಗಮನಾರ್ಹ.
ತೆಲುಗು, ಮಲಯಾಳಂನಲ್ಲೂ 200 ಚಿತ್ರಗಳು
ಬರೀ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಬೇರೆ ಭಾಷೆಯ ಚಿತ್ರರಂಗಗಳು ಸಹ 200ರ ಗಟಿ ತಲುಪಿವೆ. ಈ ಪೈಕಿ ತೆಲುನಲ್ಲಿ ಅತೀ ಹೆಚ್ಚು 235 ಚಿತ್ರಗಳು ಬಿಡುಗಡೆಯಾಗಿರುವ ಮಾಹಿತಿ ಇದೆ. ಮಿಕ್ಕಂತೆ, ತಮಿನಲ್ಲಿ 195 ಮತ್ತು ಮಲಯಾಳಂನಲ್ಲಿ 207 ಚಿತ್ರಗಳು ಇದುವರೆಗೂ ಬಿಡುಗಡೆಯಾಗಿರುವ ಸುದ್ದಿ ಇದೆ. ಇದ್ದುದರಲ್ಲಿ ಕಡಿಮೆ ಎಂದರೆ, ಹಿಂದಿ ಮಾತ್ರ. ಬಾಲಿವುಡ್‍ನಲ್ಲಿ ಇಲ್ಲಿಯವರೆಗೂ 125 ಚಿತ್ರಗಳು ಬಿಡುಗಡೆಯಾಗಿವೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ, ಈ ವರ್ಷ ಮುಗಿಯುವುದರೊಳಗೆ ಈ ಐದು ಭಾಷೆಗಳಿಂದ ಒಟ್ಟು ಸಾವಿರ ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬೇರೆ ಭಾಷೆಗಳಿಗೆ ಹೋಲಿಸಿದರೆ, ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಗೆದ್ದಿರುವ, ಗಳಿಕೆ ಮಾಡಿರುವ ಚಿತ್ರಗಳ ಸಂಖ್ಯೆ ಬಹಳ ಕಡಿಮೆಯೇ. ಹಿಂದಿಯಲ್ಲಿ ನೂರು ಕೋಟಿ ಗಳಿಕೆ ಮಾಡಿರುವ ಕನಿಷ್ಠ 10 ಚಿತ್ರಗಳು ಸಿಗುತ್ತವೆ. ಮಲಯಾಳಂ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರವೊಂದೇ 200 ಕೋಟಿ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತದೆ. ಮಿಕ್ಕಂತೆ ಇನ್ನೊಂದಿಷ್ಟು ಚಿತ್ರಗಳು ಸೇರಿ ಅಲ್ಲೂ 1000 ಕೋಟಿ ಗಳಿಕೆಯಾಗಿದೆ. ತೆಲುಗಿನಲ್ಲಿ ‘ಕಲ್ಕಿ 2898 ಎಡಿ’ ಚಿತ್ರವೊಂದೇ ಸಾವಿರ ಕೋಟಿ ಕ್ಲಬ್ ಸೇರಿದೆ. ‘ದೇವರ’, ‘ಹನುಮ್ಯಾನ್’ನಂತಹ ಹೊಸಬರ ಚಿತ್ರ ಸಹ 300 ಕೋಟಿ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತದೆ. ತಮಿಳಿನಲ್ಲಿ ‘ವೆಟ್ಟಾಯನ್’, ‘GOAT’, ‘ಕಂಗುವ’, ‘ಇಂಡಿಯನ್ 2’, ‘ರಾಯನ್’ ಸೇರಿದಂತೆ ಕೆಲವು ಚಿತ್ರಗಳು ನೂರಿನ್ನೂರು ಕೋಟಿ ಗಳಿಕೆ ಮಾಡಿದ್ದರೂ, ಆ ಚಿತ್ರಗಳು ಜನರಿಗೆ ಪೂರ್ಣಪ್ರಮಾಣವಾಗಿ ಮೆಚ್ಚುಗೆಯಾಗಿಲ್ಲ. ಹಿಂದಿಯಲ್ಲಂತೂ 50 ಕೋಟಿ ರೂ.ಗಳಲ್ಲಿ ನಿರ್ಮಾಣವಾದ ‘ಸ್ತ್ರೀ 2’ 500 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಮಿಕ್ಕಂತೆ ‘ಭೂಲ್ ಭುಲಯ್ಯ 3’, ‘ಸಿಂಗಂ ಅಗೇನ್’, ‘ಫೈಟರ್’ ಮುಂತಾದ ಚಿತ್ರಗಳು 300 ಕೋಟಿ ರೂ.ಗಳಿಗೂ ಹೆಚ್ಚಿನ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.
ನಾಲ್ಕು ಚಿತ್ರಗಳಿಂದ ತಲಾ 20 ಕೋಟಿ ಗಳಿಕೆ
ಈ ಎಲ್ಲಾ ಚಿತ್ರರಂಗಗಳಿಗೆ ಹೋಲಿಸಿದರೆ, ಕನ್ನಡ ಚಿತ್ರರಂಗದ ಪಾಡು ಅಷ್ಟೇನೂ ಚೆನ್ನಾಗಿಲ್ಲ. ಈ ವರ್ಷ ಇದುವರೆಗೂ ಬಿಡುಗಡೆಯಾಗಿರುವ 200 ಚಿತ್ರಗಳ ಪೈಕಿ ಒಳ್ಳೆಯ ಗಳಿಕೆ ಮಾಡಿದ ಚಿತ್ರಗಳೆಂದರೆ, ಅದು ‘ಭೀಮ’, ‘ಕೃಷ್ಣಂ ಪ್ರಣಯ ಸಖಿ’, ‘ಬಘೀರ’ ಮತ್ತು ‘ಭೈರತಿ ರಣಗಲ್’ ಚಿತ್ರಗಳು ಮಾತ್ರ. ಈ ನಾಲ್ಕೂ ಚಿತ್ರಗಳು ತಲಾ 20 ಕೋಟಿ ರೂ. ಗಳಿಕೆ ಮಾಡಿರುವ ಸುದ್ದಿ ಇದೆ. ಈ ನಾಲ್ಕು ಚಿತ್ರಗಳ ಬಜೆಟ್ 15ರಿಂದ 20 ಕೋಟಿಯಷ್ಟಾಗಿದೆ. ಗಳಿಕೆಯಲ್ಲಿ ಚಿತ್ರಮಂದಿರ ಬಾಡಿಗೆ ಮತ್ತು ಶೇರ್ ಕಳೆದು ನಿರ್ಮಾಪಕರಿಗೆ ಹೆಚ್ಚು ಬೆರಳಣಿಕೆಯಷ್ಟು ಕೋಟಿ ಸಿಗುತ್ತದೆ. ಇನ್ನು, ಬೇರೆ ಹಕ್ಕುಗಳ ಮಾರಾಟದಿಂದ ಬರುವ ದುಡ್ಡೇ ಒಂದಿಷ್ಟು ಲಾಭ ಎನ್ನಬಹುದು. ಅದೆಲ್ಲವನ್ನೂ ಲೆಕ್ಕ ಹಾಕಿದರೆ, ನಾಲ್ಕೂ ನಿರ್ಮಾಪಕರಿಂದ 50-60 ಕೋಟಿ ರೂ. ಲಾಭ ಬಂದರೆ ಅದೇ ಹೆಚ್ಚು ಎಂದು ಹೇಳಲಾಗುತ್ತಿದೆ.
ಇದು ಲಾಭದ ಕಥೆಯಾದರೆ, ನಷ್ಟದ ಕಥೆ ದೊಡ್ಡದಿದೆ. ಈ ವರ್ಷ ‘ಮಾರ್ಟಿನ್’ ಚಿತ್ರವೊಂದರಿಂದಲೇ ನಿರ್ಮಾಪಕರಿಗೆ 50 ಕೋಟಿ ರೂ. ನಷ್ಟವಾಗಿರುವ ಸುದ್ದಿ ಇದೆ. ‘ಮಾರ್ಟಿನ್’ ಚಿತ್ರತಂಡದವರೇ ಹೇಳಿಕೊಂಡಂತೆ, ಅದು ಕನ್ನಡ ಚಿತ್ರರಂಗದ ಅತ್ಯಂತ ದುಬಾರಿ ಬಜೆಟ್‍ನ ಚಿತ್ರ. ಬಜೆಟ್ 80ರಿಂದ 100 ಕೋಟಿಯಷ್ಟಾಗಿತ್ತು. ಈ ಪೈಕಿ, ಚಿತ್ರಮಂದಿರದ ಗಳಿಕೆ ಮತ್ತು ರೈಟ್ಸ್ಗಳ ಮಾರಾಟದಿಂದ 50 ಕೋಟಿ ರೂ.ಗಳವರೆಗೂ ವಾಪಸ್ಸಾದರೂ, ನಿರ್ಮಾಪಕರಿಗೆ 50 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಈ ವರ್ಷ 500 ಕೋಟಿ ರೂ. ನಷ್ಟ …
ಮಿಕ್ಕಂತೆ 190ಕ್ಕೂ ಹೆಚ್ಚು ಚಿತ್ರಗಳಿಂದ 450 ಕೋಟಿ ರೂ.ವರೆಗೂ ನಷ್ಟವಾಗಿದೆ. ಈ ಪೈಕಿ ಒಂದೊಂದು ಚಿತ್ರದ್ದು ಒಂದೊಂದು ಬಜೆಟ್ ಇರುತ್ತದೆ. ಕೆಲವು ಚಿತ್ರಗಳು 50 ಲಕ್ಷದಲ್ಲಿ ನಿರ್ಮಾಣವಾದರೆ, ಇನ್ನೂ ಕೆಲವು ಚಿತ್ರಗಳ ಬಜೆಟ್ 5 ಕೋಟಿಯವರೆಗೂ ಇದೆ. ಬೆರಳಣಿಕೆಯಷ್ಟು ಚಿತ್ರಗಳು ಚಿತ್ರಮಂದಿರಗಳಲ್ಲಿ ದೊಡ್ಡ ಗಳಿಕೆ ಮಾಡದಿದ್ದರೂ, ಕೆಲವು ಚಿತ್ರಗಳು ಸ್ಯಾಟಿಲೈಟ್, ಡಿಜಿಟಲ್ ಹಕ್ಕುಗಳ ಮಾರಾಟದಿಂದ ಹಾಕಿದ ಹಣ ಮರಳಿ ಪಡೆದಿವೆ. ಮಿಕ್ಕಂತೆ, ಬಹಳಷ್ಟು ಚಿತ್ರಗಳು ಅತ್ತ ಚಿತ್ರಮಂದಿರಗಳಲ್ಲೂ ಗಳಿಕೆ ಮಾಡಲು ಸಾಧ್ಯವಾಗದೆ, ಇತ್ತ ಯಾವುದೇ ಮೂಲದಿಂದಲೂ ಹಣ ನೋಡಲಿಕ್ಕಾಗದೆ, ನಷ್ಟ ಅನುಭವಿಸಿವೆ. ಅಲ್ಲಿಗೆ ಈ ವರ್ಷ ನಿರ್ಮಾಪಕರಿಗೆ 50 ಕೋಟಿಯಷ್ಟು ಲಾಭವಾದರೆ, 500 ಕೋಟಿಯಷ್ಟು ನಷ್ಟವಾಗಿದೆ.
ಪ್ರತೀ ವರ್ಷ ಈ ತರಹದ ಲಾಭ-ನಷ್ಟಗಳು ಸಹಜವೇ. ಆದರೆ, ಇಷ್ಟು ವರ್ಷಗಳ ಇತಿಹಾಸದಲ್ಲಿ ಇಷ್ಟೊಂದು ಸೋಲು ಮತ್ತು ನಷ್ಟಗಳನ್ನು ಕಂಡಿರುವುದು ಇದೇ ಮೊದಲೆಂದು ಹೇಳಬೇಕು. ಸೋಲು, ನಷ್ಟ ಒಂದು ಕಡೆಯಾದರೆ, ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವುದು ಹೇಗೆ ಎಂಬುದು ಚಿತ್ರರಂಗಕ್ಕೆ ಯಕ್ಷಪ್ರಶ್ನೆಯಾಗಿದೆ. ಮುಂದಿನ ವರ್ಷವೂ ಪ್ರೇಕ್ಷಕರ ಕೊರತೆ ಹೆಚ್ಚಾದರೆ, ಸೋಲು ಮತ್ತು ನಷ್ಟದ ಪ್ರಮಾಣ ಇನ್ನಷ್ಟು ಹೆಚ್ಚಾದರೆ ಆಶ್ಚರ್ಯವಿಲ್ಲ.