
ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಗಮನ ಸೆಳೆದ ರಿಹ್ಯಾ ಅಹಿರ್,
ನೀಟ್ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ರಿಹ್ಯಾಗೆ ಬಿಗ್‌ಬಾಸ್ ಆಫರ್
ನೀಟ್ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನವನ್ನು ತಡೆದು ಗಂಟೆಗಟಲ್ಲೇ ಅಲ್ಲೇ ನಿಂತು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ರಿಹ್ಯಾ ಬಿಗ್‌ಬಾಸ್‌ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
ನೀಟ್ ಪ್ರತಿಭಟನೆ ವೇಳೆ ಪೊಲೀಸ್ ವಾಹನದ ಮುಂದೆ ನಿಂತು ಗಮನ ಸೆಳೆದಿದ್ದ ರಿಹ್ಯಾ ಅಹಿರ್, ಇದೀಗ ಬಿಗ್‌ಬಾಸ್ 20ರ ಸ್ಪರ್ಧಿಯಾಗಿ ಕಾಣಿಸಿಕೊಳ್ಳುವ ಅವಕಾಶ ಪಡೆದಿದ್ದಾರೆ. ಆದರೆ ಈ ಆಫರ್ ಬಂದಾಗ ತಾನು ಕಾರ್ಯಕ್ರಮಕ್ಕೆ ಹೋಗಲು ಆರಂಭದಲ್ಲಿ ಹಿಂದೇಟು ಹಾಕಿದ್ದಾಗಿ ಅವರು ಹೇಳಿದ್ದಾರೆ. ಪ್ರತಿಭಟನೆಯ ಬಳಿಕ ಜನರು ತಮ್ಮನ್ನು ಒಂದು ರೀತಿಯಲ್ಲಿ ಗುರುತಿಸುತ್ತಿದ್ದು, ಆ ಇಮೇಜ್‌ನೊಂದಿಗೆ ಬರುವ ಜವಾಬ್ದಾರಿಯನ್ನು ತಾನು ಅರ್ಥಮಾಡಿಕೊಂಡಿದ್ದೇನೆ ಎಂದು ರಿಹ್ಯಾ ತಿಳಿಸಿದ್ದಾರೆ.
ಬಿಗ್‌ಬಾಸ್ ಆಫರ್ ಕುರಿತು ತಂದೆಯೊಂದಿಗೆ ಚರ್ಚಿಸಿದ್ದ ರಿಹ್ಯಾ, ಬಳಿಕ ಚಾನೆಲ್ ಹಾಗೂ ನಿರ್ಮಾಣ ತಂಡದೊಂದಿಗೆ ಮಾತುಕತೆ ನಡೆಸಿದ್ದರು. ಬಿಗ್‌ಬಾಸ್‌ನಲ್ಲಿ ತಾನು ಹೇಗೆ ವರ್ತಿಸಬೇಕು ಎಂಬುದು ತನ್ನದೇ ನಿರ್ಧಾರವಾಗಿರುತ್ತದೆ ಎಂಬ ಮಾತು ತಮ್ಮ ನಿರ್ಧಾರ ಬದಲಿಸಲು ಸಹಾಯ ಮಾಡಿತು ಎಂದು ಅವರು ಹೇಳಿದ್ದಾರೆ. ಮಕ್ಕಳು ಕೂಡ ತಮ್ಮನ್ನು ಮಾದರಿಯಾಗಿ ನೋಡುತ್ತಿರುವುದರಿಂದ, ಅವರಲ್ಲಿ ತಪ್ಪು ಸಂದೇಶ ಮೂಡಿಸಲು ತಾನು ಬಯಸುವುದಿಲ್ಲ ಎಂದಿದ್ದಾರೆ.
ಪ್ರತಿಭಟನೆಯ ಕ್ಷಣ ಇನ್ನೂ ನೆನಪಿನಲ್ಲಿದೆ
ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನದ ಮುಂದೆ ನಿಂತ ಕ್ಷಣವನ್ನು ನೆನಪಿಸಿಕೊಂಡ ರಿಹ್ಯಾ, ಆ ವೇಳೆ ತಾನು ಸಂವಿಧಾನ ತನ್ನ ಪರವಾಗಿದೆ ಎಂಬ ನಂಬಿಕೆಯಿಂದ ನಿಂತಿದ್ದೆ ಎಂದು ಹೇಳಿದ್ದಾರೆ. ಪೊಲೀಸ್ ವಾಹನ ತಮ್ಮ ಮೇಲೆ ಹರಿದುಬಿಡಬಹುದೆಂಬ ಭಯ ಕ್ಷಣಕಾಲ ಮೂಡಿದ್ದರೂ, ವಿದ್ಯಾರ್ಥಿಗಳನ್ನು ವಾಹನದಿಂದ ಬಿಡುಗಡೆ ಮಾಡಿಸುವುದೇ ತಮ್ಮ ಉದ್ದೇಶವಾಗಿತ್ತು ಎಂದು ಅವರು ವಿವರಿಸಿದ್ದಾರೆ.
‘ಆ ಫೋಟೋ ನನ್ನದಲ್ಲ, ಜನರಿಗೆ ಬೇಕಾಗಿದ್ದ ಚಿತ್ರ’
ಪ್ರತಿಭಟನೆಯ ವೇಳೆ ವೈರಲ್ ಆದ ತಮ್ಮ ಫೋಟೋ ಬಗ್ಗೆ ಮಾತನಾಡಿದ ರಿಹ್ಯಾ, ಅದಕ್ಕೆ ಸಿಕ್ಕ ಜನಪ್ರಿಯತೆ ಕುರಿತು ಸಂತೋಷವೂ ಇದೆ, ಆದರೆ ವಿದ್ಯಾರ್ಥಿಗಳ ಹೋರಾಟದ ಶ್ರೇಯಸ್ಸನ್ನು ತಾನು ಪಡೆದುಕೊಳ್ಳಲು ಬಯಸುವುದಿಲ್ಲ ಎಂದಿದ್ದಾರೆ. ಪ್ರತಿಭಟನೆಯಲ್ಲಿ ಮೃತಪಟ್ಟ ಅಥವಾ ಹೋರಾಟದಲ್ಲಿದ್ದ ವಿದ್ಯಾರ್ಥಿಗಳೇ ನಿಜವಾದ ಮುಖಗಳು ಎಂದು ಅವರು ಹೇಳಿದ್ದಾರೆ. ನಟಿ ಶಬಾನಾ ಅಜ್ಮಿ ಸೇರಿದಂತೆ ಚಿತ್ರರಂಗದ ಗಣ್ಯರು ತಮ್ಮ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಖುಷಿ ತಂದಿದೆ ಎಂದಿದ್ದಾರೆ.
ಸೆಪ್ಟೆಂಬರ್ 6ರಂದು ರಿಹ್ಯಾ ಭವಿಷ್ಯ ನಿರ್ಧಾರ
ರಿಹ್ಯಾ ಅಹಿರ್ ಮತ್ತು ಲವ್ ಗಿಲ್ ‘ಫ್ಯಾನ್ಸ್ ಕಾ ಫೈಸ್ಲಾ’ ಮೂಲಕ ಬಿಗ್‌ಬಾಸ್ 20 ಪ್ರವೇಶಕ್ಕಾಗಿ ಸ್ಪರ್ಧಿಸುತ್ತಿದ್ದಾರೆ. ಪ್ರೇಕ್ಷಕರ ಮತದಾನದ ಆಧಾರದ ಮೇಲೆ ಅವರ ಭವಿಷ್ಯ ನಿರ್ಧಾರವಾಗಲಿದೆ. ಬಿಗ್‌ಬಾಸ್ 20ರ ಗ್ರ್ಯಾಂಡ್ ಪ್ರೀಮಿಯರ್ ಸೆಪ್ಟೆಂಬರ್ 6ರಂದು ನಡೆಯಲಿದ್ದು, ಜಿಯೋಹಾಟ್‌ಸ್ಟಾರ್‌ನಲ್ಲಿ ರಾತ್ರಿ 9 ಗಂಟೆಗೆ ಹಾಗೂ ಕಲರ್ಸ್ ಟಿವಿಯಲ್ಲಿ ರಾತ್ರಿ 10.30ಕ್ಕೆ ಪ್ರಸಾರವಾಗಲಿದೆ.

