ರೇವ್ ಪಾರ್ಟಿ ಪ್ರಕರಣ| ತೆಲುಗು ನಟಿ ಹೇಮಾ ಬಂಧನ
ರೇವ್ ಪಾರ್ಟಿ ಪ್ರಕರಣದಲ್ಲಿ ಮಾದಕ ವಸ್ತು ಸೇವಿಸಿದ ಹಿನ್ನೆಲೆಯಲ್ಲಿ ತೆಲುಗು ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರೇವ್ ಪಾರ್ಟಿ ಪ್ರಕರಣದಲ್ಲಿ ಮಾದಕ ವಸ್ತು ಸೇವಿಸಿದ ಹಿನ್ನೆಲೆಯಲ್ಲಿ ತೆಲುಗು ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮೇ 19ರಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್ ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ103 ಮಂದಿ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ವೈದ್ಯಕೀಯ ತಪಾಸಣೆಯಲ್ಲಿ ನಟಿ ಹೇಮಾ ಸೇರಿ 86 ಮಂದಿ ಮಾದಕ ವಸ್ತು ಸೇವಿನೆ ಮಾಡಿರುವುದು ದೃಢಪಟ್ಟಿತ್ತು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಹೇಮಾ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಅವರು ಅನಾರೋಗ್ಯದ ನೆಪ ಹೇಳಿ ವಿಚಾರಣೆಗೆ ಹಾಜರಾಗದೇ ಸಮಯಾವಕಾಶ ಕೇಳಿದ್ದರು. ಹಾಜರಾಗದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು 2ನೇ ನೋಟಿಸ್ ಕೂಡ ನೀಡಿದ್ದರು.
ಸೋಮವಾರ (ಜೂ.3) ವಿಚಾರಣೆಗೆ ಹಾಜರಾಗಿದ್ದ ನಟಿ ಹೇಮಾ ಅವರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಸಂಜೆ 4 ಗಂಟೆಗೆ ಬೆಂಗಳೂರಿಗೆ ಆಗಮಿಸಿರುವ ಅವರು ಬುರ್ಖಾ ತೊಟ್ಟು ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಈ ವೇಳೆ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಡ್ರಗ್ಸ್ ಮತ್ತು ರೇವ್ ಪಾರ್ಟಿ ಆಯೋಜನೆಯಲ್ಲಿ ನಟಿ ಪ್ರಮುಖ ಪಾತ್ರ ವಹಿಸಿದ್ದರು. ಹಾಗೆಯೇ ತಾವು ಬೇರೆ ಕಡೆ ಇರುವುದಾಗಿ ವಿಡಿಯೊ ಮಾಡಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದರಿಂದ ನಟಿಯನ್ನು ವಶಕ್ಕೆ ಪಡೆದಿದ್ದು, ನಾಳೆ ಕೋರ್ಟ್‌ಗೆ ಹಾಜರುಪಡಿಸಲು ಸಿಸಿಬಿ ತೀರ್ಮಾನಿಸಿದೆ.
ವಿಡಿಯೋ ಮಾಡಿ ನಟಿ ಹೈಡ್ರಾಮಾ
ತಾನು ಪಾರ್ಟಿಯಲ್ಲಿ ಇರಲಿಲ್ಲ ಎಂದು ಪೊಲೀಸರನ್ನು ನಂಬಿಸಲು ನಟಿ ವಿಡಿಯೋ ಮಾಡಿ ಹೈಡ್ರಾಮಾ ಮಾಡಿದ್ದರು. ಬಂಧಿತರಾಗಿದ್ದ ವಾಸು, ಅರುಣ್, ಸಿದ್ದಿಕ್, ರಣದೀರ್ ಹಾಗೂ ರಾಜ್ ಭಾವ ಅವರ ವಿಚಾರಣೆ ವೇಳೆ ಹೇಮಾ ಸಹ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ವಿಷಯ ಬೆಳಕಿಗೆ ಬಂದಿತ್ತು.
ರೇವ್ ಪಾರ್ಟಿಗೆ ಡ್ರಗ್ಸ್ ಸರಬರಾಜು ಮಾಡಿದ್ದ ಡಿ.ಜೆ.ಹಳ್ಳಿ ನಿವಾಸಿ ಇಮಾರ್ ಶರೀಫ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಪಾರ್ಟಿಗೆ ಡ್ರಗ್ಸ್ ಸಹಿತ ಬರುವಂತೆ ಶರೀಫ್‌ಗೆ ತಿಳಿಸಲಾಗಿತ್ತು. ಅದರಂತೆ ವಿವಿಧ ಮಾದರಿಯ ಡ್ರಗ್ಸ್ ತೆಗೆದುಕೊಂಡು ಪಾರ್ಟಿಗೆ ಬಂದಿದ್ದ. ಪಾರ್ಟಿಯಲ್ಲಿ ಆಯೋಜಕರ ಮೂಲಕ ಡ್ರಗ್ಸ್ ನೀಡಲಾಗಿತ್ತು. ದಾಳಿ ವೇಳೆ ಆರೋಪಿ ಶರೀಫ್ ಬಳಿ 40 ಎಂಡಿಎಂಎ ಮಾತ್ರೆಗಳು ಪತ್ತೆಯಾಗಿದ್ದವು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.