ರಿಷಬ್ ಶೆಟ್ಟಿ ಹೊಸ ಅವತಾರ: 18ನೇ ಶತಮಾನದ ಐತಿಹಾಸಿಕ ಚಿತ್ರಕ್ಕೆ ನಾಯಕ
x

ಚಿತ್ರದ ಅನೌನ್ಸ್‌ಮೆಂಟ್‌ ಪೋಸ್ಟರ್‌ ರಿಲೀಸ್‌ ಆಗಿದೆ. 

ರಿಷಬ್ ಶೆಟ್ಟಿ ಹೊಸ ಅವತಾರ: 18ನೇ ಶತಮಾನದ ಐತಿಹಾಸಿಕ ಚಿತ್ರಕ್ಕೆ ನಾಯಕ

ಸಾಲು ಸಾಲು ಹಿಟ್‌ ಸಿನಿಮಾಗಳನ್ನು ನೀಡುತ್ತಿರುವ ತೆಲುಗಿನ ಖ್ಯಾತ ಚಿತ್ರನಿರ್ಮಾಣ ಸಂಸ್ಥೆ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.


'ಕಾಂತಾರ' ಚಿತ್ರದ ಮೂಲಕ ಭಾರತೀಯ ಚಿತ್ರರಂಗದಾದ್ಯಂತ ಸಂಚಲನ ಮೂಡಿಸಿದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ, ಇದೀಗ ತಮ್ಮ ಮುಂದಿನ ಮಹತ್ವಾಕಾಂಕ್ಷಿ ಯೋಜನೆಗೆ ಸಹಿ ಹಾಕಿದ್ದಾರೆ. 'ಕಾಂತಾರ 2' ಚಿತ್ರದ ತಯಾರಿಯಲ್ಲಿ ತೊಡಗಿರುವಾಗಲೇ, ಅವರು 18ನೇ ಶತಮಾನದ ಹಿನ್ನೆಲೆಯುಳ್ಳ ಐತಿಹಾಸಿಕ ಆಕ್ಷನ್-ಡ್ರಾಮಾ ಸಿನಿಮಾವೊಂದರಲ್ಲಿ ನಾಯಕನಾಗಿ ನಟಿಸಲು ಒಪ್ಪಿಕೊಂಡಿದ್ದಾರೆ.

ಈ ಬಹುನಿರೀಕ್ಷಿತ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆಯಾದ ಸಿತಾರಾ ಎಂಟರ್ಟೈನ್ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನೆಮಾಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಸೂರ್ಯದೇವರ ನಾಗವಂಶಿ ಮತ್ತು ಸಾಯಿ ಸೌಜನ್ಯಾ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ಶ್ರೀಕರ ಸ್ಟುಡಿಯೋಸ್ ಈ ಚಿತ್ರವನ್ನು ಪ್ರಸ್ತುತಪಡಿಸಲಿದೆ. ತೆಲುಗು ನಿರ್ದೇಶಕ ಅಶ್ವಿನ್ ಗಂಗರಾಜು ಈ ಐತಿಹಾಸಿಕ ಕಥಾನಕಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ.

ಚಿತ್ರವನ್ನು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಲಾಗಿದ್ದು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣ ನಡೆಯಲಿದೆ. ನಂತರ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಮಾಡಿ ದೇಶದಾದ್ಯಂತ ತೆರೆಗೆ ತರಲು ಚಿತ್ರತಂಡ ಯೋಜನೆ ರೂಪಿಸಿದೆ.

ಈ ಯೋಜನೆಯ ಮತ್ತೊಂದು ವಿಶೇಷತೆಯೆಂದರೆ, ಚಿತ್ರದ ತಾಂತ್ರಿಕ ವರ್ಗದಲ್ಲಿ ಬಹುತೇಕ ಕನ್ನಡಿಗರಿಗೆ ಅವಕಾಶ ನೀಡಲಾಗುತ್ತಿದ್ದು, ಬಹುಪಾಲು ಚಿತ್ರೀಕರಣವನ್ನು ಕರ್ನಾಟಕದಲ್ಲಿಯೇ ನಡೆಸಲು ನಿರ್ಧರಿಸಲಾಗಿದೆ. ಚಿತ್ರದ ಇತರ ಪಾತ್ರವರ್ಗ ಹಾಗೂ ತಾಂತ್ರಿಕ ತಂಡದ ಕುರಿತ ಹೆಚ್ಚಿನ ವಿವರಗಳನ್ನು ಚಿತ್ರತಂಡ ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಿದೆ.

Read More
Next Story