ಕೊಡವ ಸಮಾಜದಿಂದ ನಾನೇ ಮೊದಲ ಹೀರೋಯಿನ್ ಎಂದ ರಶ್ಮಿಕಾ; ಪ್ರೇಮಾ, ಹರ್ಷಿಕಾ ಹೇಳಿದ್ದೇನು?
x

ರಶ್ಮಿಕಾ ಮಂದಣ್ಣ, ಪ್ರೇಮಾ, ಹರ್ಷಿಕಾ ಪೂಣಚ್ಚ 

ಕೊಡವ ಸಮಾಜದಿಂದ ನಾನೇ ಮೊದಲ ಹೀರೋಯಿನ್ ಎಂದ ರಶ್ಮಿಕಾ; ಪ್ರೇಮಾ, ಹರ್ಷಿಕಾ ಹೇಳಿದ್ದೇನು?

ನಮ್ಮ ಕೊಡವ ಸಮುದಾಯದಿಂದ ಯಾರೂ ಚಿತ್ರರಂಗಕ್ಕೆ ಬರಲಿಲ್ಲ. ಬಹುಶಃ ನಮ್ಮ ಸಮುದಾಯದಿಂದ ಚಿತ್ರರಂಗಕ್ಕೆ ಬಂದವಳು ನಾನೊಬ್ಬಳೇ ಎಂದು ನಟಿ ರಶ್ಮಿಕಾ ಮಂದಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ಹೊಸ ಹೇಳಿಕೆಯೊಂದರಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಳೆದ ವಾರ ಖ್ಯಾತ ಪತ್ರಕರ್ತೆ ಬರ್ಖಾ ದತ್ ಅವರ 'ಮೋಜೋ ಸ್ಟೋರಿ'ಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಆಡಿದ ಮಾತುಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ.

"ನಮ್ಮ ಕೊಡವ ಸಮುದಾಯದಿಂದ ಇದುವರೆಗೆ ಯಾರೂ ಚಿತ್ರರಂಗಕ್ಕೆ ಬರಲಿಲ್ಲ. ಬಹುಶಃ ನಮ್ಮ ಸಮುದಾಯದಿಂದ ಚಿತ್ರರಂಗಕ್ಕೆ ಬಂದವಳು ನಾನೊಬ್ಬಳೇ. ನಮ್ಮ ಸಮುದಾಯದವರು ತುಂಬಾನೇ ಜಡ್ಜ್ ಮಾಡುತ್ತಾರೆ. ನಾನು ಆಡಿಷನ್ ಕೊಡುತ್ತೇನೆ ಎಂದು ನನ್ನ ಕುಟುಂಬದವರಿಗೆ ಹೇಳಿರಲಿಲ್ಲ. ಸಿನಿಮಾ ರಂಗಕ್ಕೆ ಹೋಗುತ್ತೇನೆ ಎಂದು ಕೂಡ ಅವರಿಗೆ ತಿಳಿಸಿರಲಿಲ್ಲ" ಎಂದು ರಶ್ಮಿಕಾ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದರು.

ನೆಟ್ಟಿಗರಿಂದ ತೀವ್ರ ಟೀಕೆ: ಪ್ರೇಮಾ ಹುಟ್ಟುವಾಗ ರಶ್ಮಿಕಾ ಇರಲೇ ಇಲ್ಲ!

ರಶ್ಮಿಕಾ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಭಾರತೀಯ ಚಿತ್ರರಂಗದಲ್ಲಿ ಅಪಾರ ಖ್ಯಾತಿ ಗಳಿಸಿರುವ ನಟಿ ಪ್ರೇಮಾ ಅವರು ಕೊಡವ ಸಮುದಾಯದವರೇ ಆಗಿದ್ದಾರೆ. ರಶ್ಮಿಕಾ ಹುಟ್ಟುವ ಒಂದು ವರ್ಷಕ್ಕೂ ಮುನ್ನವೇ ಪ್ರೇಮಾ ಚಿತ್ರರಂಗಕ್ಕೆ ಕಾಲಿಟ್ಟು ದೊಡ್ಡ ಹೆಸರು ಮಾಡಿದ್ದರು. ಇಂತಹ ಖ್ಯಾತ ನಟಿಯ ಬಗ್ಗೆ ರಶ್ಮಿಕಾಗೆ ಗೊತ್ತಿಲ್ಲ ಎನ್ನುವುದು 'ಹಾಸ್ಯಾಸ್ಪದ' ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರು ಆಕ್ರೋಶ ಹೊರಹಾಕಿದ್ದು, ಕೊಡವ ಸಮುದಾಯದಿಂದ ಪ್ರೇಮಾ ಮಾತ್ರವಲ್ಲದೆ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ಶುಭ್ರ ಅಯ್ಯಪ್ಪ ಸೇರಿದಂತೆ ಹಲವು ನಾಯಕಿಯರು ಚಿತ್ರರಂಗಕ್ಕೆ ಬಂದು ಹೆಸರು ಮಾಡಿದ್ದಾರೆ ಎಂದು ಬೊಟ್ಟು ಮಾಡಿದ್ದಾರೆ.

ನಟಿ ಪ್ರೇಮಾ ಪ್ರತಿಕ್ರಿಯೆ: "ಜನರೇ ಉತ್ತರ ಹೇಳುತ್ತಾರೆ"

ಈ ಬಗ್ಗೆ ನಟಿ ಪ್ರೇಮಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. "ಈ ಬಗ್ಗೆ ನಾವೇನು ಮಾತಾಡೋದು? ಜನರೇ ಹೇಳುತ್ತಿದ್ದಾರೆ. ನಾನು ಇಂಡಸ್ಟ್ರಿಯಲ್ಲಿ ಮಾತನಾಡುವುದಕ್ಕಿಂತ ಕೆಲಸ ಮಾಡಿಕೊಂಡು ಹೋಗಿದ್ದೇನೆ. ನಾನು ವೃತ್ತಿಪರವಾಗಿರುವವಳು. ಮುಂದೆ ಏನು ಮಾಡಬೇಕು ಅದರ ಬಗ್ಗೆ ಯೋಚನೆ ಮಾಡುತ್ತೇವೆ ಅಷ್ಟೇ. ಅವರ (ರಶ್ಮಿಕಾ) ಮಾತಿಗೆಲ್ಲಾ ಕಾಮೆಂಟ್ ಮಾಡುವುದಿಲ್ಲ. ನನಗಿಂತ ಹಿಂದೆಯೂ ತುಂಬಾ ಜನ ಬಂದಿದ್ದರು. ಹಲವು ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಶಶಿಕಲಾ ಎನ್ನುವವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಹೀರೋಯಿನ್‌ ಆಗಿ ನಾನು ಬಂದಿದ್ದು ಅಷ್ಟೇ. ಅವರು ನಮ್ಮ ಬಗ್ಗೆ ತುಂಬಾ ಹೆಮ್ಮೆಪಡುತ್ತಾರೆ. ಕೊಡವ ಸಮುದಾಯ ಕೂಡ ನಮಗೆ ಪ್ರೋತ್ಸಾಹ ಕೊಟ್ಟಿದ್ದಾರೆ" ಎಂದು ರಶ್ಮಿಕಾ ಮಂದಣ್ಣಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಹರ್ಷಿಕಾ ಪೂಣಚ್ಚ ಹೇಳಿದ್ದೇನು? "ರಶ್ಮಿಕಾ ಮೇಡಂ ಮೇಲೆ ಗೌರವ ಇದೆ, ಚಿಕ್ಕ ಹುಡುಗಿ ತಪ್ಪು ಮಾಡಿದ್ದಾರೆ"

ನಟಿ ಹರ್ಷಿಕಾ ಪೂಣಚ್ಚ ಕೂಡ ಈ ಬಗ್ಗೆ ಮಾತನಾಡಿದ್ದಾರೆ. "ಇದನ್ನು ವಿವಾದ ಅಂತ ಹೇಳುವುದಿಲ್ಲ. ಯಾವುದೋ ಸಂದರ್ಶನವೊಂದರಲ್ಲಿ ಗೊತ್ತಿಲ್ಲದೇ ಮಾತಾಡಿದ್ದಾರೆ ಅನಿಸುತ್ತದೆ. ಬಹುಶಃ ತೆಲುಗು ಹಾಗೂ ಹಿಂದಿ ಇಂಡಸ್ಟ್ರಿಯಲ್ಲಿ ನಾನು ಹೆಸರು ಮಾಡಿದ್ದೇನೆ ಅನ್ನುವ ಅರ್ಥದಲ್ಲಿ ಹೀಗೆ ಹೇಳಿರಬಹುದು. ಅದೇ ಮೇಲೆ 'ನಾನೇ ಫಸ್ಟ್' ಎನ್ನುವುದು ಬಂದಿದೆ. ಹಾಗೆ ನೋಡೋದಕ್ಕೆ ಹೋದರೆ, ನಾವು (ಪ್ರೇಮಾ ಕಾಲದಲ್ಲಿ) ಆಗ ಹುಟ್ಟೇ ಇರಲಿಲ್ಲ. ಆಗಿನ ಕಾಲದಲ್ಲೇ ಡಾ. ರಾಜ್‌ಕುಮಾರ್ ಅವರ ಜೊತೆಗೆ ಕೊಡಗಿನ ಶಶಿಕಲಾ ನಟನೆ ಮಾಡಿದ್ದಾರೆ" ಎಂದರು.

"ನಾವೆಲ್ಲ ನಟಿ ಪ್ರೇಮಾ ಅವರನ್ನು ನೋಡಿಕೊಂಡು ಬೆಳೆದು ಬಂದಿದ್ದೇವೆ. ಅವರು ಎಂತಹ ಅದ್ಭುತ ನಟಿ. ಸಿನಿಮಾನೇ ಅವರಿಂದ ನಡೆಯುತ್ತಾ ಇತ್ತು. ಈಗಿನ ಕಾಲದಲ್ಲಿ ಸಾಕಷ್ಟು ನಟಿಯರು ಕೊಡಗಿನವರಾಗಿದ್ದಾರೆ. ಆದರೆ, ಬಾಯಿತಪ್ಪಿ ಹಾಗೆ ಹೇಳಿದ್ದಾರೆ ಅನಿಸುತ್ತದೆ. ನನಗೆ ರಶ್ಮಿಕಾ ಮಂದಣ್ಣ ಮೇಲೆ ತುಂಬಾ ಗೌರವ ಇದೆ. ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಮುದಾಯಕ್ಕೆ ಹೆಸರನ್ನು ತಂದು ಕೊಟ್ಟಿದ್ದಾರೆ. ನಮಗೆ ರಶ್ಮಿಕಾ ಮಂದಣ್ಣ ಅವರ ಮೇಲೆ ಹೆಮ್ಮೆ ಇದೆ. ತುಂಬಾ ಹೆಸರು ಮಾಡಿದ್ದಾರೆ. ರಶ್ಮಿಕಾ ಗೊತ್ತಿಲ್ಲದೇ ತಪ್ಪು ಮಾಡಿರಬಹುದು. ಎಲ್ಲರೂ ಅವರನ್ನು ಕ್ಷಮಿಸೋಣ, ಚಿಕ್ಕ ಹುಡುಗಿ ಎಲ್ಲೋ ತಪ್ಪು ಮಾಡಿದ್ದಾರೆ" ಎಂದು ಹರ್ಷಿಕಾ ಪೂಣಚ್ಚ ತಿಳಿಸಿದ್ದಾರೆ.

Read More
Next Story