
BBK12| ಬ್ಯೂಟಿ ಕ್ವೀನ್ ರಿಷಾ, 'ಕಾಂತಾರ' ವಿಲನ್ ರಘು, ಗ್ಲೋಬಲ್ ಟೆಕ್ಕಿ ಸೂರಜ್ ದೊಡ್ಮನೆಗೆ
ನಟಿ ಮತ್ತು ಮಾಡೆಲ್ ರಿಷಾ ಗೌಡ, ಹಾಲಿವುಡ್ ನಟ ಮತ್ತು ಅನಿಮೇಷನ್ ಕಲಾವಿದ ರಾಘವೇಂದ್ರ ಹೊನಡಕೇರಿ ಮತ್ತು ಟೆಕ್ ವೃತ್ತಿಪರ ಸೂರಜ್ ಸಿಂಗ್ ಕನ್ನಡ ರಿಯಾಲಿಟಿ ಶೋ ಬಿಗ್‌ಬಾಸ್‌ಗೆ ಪ್ರವೇಶ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12 ರ ಮನೆಗೆ ಮೂವರು ಪ್ರಬಲ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಭರ್ಜರಿ ಪ್ರವೇಶ ಮಾಡಿದ್ದಾರೆ. ನಟಿ ಮತ್ತು ಮಾಡೆಲ್ ರಿಷಾ ಗೌಡ, ಹಾಲಿವುಡ್ ನಟ ಮತ್ತು ಅನಿಮೇಷನ್ ಕಲಾವಿದ ರಾಘವೇಂದ್ರ ಹೊನಡಕೇರಿ ಮತ್ತು ಟೆಕ್ ವೃತ್ತಿಪರ ಸೂರಜ್ ಸಿಂಗ್ ಅವರ ಆಗಮನದಿಂದಾಗಿ ಪ್ರಸ್ತುತ ನಡೆಯುತ್ತಿರುವ ರಿಯಾಲಿಟಿ ಶೋಗೆ ಮತ್ತಷ್ಟು ರೋಚಕತೆ ಹೆಚ್ಚಿಸಿದೆ.
ರಿಷಾ ಗೌಡ
ಮೈಸೂರಿನ ಪ್ರತಿಭೆ, ನಟಿ ಮತ್ತು ಮಾಡೆಲ್ ರಿಷಾ ಗೌಡ ಅವರು ಬಿಗ್‌ಬಾಸ್ ಮನೆ ಪ್ರವೇಶ ಮಾಡಿದ್ದಾರೆ. 2019ರಲ್ಲಿ ಮಿಸ್ ಮೈಸೂರು ಮತ್ತು 2020ರಲ್ಲಿ ಮಿಸ್ ಕರ್ನಾಟಕ ಕಿರೀಟಗಳನ್ನು ಗೆದ್ದಿರುವ ರಿಷಾ, 'ಕ್ರೇಜಿ ಕೀರ್ತಿ' (2021) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದರು ಮತ್ತು ಸೈಮಾ ಅತ್ಯುತ್ತಮ ಚೊಚ್ಚಲ ನಟಿ ನಾಮನಿರ್ದೇಶನವನ್ನೂ ಪಡೆದಿದ್ದರು. 'ಜೂನಿಯರ್' (ತೆಲುಗು) ಸೇರಿದಂತೆ ದಕ್ಷಿಣ ಭಾರತದಾದ್ಯಂತ ತಮ್ಮ ಬಹುಮುಖತೆಯನ್ನು ಪ್ರದರ್ಶಿಸಿರುವ ರಿಷಾ ಅವರ ಆತ್ಮವಿಶ್ವಾಸ ಮತ್ತು ತಂತ್ರಗಾರಿಕೆ ಮನೆಯೊಳಗೆ ಹೊಸ ಪೈಪೋಟಿಯನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ರಾಘವೇಂದ್ರ ಹೊನಡಕೇರಿ
'ಮ್ಯುಟೆಂಟ್ ರಘು' ಎಂದೇ ಖ್ಯಾತರಾಗಿರುವ ರಾಘವೇಂದ್ರ ಹೊನಡಕೇರಿ ಅವರು ನಟ, ಬಾಡಿಬಿಲ್ಡರ್ ಮತ್ತು ನುರಿತ ಅನಿಮೇಷನ್ ಕಲಾವಿದ. 'ರಣ', 'ಕ್ರಾಂತಿ', 'ಗರುಡಿ' ಮತ್ತು 'ಕಟಾರಿ' ಚಿತ್ರಗಳಲ್ಲಿ ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ಇವರು, ಇತ್ತೀಚೆಗೆ ಬಹುನಿರೀಕ್ಷಿತ 'ಕಾಂತಾರ: ಚಾಪ್ಟರ್ 1' ಚಿತ್ರದಲ್ಲಿನ ವಿಲನ್ ಪಾತ್ರಕ್ಕಾಗಿ ಸುದ್ದಿಯಾಗಿದ್ದಾರೆ. ವಿಶೇಷವಾಗಿ, ರಾಘವೇಂದ್ರ ಅವರಿಗೆ ಅನಿಮೇಷನ್ ಉದ್ಯಮದಲ್ಲಿ 15 ವರ್ಷಗಳಿಗಿಂತ ಹೆಚ್ಚು ಅನುಭವವಿದ್ದು, 'ಪೆಂಗ್ವಿನ್ಸ್ ಆಫ್ ಮಡಗಾಸ್ಕರ್' ಮತ್ತು 'ಹೌ ಟು ಟ್ರೈನ್ ಯುವರ್ ಡ್ರಾಗನ್'ನಂತಹ ಹಾಲಿವುಡ್ ಹಿಟ್‌ಗಳಿಗೆ ಕೊಡುಗೆ ನೀಡಿದ್ದಾರೆ. ಅವರ ದೃಢವಾದ ವ್ಯಕ್ತಿತ್ವ ಮತ್ತು ಕಾರ್ಯತಂತ್ರದ ಮನಸ್ಸು ಬಿಗ್ ಬಾಸ್ ಆಟಕ್ಕೆ ಶಕ್ತಿ ಮತ್ತು ಅನಿರೀಕ್ಷಿತ ಆಳವನ್ನು ತರಲಿದೆ.
ಸೂರಜ್ ಸಿಂಗ್
ಮೂರನೇ ವೈಲ್ಡ್ ಕಾರ್ಡ್ ಸ್ಪರ್ಧಿ ಮೈಸೂರು ಮೂಲದ ಸೂರಜ್ ಸಿಂಗ್, ವೃತ್ತಿಯಲ್ಲಿ ಟೆಕ್ ವೃತ್ತಿಪರ. ಕೆನಡಾದಲ್ಲಿ ಓದುತ್ತಿದ್ದಾಗ ಸ್ವಾವಲಂಬಿಯಾಗಿ ಜೀವನ ಸಾಗಿಸಲು ಬಾಣಸಿಗರಾಗಿ ಕೆಲಸ ಮಾಡಿ, ನಂತರ ಯಶಸ್ವಿಯಾಗಿ ಐಟಿ ಉದ್ಯಮಕ್ಕೆ ಕಾಲಿಟ್ಟ ಸೂರಜ್ ಅವರ ಕಥೆ ಸ್ಥೈರ್ಯ ಮತ್ತು ಶ್ರಮದಾಯಕ ಮನೋಭಾವಕ್ಕೆ ಸಾಕ್ಷಿಯಾಗಿದೆ. ಯಾವುದೇ ಸೆಲೆಬ್ರಿಟಿ ಹಿನ್ನೆಲೆ ಇಲ್ಲದಿದ್ದರೂ, ಶಿಸ್ತುಬದ್ಧ ಮನೋಭಾವದ ಈ ಟೆಕ್ಕಿ ಬಿಗ್ ಬಾಸ್‌ನ ಅನಿರೀಕ್ಷಿತ ಜಗತ್ತಿನಲ್ಲಿ ತಮ್ಮ ಜಾಗತಿಕ ಅನುಭವದೊಂದಿಗೆ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಬಿಗ್‌ಬಾಸ್‌ನ ಮೊದಲ ಫಿನಾಲೆಯಲ್ಲಿ ಕಾಕ್ರೋಚ್ ಸುಧಿ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ. ಫೈನಲಿಸ್ಟ್‌ಗಳಾಗಿದ್ದ ನಾಲ್ವರಲ್ಲಿ, ಸುದೀಪ್ ಅವರು ಸುಧಿಯವರನ್ನು ವಿಜೇತರೆಂದು ಘೋಷಿಸಿದ್ದಾರೆ. ಈ ಗೆಲುವಿನಿಂದಾಗಿ, ಸುಧಿ ಅವರು ಮನೆಯಲ್ಲಿ ವಿಶೇಷ ಅಧಿಕಾರವನ್ನು ಪಡೆದುಕೊಂಡಿದ್ದಾರೆ.ಬಿಗ್‌ಬಾಸ್ ಆರಂಭವಾಗಿ ಕೇವಲ ಮೂರು ವಾರಗಳಲ್ಲಿ ಒಟ್ಟು ಐದು ಸ್ಪರ್ಧಿಗಳು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.