
ಬಾಲಿವುಡ್‌ನ ಸ್ಟಾರ್ ನಟ ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ.
ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 'ಧುರಂಧರ್' ಅಬ್ಬರ: 'ಪಠಾಣ್' ಮತ್ತು 'ಕಲ್ಕಿ' ದಾಖಲೆಗಳು ಧೂಳಿಪಟ
ಭಾರತೀಯ ಮಾರುಕಟ್ಟೆಯಲ್ಲಿ ನಾಲ್ಕನೇ ವಾರದಲ್ಲಿ 62 ಕೋಟಿ ರೂ. ಗಳಿಸಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ 'ಧುರಂಧರ್' ಪಾತ್ರವಾಗಿದೆ.
ಬಾಲಿವುಡ್‌ನ ಸ್ಟಾರ್ ನಟ ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾಗಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದರೂ ಚಿತ್ರದ ಕಲೆಕ್ಷನ್ ವೇಗ ಮಾತ್ರ ತಗ್ಗಿಲ್ಲ. ಆದಿತ್ಯ ಧರ್ ನಿರ್ದೇಶನದ ಈ ಸ್ಪೈ ಥ್ರಿಲ್ಲರ್ ಸಿನಿಮಾ ಪ್ರತಿದಿನ ಹೊಸ ದಾಖಲೆಗಳನ್ನು ಬರೆಯುತ್ತಿದ್ದು, ಇದೀಗ ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿದೆ.
24 ದಿನಗಳಲ್ಲಿ 1064 ಕೋಟಿ ಗಳಿಕೆ
ಕ್ರಿಸ್‌ಮಸ್ ರಜೆಗಳ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಈ ಚಿತ್ರಕ್ಕೆ ಭರ್ಜರಿ ಬೆಂಬಲ ವ್ಯಕ್ತವಾಗಿದೆ. ಪರಿಣಾಮವಾಗಿ, ಬಿಡುಗಡೆಯಾದ 24 ದಿನಗಳಲ್ಲಿ 'ಧುರಂಧರ್' ವಿಶ್ವಾದ್ಯಂತ ಬರೋಬ್ಬರಿ 1064 ಕೋಟಿ ರೂಪಾಯಿ ಗಳಿಸಿದೆ. ಕೇವಲ ನಾಲ್ಕನೇ ಭಾನುವಾರ ಒಂದೇ ದಿನ ಚಿತ್ರವು 30 ಕೋಟಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿದೆ. ಈ ಮೂಲಕ ಪ್ರಭಾಸ್ ನಟನೆಯ 'ಕಲ್ಕಿ 2898 ಎಡಿ' (1042 ಕೋಟಿ ರೂ.) ಮತ್ತು ಶಾರುಖ್ ಖಾನ್ ಅವರ 'ಪಠಾಣ್' (1055 ಕೋಟಿ ರೂ.) ಚಿತ್ರಗಳ ಒಟ್ಟಾರೆ ಕಲೆಕ್ಷನ್ ದಾಖಲೆಯನ್ನು ಹಿಂದಿಕ್ಕಿದೆ.
ಭಾರತದಲ್ಲಿ ಮೊದಲ ಬಾರಿಗೆ ಇಂತಹ ದಾಖಲೆ
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಯಾವುದೇ ಸಿನಿಮಾ ತನ್ನ ನಾಲ್ಕನೇ ವಾರದಲ್ಲಿ ಈ ಮಟ್ಟದ ಗಳಿಕೆ ಮಾಡಿರಲಿಲ್ಲ. ಆದರೆ 'ಧುರಂಧರ್' ನಾಲ್ಕನೇ ವಾರದಲ್ಲಿ 62 ಕೋಟಿ ರೂಪಾಯಿ ಗಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಪ್ರಸ್ತುತ ಭಾರತದಲ್ಲಿ ಈ ಚಿತ್ರದ ಒಟ್ಟು ಕಲೆಕ್ಷನ್ 690.25 ಕೋಟಿ ರೂಪಾಯಿ ತಲುಪಿದ್ದು (ಗ್ರಾಸ್ ಕಲೆಕ್ಷನ್ 828.25 ಕೋಟಿ), ಇಂದು ಸೋಮವಾರದ ವೇಳೆಗೆ 700 ಕೋಟಿ ಕ್ಲಬ್ ಸೇರುವ ಮೊದಲ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
'ಧುರಂಧರ್' ಸಿನಿಮಾದಲ್ಲಿ ರಣವೀರ್ ಸಿಂಗ್ 'ಹಮ್ಜಾ' ಎಂಬ ಭಾರತೀಯ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕರಾಚಿಯ ಉಗ್ರಗಾಮಿ ಜಾಲಕ್ಕೆ ನುಗ್ಗಿ ಕಾರ್ಯಾಚರಣೆ ನಡೆಸುವ ರೋಚಕ ಕಥೆ ಈ ಸಿನಿಮಾದಲ್ಲಿದೆ. ಚಿತ್ರದಲ್ಲಿ ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಂಜಯ್ ದತ್ ಮತ್ತು ಆರ್. ಮಾಧವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಯಶಸ್ಸಿನ ಬೆನ್ನಲ್ಲೇ ಚಿತ್ರದ ಸೀಕ್ವೆಲ್ 2026ರ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

