
ಎವರ್‌ಗ್ರೀನ್ ಬ್ಯಾಚುಲರ್ ಸಲ್ಮಾನ್ ಖಾನ್: ಬಾಲಿವುಡ್ 'ಭಾಯ್‌ಜಾನ್'ಗೆ 60ರ ಸಂಭ್ರಮ
1988ರಲ್ಲಿ ಪೋಷಕ ನಟನಾಗಿ ವೃತ್ತಿ ಆರಂಭಿಸಿದ ಸಲ್ಮಾನ್, 1989ರ 'ಮೈನೆ ಪ್ಯಾರ್ ಕಿಯಾ' ಮೂಲಕ ಸ್ಟಾರ್ ಆದರು. ಅಂದಿನ 'ಚಾಕೊಲೇಟ್ ಬಾಯ್' ಇಮೇಜ್‌ನಿಂದ ಇಂದಿನ ಪವರ್‌ಫುಲ್ 'ಟೈಗರ್' ವರೆಗಿನ ಅವರ ರೂಪಾಂತರ ಅದ್ಭುತವಾಗಿದೆ.
ಬಾಲಿವುಡ್ ಚಿತ್ರರಂಗದ ಮೋಸ್ಟ್ ಬ್ಯಾಚುಲರ್ಸ್ ಮ್ಯಾನ್, ಅನ್-ಕ್ರೌನ್ಡ್ ಕಿಂಗ್, ಕೋಟ್ಯಂತರ ಅಭಿಮಾನಿಗಳ 'ಭಾಯ್‌ಜಾನ್' ಸಲ್ಮಾನ್ ಖಾನ್ ಇಂದು ತಮ್ಮ ಜೀವನದ 60ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಬಾಲಿವುಡ್‌ನಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ತನ್ನದೇ ಆದ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿರುವ ಸಲ್ಮಾನ್ ಖಾನ್ ಎಂಬ ಹೆಸರೇ ಇವತ್ತು ಒಂದು ಬೃಹತ್ ಬ್ರ್ಯಾಂಡ್ ಆಗಿ ಮಾರ್ಪಟ್ಟಿದೆ.
1965 ಡಿಸೆಂಬರ್ 27ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದ ಸಲ್ಮಾನ್, ಖ್ಯಾತ ಬರಹಗಾರ ಸಲೀಂ ಖಾನ್ ಮತ್ತು ಸುಶೀಲ ಚರಕ್ ದಂಪತಿಯ ಪುತ್ರನಾಗಿ ಚಿತ್ರರಂಗಕ್ಕೆ ತಮ್ಮ ಪ್ರತಿಭೆಯ ಮೂಲಕವೇ ಕಾಲಿಟ್ಟವರು. ಸಣ್ಣಪುಟ್ಟ ಪಾತ್ರಗಳಿಂದ ಆರಂಭವಾದ ಇವರ ಸಿನಿಪಯಣ ಇಂದು ಸಾವಿರಾರು ಕೋಟಿ ರೂಪಾಯಿಗಳ ಬಾಕ್ಸ್ ಆಫೀಸ್ ವಹಿವಾಟಿನ ಶಿಖರದಲ್ಲಿ ಬಂದು ನಿಂತಿದೆ.
'ಕಬೂತರ್ ಜಾ ಜಾ' ಎನ್ನುತ್ತಾ ಹೃದಯ ಕದ್ದ ಸಲ್ಮಾನ್
ಬಾಲಿವುಡ್‌ನ ʻಸುಲ್ತಾನ್ʼ ಎಂದೇ ಖ್ಯಾತರಾದ ಸಲ್ಮಾನ್ ಖಾನ್ ಅವರ ಚಿತ್ರಜೀವನವು ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಪ್ರೇಕ್ಷಕರನ್ನು ರಂಜಿಸುತ್ತಿದೆ. ಅವರ ನಟನಾ ಪ್ರಯಾಣವು ಆರಂಭವಾದದ್ದು 1988ರಲ್ಲಿ ಬಿಡುಗಡೆಯಾದ ʻಬಿವಿ ಹೊ ತೊ ಐಸಿʼ ಚಿತ್ರದ ಮೂಲಕ. ಈ ಚಿತ್ರದಲ್ಲಿ ಅವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ, ನಂತರ ಬಂದ ʻಮೈನೆ ಪ್ಯಾರ್ ಕಿಯಾ ʼ(1989) ಚಿತ್ರವು ಅವರಿಗೆ ಸ್ಟಾರ್‌ಗಿರಿ ತಂದುಕೊಟ್ಟಿತು. ಅಂದಿನಿಂದ ಇಂದಿನವರೆಗೂ ಸಲ್ಮಾನ್ ಖಾನ್ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ.
ತೊಂಬತ್ತರ ದಶಕದಲ್ಲಿ ಅವರು ಸಾಜನ್, ಹಮ್ ಆಪ್ಕೆ ಹೈ ಕೌನ್, ಅಂದಾಜ್ ಅಪ್ನಾ ಅಪ್ನಾ ಮತ್ತು ಕರಣ್ ಅರ್ಜುನ್ ಅಂತಹ ಮರೆಯಲಾಗದ ಚಿತ್ರಗಳನ್ನು ನೀಡಿದರು. 1999ರಲ್ಲಿ ಬಂದ ʻಹಮ್ ದಿಲ್ ದೇ ಚುಕೇ ಸನಮ್ʼ ಮತ್ತು ʻಹಮ್ ಸಾತ್ ಸಾತ್ ಹೈʼ ಚಿತ್ರಗಳು ಅವರ ರೊಮ್ಯಾಂಟಿಕ್ ಹೀರೋ ಇಮೇಜ್ ಅನ್ನು ಇನ್ನಷ್ಟು ಗಟ್ಟಿಗೊಳಿಸಿದವು. 2000ರ ದಶಕದ ಆರಂಭದಲ್ಲಿ ತೇರೆ ನಾಮ್ ಚಿತ್ರದ ಮೂಲಕ ಅವರು ಭಾವನಾತ್ಮಕ ನಟನೆಯ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದರು.
ಸಲ್ಮಾನ್ ಖಾನ್ ಅವರ ಸಿನಿ ಬದುಕಿಗೆ ಭದ್ರ ಬುನಾದಿ ಹಾಕಿದ್ದು 1989ರ 'ಮೈನೆ ಪ್ಯಾರ್ ಕಿಯಾ' ಚಿತ್ರ. ಆ ಚಿತ್ರದ 'ಕಬೂತರ್ ಜಾ ಜಾ ಜಾ' ಹಾಡಿನಲ್ಲಿ ಕಾಣಿಸಿಕೊಂಡಿದ್ದ 20ರ ಹರೆಯದ ಆ ಮುಗ್ದ ಕಣ್ಣುಗಳ ಯುವಕನನ್ನು ಭಾರತೀಯ ಚಿತ್ರರಂಗ ಇಂದಿಗೂ ಮರೆತಿಲ್ಲ. ಸೂರಜ್ ಬರ್ಜಾತ್ಯ ಅವರ ದೃಷ್ಟಿಯಲ್ಲಿ 'ಪ್ರೇಮ್' ಆಗಿ ಮೂಡಿಬಂದ ಸಲ್ಮಾನ್, ಅಂದಿನ ಕಾಲದ ಯುವತಿಯರ ಪಾಲಿನ 'ಚಾಕೊಲೇಟ್ ಬಾಯ್' ಆಗಿ ರಾತ್ರೋರಾತ್ರಿ ಸ್ಟಾರ್ ಆದರು.
ಪ್ರೇಮ ಕಥೆಗಳಿಂದ ಮಾಸ್ ಮಸಾಲಾ ಆಕ್ಷನ್ ಹಬ್‌ವರೆಗೆ...
ಕಾಲ ಬದಲಾದಂತೆ ಸಲ್ಮಾನ್ ಖಾನ್ ತಮ್ಮ ಇಮೇಜ್ ಅನ್ನು ಬದಲಿಸಿಕೊಳ್ಳುತ್ತಾ ಸಾಗಿದರು. ಕೇವಲ ಪ್ರೇಮ ಕಥೆಗಳಿಗೆ ಸೀಮಿತವಾಗದೆ, 2009ರ 'ವಾಂಟೆಡ್' ಚಿತ್ರದ ಮೂಲಕ ಅವರು ಸಂಪೂರ್ಣ 'ಮಾಸ್' ಹೀರೊ ಆಗಿ ಹೊರಹೊಮ್ಮಿದರು. ಅಲ್ಲಿಂದ 'ದಬಾಂಗ್'ನ ಚುಲ್ಬುಲ್ ಪಾಂಡೆ ಆಗಲಿ ಅಥವಾ 'ಏಕ್ ಥಾ ಟೈಗರ್'ನ ಅವಿನಾಶ್ ಸಿಂಗ್ ಆಗಲಿ, ಸಲ್ಮಾನ್ ಮಾಡಿದ ಪ್ರತಿಯೊಂದು ಪಾತ್ರವೂ ಅಭಿಮಾನಿಗಳ ಶಿಳ್ಳೆ-ಚಪ್ಪಾಳೆಯ ಅಬ್ಬರದಲ್ಲಿ ಮಿಂದೆದ್ದವು. ವಿಮರ್ಶಕರು ಏನೇ ಹೇಳಲಿ, ಚಿತ್ರಮಂದಿರದ ಮುಂದೆ ಜಮಾಯಿಸುವ ಅಭಿಮಾನಿಗಳ ಸಾಗರವೇ ಸಲ್ಮಾನ್ ಖಾನ್ ಅವರ ಅಚಲವಾದ ಜನಪ್ರಿಯತೆಗೆ ಸಾಕ್ಷಿ. ಇತ್ತೀಚಿನ 'ಬಜರಂಗಿ ಭಾಯಿಜಾನ್' ಮತ್ತು 'ಸುಲ್ತಾನ್' ಚಿತ್ರಗಳ ಮೂಲಕ ಅವರು ನಟನಾ ಸಾಮರ್ಥ್ಯವನ್ನೂ ಸಾಬೀತುಪಡಿಸಿ ಸೈ ಎನಿಸಿಕೊಂಡಿದ್ದಾರೆ.
ವಿವಾದಗಳ ಸುಳಿಯಲ್ಲಿ ಸಲ್ಮಾನ್
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ವೃತ್ತಿಜೀವನವು ಎಷ್ಟು ಯಶಸ್ವಿಯಾಗಿದೆಯೋ, ಅಷ್ಟೇ ವಿವಾದಗಳಿಂದಲೂ ಕೂಡಿದೆ. ಸಲ್ಮಾನ್ ಖಾನ್ ಅವರ ಜೀವನದ ಅತ್ಯಂತ ದೊಡ್ಡ ವಿವಾದವೆಂದರೆ 1998ರ ಕೃಷ್ಣಮೃಗ ಬೇಟೆ ಪ್ರಕರಣ. ರಾಜಸ್ಥಾನದಲ್ಲಿ 'ಹಮ್ ಸಾತ್ ಸಾತ್ ಹೈ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಜೋಧ್‌ಪುರ ಸಮೀಪದ ಕಂಕಣಿ ಗ್ರಾಮದಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ ಆರೋಪ ಅವರ ಮೇಲಿತ್ತು. ಈ ಪ್ರಕರಣದಲ್ಲಿ ಬಿಷ್ಣೋಯ್ ಸಮುದಾಯದವರು ದೂರು ನೀಡಿದ್ದರು ಮತ್ತು ಸಲ್ಮಾನ್ ಖಾನ್ ಅವರು ಜೈಲು ಶಿಕ್ಷೆಯನ್ನು ಕೂಡ ಅನುಭವಿಸಬೇಕಾಯಿತು. ಇಂದಿಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಭೂಗತ ಲೋಕದಿಂದ ಜೀವ ಬೆದರಿಕೆಗಳು ಬರುತ್ತಲೇ ಇವೆ.
2002ರ ಹಿಟ್ ಅಂಡ್ ರನ್ ಕೇಸ್ ಅವರ ಜೀವನದ ಕರಾಳ ಅಧ್ಯಾಯಗಳಾಗಿ ಉಳಿದಿವೆ. ಮುಂಬೈನ ಬಾಂದ್ರಾದಲ್ಲಿ ಸಲ್ಮಾನ್ ಖಾನ್ ಅವರ ಕಾರು ಪಾದಚಾರಿ ರಸ್ತೆಯ ಮೇಲೆ ಮಲಗಿದ್ದವರ ಮೇಲೆ ಹರಿದು, ಒಬ್ಬ ವ್ಯಕ್ತಿ ಮೃತಪಟ್ಟು ನಾಲ್ವರು ಗಾಯಗೊಂಡಿದ್ದರು. ಸಲ್ಮಾನ್ ಖಾನ್ ಅವರು ಕುಡಿದು ಗಾಡಿ ಚಲಾಯಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಸುದೀರ್ಘ ಕಾನೂನು ಹೋರಾಟದ ನಂತರ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮುಂಬೈ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿತು.
ಬಾಲಿವುಡ್ ಬ್ಯೂಟಿಯೊಂದಿಗೆ ಪ್ರೇಮ ಕಹಾನಿ
ಬಾಲಿವುಡ್‌ನ 'ಮೋಸ್ಟ್ ಹ್ಯಾಂಡ್ಸಮ್' ನಟ ಸಲ್ಮಾನ್ ಖಾನ್ ಮತ್ತು ವಿಶ್ವಸುಂದರಿ ಐಶ್ವರ್ಯಾ ರೈ ನಡುವೆ ಪ್ರೀತಿ ಚಿಗುರಿದ್ದು 1999ರಲ್ಲಿ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಸೂಪರ್ ಹಿಟ್ ಸಿನಿಮಾ 'ಹಮ್ ದಿಲ್ ದೇ ಚುಕೆ ಸನಮ್' ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ಇವರಿಬ್ಬರ ಸ್ನೇಹ ಗಾಢವಾಯಿತು. ತೆರೆಯ ಮೇಲೆ ಅದ್ಭುತವಾಗಿ ಕಂಡಿದ್ದ ಈ ಜೋಡಿಯ ರೊಮ್ಯಾನ್ಸ್ ನಿಜ ಜೀವನದಲ್ಲೂ ಹರಡಿಕೊಂಡಿತ್ತು. ಕೇವಲ ಎರಡು-ಮೂರು ವರ್ಷಗಳ ಕಾಲ ನಡೆದ ಈ ಪ್ರೇಮ ಪ್ರಸಂಗವು ಇಡೀ ದೇಶಾದ್ಯಂತ ಸುದ್ದಿಯಾಗಿತ್ತು. ಸಲ್ಮಾನ್ ಅವರ ಅತಿರೇಕದ ಪ್ರೀತಿ ಮತ್ತು ಪೊಸೆಸ್ಸಿವ್ ಸ್ವಭಾವವೇ ಕೊನೆಗೆ ಈ ಸಂಬಂಧಕ್ಕೆ ಮುಳ್ಳಾಯಿತು ಎನ್ನಲಾಗುತ್ತದೆ.
ಸುಮಾರು 2001ರ ಅವಧಿಯಲ್ಲಿ ಈ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಲು ಆರಂಭವಾಯಿತು. ಒಂದು ರಾತ್ರಿ ಸಲ್ಮಾನ್ ಖಾನ್, ಐಶ್ವರ್ಯಾ ಅವರ ಅಪಾರ್ಟ್‌ಮೆಂಟ್ ಬಾಗಿಲನ್ನು ಸತತವಾಗಿ ಬಡಿದು ಗಲಾಟೆ ಮಾಡಿದ್ದ ಘಟನೆ ದೊಡ್ಡ ಹಂಗಾಮಾವನ್ನೇ ಸೃಷ್ಟಿಸಿತ್ತು. ನಂತರದ ದಿನಗಳಲ್ಲಿ ಐಶ್ವರ್ಯಾ ರೈ ಅವರು ಸಲ್ಮಾನ್ ವಿರುದ್ಧ ದೈಹಿಕ ಹಿಂಸೆ ಮತ್ತು ಮಾನಸಿಕ ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿದರು. ಸಲ್ಮಾನ್ ಅವರ ನಡವಳಿಕೆಯಿಂದ ಬೇಸತ್ತ ಐಶ್ವರ್ಯಾ, 2002ರಲ್ಲಿ ಅಧಿಕೃತವಾಗಿ ಈ ಸಂಬಂಧವನ್ನು ಅಂತ್ಯಗೊಳಿಸಿದರು. ಇದಾದ ಮೇಲೆ ಇವರಿಬ್ಬರೂ ಒಂದೇ ವೇದಿಕೆಯಲ್ಲಿ ಅಥವಾ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳದಿರುವುದು ಇಂದಿಗೂ ಒಂದು ಕಹಿ ನೆನಪಾಗಿ ಉಳಿದಿದೆ. ಬಳಿಕ ಐಶ್ವರ್ಯಾ ರೈ ಅವರು ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಿ ನೆಲೆಸಿದರೆ, ಸಲ್ಮಾನ್ ಖಾನ್ ಇಂದಿಗೂ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ. ಬಾಲಿವುಡ್ ಇತಿಹಾಸದಲ್ಲಿ ಒಂದು ಸುಂದರ ಕನಸಿನಂತೆ ಆರಂಭವಾದ ಈ ಪ್ರೇಮ ಕಥೆ, ನೋವಿನ ಅಂತ್ಯದೊಂದಿಗೆ ಮುಕ್ತಾಯಗೊಂಡಿತು.
ಐಶ್ವರ್ಯಾ ನಂತರ ಸಲ್ಮಾನ್ ಜೀವನಕ್ಕೆ ಕತ್ರಿನಾ ಕೈಫ್ ಪ್ರವೇಶಿಸಿದರು. ಕತ್ರಿನಾ ಅವರಿಗೆ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳಲು ಸಲ್ಮಾನ್ ಸಾಕಷ್ಟು ಸಹಾಯ ಮಾಡಿದರು. ಬಹಳ ವರ್ಷಗಳ ಕಾಲ ಇವರು ಡೇಟಿಂಗ್ ನಡೆಸಿದರೂ ಅಧಿಕೃತವಾಗಿ ಎಂದು ಒಪ್ಪಿಕೊಂಡಿರಲಿಲ್ಲ. ನಂತರ ಕತ್ರಿನಾ ಮತ್ತು ರಣಬೀರ್ ಕಪೂರ್ ನಡುವೆ ಪ್ರೀತಿ ಬೆಳೆದ ಕಾರಣ ಸಲ್ಮಾನ್ ಅವರೊಂದಿಗೆ ಬ್ರೇಕಪ್ ಆಯಿತು.
ಇತ್ತೀಚಿನ ವರ್ಷಗಳಲ್ಲಿ ರೊಮೇನಿಯನ್ ಮೂಲದ ಯೂಲಿಯಾ ವಂತೂರ್ ಅವರೊಂದಿಗೆ ಸಲ್ಮಾನ್ ಹೆಸರು ಕೇಳಿಬರುತ್ತಿದೆ. ಯೂಲಿಯಾ ಸಲ್ಮಾನ್ ಅವರ ಪ್ರತಿಯೊಂದು ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸಲ್ಮಾನ್ ಖಾನ್ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿ ತಾನು ಸುಮಾರು ಐದಾರು ಪ್ರಮುಖ ಸಂಬಂಧಗಳನ್ನು ಹೊಂದಿದ್ದರೂ ಯಾವುದೂ ಯಶಸ್ವಿಯಾಗಲಿಲ್ಲ ಮತ್ತು ಅದಕ್ಕೆ ತನ್ನಲ್ಲಿರುವ ತಪ್ಪುಗಳೇ ಕಾರಣ ಇರಬಹುದು ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯ ಸುಲ್ತಾನ್
ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲೂ ಸಲ್ಮಾನ್ ಅಧಿಪತ್ಯ ಮುಂದುವರೆದಿದೆ. ಕಳೆದ 15 ವರ್ಷಗಳಿಂದ 'ಬಿಗ್ ಬಾಸ್' ಶೋ ಅನ್ನು ಅವರು ನಡೆಸಿಕೊಡುತ್ತಿರುವ ರೀತಿ ಅನನ್ಯ. ಸದ್ಯ 2025ರಲ್ಲಿ 'ಬಿಗ್ ಬಾಸ್ ಸೀಸನ್ 19'ರ ನಿರೂಪಣೆಯಲ್ಲಿ ಬ್ಯುಸಿಯಾಗಿರುವ ಅವರು, ಪ್ರತಿ ವಾರಕ್ಕೆ 10 ಕೋಟಿ ರೂಪಾಯಿಗಳಿಗೂ ಅಧಿಕ ಸಂಭಾವನೆ ಪಡೆಯುವ ಮೂಲಕ ಭಾರತದ ಅತ್ಯಂತ ದುಬಾರಿ ನಿರೂಪಕ ಎನಿಸಿಕೊಂಡಿದ್ದಾರೆ.
60ರ ಸಂಭ್ರಮಕ್ಕೆ 'ಬ್ಯಾಟಲ್ ಆಫ್ ಗಾಲ್ವಾನ್' ಉಡುಗೊರೆ
ತಮ್ಮ 60ನೇ ವರ್ಷದ ಈ ವಿಶೇಷ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅಭಿಮಾನಿಗಳಿಗೆ 'ಬ್ಯಾಟಲ್ ಆಫ್ ಗಾಲ್ವಾನ್' ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ದೊಡ್ಡ ಗಿಫ್ಟ್ ನೀಡಿದ್ದಾರೆ. 'ಬೀಯಿಂಗ್ ಹ್ಯೂಮನ್' ಸಂಸ್ಥೆಯ ಮೂಲಕ ಸಾವಿರಾರು ಜನರ ಬದುಕಿಗೆ ಬೆಳಕಾಗಿರುವ ಈ 'ಮನುಷ್ಯತ್ವದ ಅಭಿಮಾನಿ'ಗೆ 60ನೇ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ಶುಭಾಶಯದ ಮಹಪೂರವನ್ನೇ ಹರಿಸುತ್ತಿದ್ದಾರೆ.

