
ರಿಷಭ್ ಶೆಟ್ಟಿ
ಸಂಚಲನ ಮೂಡಿಸಿದ ‘ಕಾಂತಾರ: ಚಾಪ್ಟರ್-1’ ಚಿತ್ರದ ರೆಬೆಲ್ ಲಿರಿಕಲ್ ಸಾಂಗ್ ಬಿಡುಗಡೆ
ರೆಬೆಲ್ ಲಿರಿಕಲ್ ಹಾಡಿನಲ್ಲಿ ಬಂಡಾಯದ ಆತ್ಮ, ಹೋರಾಟದ ಮನೋಭಾವ ಮತ್ತು ಸ್ವಾಭಿಮಾನ ಪ್ರತಿಬಿಂಬಿಸುವ ಶಬ್ದಗಳು ಸೇರಿಕೊಂಡಿದೆ. ಸಂಗೀತ ಸಂಯೋಜಕರು ಗಾಢವಾದ ಡ್ರಮ್ ಬೀಟ್ಸ್ ಮತ್ತು ಎನರ್ಜೆಟಿಕ್ ಟ್ಯೂನ್ಸ್ ಮೂಲಕ ಹಾಡಿಗೆ ವಿಭಿನ್ನ ಶಕ್ತಿ ನೀಡಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ‘ಕಾಂತಾರ: ಚಾಪ್ಟರ್-1’ ಚಿತ್ರದ ಮೊದಲ ಲಿರಿಕಲ್ ಹಾಡು ‘ರೆಬೆಲ್’ ಬಿಡುಗಡೆಯಾದ ಕೆಲ ಗಂಟೆಗಳಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಸೃಷ್ಟಿಸಿದೆ. ರಿಷಬ್ ಶೆಟ್ಟಿ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರವು ಈಗಾಗಲೇ ಟ್ರೇಲರ್ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈಗ ಬಿಡುಗಡೆಯಾದ ಹಾಡು ಮತ್ತಷ್ಟು ಸಂಚಲನ ಸೃಷ್ಟಿಸಿದೆ.
ಈ ಹಾಡಿನ ಸಾಹಿತ್ಯದಲ್ಲಿ ಬಂಡಾಯದ ಆತ್ಮ, ಹೋರಾಟದ ಮನೋಭಾವ ಮತ್ತು ಸ್ವಾಭಿಮಾನ ಪ್ರತಿಬಿಂಬಿಸುವ ಶಬ್ದಗಳು ಸೇರಿಕೊಂಡಿದೆ. ಸಂಗೀತ ಸಂಯೋಜಕರು ಗಾಢವಾದ ಡ್ರಮ್ ಬೀಟ್ಸ್ ಮತ್ತು ಎನರ್ಜೆಟಿಕ್ ಟ್ಯೂನ್ಸ್ ಮೂಲಕ ಹಾಡಿಗೆ ವಿಭಿನ್ನ ಶಕ್ತಿ ನೀಡಿದ್ದಾರೆ.
ಚಿತ್ರದ ನಾಯಕ ನಟ-ನಿರ್ದೇಶಕ ರಿಷಭ್ ಶೆಟ್ಟಿ ತಮ್ಮ ವಿಶಿಷ್ಟ ಅಭಿನಯ ಶೈಲಿ ಮತ್ತು ಪ್ರೇಕ್ಷಕರ ಹೃದಯ ಗೆಲ್ಲುವ ಸಾಮರ್ಥ್ಯದ ಮೂಲಕ ಈಗಾಗಲೇ ಗಮನ ಸೆಳೆದಿದ್ದಾರೆ. ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದ್ದು, ಯೂಟ್ಯೂಬ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದೆ. ಈ ಹಾಡು ಕೇವಲ ಒಂದು ಲಿರಿಕಲ್ ಟ್ರ್ಯಾಕ್ ಆಗಿರದೆ, ಚಿತ್ರದ ಭಾವನೆ, ಹೋರಾಟದ ಗಾಢತೆ ಮತ್ತು ನಾಯಕನ ಬದುಕಿನ ಕಥೆಯನ್ನು ಪ್ರಸ್ತುತಿ ಪಡಿಸಿದೆ.
ಅಕ್ಟೋಬರ್ 2ರಂದು ಚಿತ್ರ ತೆರೆಗೆ
'ಕಾಂತಾರ: ಚಾಪ್ಟರ್-1' ಚಿತ್ರವು 2022ರಲ್ಲಿ ಬಿಡುಗಡೆಯಾಗಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ 'ಕಾಂತಾರ' ಸಿನಿಮಾದ ಪ್ರೀಕ್ವೆಲ್ ಆಗಿದೆ. ಈ ಚಿತ್ರ ಅ.2 ರಂದು ಗಾಂಧಿ ಜಯಂತಿ ಪ್ರಯುಕ್ತ ವಿಶ್ವದಾದ್ಯಂತ ತೆರೆಕಾಣಲಿದೆ. ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್ ಮತ್ತು ಖ್ಯಾತ ಬಾಲಿವುಡ್ ನಟ ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್, ದೃಶ್ಯ ವೈಭವ, ಅದ್ಧೂರಿತನ ಮತ್ತು ನಿಗೂಢ ಕಥಾಹಂದರದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಕಟ್ಟುನಿಟ್ಟಿನ ಆಧ್ಯಾತ್ಮಿಕ ನಿಯಮ ಪಾಲಿಸಿದ್ದ ರಿಷಬ್
ಮೂರು ವರ್ಷಗಳಿಂದ ತಯಾರಾದ ʼಕಾಂತಾರ: ಚಾಪ್ಟರ್-೧ʼ ಚಿತ್ರ ಅ.2ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಶತಮಾನಗಳ ಹಿಂದಿನ ಕಥೆಯೇ ಚಿತ್ರದ ಕಥಾವಸ್ತುವಾಗಿದೆ. ಅರಣ್ಯ ಪುರಾಣ, ಆಚರಣೆ, ನಂಬಿಕೆಗಳನ್ನು ಆಳವಾಗಿ ತೋರಿಸುವ ಈ ಚಿತ್ರ 2022ರಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಈಗ ಕಾಂತಾರ ಅಧ್ಯಾಯ-1 ಮೂಲ ಚಿತ್ರದ ಲೋಕವನ್ನು ಇನ್ನಷ್ಟು ವಿಸ್ತರಿಸಲಿದೆ.
ಮೊದಲ ಚಿತ್ರದ ವಾತಾವರಣ, ನೈಜ ಭಾವನೆಗಳನ್ನೇ ಈ ಚಿತ್ರ ಒಳಗೊಂಡಿದೆ. ಚಿತ್ರದ ಮುನ್ನೋಟವು ಭವ್ಯ ದೃಶ್ಯಾವಳಿ, ಸಾವಿರಾರು ಕಲಾವಿದರು ಭಾಗವಹಿಸಿದ ಯುದ್ಧ ದೃಶ್ಯಗಳನ್ನು ಒಳಗೊಂಡಿದೆ. ಬಲ್ಗೇರಿಯಾ, ಕನ್ನಡ ಮತ್ತು ತಮಿಳು ಸ್ಟಂಟ್ ತಜ್ಞರು ಸೇರಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ಮೊದಲ ಚಿತ್ರ ಕಾಂತಾರ ಚಿತ್ರದಲ್ಲಿ ಭೂತ ಕೋಲ ದೃಶ್ಯಗಳಲ್ಲಿ ಅವರು ವಿಶೇಷ ಕ್ರಮ ಪಾಲಿಸಿದ್ದರು. ಶೂಟಿಂಗ್ ಮುಂಚಿನ 20–30 ದಿನ ಮಾಂಸಾಹಾರ ಬಿಟ್ಟು, ವೇಷದಲ್ಲಿ ಇರುವಾಗ ತೆಂಗಿನಕಾಯಿ ನೀರು ಮಾತ್ರ ಸೇವಿಸಿ, ಚಿತ್ರೀಕರಣದ ಮೊದಲು ಮತ್ತು ನಂತರ ಪ್ರಸಾದ ಸ್ವೀಕರಿಸಿದ್ದರು. ಅಲ್ಲದೆ ಆ ದೃಶ್ಯಗಳಿಗೆ ಅತಿ ಕಡಿಮೆ ಸಿಬ್ಬಂದಿ ಮಾತ್ರ ಹಾಜರಾಗುವಂತೆ ನೋಡಿಕೊಂಡಿದ್ದರು. ಈ ಸಿನಿಮಾಕ್ಕೂ ರಿಷಬ್ ಕಟ್ಟುನಿಟ್ಟಿನ ವೃತ ಪಾಲಿಸಿದ್ದರು.