
ರಿಷಬ್ ಶೆಟ್ಟಿ ಹಾಲಿವುಡ್‌ನ ಜನಪ್ರಿಯ ಸೂಪರ್‌ಹೀರೋ ಸ್ಪೈಡರ್-ಮ್ಯಾನ್ ಜೊತೆ ವಿಶೇಷ ಪ್ರಚಾರ ಅಭಿಯಾನದಲ್ಲಿ ಕೈಜೋಡಿಸಿದ್ದಾರೆ
ಸ್ಪೈಡರ್-ಮ್ಯಾನ್ ಜೊತೆ ರಿಷಬ್ ಶೆಟ್ಟಿ; ವಿಶೇಷ ವಿಡಿಯೋ ವೈರಲ್
'ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಚಿತ್ರದ ವಿಶೇಷ ಪ್ರಚಾರದಲ್ಲಿ ಭಾಗಿಯಾದ ರಿಷಬ್ ಶೆಟ್ಟಿ, ಬಾಲ್ಯದ ನೆನಪುಗಳ ಜೊತೆಗೆ ತಮ್ಮ ಮಕ್ಕಳಿಗೂ ಸ್ಪೈಡರ್-ಮ್ಯಾನ್ ಮೇಲಿರುವ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಹಾಲಿವುಡ್‌ನ ಜನಪ್ರಿಯ ಸೂಪರ್‌ಹೀರೋ ಸ್ಪೈಡರ್-ಮ್ಯಾನ್ ಜೊತೆ ವಿಶೇಷ ಪ್ರಚಾರ ಅಭಿಯಾನದಲ್ಲಿ ಕೈಜೋಡಿಸಿದ್ದಾರೆ. 'ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ಈ ವಿಶೇಷ ಸಹಯೋಗ ನಡೆದಿದ್ದು, ಭಾರತೀಯ ಸಿನಿರಂಗದ ನಟನನ್ನು ವಿಶ್ವದ ಜನಪ್ರಿಯ ಸೂಪರ್‌ಹೀರೋ ಪಾತ್ರದೊಂದಿಗೆ ಒಂದೇ ವೇದಿಕೆಯಲ್ಲಿ ತಂದು ನಿಲ್ಲಿಸಿದೆ.
ವಿಶೇಷ ಪ್ರಚಾರ ವಿಡಿಯೋದಲ್ಲಿ ಸ್ಪೈಡರ್-ಮ್ಯಾನ್‌ರನ್ನು ಭೇಟಿಯಾಗುವ ರಿಷಬ್ ಶೆಟ್ಟಿ, ಬಾಲ್ಯದಲ್ಲಿ ಮೊದಲ ಬಾರಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರದಲ್ಲಿ ಸ್ಪೈಡರ್-ಮ್ಯಾನ್ ಸಿನಿಮಾ ನೋಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.
"ಬಹಳ ವರ್ಷಗಳ ಹಿಂದೆ ಮೊದಲ ಬಾರಿ ಸಿಂಗಲ್ ಸ್ಕ್ರೀನ್ ಥಿಯೇಟರ್‌ನಲ್ಲಿ ಸ್ಪೈಡರ್-ಮ್ಯಾನ್ ನೋಡಿದ್ದೆ. ಆಗಲೇ ಪೀಟರ್ ಪಾರ್ಕರ್ ಪಾತ್ರದೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡೆ. ಜೀವನದಲ್ಲಿ ಎಡವಿದರೂ, ತಪ್ಪು ಮಾಡಿದರೂ, ನೋವು ಅನುಭವಿಸಿದರೂ ನಮ್ಮೊಳಗಿನ ಒಳ್ಳೆಯತನವನ್ನು ಕಳೆದುಕೊಳ್ಳಬಾರದು ಎಂಬುದನ್ನು ಸ್ಪೈಡರ್-ಮ್ಯಾನ್ ಕಲಿಸಿದ್ದಾನೆ" ಎಂದು ರಿಷಬ್ ಹೇಳಿದ್ದಾರೆ.
'ನನ್ನ ಮಕ್ಕಳಿಗೂ ಸ್ಪೈಡರ್-ಮ್ಯಾನ್ ಅಚ್ಚುಮೆಚ್ಚು'
ಸ್ಪೈಡರ್-ಮ್ಯಾನ್ ಪಾತ್ರವು ಜವಾಬ್ದಾರಿ ಮತ್ತು ಧೈರ್ಯದ ಮಹತ್ವವನ್ನು ಎಲ್ಲರಿಗೂ ತಿಳಿಸುತ್ತದೆ ಎಂದು ರಿಷಬ್ ಅಭಿಪ್ರಾಯಪಟ್ಟಿದ್ದಾರೆ.
"‘With Great Power Comes Great Responsibility’ ಎಂಬ ಸಂದೇಶ ಯಾವತ್ತೂ ಪ್ರಸ್ತುತವಾಗಿಯೇ ಇರುತ್ತದೆ. ವರ್ಷಗಳು ಕಳೆದಂತೆ ಸ್ಪೈಡರ್-ಮ್ಯಾನ್ ಮೇಲಿನ ನನ್ನ ಪ್ರೀತಿ ಇನ್ನಷ್ಟು ಹೆಚ್ಚಾಗಿದೆ. ಈಗ ನನ್ನ ಮಕ್ಕಳಿಗೂ ಆತ ಅಚ್ಚುಮೆಚ್ಚಿನ ಸೂಪರ್‌ಹೀರೋ. ಅವರು ಈಗಾಗಲೇ 'ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಸಿನಿಮಾ ನೋಡಲು ಕುಟುಂಬದೊಂದಿಗೆ ಟಿಕೆಟ್ ಬುಕ್ ಮಾಡಿಸಿದ್ದಾರೆ" ಎಂದು ಅವರು ಹೇಳಿದರು.
ಜುಲೈ 30ರಂದು ತೆರೆಗೆ 'ಬ್ರ್ಯಾಂಡ್ ನ್ಯೂ ಡೇ'
'ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಸಿನಿಮಾ ಜುಲೈ 30ರಂದು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಭಾರತದೆಲ್ಲೆಡೆ ಬಿಡುಗಡೆಯಾಗಲಿದೆ. ಡೆಸ್ಟಿನ್ ಡ್ಯಾನಿಯಲ್ ಕ್ರೆಟ್ಟನ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಟಾಮ್ ಹಾಲೆಂಡ್ ಮತ್ತೊಮ್ಮೆ ಪೀಟರ್ ಪಾರ್ಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೆಂಡಯಾ, ಜೇಕಬ್ ಬ್ಯಾಟಲನ್, ಸ್ಯಾಡಿ ಸಿಂಕ್, ಜಾನ್ ಬರ್ನಥಲ್, ಮಾರ್ಕ್ ರಫಲೋ ಸೇರಿದಂತೆ ಹಲವು ಪ್ರಮುಖ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ರಿಷಬ್ ಮುಂದಿನ ಸಿನಿಮಾಗಳು
ಇದರ ನಡುವೆ ರಿಷಬ್ ಶೆಟ್ಟಿ ಅಭಿನಯದ 'ಜೈ ಹನುಮಾನ್', 'ಛತ್ರಪತಿ ಶಿವಾಜಿ ಮಹಾರಾಜ್' ಸೇರಿದಂತೆ ಹಲವು ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಜೊತೆಗೆ 'ಕಾಂತಾರ' ಫ್ರಾಂಚೈಸಿಯ ಮುಂದಿನ ಅಧ್ಯಾಯದ ಮೇಲೂ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

