ಸಲ್ಮಾನ್ ಖಾನ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ನಿರ್ದೇಶಕ ಅಭಿನವ್ ಕಶ್ಯಪ್‌ಗೆ ಕೋರ್ಟ್​ ಎಚ್ಚರಿಕೆ
x

ಅಭಿನವ್ ಕಶ್ಯಪ್‌ಗೆ ಮಾನಹಾನಿಕರ ಪೋಸ್ಟ್ ಮಾಡದಂತೆ ತಡೆಯಾಜ್ಞೆ

ಸಲ್ಮಾನ್ ಖಾನ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ನಿರ್ದೇಶಕ ಅಭಿನವ್ ಕಶ್ಯಪ್‌ಗೆ ಕೋರ್ಟ್​ ಎಚ್ಚರಿಕೆ

ಅಭಿನವ್ ಕಶ್ಯಪ್, ಕೋಮಲ್ ಮೆಹ್ರು, ಖುಷ್ನೂ ಹಜಾರೆ, ಅಶೋಕ್ ಕುಮಾರ್ ಮತ್ತು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ವಿರುದ್ಧ ಸಲ್ಮಾನ್ ಖಾನ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.


Click the Play button to hear this message in audio format

ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡುತ್ತಿದ್ದ ನಿರ್ದೇಶಕ ಅಭಿನವ್ ಕಶ್ಯಪ್ ಸೇರಿದಂತೆ ಇತರರು ಸಲ್ಮಾನ್ ಖಾನ್ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ಪೋಸ್ಟ್ ಅಥವಾ ಕಾಮೆಂಟ್‌ಗಳನ್ನು ಮಾಡಬಾರದೆಂದು ನ್ಯಾಯಾಲಯವು ಶುಕ್ರವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಲ್ಮಾನ್ ಖಾನ್ ಹೂಡಿದ್ದ ಮಾನನಷ್ಟ ಮೊಕದ್ದಮೆಯ ಹಿನ್ನೆಲೆಯಲ್ಲಿ ಈ ಆದೇಶ ಹೊರಬಿದ್ದಿದೆ. ಅಭಿನವ್ ಕಶ್ಯಪ್, ಕೋಮಲ್ ಮೆಹ್ರು, ಖುಷ್ನೂ ಹಜಾರೆ, ಅಶೋಕ್ ಕುಮಾರ್ ಮತ್ತು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ವಿರುದ್ಧ ಸಲ್ಮಾನ್ ಖಾನ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಇತರರ ಗೌರವಕ್ಕೆ ಧಕ್ಕೆ ತರುವುದು ಸರಿಯಲ್ಲ. ವ್ಯಕ್ತಿಯ ವಿರುದ್ಧ ಬೆದರಿಕೆ ಅಥವಾ ನಿಂದನಾತ್ಮಕ ಭಾಷೆ ಬಳಸುವುದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸಲ್ಮಾನ್ ಖಾನ್ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಉದ್ದೇಶದಿಂದ ಅಭಿನವ್ ಕಶ್ಯಪ್ ನೀಡಿದ್ದ ಹೇಳಿಕೆಗಳು ಆಧಾರರಹಿತ ಮತ್ತು ಸುಳ್ಳು ಎಂದು ಖಾನ್ ಪರ ವಕೀಲರು ವಾದಿಸಿದ್ದ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಮೊಕದ್ದಮೆಯಲ್ಲಿ ಸಲ್ಮಾನ್ ಖಾನ್ ಪರ ವಕೀಲ ಪ್ರದೀಪ್ ಗಾಂಧಿ ಅವರು, ಇಂತಹ ಸಂದರ್ಶನಗಳನ್ನು ನಿಲ್ಲಿಸಬೇಕು ಮತ್ತು ಸಲ್ಮಾನ್ ಹಾಗೂ ಅವರ ಕುಟುಂಬದ ವಿರುದ್ಧ ಮಾಡಿದ ಕಾಮೆಂಟ್‌ಗಳಿಗಾಗಿ 9 ಕೋಟಿ ರೂಪಾಯಿಗಳ ನಷ್ಟ ಪರಿಹಾರವನ್ನು ನೀಡಬೇಕು ಎಂದು ಕೋರಿದ್ದಾರೆ.

ಯಾರು ಈ ಅಭಿನವ್ ಕಶ್ಯಪ್?

ಸಲ್ಮಾನ್ ಖಾನ್ ಜೊತೆಗಿನ ವಿವಾದದ ಮೊದಲೇ ಅಭಿನವ್ ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಲೇಖಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಅವರು, 'ಜಂಗ್' ಮತ್ತು 'ಯುವಾ' ಅಂತಹ ಚಿತ್ರಗಳಿಗೆ ಕೆಲಸ ಮಾಡಿದ್ದರು. ಬಳಿಕ 'ಮನೋರಮಾ ಸಿಕ್ಸ್ ಫೀಟ್ ಅಂಡರ್' ಮತ್ತು '13B' ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು.

2010ರಲ್ಲಿ ಅಭಿನವ್ ಕಶ್ಯಪ್ ಅವರು 'ದಬಾಂಗ್' ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಈ ಸಿನಿಮಾದ ಮೂಲಕ ಸೋನಾಕ್ಷಿ ಸಿನ್ಹಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರೆ, ಸಲ್ಮಾನ್ ಖಾನ್ ಅವರನ್ನು ಚುಲ್‌ಬುಲ್ ಪಾಂಡೆ ಎಂಬ ಜನಪ್ರಿಯ ಪಾತ್ರದ ಮೂಲಕ ಮಾಸ್ ಹೀರೋ ಆಗಿ ಮಾಡಿತ್ತು. 'ದಬಾಂಗ್' ದೊಡ್ಡ ಮಟ್ಟದ ಯಶಸ್ಸನ್ನು ಕಂಡು, ಅಭಿನವ್ ಅವರಿಗೆ ಬಾಲಿವುಡ್‌ನಲ್ಲಿ ರಾತ್ರೋರಾತ್ರಿ ದೊಡ್ಡ ಹೆಸರು ತಂದುಕೊಟ್ಟಿತು. ಆದರೆ, ಇಷ್ಟೊಂದು ಯಶಸ್ಸಿನ ಹೊರತಾಗಿಯೂ ಅಭಿನವ್ 'ದಬಾಂಗ್ 2' ಚಿತ್ರವನ್ನು ನಿರ್ದೇಶಿಸದಿರಲು ನಿರ್ಧರಿಸಿದರು. ಇತ್ತೀಚೆಗೆ 'SCREEN' ಗೆ ನೀಡಿದ ಸಂದರ್ಶನವೊಂದರಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಬಿಚ್ಚಿಟ್ಟ ಅಭಿನವ್, ʻʻಸಲ್ಮಾನ್ ಖಾನ್ ಅವರಿಗೆ ನಟನೆಯಲ್ಲಿ ಆಸಕ್ತಿಯೇ ಇಲ್ಲ, ಕಳೆದ 25 ವರ್ಷಗಳಿಂದಲೂ ಅವರು ನಟನೆಯಲ್ಲಿ ಆಸಕ್ತಿ ತೋರುತ್ತಿಲ್ಲ. ಅವರಿಗೆ ಕೇವಲ 'ಸೆಲೆಬ್ರಿಟಿ' ಎಂಬ ಪವರ್ ಮೇಲೆ ಹೆಚ್ಚು ಗಮನವಿದೆಯೇ ಹೊರತು ನಟನೆಯ ಮೇಲಲ್ಲ. ಅವರು ಒಬ್ಬ ಗುಂಡಾ" ಎಂದು ಟೀಕಿಸಿದ್ದರು. ಬಾಲಿವುಡ್‌ನ ಸ್ಟಾರ್ ಸಿಸ್ಟಮ್‌ಗೆ ಸಲ್ಮಾನ್ ಖಾನ್ ಅವರೇ ಮೂಲಪುರುಷ. ಅವರು ದ್ವೇಷ ಸಾಧಿಸುವ ವ್ಯಕ್ತಿಗಳು ಮತ್ತು ಇಡೀ ಚಿತ್ರರಂಗದ ಪ್ರಕ್ರಿಯೆಯನ್ನು ನಿಯಂತ್ರಿಸುತ್ತಾರೆ. ನೀವು ಅವರ ಮಾತಿಗೆ ಒಪ್ಪದಿದ್ದರೆ, ಅವರು ನಿಮ್ಮ ಬೆನ್ನ ಹಿಂದೆ ಬೀಳುತ್ತಾರೆ ಎಂದು ಆರೋಪಿಸಿದರು.

Read More
Next Story