
ಸಾಜಿದ್ ಖಾನ್
#MeToo ವಿವಾದ ಬಳಿಕ ಸಾಜಿದ್ ಖಾನ್ ಪುನರಾಗಮನ: ಗೋವಿಂದ ಪುತ್ರನ ಚಿತ್ರಕ್ಕೆ ಆಕ್ಷನ್-ಕಟ್?
ನವೀನಾ ಬೋಲೆ ಅವರು 2004 ಮತ್ತು 2006 ರ ನಡುವೆ 'ಹೇ ಬೇಬಿ' ಚಿತ್ರದ ಪಾತ್ರವರ್ಗವನ್ನು ಆಯ್ಕೆ ಮಾಡುವಾಗ ಸಾಜಿದ್ ಖಾನ್ ಅವರು ತಮ್ಮ ಮನೆಯಲ್ಲಿ ಬಟ್ಟೆ ತೆಗೆದು ಒಳ ಉಡುಪುಗಳಲ್ಲಿ ಕುಳಿತುಕೊಳ್ಳಲು ಹೇಳಿದ್ದಾಗಿ ಆರೋಪಿಸಿದ್ದಾರೆ.
ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಾಜಿದ್ ಖಾನ್ ಅವರು ಸುಮಾರು ಏಳು ವರ್ಷಗಳ ದೀರ್ಘ ವಿರಾಮದ ನಂತರ ಮತ್ತೆ ನಿರ್ದೇಶನಕ್ಕೆ ಮರಳುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಬಹು ಚರ್ಚಿತ #MeToo ಚಳುವಳಿಯ ಅಡಿಯಲ್ಲಿ ತೀವ್ರ ಆರೋಪಗಳನ್ನು ಎದುರಿಸಿದ ನಂತರ ಅವರ ವೃತ್ತಿಜೀವನವು ಸ್ಥಗಿತಗೊಂಡಿತ್ತು. ಇದೀಗ, ಅವರು ಪ್ರಣಯ ಹಾಸ್ಯ ಚಿತ್ರದೊಂದಿಗೆ ಮತ್ತೆ ನಿರ್ದೇಶನಕ್ಕೆ ಮರಳಬಹುದು ಎಂದು ಹೇಳಲಾಗಿದ್ದು, ಈ ಚಿತ್ರದಲ್ಲಿ ಗೋವಿಂದ ಅವರ ಪುತ್ರ ಯಶವರ್ಧನ್ ಅಹುಜಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಲಪತಾ ಲೇಡೀಸ್ ಖ್ಯಾತಿಯ ನಿತಾಂಶೀ ಗೋಯಲ್ ಮತ್ತು ಕೃತಿ ಶೆಟ್ಟಿ ಸಹ ನಾಯಕಿಯಾಗಲಿದ್ದಾರೆ ಎಂದು ವರದಿಯಾಗಿದೆ.
ಒಂದು ಕಾಲದಲ್ಲಿ ಯಶಸ್ವಿ ಹಾಸ್ಯ ನಿರ್ದೇಶಕ ಎಂದು ಪರಿಗಣಿಸಲ್ಪಟ್ಟಿದ್ದ ಸಾಜಿದ್ ಖಾನ್ ಅವರ ಇಡೀ ಜೀವನವು 2018ರ #MeToo ಚಳುವಳಿಯಿಂದಾಗಿ ಬದಲಾಯಿತು. ಈ ಚಳುವಳಿಯ ಸಂದರ್ಭದಲ್ಲಿ, ಹಲವಾರು ಮಹಿಳೆಯರು ಅವರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ದುಷ್ಕೃತ್ಯದ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಆರೋಪಗಳು ಅವರ ವೃತ್ತಿಜೀವನವನ್ನು ಸ್ಥಗಿತಗೊಳಿಸಿತು ಮತ್ತು ಅವರನ್ನು ಚಿತ್ರರಂಗದಿಂದ ದೂರವಿರಿಸಿತ್ತು.
ಸಾಜಿದ್ ಖಾನ್ ವಿರುದ್ಧ ಆರೋಪ ಮಾಡಿದವರು ಯಾರು
ನವೀನಾ ಬೋಲೆ ಅವರು 2004 ಮತ್ತು 2006 ರ ನಡುವೆ 'ಹೇ ಬೇಬಿ' ಚಿತ್ರದ ಪಾತ್ರವರ್ಗವನ್ನು ಆಯ್ಕೆ ಮಾಡುವಾಗ ಸಾಜಿದ್ ಖಾನ್ ಅವರು ತಮ್ಮ ಮನೆಯಲ್ಲಿ ಬಟ್ಟೆ ತೆಗೆದು ಒಳ ಉಡುಪುಗಳಲ್ಲಿ ಕುಳಿತುಕೊಳ್ಳಲು ಹೇಳಿದ್ದಾಗಿ ಆರೋಪಿಸಿದ್ದಾರೆ. ಆರಾಮದಾಯಕತೆಯನ್ನು ಪರೀಕ್ಷಿಸುವುದಾಗಿ ಅವರು ತಿಳಿಸಿದ್ದರು. ನವೀನಾ ಬೋಲೆ ಈ ಘಟನೆಯನ್ನು ಏಪ್ರಿಲ್ 2023 ರಲ್ಲಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.
ನಟಿ ಸಲೋನಿ ಚೋಪ್ರಾ ಅವರು 'ಹೌಸ್‌ಫುಲ್ 2' ಚಿತ್ರದ ಸಮಯದಲ್ಲಿ ಸಾಜಿದ್ ಖಾನ್ ಅವರ ಸಹಾಯಕಿಯಾಗಿದ್ದಾಗ ಅನುಚಿತವಾಗಿ ವರ್ತಿಸಿದ್ದು, ಆಕ್ಷೇಪಾರ್ಹ ಪ್ರಶ್ನೆಗಳನ್ನು ಕೇಳಿದ್ದು ಮತ್ತು ಸೆಟ್‌ನಲ್ಲಿ ಅಸಹನೀಯ ನಡವಳಿಕೆಯನ್ನು ಪ್ರದರ್ಶಿಸಿದ್ದಾರೆ ಎಂದು ದೂರಿದ್ದರು.
ರೇಚೆಲ್ ವೈಟ್ ಮತ್ತು ಸಿಮ್ರಾನ್ ಸೂರಿ ಅವರು ಆಡಿಷನ್ ನೀಡುವ ಸಂದರ್ಭದಲ್ಲಿ ಸಾಜಿದ್ ಖಾನ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು. ರೇಚೆಲ್ ವೈಟ್ ಅವರು ಆಡಿಷನ್‌ಗಳ ನೆಪದಲ್ಲಿ ಪದೇ ಪದೇ ಅನುಚಿತವಾಗಿ ವರ್ತಿಸಿದ್ದರು ಎಂದು ಆರೋಪಿಸಿದರೆ, ಸಿಮ್ರಾನ್ ಸೂರಿ ಅವರು ಬಟ್ಟೆಗಳನ್ನು ಬಿಚ್ಚಲು ಕೇಳಿದ್ದು, ಅವರ ನಡವಳಿಕೆ ಸಂಪೂರ್ಣವಾಗಿ ಅಶ್ಲೀಲ ಮತ್ತು ಅವಮಾನಕರವಾಗಿತ್ತು ಎಂದು ದೂರಿದ್ದರು.
ಶೆರ್ಲಿನ್ ಚೋಪ್ರಾ (ನಟಿ) ಅವರು ತಮ್ಮ ಆರಂಭಿಕ ದಿನಗಳಲ್ಲಿ ಸಾಜಿದ್ ಖಾನ್ ಅವರಿಂದ ಅನುಚಿತವಾಗಿ ವರ್ತನೆ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದು, ನಂತರ ಈ ಕುರಿತು ಪೊಲೀಸ್ ದೂರು ಸಹ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮಂದನಾ ಕರಿಮಿ , ಡಿಂಪಲ್ ಪೌಲಾ (ಮಾಡೆಲ್) ಮತ್ತು ಮರೀನಾ ಕುನ್ವರ್ (ನಟಿ/ಮಾಡೆಲ್) ಅವರು ಸಾಜಿದ್ ಖಾನ್ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಂದನಾ ಕರಿಮಿ ಅವರು ಭೇಟಿಯ ಸಮಯದಲ್ಲಿ ಅನುಚಿತವಾಗಿ ಸ್ಪರ್ಶಿಸಲು ಪ್ರಯತ್ನಿಸಿದ್ದು ಎಂದು ಹೇಳಿದರೆ, ಡಿಂಪಲ್ ಪೌಲಾ ಅವರು ಅಶ್ಲೀಲ ಹಾಸ್ಯಗಳನ್ನು ಮಾಡಿದ್ದು ಮತ್ತು ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದ್ದು ಎಂದು ದೂರಿದ್ದರು. ಮರೀನಾ ಕುನ್ವರ್ ಅವರು ತಮ್ಮ ಮನೆಗೆ ಆಹ್ವಾನಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು.
ಆಹಾನಾ ಕುಮ್ರಾ (ನಟಿ) ಮತ್ತು ಪತ್ರಕರ್ತೆ ಕರಿಷ್ಮಾ ಉಪಾಧ್ಯಾಯ ಅವರು ಸಾಜಿದ್ ಖಾನ್ ಅವರಿಂದ ಸಂದರ್ಶನ ಅಥವಾ ಭೇಟಿಯ ಸಮಯದಲ್ಲಿ ಅಸಭ್ಯ ಮತ್ತು ಅನುಚಿತ ಹೇಳಿಕೆಗಳನ್ನು ಎದುರಿಸಿರಿವುದಾಗಿ ದೂರು ನೀಡಿದ್ದರು. ಆಹಾನಾ ಕುಮ್ರಾ ಅವರಿಗೆ ಅನುಚಿತ ಪ್ರಶ್ನೆಗಳನ್ನು ಕೇಳಿದ್ದು ಮತ್ತು ಅಸಭ್ಯ ಹೇಳಿಕೆಗಳನ್ನು ನೀಡಿದ್ದು ಎಂದು ಆರೋಪಿಸಿದರೆ, ಕರಿಷ್ಮಾ ಉಪಾಧ್ಯಾಯ ಅವರು ಸಂದರ್ಶನವೊಂದರಲ್ಲಿ ಅಶ್ಲೀಲವಾಗಿ ಮಾತನಾಡಿ ಮಿತಿಗಳನ್ನು ಉಲ್ಲಂಘಿಸಿದ್ದರು ಎಂದು ಆರೋಪಿಸಿದ್ದರು.
ಈ ಆರೋಪಗಳು ಹೆಚ್ಚಾದ ನಂತರ, ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ದೇಶಕರ ಸಂಘ ಸಾಜಿದ್ ಖಾನ್ ಅವರ ಮೇಲೆ ಒಂದು ವರ್ಷದ ನಿಷೇಧ ಹೇರಿತ್ತು. ಈ ವಿವಾದವು ಕೇವಲ ಅವರನ್ನು ಚಲನಚಿತ್ರಗಳಿಂದ ಹಿಂದೆ ಸರಿಯುವಂತೆ ಮಾಡಲಿಲ್ಲ, ಅವರ ಪ್ರತಿಷ್ಠೆಗೆ ತೀವ್ರ ಹಾನಿಯನ್ನುಂಟುಮಾಡಿತು. 'ಹೌಸ್‌ಫುಲ್ 4' ನಂತಹ ದೊಡ್ಡ ಚಿತ್ರದಿಂದ ಅವರನ್ನು ತೆಗೆದುಹಾಕಲಾಯಿತು. ಈ ಬೆಳವಣಿಗೆಗಳ ನಂತರ, ಸಾಜಿದ್ ಖಾನ್ ಸುಮಾರು ಏಳು ವರ್ಷಗಳ ಕಾಲ ಸಾರ್ವಜನಿಕ ಜೀವನ ಮತ್ತು ಚಲನಚಿತ್ರಗಳಿಂದ ದೂರ ಉಳಿದಿದ್ದರು. ಈಗ, ಅವರ ಪುನರಾಗಮನದ ವರದಿಗಳು ಬಾಲಿವುಡ್‌ನಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿವೆ.