
ರಾಜಪಾಲ್ ಯಾದವ್ ಅವರು ಯಶಸ್ಸಿನ ಉತ್ತುಂಗದಲ್ಲಿದ್ದಾಗ ಅನೇಕ ಬಡ ನಟರಿಗೆ ಆಸರೆಯಾಗಿದ್ದರು.
ನವಾಜುದ್ದೀನ್ ಪ್ರಾರ್ಥನೆಯೇ ಇಂದು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ; ರಾಜಪಾಲ್ ಯಾದವ್
ರಾಜಪಾಲ್ ಯಾದವ್ ಅವರು ಯಶಸ್ಸಿನ ಉತ್ತುಂಗದಲ್ಲಿದ್ದಾಗ ಅನೇಕ ಬಡ ನಟರಿಗೆ ಆಸರೆಯಾಗಿದ್ದರು. ಅವರ ಮನೆ ಅಕ್ಷರಶಃ ಒಂದು 'ಲಂಗರ್' ಇದ್ದಂತಿತ್ತು ಎಂದು ಹಾಸ್ಯನಟ ರಾಜಪಾಲ್ ಯಾದವ್ ಅವರು ನೆನಪಿಸಿಕೊಂಡಿದ್ದಾರೆ.
ಬಾಲಿವುಡ್‌ನ ಖ್ಯಾತ ಹಾಸ್ಯ ನಟ ರಾಜಪಾಲ್ ಯಾದವ್ ಅವರು ಇತ್ತೀಚೆಗೆ 9 ಕೋಟಿ ರೂಪಾಯಿ ಸಾಲದ ಸುಳಿಗೆ ಸಿಲುಕಿ ತಿಹಾರ್ ಜೈಲು ಸೇರಿ ಸುದ್ದಿಯಾಗಿದ್ದರು. ಈ ಕಷ್ಟದ ಸಮಯದಲ್ಲಿ ನಟ ನವಾಜುದ್ದೀನ್ ಸಿದ್ದಿಕಿ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿರುವ ರಾಜಪಾಲ್ ಯಾದವ್ ಅವರು ನವಾಜುದ್ದೀನ್ ಅವರ ಹೇಳಿಕೆಗೆ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.
ನವಾಜುದ್ದೀನ್ ಸಿದ್ದಿಕಿ ಹೇಳಿದ್ದೇನು?
ನವಾಜುದ್ದೀನ್ ಸಿದ್ದಿಕಿ ಮತ್ತು ರಾಜಪಾಲ್ ಯಾದವ್ ದಶಕಗಳ ಕಾಲದ ಗೆಳೆಯರು. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದ ನವಾಜುದ್ದೀನ್, "ರಾಜಪಾಲ್ ಯಾದವ್ ಅವರಿಗೆ ಸಿನಿಮಾಗಳಲ್ಲಿ ಒಳ್ಳೆಯ ಅವಕಾಶಗಳು ಸಿಗಲು ಆರಂಭಿಸಿದಾಗ, ಅವರು ಅನೇಕ ಬಡ ಮತ್ತು ಸಂಕಷ್ಟದಲ್ಲಿದ್ದ ನಟರಿಗೆ ಆಸರೆಯಾಗಿದ್ದರು. ಅವರ ಮನೆ ಅಕ್ಷರಶಃ ಒಂದು 'ಲಂಗರ್' (ಉಚಿತ ಅನ್ನದಾಸೋಹ) ಇದ್ದಂತಿತ್ತು. ಯಾರು ಬೇಕಾದರೂ ಅಲ್ಲಿಗೆ ಹೋಗಿ ಊಟ ಮಾಡಬಹುದಿತ್ತು. ಅವರು ಸ್ವಭಾವತಃ ತುಂಬಾ ಮೃದು ಮತ್ತು ಸಂವೇದನಾಶೀಲ ವ್ಯಕ್ತಿ" ಎಂದು ಶ್ಲಾಘಿಸಿದ್ದರು.
ಭಾವುಕರಾದ ರಾಜ್‌ಪಾಲ್ ಯಾದವ್
ಜೈಲಿನಿಂದ ಹೊರಬಂದ ನಂತರ 'ಯುಪಿ ತಕ್' ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ರಾಜಪಾಲ್ ಯಾದವ್, "ಅದು ಅವರ ದೊಡ್ಡ ಗುಣ. ನಾವು ಅಂದು ವಿವಿಧ ರಾಜ್ಯಗಳ 10-15 ಜನರು ಒಟ್ಟಿಗಿದ್ದೆವು. ಯಾರಿಗೆ ಕೆಲಸ ಸಿಗುತ್ತದೆ ಎಂಬುದು ನಮಗೆ ಮುಖ್ಯವಾಗಿರಲಿಲ್ಲ. ಮಂಡಿ ಹೌಸ್‌ನಿಂದ ಹಿಡಿದು ಎಲ್ಲರೂ ಜೊತೆಯಾಗಿ ಕೆಲಸ ಮಾಡಿದ್ದೇವೆ ಎಂಬುದು ಮುಖ್ಯ. ಒಬ್ಬರ ಹೊಟ್ಟೆ ತುಂಬಿದರೆ ಎಲ್ಲರ ಹೊಟ್ಟೆ ತುಂಬಿದಂತೆ, ಇಲ್ಲದಿದ್ದರೆ ಎಲ್ಲರೂ ಉಪವಾಸ ಇರುತ್ತಿದ್ದೆವು. ಆ ಸ್ನೇಹ ಮತ್ತು ಸ್ಪಿರಿಟ್ ನಮ್ಮಲ್ಲಿತ್ತು. ಬಹುಶಃ ಅವರ ಪ್ರಾರ್ಥನೆಯ ಫಲವಾಗಿ ನಾನು ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ನನ್ನಂತಹ ಲಕ್ಷಾಂತರ ರಾಜಪಾಲ್ಗಳು ಬೀದಿಗಳಲ್ಲಿ ಸಿಗುತ್ತಾರೆ. ಅಂತಹವರಿಗೆ ಒಂದು ವೇದಿಕೆ ಸಿಕ್ಕರೆ ಅವರು ಆಕಾಶದ ಎತ್ತರಕ್ಕೆ ಬೆಳೆಯಬಲ್ಲರು" ಎಂದು ಅವರು ತಿಳಿಸಿದ್ದಾರೆ.
ಏನಿದು 9 ಕೋಟಿ ರೂಪಾಯಿ ಪ್ರಕರಣ?
ರಾಜಪಾಲ್ ಯಾದವ್ ಅವರು 2010ರಲ್ಲಿ ತಮ್ಮ ನಿರ್ದೇಶನದ 'ಅತಾ ಪತಾ ಲಾ ಪತಾ' ಚಿತ್ರಕ್ಕಾಗಿ ದೆಹಲಿ ಮೂಲದ ಸುಮಾರು 5 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಆದರೆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದ ಕಾರಣ, ಅವರಿಗೆ ಸಾಲ ಮರುಪಾವತಿಸಲು ಸಾಧ್ಯವಾಗಲಿಲ್ಲ. ಬಡ್ಡಿ ಮತ್ತು ದಂಡದ ಮೊತ್ತ ಸೇರಿ ಈ ಸಾಲವು 9 ಕೋಟಿ ರೂಪಾಯಿಗೆ ತಲುಪಿತ್ತು. ಅವರು ನೀಡಿದ್ದ ಹಲವು ಚೆಕ್‌ಗಳು ಬೌನ್ಸ್ ಆಗಿದ್ದರಿಂದ ಕಾನೂನು ಹೋರಾಟ ಶುರುವಾಗಿತ್ತು.
ನ್ಯಾಯಾಲಯದ ಆದೇಶದಂತೆ ಫೆಬ್ರವರಿ ಮೊದಲ ವಾರದಲ್ಲಿ ರಾಜಪಾಲ್ ತಿಹಾರ್ ಜೈಲಿಗೆ ಶರಣಾಗಿದ್ದರು. ಆದರೆ ಕಳೆದ ವಾರ ದೆಹಲಿ ಹೈಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಸುಮಾರು 1.5 ಕೋಟಿ ರೂಪಾಯಿಗಳನ್ನು ನ್ಯಾಯಾಲಯದಲ್ಲಿ ಠೇವಣಿ ಇಟ್ಟ ಬಳಿಕ ಅವರಿಗೆ ಮಾರ್ಚ್ 18ರವರೆಗೆ ರಿಲೀಫ್ ನೀಡಲಾಗಿದೆ.

