
ಸಮಂತಾ ಜೊತೆ ಸ್ಯಾಂಡಲ್‌ವುಡ್ 'ದೂದ್‌ಪೇಡ' ದಿಗಂತ್ ನಟಿಸಿದ್ದಾರೆ.
ಸಮಂತಾ ಕಮ್‌ಬ್ಯಾಕ್| ಸಮಂತಾಗೆ ಜೋಡಿಯಾದ ದಿಗಂತ್
ಬಹಳ ದಿನಗಳ ಬಿರಾಮದ ನಂತರ ನಟಿ ಸಮಂತಾ 'ಮಾ ಇಂಟಿ ಬಂಗಾರಂ' ಚಿತ್ರದ ಮೂಲಕ ಬೆಳ್ಳಿಪರದೆಗೆ ಮರಳುತ್ತಿದ್ದಾರೆ. ಇದೊಂದು ಫ್ಯಾಮಿಲಿ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ.
ಬಹಳ ದಿನಗಳ ನಂತರ ತೆರೆಗೆ ಮರಳುತ್ತಿರುವ ಸಮಂತಾ ಅಭಿನಯದ 'ಮಾ ಇಂಟಿ ಬಂಗಾರಂ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದ ಮತ್ತೊಂದು ವಿಶೇಷತೆ ಎಂದರೆ ಸಮಂತಾ ಅವರಿಗೆ ಜೋಡಿಯಾಗಿ ಕನ್ನಡದ ನಟ ದೂದ್‌ಪೇಡ ದಿಗಂತ್ ಮಂಚಾಲೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು.
ಟೀಸರ್‌ನಲ್ಲಿ ದಿಗಂತ್ ಅವರ ಪಾತ್ರವು ಮೌನವಾಗಿದ್ದರೂ, ಕಥೆಯ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ ಎಂದು ತೋರುತ್ತಿದೆ. ಸಮಂತಾ ಅವರ ಪತಿಯ ಪಾತ್ರದಲ್ಲಿ ದಿಗಂತ್ ಮಿಂಚಿದ್ದು, ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಜೋಡಿಯಾಗಿ ಇವರು ಕಾಣಿಸಿಕೊಂಡಿದ್ದಾರೆ. ತನ್ನ ಪತ್ನಿಯನ್ನು ಅತ್ತೆ ಮನೆಗೆ ಕರೆತರುವ ದಿಗಂತ್, ಅಲ್ಲಿನ ನಿಗೂಢ ವಾತಾವರಣದ ನಡುವೆ ಹಸನ್ಮುಖಿಯಾಗಿಯೇ ಕಾಣಿಸಿಕೊಂಡರೂ ಅವರ ಪಾತ್ರದಲ್ಲಿ ಒಂದಷ್ಟು ಸಸ್ಪೆನ್ಸ್ ಅಡಗಿದೆ ಎಂಬ ಕುತೂಹಲ ಟೀಸರ್‌ನಲ್ಲಿ ಮೂಡಿದೆ.
ತೆಲುಗು ಚಿತ್ರರಂಗಕ್ಕೆ ದಿಗಂತ್
ದಿಗಂತ್ ಈ ಹಿಂದೆ ವಾನ ಎಂಬ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಈಗ ದಶಕಗಳ ನಂತರ ಸಮಂತಾ ಅವರಂತಹ ಸ್ಟಾರ್ ನಟಿಯ ಜೊತೆ ತೆಲುಗಿನ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಸಮಂತಾ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಸಮಂತಾ ಮತ್ತು ದಿಗಂತ್ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಸೊಸೆ ಈಗ ಸಾಹಸಿ
ಈ ಚಿತ್ರವು ಒಂದು ಫ್ಯಾಮಿಲಿ ಆಕ್ಷನ್ ಥ್ರಿಲ್ಲರ್ ಆಗಿದ್ದು, ಟೀಸರ್‌ನಲ್ಲಿ ಸಮಂತಾ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಸೀರೆ ಉಟ್ಟು, ಕೈಯಲ್ಲಿ ಗನ್ ಹಿಡಿದು ಎದುರಾಳಿಗಳನ್ನು ಸದೆಬಡಿಯುವ ಅವರ ರಗಡ್ ಲುಕ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಮದುವೆಯಾಗಿ ಅತ್ತೆ ಮನೆಗೆ ಬರುವ ನವವಧು ಅಲ್ಲಿನ ಸನ್ನಿವೇಶಗಳಿಗೆ ಹೇಗೆ ಸ್ಪಂದಿಸುತ್ತಾಳೆ ಮತ್ತು ಅವಳ ಹಿಂದಿರುವ ರಹಸ್ಯವೇನು ಎಂಬುದು ಕಥೆಯ ಮುಖ್ಯ ಎಳೆಯಾಗಿದೆ. ಗುಲ್ಶನ್ ದೇವಯ್ಯ, ಗೌತಮಿ ಮತ್ತು ಮಂಜುಷಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
'ಮಾ ಇಂಟಿ ಬಂಗಾರಂ' ಟೀಸರ್ ಇಲ್ಲಿದೆ..
ಈ ಸಿನಿಮಾವನ್ನು ಬಿ.ವಿ. ನಂದಿನಿ ರೆಡ್ಡಿ ನಿರ್ದೇಶನ ಮಾಡಿದ್ದು, ರಾಜ್ ನಿಡಿಮೋರು ಚಿತ್ರಕಥೆ ಬರೆದಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ನೀಡಿದ್ದಾರೆ.
ಮದುವೆಯ ನಂತರ ಸಮಂತಾ ಅಭಿನಯಿಸುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಸಣ್ಣ ಬಜೆಟ್‌ನಲ್ಲಿ ತಯಾರಾಗಿದ್ದರೂ ಪ್ರಚಾರದ ಮೂಲಕ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಸದ್ಯಕ್ಕೆ ಚಿತ್ರತಂಡವು ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ದಿನಾಂಕವನ್ನು ಘೋಷಿಸಲಿದೆ.
ಈ ಚಿತ್ರದಲ್ಲಿ ಸಮಂತಾ ಅವರ ಪತಿಯ ಪಾತ್ರದಲ್ಲಿ ಕನ್ನಡದ ನಟ ದಿಗಂತ್ ಕಾಣಿಸಿಕೊಂಡಿದ್ದಾರೆ. ದಿಗಂತ್ ತನ್ನ ಪತ್ನಿಯನ್ನು (ಸಮಂತಾ) ತನ್ನ ತಂದೆ-ತಾಯಿಯ ಮನೆಗೆ ಕರೆದುಕೊಂಡು ಹೋಗಲು ಇಷ್ಟಪಡುವುದಿಲ್ಲ. ಆದರೆ ಸಮಂತಾ ಹಠ ಹಿಡಿದು ಅಲ್ಲಿಗೆ ಹೋಗುತ್ತಾರೆ. ದಿಗಂತ್ ಅವರ ಪಾತ್ರವು ಇಲ್ಲಿ ಬಹಳ ಮೌನವಾಗಿ ಮತ್ತು ನಿಗೂಢವಾಗಿ ಕಾಣಿಸಿಕೊಳ್ಳಲಿದೆ ಎಂದು ವರದಿಯಾಗಿದೆ.

