ಪ್ರಭಾಸ್ ಚಿತ್ರಕ್ಕೆ ರಿಷಭ್ ಶೆಟ್ಟಿ ಕಥೆ-ಚಿತ್ರಕಥೆ?; ಹೊಸ ಜವಾಬ್ದಾರಿ ಹೊರಿಸಿದ ಹೊಂಬಾಳೆ ಫಿಲ್ಮ್ಸ್
ರಿಷಭ್ ಶೆಟ್ಟಿ ಬರೀ ನಟನಷ್ಟೇ ಅಲ್ಲ, ಬರಹಗಾರರಾಗಿಯೂ ಗುರುತಿಸಿಕೊಂಡವರು. ತಮ್ಮ ಚಿತ್ರಗಳಿಗೆ ತಾವೇ ಕಥೆ, ಚಿತ್ರಕಥೆಯನ್ನು ಬರೆದವರು. ರಿಷಭ್ ನಿರ್ದೇಶನದ ಮೊದಲ ಚಿತ್ರ ‘ರಿಕ್ಕಿ’ಗೆ ಅವರೇ ಕಥೆ ಬರೆದಿದ್ದರು. ಆ ನಂತರ ಬಂದ ‘ಕಿರಿಕ್ ಪಾರ್ಟಿ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಮತ್ತು ‘ಕಾಂತಾರ’ ಚಿತ್ರಗಳಿಗೆ ಅವರೇ ಕಥೆ ಬರೆದಿದ್ದರು. ಅಷ್ಟೇ ಅಲ್ಲ, ‘ಕಾಂತಾರ – ಅಧ್ಯಾಯ 1’ಕ್ಕೂ ಅವರೇ ಕಥೆ ಬರೆದಿದ್ದಾರೆ. ಈಗ ಪ್ರಭಾಸ್ ಅಭಿನಯದ ಹೊಸ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆಯುವ ಹೊಸ ಜವಾಬ್ದಾರಿಯನ್ನು ಹೊಂಬಾಳೆ ಫಿಲಂಸ್ ಹೊರಿಸಿದೆ ಎಂಬ ಸುದ್ದಿ ಕೇಳಿಬರುತ್ತಿದೆ.
ಹೊಂಬಾಳೆ ಫಿಲಂಸ್ ಸಂಸ್ಥೆಯು ಪ್ರಭಾಸ್ ಜೊತೆಗೆ ಮೂರು ಸಿನಿಮಾಗಳನ್ನು ನಿರ್ಮಿಸುತ್ತಿರುವ ಸುದ್ದಿ ಗೊತ್ತೇ ಇದೆ. ಈಗಾಗಲೇ ಮೊದಲ ಹಂತವಾಗಿ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ‘ಸಲಾರ್ 2’ ಚಿತ್ರ ತಯಾರಾಗುತ್ತಿದೆ. ಇನ್ನೆರಡು ಚಿತ್ರಗಳಿಗೆ ಸೂಕ್ತ ಕಥೆ ಮತ್ತು ನಿರ್ದೇಶಕರ ಹುಡುಕಟ ನಡೆದಿದ್ದು, ಆ ಚಿತ್ರಗಳು ಮುಂದಿನ ದಿನಗಳಲ್ಲಿ ಘೋಷಣೆಯಾಗಲಿದೆ. ಈ ಪೈಕಿ, ರಿಷಭ್ ಶೆಟ್ಟಿಗೂ ಒಂದು ಮಾಡಿಕೊಡುವುದಕ್ಕೆ ವಿಜಯ್ ಕಿರಗಂದೂರು ಹೇಳಿದ್ದಾರಂತೆ.
ರಿಷಭ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಮತ್ತು ‘ಕಾಂತಾರ – ಅಧ್ಯಾಯ 1’ ಚಿತ್ರಗಳನ್ನು ನಿರ್ಮಿಸುತ್ತಿರುವುದು ಅದೇ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು. ವಿಜಯ್ ಮತ್ತು ರಿಷಭ್ ನಡುವೆ ಒಳ್ಳೆಯ ಸ್ನೇಹವಿದ್ದು, ಅದೇ ಸ್ನೇಹದಲ್ಲಿ ಪ್ರಭಾಸ್ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದುಕೊಡುವ ಜವಾಬ್ದಾರಿಯನ್ನು ರಿಷಭ್ ಮೇಲೆ ವಿಜಯ್ ಕಿರಗಂದೂರು ಹೊರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ರಿಷಭ್ ಸಹ ಸಮ್ಮತಿ ಸೂಚಿಸಿದ್ದು, ಕಥೆ-ಚಿತ್ರಕಥೆ ಮಾಡಿಕೊಡುವುದಾಗಿ ಹೇಳಿದ್ದಾರಂತೆ. ಆದರೆ, ಸದ್ಯಕ್ಕೆ ಬೇರೆ ಚಿತ್ರಗಳಲ್ಲಿ ನಟಿಸುತ್ತಿರುವುದರಿಂದ ಆ ಚಿತ್ರವನ್ನು ನಿರ್ದೇಶಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರಂತೆ.
ರಿಷಭ್ ಸದ್ಯ ‘ಕಾಂತಾರ – ಅಧ್ಯಾಯ 1’ ನಿರ್ದೇಶಿಸುವುದರ ಜೊತೆಗೆ, ‘ಜೈ ಹನುಮಾನ್’ ಮತ್ತು ‘ದಿ ಪ್ರೈಡ್ ಆಫ್ ಭಾರತ್ - ಛತ್ರಪತಿ ಶಿವಾಜಿ ಮಹಾರಾಜ್’ ಎಂಬ ಎರಡು ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ರಿಷಭ್ ಶೆಟ್ಟಿ ನಟಿಸುತ್ತಿದ್ದಾರೆ. ಇನ್ನು, ಪ್ರಭಾಸ್ ಪ್ರಭಾಸ್ ಸದ್ಯ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟರಾಗಿದ್ದು, ‘ರಾಜಾ ಸಾಬ್’, ‘ಸ್ಪಿರಿಟ್’, ‘ಕಲ್ಕಿ 2’, ‘ಸಲಾರ್ 2’ ಮತ್ತು ‘ಫೌಜಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಈ ಚಿತ್ರಗಳು ಮುಗಿದ ನಂತರ ರಿಷಭ್ ಬರವಣಿಗೆಯ ಚಿತ್ರದಲ್ಲಿ ಅವರು ನಟಿಸುವ ಸಾಧ್ಯತೆ ಇದೆ.