ಮುಂಬೈನ ಖಡಕ್ ಪೊಲೀಸ್ ದಯಾ ನಾಯಕ್ ಕಥೆ ತೆರೆಗೆ; ರಾಮ್ ಗೋಪಾಲ್ ವರ್ಮಾ ಘೋಷಣೆ
x

ರಾಮ್ ಗೋಪಾಲ್ ವರ್ಮಾ ‘ಪೊಲೀಸ್ ಕಂಪನಿ’ ಸಿನಿಮಾ ಘೋಷಿಸಿದ್ದಾರೆ.

ಮುಂಬೈನ ಖಡಕ್ ಪೊಲೀಸ್ ದಯಾ ನಾಯಕ್ ಕಥೆ ತೆರೆಗೆ; ರಾಮ್ ಗೋಪಾಲ್ ವರ್ಮಾ ಘೋಷಣೆ

ರಾಮ್ ಗೋಪಾಲ್ ವರ್ಮಾ ‘ಪೊಲೀಸ್ ಕಂಪನಿ’ ಸಿನಿಮಾ ಘೋಷಿಸಿದ್ದಾರೆ. ದಯಾ ನಾಯಕ್ ಅವರಿಂದ ಪ್ರೇರಿತ ಪೊಲೀಸ್ ಪಾತ್ರದಲ್ಲಿ ಹರ್ಷವರ್ಧನ್ ರಾಣೆ ನಟಿಸಲಿದ್ದು, ಕಥೆ ಮುಂಬೈ ಅಂಡರ್‌ವರ್ಲ್ಡ್ ಹಿನ್ನೆಲೆಯಲ್ಲಿದೆ.


Click the Play button to hear this message in audio format

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೊಮ್ಮೆ ಮುಂಬೈ ಅಂಡರ್‌ವರ್ಲ್ಡ್‌ ಹಿನ್ನೆಲೆಯ ಕಥೆಯೊಂದಿಗೆ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ‘ಪೊಲೀಸ್ ಕಂಪನಿ’ ಎಂಬ ಶೀರ್ಷಿಕೆಯ ಈ ಚಿತ್ರದಲ್ಲಿ ಬಾಲಿವುಡ್ ನಟ ಹರ್ಷವರ್ಧನ್ ರಾಣೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಟ್ಯಾಗ್‌ಲೈನ್‌ ‘ಇಟ್ ಇಸ್ ಮೋರ್ ಡೇಂಜರಸ್ ದ್ಯಾನ್ ಡಿ ಕಂಪನಿ’ ಎಂದು ಇರಲಿದೆ.

ಸಿನಿಮಾದ ಶೀರ್ಷಿಕೆ ಹಾಗೂ ಕಥೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ಪೊಲೀಸ್ ಒಂದು ಸಂಸ್ಥೆ, ಅಂಡರ್‌ವರ್ಲ್ಡ್‌ ಕಂಪನಿ ಹಣ ಸಂಪಾದಿಸುವ ಸಂಘಟನೆ ಎಂದು ಹೇಳಿದ್ದಾರೆ. ಆದರೆ ಒಂದು ಸಂಸ್ಥೆಗೆ ಹೆಚ್ಚುವರಿ ಅಧಿಕಾರ ನೀಡಿದಾಗ ಅದು ಶೀಘ್ರದಲ್ಲೇ ಕಂಪನಿಯಾಗಿ ಬದಲಾಗಬಹುದು ಎಂಬ ಪರಿಕಲ್ಪನೆಯನ್ನು ಸಿನಿಮಾ ಹೊಂದಿದೆ ಎಂದು ತಿಳಿಸಿದ್ದಾರೆ.

ದಾವೂದ್ ಇಬ್ರಾಹಿಂ ತನ್ನ ಬಹುತೇಕ ಪ್ರತಿಸ್ಪರ್ಧಿ ಗ್ಯಾಂಗ್‌ಗಳನ್ನು ಮುಗಿಸಿದ ಬಳಿಕ ತನ್ನ ಸಂಘಟನೆಯನ್ನು ‘ಡಿ ಕಂಪನಿ’ಯಾಗಿ ವಿಸ್ತರಿಸಿ ದುಬೈಗೆ ತೆರಳಿದ್ದ. ನಂತರ ತನ್ನ ಆಪ್ತ ಛೋಟಾ ರಾಜನ್‌ಗೆ ಕಾರ್ಯಾಚರಣೆಗಳ ಜವಾಬ್ದಾರಿ ನೀಡಿದ್ದ. ಆದರೆ ದಾವೂದ್ ಮತ್ತು ಛೋಟಾ ರಾಜನ್ ನಡುವೆ ಭಿನ್ನಾಭಿಪ್ರಾಯ ಉಂಟಾದ ಬಳಿಕ ಮುಂಬೈ ಅಂಡರ್‌ವರ್ಲ್ಡ್‌ನಲ್ಲಿ ದೊಡ್ಡ ಶೂನ್ಯ ನಿರ್ಮಾಣವಾಯಿತು ಎಂದು ವರ್ಮಾ ಹೇಳಿದ್ದಾರೆ.

ಈ ಪರಿಸ್ಥಿತಿಯ ಲಾಭ ಪಡೆದ ಹಲವು ಗ್ಯಾಂಗ್‌ಗಳು ಪ್ರಾಬಲ್ಯಕ್ಕಾಗಿ ಕಾದಾಡಲು ಆರಂಭಿಸಿದವು. ಇದರಿಂದ ಮುಂಬೈನಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾದವು. ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಬಿಹಾರ ಸೇರಿದಂತೆ ಹಲವು ರಾಜ್ಯಗಳಿಂದ ಯುವಕರು ಅಂಡರ್‌ವರ್ಲ್ಡ್‌ ಗ್ಯಾಂಗ್‌ಗಳಿಗೆ ಸೇರುವ ಪರಿಸ್ಥಿತಿಯೂ ನಿರ್ಮಾಣವಾಯಿತು ಎಂದು ಅವರು ವಿವರಿಸಿದ್ದಾರೆ.

ದಯಾ ನಾಯಕ್ ಪಾತ್ರದಲ್ಲಿ ಹರ್ಷವರ್ಧನ್ ರಾಣೆ

ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು 1997ರಿಂದ 2004ರ ಅವಧಿಯಲ್ಲಿ ವಿಶೇಷ ಪೊಲೀಸ್ ತಂಡವೊಂದನ್ನು ರಚಿಸಲಾಗಿತ್ತು. ಈ ತಂಡ 300ಕ್ಕೂ ಹೆಚ್ಚು ಗ್ಯಾಂಗ್‌ಸ್ಟರ್‌ಗಳನ್ನು ಹತ್ಯೆ ಮಾಡಿತ್ತು ಎಂದು ರಾಮ್ ಗೋಪಾಲ್ ವರ್ಮಾ ತಿಳಿಸಿದ್ದಾರೆ. ಇದೇ ವಿಶೇಷ ಪಡೆಯ ಕಥೆಯಿಂದ ಪ್ರೇರಣೆ ಪಡೆದು ‘ಪೊಲೀಸ್ ಕಂಪನಿ’ ಸಿನಿಮಾ ನಿರ್ಮಾಣವಾಗಲಿದೆ.

ಈ ಚಿತ್ರದಲ್ಲಿ ಆ ವಿಶೇಷ ಪಡೆಯ ಪ್ರಮುಖ ಸದಸ್ಯರಾಗಿದ್ದ ಪೊಲೀಸ್ ಅಧಿಕಾರಿ ದಯಾ ನಾಯಕ್ ಅವರಿಂದ ಪ್ರೇರಿತ ಪಾತ್ರವನ್ನು ಹರ್ಷವರ್ಧನ್ ರಾಣೆ ನಿರ್ವಹಿಸಲಿದ್ದಾರೆ. ‘ಹಸೀನ್ ದಿಲ್‌ರುಬಾ’ ಸಿನಿಮಾದ ಮೂಲಕ ಗಮನ ಸೆಳೆದಿರುವ ಹರ್ಷವರ್ಧನ್ ರಾಣೆ, ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮತ್ತೆ ಅಂಡರ್‌ವರ್ಲ್ಡ್ ಕಥೆಯತ್ತ RGV

ರಾಮ್ ಗೋಪಾಲ್ ವರ್ಮಾ ಅವರು ‘ಸತ್ಯ’ ಹಾಗೂ ‘ಕಂಪನಿ’ ಸೇರಿದಂತೆ ಮುಂಬೈ ಅಂಡರ್‌ವರ್ಲ್ಡ್‌ ಹಿನ್ನೆಲೆಯ ಹಲವು ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ್ದಾರೆ. ಇದೀಗ ‘ಪೊಲೀಸ್ ಕಂಪನಿ’ ಮೂಲಕ ಮತ್ತೊಮ್ಮೆ ಅದೇ ಜಗತ್ತಿನತ್ತ ಮುಖ ಮಾಡಿದ್ದಾರೆ. ಸಿನಿಮಾದಲ್ಲಿ ದೊಡ್ಡ ತಾರಾಗಣ ಇರಲಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

Read More
Next Story