ರಿಷಬ್ ನಿರ್ಮಾಣದ ‘ಶಿವಮ್ಮ’ ಸಿನಿಮಾ ಜೂ.14ಕ್ಕೆ ತೆರೆಗೆ
ರಿಷಬ್ ಶೆಟ್ಟಿ ನಿರ್ಮಾಣದ ‘ಶಿವಮ್ಮ ಸಿನಿಮಾ ವಿಶ್ವಾದ್ಯಂತ ವಿವಿಧ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ರಿಷಬ್ ಶೆಟ್ಟಿ ನಿರ್ಮಾಣದ ಸಿನಿಮಾ ‘ಶಿವಮ್ಮʼ ವಿಶ್ವಾದ್ಯಂತ ವಿವಿಧ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ‘ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2022ರಲ್ಲಿ ನ್ಯೂ ಕರೆಂಟ್ಸ್ ಪುರಸ್ಕಾರ ಪಡೆದಿತ್ತು. ‘ಥ್ರೀ ಕಾಂಟಿನೆಂಟ್ಸ್ ಫೆಸ್ಟಿವಲ್ 2022’ದಲ್ಲಿ ಯುವ ಜ್ಯೂರಿ ಪ್ರಶಸ್ತಿ, ‘ಫಾಜರ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ’ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.
ಈ ಸಿನಿಮಾವನ್ನು ಜಯಶಂಖರ್ ಆರ್ಯರ್ ನಿರ್ದೇಶಿಸಿದ್ದರು. ಇದೀಗ ಈ ‘ಶಿವಮ್ಮ’ ಸಿನಿಮಾ ಜೂನ್ 14ಕ್ಕೆ ತೆರೆಗೆ ಬರಲಿದೆ. ಸದ್ಯ ಟ್ರೈಲರ್ ಬಿಡುಗಡೆ ಆಗಿದೆ. ಯರೆಹಂಚಿನಾಳ ಎನ್ನುವ ಊರಿನಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ.
ಯರೆಹಂಚಿನಾಳದ ಸರ್ಕಾರಿ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದ ಶಿವಮ್ಮ ಕುಟುಂಬ ಪೋಷಣೆಗಾಗಿ ಊರೆಲ್ಲಾ ಸಾಲ ಮಾಡುತ್ತಾಳೆ. ಶಿವಮ್ಮ, ಕೊನೆಗೆ ಶಾಲಾ ಶಿಕ್ಷಕರ ಬಳಿಯೂ ಸಾಲ ಮಾಡಿ ಸಮಸ್ಯೆ ಎದುರಿಸುತ್ತಾಳೆ. ಬಳಿಕ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರ ಮಾಡಲು ಹೋಗಿ ಸಮಸ್ಯೆ ಎದುರಿಸುತ್ತಾಳೆ ಎನ್ನುವ ಕಥೆ ಈ ಸಿನಿಮಾ ಹೊಂದಿದೆ.
ಚೆನ್ನಮ್ಮ ಅಬ್ಬೆಗೆರೆ, ಶಿವು ಅಬ್ಬೆಗೆರೆ, ಶ್ರುತಿ ಕೊಂಡೇನಹಳ್ಳಿ, ಚೆನ್ನಪ್ಪ ಹನ್ಸಿ, ಶಿವಾನಂದ್ ಸಾದರ್ ಚಿತ್ರದ ತಾರಾಗಣದಲ್ಲಿದ್ದಾರೆ. ವಿಕಾಸ್ ಯುಆರ್ಎಸ್ ಹಾಗೂ ಸೌಮ್ಯಾನಂದ ಸಾಹಿ ಛಾಯಾಗ್ರಹಣ ‘ಶಿವಮ್ಮ’ ಚಿತ್ರಕ್ಕಿದೆ. ಜೂನ್ 14ಕ್ಕೆ ‘ಕೋಟಿ’, ‘ಶೆಫ್ ಚಿದಂಬರ’ ಹಾಗೂ ‘ಲವ್‌ಲಿ’ ಸಿನಿಮಾಗಳ ಜೊತೆಗೆ ‘ಶಿವಮ್ಮ’ ಕಥೆ ತೆರೆಮೇಲೆ ಅನಾವರಣವಾಗಲಿದೆ.