Actor Darshan Case|  ಅಂತಿಮ ತನಿಖಾ ವರದಿ ಶೀಘ್ರ ಸಲ್ಲಿಕೆ:  ಪೊಲೀಸ್ ಆಯುಕ್ತ ದಯಾನಂದ್
x
ನಗರ ಪೊಲೀಸ್ ಆಯುಕ್ತ ದಯಾನಂದ್

Actor Darshan Case| ಅಂತಿಮ ತನಿಖಾ ವರದಿ ಶೀಘ್ರ ಸಲ್ಲಿಕೆ: ಪೊಲೀಸ್ ಆಯುಕ್ತ ದಯಾನಂದ್

ಎಷ್ಟು ಸಾಕ್ಷ್ಯಗಳನ್ನು ಒಟ್ಟು ಮಾಡಿದ್ದೇವೆ ಎಂಬುದರ ಸಂಖ್ಯೆ ನಮ್ಮ ಬಳಿ ಇಲ್ಲ. ಆದರೆ ನಾವು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದ ವರದಿಗಳಲ್ಲಿ ಶೇಖಡಾ 70 ಈಗಾಗಲೇ ಬಂದಿವೆ.


ಚಿತ್ರನಟ ದರ್ಶನ್‌ ಆರೋಪಿಯಾಗಿರುವ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯು ಅಂತಿಮ ಹಂತವನ್ನು ತಲುಪಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು, ‘ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತಿಮ ಘಟ್ಟವನ್ನು ತಲುಪುತ್ತಿದೆ. ಅನೇಕ ಮೌಖಿಕ ಸಾಕ್ಷ್ಯಗಳು, ಸಾಂದರ್ಭಿಕ ಸಾಕ್ಷ್ಯಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಈಗಾಗಲೇ ತನಿಖಾ ತಂಡ ಸಂಗ್ರಹಿಸಿದೆ. ನಾವು ಸಂಗ್ರಹಿಸಿರುವ ಸಾಂದರ್ಭಿಕ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಬೆಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯದ ಜೊತೆಗೆ ಹೈದರಾಬಾದ್ನ ಪ್ರಯೋಗಾಲಯಕ್ಕೂ ಸಹ ಕೆಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳಿಸಿ ವರದಿ ಪಡೆಯಲಾಗುತ್ತಿದೆ’ ಎಂದಿದ್ದಾರೆ.

‘ಹೀಗೆ ವಿಧಿ ವಿಜ್ಞಾನ ಪ್ರಯೋಗಾಲಯಗಳಿಗೆ ಕಳಿಸಲಾಗಿದ್ದ ಕೆಲವು ವರದಿಗಳು ಈಗಾಗಲೇ ನಮ್ಮ ಕೈಸೇರಿದ್ದು, ಇನ್ನೂ ಕೆಲವು ವರದಿಗಳು ನಮ್ಮ ಕೈ ಸೇರಬೇಕಿದೆ. ಆ ವರದಿಗಳು ಕೈ ಸೇರಿದ ನಂತರ ತನಿಖೆಯ ಮುಂದಿನ ಭಾಗವಾಗಿ ಕೆಲವೊಂದು ಸ್ಪಷ್ಟೀಕರಣವನ್ನು ಕೇಳುವ ಅವಶ್ಯಕತೆ ಇದ್ದರೆ ಸ್ಪಷ್ಟೀಕರಣಗಳನ್ನು ಕೇಳಿ ಆ ನಂತರದಲ್ಲಿ ನಾವು ಆದಷ್ಟು ಬೇಗ ತನಿಖೆಯ ಅಂತಿಮ ವರದಿಯನ್ನು ಸಲ್ಲಿಕೆ ಮಾಡಲಿದ್ದೇವೆ’ ಎಂದರು.

‘ಎಷ್ಟು ಸಾಕ್ಷ್ಯಗಳನ್ನು ಒಟ್ಟು ಮಾಡಿದ್ದೇವೆ ಎಂಬುದರ ಸಂಖ್ಯೆ ನಮ್ಮ ಬಳಿ ಇಲ್ಲ. ಆದರೆ ನಾವು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದ ವರದಿಗಳಲ್ಲಿ 70% ಈಗಾಗಲೇ ಬಂದಿವೆ. ಇನ್ನು ಹೈದರಾಬಾದ್ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಎಲೆಕ್ಟ್ರಿಕ್ ಡಿವೈಸ್ (ಮೊಬೈಲ್) ಗಳ ವರದಿಗಳು ಇನ್ನೂ ಬಂದಿಲ್ಲ ನಾವು ಅದಕ್ಕಾಗಿ ಕಾಯುತ್ತಿದ್ದೇವೆ’ ಎಂದಿದ್ದಾರೆ.

ದರ್ಶನ್‌ ಆಪ್ತೆ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಎಂಬಾತ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂಬ ಕಾರಣಕ್ಕೆ ಆತನನ್ನು ಬೆಂಗಳೂರಿಗೆ ಕರೆತಂದು ದರ್ಶನ್‌ ಮತ್ತು ಗ್ಯಾಂಗ್‌ ಭೀಕರ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ರೇಣುಕಾ ಸ್ವಾಮಿಯ ಕೊಲೆ ಜೂನ್ 09 ರಂದು ನಡೆದಿತ್ತು. ಜೂನ್ 10 ರಂದು ರೇಣುಕಾ ಸ್ವಾಮಿಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 11 ರಂದು ಬೆಳಿಗ್ಗೆ ಮೈಸೂರಿನಲ್ಲಿ ನಟ ದರ್ಶನ್ ಅನ್ನು, ಬೆಂಗಳೂರಿನಲ್ಲಿ ಪವಿತ್ರಾ ಗೌಡ ಹಾಗೂ ದರ್ಶನ್​ರ ಕೆಲವು ಸಹಚರರನ್ನು ಬಂಧಿಸಲಾಗಿತ್ತು. ಇದೀಗ ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

Read More
Next Story