100 ಕೋಟಿ ಕ್ಲಬ್‌ಗೆ ಸೇರಿದ ಮಾ ಇಂಟಿ ಬಂಗಾರಂ ಸಿನಿಮಾ
x

ನಟಿ ಸಮಂತಾ ಅಭಿನಯದ 'ಮಾ ಇಂಟಿ ಬಂಗಾರಂ' ಸಿನಿಮಾ ವಿಶ್ವಾದ್ಯಂತ ₹100 ಕೋಟಿಗೂ ಅಧಿಕ ಗಳಿಕೆ ಮಾಡಿದೆ. 

100 ಕೋಟಿ ಕ್ಲಬ್‌ಗೆ ಸೇರಿದ ಮಾ ಇಂಟಿ ಬಂಗಾರಂ ಸಿನಿಮಾ

ನಟಿ ಸಮಂತಾ ಅಭಿನಯದ 'ಮಾ ಇಂಟಿ ಬಂಗಾರಂ' ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂ. ಅಧಿಕ ಗಳಿಕೆ ಮಾಡಿದ್ದು, ನಾಯಕಿ ಪ್ರಧಾನ ಚಿತ್ರಗಳ ಇತಿಹಾಸದಲ್ಲಿ ಹೊಸ ದಾಖಲೆ ಬರೆದು ಪ್ರೇಕ್ಷಕರ ಮನ ಗೆದ್ದಿದೆ.


Click the Play button to hear this message in audio format

ನಟಿ ಸಮಂತಾ ರುತ್ ಪ್ರಭು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ 'ಮಾ ಇಂಟಿ ಬಂಗಾರಂ' ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದ್ದು, ಜಾಗತಿಕವಾಗಿ 100 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.

ಬಿ. ವಿ. ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರವು ಜೂನ್ 19 ರಂದು ವಿಶ್ವಾದ್ಯಂತ ತೆರೆಕಂಡಿತ್ತು. ನಟಿ ಸಮಂತಾ ಅವರೊಂದಿಗೆ ಅವರ ಪತಿ ರಾಜ್ ನಿಡಿಮೋರು ಮತ್ತು ಹಿಮಾಂಕ್ ರೆಡ್ಡಿ ದುವ್ವುರು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಸಾಧಿಸಿರುವ ಈ ಅಭೂತಪೂರ್ವ ಯಶಸ್ಸಿಗೆ ನಟಿ ಸಮಂತಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದು, ಪ್ರೇಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಈ ಚಿತ್ರದಲ್ಲಿ ಸಮಂತಾ ಅವರು 'ಸ್ವರ್ಣ' ಎಂಬ ನಿಗೂಢ ಹಾಗೂ ಹಿಂಸಾತ್ಮಕ ಭೂತಕಾಲವನ್ನು ಹೊಂದಿರುವ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಹಳೆಯ ಗುರುತನ್ನು ಮರೆಮಾಚಿ ಹೊಸ ಜೀವನ ಕಟ್ಟಿಕೊಳ್ಳಲು ಬಯಸುವ ಸ್ವರ್ಣ, ಅನಿರುದ್ಧ್ (ದಿಗಂತ್ ಮಂಚಾಲೆ) ಎಂಬುವವರನ್ನು ಮದುವೆಯಾಗಿ ಅವರ ಸಾಂಪ್ರದಾಯಿಕ ಹಾಗೂ ಪುರುಷ ಪ್ರಧಾನ ಕುಟುಂಬಕ್ಕೆ ಮರಳುವ ಕಥಾಹಂದರವನ್ನು ಸಿನಿಮಾ ಹೊಂದಿದೆ. ಚಿತ್ರದಲ್ಲಿ ಗುಲ್ಶನ್ ದೇವಯ್ಯ, ಚೈತನ್ಯ ಕೃಷ್ಣ ಮತ್ತು ಶ್ರೀಮುಖಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರದ ಶತಕೋಟಿ ಕ್ಲಬ್ ಸಾಧನೆಯ ಪೋಸ್ಟರ್ ಹಂಚಿಕೊಂಡಿರುವ ಸಮಂತಾ, ಸಿನಿಮಾ ಬಿಡುಗಡೆಗೂ ಮುನ್ನ ಎದುರಿಸಿದ್ದ ಆತಂಕಗಳನ್ನು ಬಿಚ್ಚಿಟ್ಟಿದ್ದಾರೆ. ಕೇವಲ ಮಹಿಳಾ ಪ್ರಧಾನ ಚಿತ್ರ ಎಂಬ ಕಾರಣಕ್ಕೆ ವಿತರಕರು ಮತ್ತು ಪ್ರದರ್ಶಕರು ಚಿತ್ರದ ಭವಿಷ್ಯದ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ.

ಬಿ ಮತ್ತು ಸಿ ಸೆಂಟರ್‌ಗಳ ವಿತರಕರೊಬ್ಬರು 'ಸ್ಟಾರ್ ನಟರಿಲ್ಲದ ಕೇವಲ ನಾಯಕಿ ಪ್ರಧಾನ ಚಿತ್ರವನ್ನು ಥಿಯೇಟರ್‌ಗೆ ಬಂದು ಯಾರು ನೋಡುತ್ತಾರೆ?' ಎಂದು ಪ್ರಶ್ನಿಸಿದ್ದರು. ಆದರೆ ಪ್ರೇಕ್ಷಕರು ಈ ಎಲ್ಲಾ ಹಳೆಯ ಸಾಂಪ್ರದಾಯಿಕ ಆಲೋಚನೆಗಳನ್ನು ಸುಳ್ಳು ಮಾಡಿದ್ದಾರೆ. ಚಿತ್ರರಂಗದಲ್ಲಿ ನಿಜವಾದ ಬದಲಾವಣೆ ಬರಬೇಕಾದರೆ ಯಾರಾದರೂ ಒಬ್ಬರು ರಿಸ್ಕ್ ತೆಗೆದುಕೊಳ್ಳಲೇಬೇಕು, ಆ ರಿಸ್ಕ್ ಈ ಬಾರಿ ನಮ್ಮ ಪಾಲಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ ಎಂದು ಸಮಂತಾ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಈ ಯಶಸ್ಸು ಮುಂಬರುವ ದಿನಗಳಲ್ಲಿ ನಾಯಕಿ ಪ್ರಧಾನ ಚಿತ್ರಗಳ ಮೇಲಿನ ನಂಬಿಕೆಯನ್ನು ಹೆಚ್ಚಿಸಲಿದೆ ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಒಟಿಟಿ ಬಿಡುಗಡೆ ದಿನಾಂಕ ಪ್ರಕಟ

ಮಾ ಇಂಟಿ ಬಂಗಾರಂ' ಈಗ ಡಿಜಿಟಲ್ ಪರದೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದ ಈ ಸೂಪರ್ ಹಿಟ್ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಅಧಿಕೃತವಾಗಿ ಹೊರಬಿದ್ದಿದೆ. ಈ ಚಿತ್ರವು ಜಿಯೋಹಾಟ್‌ಸ್ಟಾರ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಇದೇ ಜುಲೈ 17 ರಿಂದ ಸ್ಟ್ರೀಮಿಂಗ್ ಆರಂಭಿಸಲಿದೆ ಎಂದು ಜಿಯೋಹಾಟ್‌ಸ್ಟಾರ್ ಸಂಸ್ಥೆ ಹಾಗೂ ಸಮಂತಾ ಅವರ ಪ್ರೊಡಕ್ಷನ್ ಬ್ಯಾನರ್ ಜಂಟಿಯಾಗಿ ಪ್ರಕಟಿಸಿವೆ. ಸದ್ಯಕ್ಕೆ ಚಿತ್ರದ ತೆಲುಗು ಅವತರಣಿಕೆ ಮಾತ್ರ ಜುಲೈ 17 ರಂದು ಬಿಡುಗಡೆಯಾಗುತ್ತಿದ್ದು, ಕನ್ನಡ ಸೇರಿದಂತೆ ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳ ಡಬ್ಬಿಂಗ್ ಆವೃತ್ತಿಗಳ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಶೀಘ್ರದಲ್ಲೇ ಪ್ರಕಟಿಸಲಿದೆ.

Read More
Next Story