ಸ್ತ್ರೀ ಶಕ್ತಿ ದುರ್ಬಲವಲ್ಲ, ಅದು ಮೃದು ಆದರೆ ಶಕ್ತಿಯುತ: ರಶ್ಮಿಕಾ ಮಂದಣ್ಣ ಟಿಪ್ಪಣಿಗೆ ಶಹಬ್ಬಾಸ್​
x

ನಟಿ ರಶ್ಮಿಕಾ ಮಂದಣ್ಣ 

'ಸ್ತ್ರೀ ಶಕ್ತಿ ದುರ್ಬಲವಲ್ಲ, ಅದು ಮೃದು ಆದರೆ ಶಕ್ತಿಯುತ': ರಶ್ಮಿಕಾ ಮಂದಣ್ಣ ಟಿಪ್ಪಣಿಗೆ ಶಹಬ್ಬಾಸ್​

ತಮ್ಮ ಇನ್‍ಸ್ಟಾಗ್ರಾಂ ನಲ್ಲಿ ಒಂದು ಟಿಪ್ಪಣಿಯನ್ನು ಹಂಚಿಕೊಂಡಿರುವ ರಶ್ಮಿಕಾ, "ಸ್ತ್ರೀ ಶಕ್ತಿಯಲ್ಲಿ ಏನೋ ಒಂದು ವಿಶೇಷತೆ ಇದೆ. ಅದನ್ನು ವಿವರಿಸಲು ನನಗೆ ಗೊತ್ತಿಲ್ಲ. ಆದರೆ ನೀವು ನಿಮ್ಮೊಂದಿಗೇ ನಿಜವಾಗಿಯೂ ಸಂಪರ್ಕದಲ್ಲಿದ್ದಾಗ, ನಿಮಗೆ ಅದು ತಿಳಿದಿರುತ್ತದೆ.


Click the Play button to hear this message in audio format

ನ್ಯಾಷನಲ್ ಕ್ರಶ್ ಖ್ಯಾತಿಯ ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ, ತಮ್ಮ ಸಿನಿಮಾ ಬದುಕಿನ ಬಿಡುವಿಲ್ಲದ ಕೆಲಸದ ನಡುವೆಯೂ ಸಾಮಾಜಿಕ ಕಳಕಳಿಯ ವಿಷಯಗಳ ಬಗ್ಗೆ ಆಗಾಗ ಧ್ವನಿ ಎತ್ತುತ್ತಾರೆ. ಇದೀಗ ಅವರು 'ಸ್ತ್ರೀ ಶಕ್ತಿ' ಮತ್ತು ಮಹಿಳೆಯರ ಅಂತಃಪ್ರಜ್ಞೆಯ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಭಾವನಾತ್ಮಕ ಟಿಪ್ಪಣಿ ಎಲ್ಲರ ಗಮನ ಸೆಳೆದಿದೆ.

ಮಹಿಳೆಯರಿಗೆ ನೈಸರ್ಗಿಕವಾಗಿ ದೊರೆತಿರುವ ವಿಶೇಷ ಗ್ರಹಣ ಶಕ್ತಿಯ ಬಗ್ಗೆ ರಶ್ಮಿಕಾ ಬೆಳಕು ಚೆಲ್ಲಿದ್ದಾರೆ. ಈ ಶಕ್ತಿಯು ಮಹಿಳೆಯರಿಗೆ ವ್ಯಕ್ತಿಗಳನ್ನಾಗಲಿ ಅಥವಾ ಸಂದರ್ಭಗಳನ್ನಾಗಲಿ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ವಿವರಿಸಿದ್ದಾರೆ. "ಸ್ತ್ರೀ ಶಕ್ತಿಯಲ್ಲಿ ಏನೋ ಒಂದು ಅವ್ಯಕ್ತ ವಿಶೇಷತೆ ಇದೆ. ನೀವು ನಿಮ್ಮ ಅಂತರಾತ್ಮದೊಂದಿಗೆ ಸಂಪರ್ಕದಲ್ಲಿದ್ದಾಗ, ಆ ಶಕ್ತಿಯ ಅರಿವು ನಿಮಗಾಗುತ್ತದೆ. ಯಾವುದೇ ಒಂದು ಘಟನೆ ನಡೆಯುವ ಮೊದಲೇ ಅಥವಾ ಯಾವುದೇ ಕಾರಣ ತಿಳಿಯುವ ಮೊದಲೇ, ಅಲ್ಲಿ ಏನೋ ಸರಿಯಿಲ್ಲ ಎಂಬ ಮುನ್ಸೂಚನೆ ನಮ್ಮ ಅಂತಃಕರಣಕ್ಕೆ ದೊರೆಯುತ್ತದೆ. ಆದರೆ, ಜೀವನದ ಜಂಜಾಟದಲ್ಲಿ ನಾವು ಅದನ್ನು ಕಡೆಗಣಿಸುತ್ತೇವೆ," ಎಂದು ರಶ್ಮಿಕಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಮಹಿಳಾ ಒಗ್ಗಟ್ಟಿನ 'ಮಾಂತ್ರಿಕ' ಶಕ್ತಿ

ಮಹಿಳೆಯರು ಪರಸ್ಪರ ಬೆಂಬಲವಾಗಿ ನಿಂತಾಗ ಉಂಟಾಗುವ ಬದಲಾವಣೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ. ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಯ ಕಷ್ಟವನ್ನು ಆಲಿಸುವುದು ಮತ್ತು ಬೆಂಬಲಿಸುವುದು ಬದುಕನ್ನು ಸುಲಭಗೊಳಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ವರ್ಷಗಳಿಂದ ನಾನು ಕಲಿತ ಒಂದು ಪ್ರಮುಖ ಪಾಠವೆಂದರೆ, ಮಹಿಳೆಯರು ಇತರ ಮಹಿಳೆಯರಿಗೆ ಬೆಂಬಲ ನೀಡುವುದು ಒಂದು ಮಾಂತ್ರಿಕ ಅನುಭವ. ಕೇವಲ 'ನಾನು ನಿನ್ನೊಂದಿಗಿದ್ದೇನೆ' ಎಂದು ಹೇಳುವ ಮೂಲಕ, ಒಬ್ಬರನ್ನೊಬ್ಬರು ಸಾಂತ್ವನಗೊಳಿಸುವ ಮತ್ತು ಗುಣಪಡಿಸುವ ಶಕ್ತಿ ಅದ್ಭುತವಾದುದು. ಮಹಿಳೆಯರು ಒಗ್ಗಟ್ಟಾಗಿ ನಿಂತರೆ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ," ಎಂದು ರಶ್ಮಿಕಾ ಸ್ತ್ರೀ ಕುಲದ ಒಗ್ಗಟ್ಟಿನ ಮಹತ್ವವನ್ನು ಸಾರಿದ್ದಾರೆ.

ಸ್ತ್ರೀ ಶಕ್ತಿಯ ರಕ್ಷಣೆಯ ವಾಗ್ದಾನ

ತಮ್ಮ ಬರಹದ ಕೊನೆಯಲ್ಲಿ, ತಮಗೆ ತಡವಾಗಿ ಅರ್ಥವಾದರೂ, ಈಗ ಅರಿವಾಗಿರುವ ಈ ಶಕ್ತಿಯನ್ನು ರಕ್ಷಿಸಿಕೊಳ್ಳುವ ಪ್ರತಿಜ್ಞೆಯನ್ನು ಅವರು ಮಾಡಿದ್ದಾರೆ. "ಇದನ್ನು ಅರ್ಥಮಾಡಿಕೊಳ್ಳಲು ನನಗೆ ದೀರ್ಘ ಸಮಯ ಹಿಡಿಯಿತು. ಆದರೆ ಈಗ ಅದರ ಮೌಲ್ಯ ನನಗೆ ತಿಳಿದಿದೆ. ನನ್ನ ಬಳಿ ಇರುವ ಎಲ್ಲಾ ಸಾಮರ್ಥ್ಯದಿಂದಲೂ ನಾನು ಅದನ್ನು ರಕ್ಷಿಸುತ್ತೇನೆ. ಸ್ತ್ರೀ ಶಕ್ತಿ ಎಂದರೆ ದೌರ್ಬಲ್ಯವಲ್ಲ; ಅದು ಮೃದುವಾಗಿರಬಹುದು, ಆದರೆ ಅದು ಅತ್ಯಂತ ಶಕ್ತಿಯುತ, ಸಹಜಜ್ಞಾನವುಳ್ಳ (Intuitive), ರಕ್ಷಣಾತ್ಮಕ ಮತ್ತು ಪ್ರೀತಿಯಿಂದ ತುಂಬಿದ ಶಕ್ತಿಯಾಗಿದೆ," ಎಂದು ಹೇಳುವ ಮೂಲಕ ರಶ್ಮಿಕಾ ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದ್ದಾರೆ.

ಸಿನಿಮಾಗಳ ಆಚೆಗೆ, ರಶ್ಮಿಕಾ ಅವರ ಈ ಪಕ್ವವಾದ ಮತ್ತು ಸ್ಫೂರ್ತಿದಾಯಕ ಮಾತುಗಳು ಅವರ ಅಭಿಮಾನಿಗಳಲ್ಲಿ ಮತ್ತು ಮಹಿಳಾ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿವೆ.

Read More
Next Story