
ನಟ ಸಮರ್ಜಿತ್ ಲಂಕೇಶ್
ಫಿಲ್ಮ್ ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡ ಸಮರ್ಜಿತ್ ಲಂಕೇಶ್
‘ಗೌರಿ’ ಚಿತ್ರದ ನಂತರ ಕಳೆದ ವರ್ಷ ಬಿಡುಗಡೆಯಾಗಿದ್ದ ‘ವೃಷಭ’ ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಿದ್ದ ಸಮರ್ಜಿತ್, ಮೋಹನ್ ಲಾಲ್‍ರಂತಹ ದಿಗ್ಗಜ ನಟರ ಎದುರು ನಟಿಸಿ, ಸೈ ಎನಿಸಿಕೊಂಡಿದ್ದಾರೆ.
ಕೇರಳದ ಕೊಚ್ಚಿಯಲ್ಲಿ ಇತ್ತೀಚೆಗೆ ನಡೆದ 2024ನೇ ಸಾಲಿನ 70ನೇ ಫಿಲ್ಮ್‌ಫೇರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ‘ಗೌರಿ’ ಚಿತ್ರದ ಅಭಿನಯಕ್ಕಾಗಿ ಸಮರ್ಜಿತ್ ಲಂಕೇಶ್ ಅವರಿಗೆ ಅತ್ಯುತ್ತಮ ನವನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದು ಲಂಕೇಶ್ ಕುಟುಂಬಕ್ಕೆ ಸಿಗುತ್ತಿರುವ ಮೂರನೆಯ ಪ್ರತಿಷ್ಠಿತ ಪ್ರಶಸ್ತಿಯಾಗಿದೆ.
ಇದಕ್ಕೂ ಮೊದಲು, ಕನ್ನಡದ ಜನಪ್ರಿಯ ಸಾಹಿತಿ ಮತ್ತು ‘ಲಂಕೇಶ್ ಪತ್ರಿಕೆ’ ಸಂಪಾದಕರಾಗಿದ್ದ ಪಿ. ಲಂಕೇಶ್ ಅವರು 1980ರಲ್ಲಿ ‘ಎಲ್ಲಿಂದಲೋ ಬಂದವರು’ ಚಿತ್ರದ ನಿರ್ದೇಶನಕ್ಕಾಗಿ ಫಿಲ್ಮ್‌ಫೇರ್ (ದಕ್ಷಿಣ) ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ತಮ್ಮ ಬರವಣಿಗೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಪ್ರಖರವಾಗಿ ಬೆಳಗಿದ್ದ ಲಂಕೇಶ್, ಅಪಾರ ಸಂಖ್ಯೆಯ ಓದುಗರ ಪ್ರೀತಿಪಾತ್ರರಾಗಿದ್ದರು. ಚಿತ್ರರಂಗದಲ್ಲೂ ನಿರ್ದೇಶಕರಾಗಿ ದೊಡ್ಡ ಹೆಸರು ಮಾಡಿದ್ದ ಅವರು, ‘ಪಲ್ಲವಿ’, ‘ಅನುರೂಪ’, ‘ಖಂಡವಿದೆಕೋ ಮಾಂಸವಿದೆಕೋ’ ಮತ್ತು ‘ಎಲ್ಲಿಂದಲೋ ಬಂದವರು’ ಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ, ಈ ಚಿತ್ರಗಳಿಗೆ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು.
ನಟ ಸಮರ್ಜಿತ್ ಲಂಕೇಶ್
‘ತುಂಟಾಟ’ ಚಿತ್ರದ ಮೂಲಕ ನಿರ್ದೇಶಕರಾದ ಲಂಕೇಶ್ ಮಗ ಇಂದ್ರಜಿತ್ ಲಂಕೇಶ್, ಮುಂದಿನ ದಿನಗಳಲ್ಲಿ ‘ಮೋನಾಲಿಸಾ’, ‘ಐಶ್ವರ್ಯ’, ‘ಹುಡುಗ ಹುಡುಗಿ’, ‘ಲವ್ ಯೂ ಆಲಿಯಾ’, ‘ಶಕೀಲಾ’ (ಪ್ಯಾನ್ ಇಂಡಿಯಾ ಚಿತ್ರ), ‘ಗೌರಿ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದವರು. ಉಪೇಂದ್ರ ಮತ್ತು ದೀಪಿಕಾ ಪಡುಕೋಣೆ ಅಭಿನಯದ ‘ಐಶ್ವರ್ಯ’ ಚಿತ್ರದ ನಿರ್ದೇಶನಕ್ಕಾಗಿ ಅವರು ಪ್ರತಿಷ್ಠಿತ ಫಿಲ್ಮ್‌ಫೇರ್ ಸಂಸ್ಥೆಯಿಂದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿದ್ದರು.
ಈಗ ಲಂಕೇಶ್ ಕುಟುಂಬದ ಮೂರನೆ ತಲೆಮಾರಿನ ಕುಡಿಯಾದ ಸಮರ್ಜಿತ್, ತಮ್ಮ ತಾತ ಮತ್ತು ತಂದೆಯ ರೀತಿಯಲ್ಲೇ, ತಮ್ಮ ಚೊಚ್ಚಲ ಅಭಿನಯದ ಚಿತ್ರಕ್ಕೆ ಪ್ರಶಸ್ತಿ ಪಡೆದಿದ್ದಾರೆ. ‘ಗೌರಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಸಮರ್ಜಿತ್, ಮೊದಲ ಚಿತ್ರದಲ್ಲೇ ತಮ್ಮ ಪ್ರತಿಭೆಯಿಂದ ಗಮನಸೆಳೆದಿದ್ದರು. ಮೊದಲ ಪ್ರಯತ್ನದಲ್ಲೇ ಜನರ ಪ್ರೀತಿಗೆ ಪಾತ್ರರಾಗಿದ್ದರು. ಇದೀಗ ಅವರು, ‘ಗೌರಿ’ ಚಿತ್ರದ ಅಭಿನಯಕ್ಕಾಗಿ ಫಿಲ್ಮ್‌ಫೇರ್ ನಿಂದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇನ್ನಷ್ಟು ಭರವಸೆ ಮೂಡಿಸಿದ್ದಾರೆ.
‘ಗೌರಿ’ ಚಿತ್ರದ ನಂತರ ಕಳೆದ ವರ್ಷ ಬಿಡುಗಡೆಯಾಗಿದ್ದ ‘ವೃಷಭ’ ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಿದ್ದ ಸಮರ್ಜಿತ್, ಮೋಹನ್ ಲಾಲ್‍ರಂತಹ ದಿಗ್ಗಜ ನಟರ ಎದುರು ನಟಿಸಿ, ಸೈ ಎನಿಸಿಕೊಂಡಿದ್ದಾರೆ. ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಮುನ್ನಡೆಸಿದ್ದಾರೆ. ಈ ಚಿತ್ರದಲ್ಲಿನ ಅವರ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಹಲವು ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಈ ಪೈಕಿ ಒಂದು ಕನ್ನಡ ಮತ್ತು ಒಂದು ಹಿಂದಿ ಚಿತ್ರಗಳನ್ನು ಸಮರ್ಜಿತ್ ಒಪ್ಪಿಕೊಂಡಿದ್ದು, ಈ ಚಿತ್ರಗಳನ್ನು ಜನಪ್ರಿಯ ನಿರ್ದೇಶಕರು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಗಳ ಇನ್ನಷ್ಟು ವಿವರಗಳು ಸದ್ಯದಲ್ಲೇ ಹೊರಬೀಳಲಿವೆ.

