
2026 ಹೊಸ ವರ್ಷಕ್ಕೆ ರಜಿನಿಕಾಂತ್ ವಿಶೇಷ ಸಂದೇಶ
ಹೊಸ ವರ್ಷಕ್ಕೆ 'ಮುತ್ತು' ಹಂಚಿಕೊಂಡ ತಲೈವಾ: ರಜನೀಕಾಂತ್ ಸ್ಟೈಲಿಶ್ ವಿಶ್
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ಅವರು ತಮ್ಮ ಅಭಿಮಾನಿಗಳಿಗೆ ನೇರವಾಗಿ ದರ್ಶನ ನೀಡಿ ಹೊಸ ವರ್ಷದ ಶುಭಾಶಯ ಕೋರುವ ಮೂಲಕ ಗಮನ ಸೆಳೆದಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ಸೂಪರ್‌ಸ್ಟಾರ್ ರಜನೀಕಾಂತ್ ತಮ್ಮ ಮ್ಮ ಅಭಿಮಾನಿಗಳಿಗೆ ವಿಭಿನ್ನವಾಗಿ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ತಮ್ಮ ನಟನೆಯ ಎವರ್‌ಗ್ರೀನ್ ಹಿಟ್ ಸಿನಿಮಾ ‘ಮುತ್ತು’ ಚಿತ್ರದ ಹಳೆಯ ಕ್ಲಿಪ್ ಒಂದನ್ನು ಹಂಚಿಕೊಳ್ಳುವ ಮೂಲಕ ರಜನಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ರಜನೀಕಾಂತ್, 2026ರ ಹೊಸ ವರ್ಷಕ್ಕೆ ಸ್ಫೂರ್ತಿದಾಯಕ ಸಂದೇಶ ನೀಡುವ ಮೂಲಕ ತಮ್ಮ 'ಸೋಷಿಯಲ್ ಮೀಡಿಯಾ ಗೇಮ್' ಅನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ರಜನೀಕಾಂತ್ ಹಂಚಿಕೊಂಡಿರುವ ಈ 18 ಸೆಕೆಂಡುಗಳ ವಿಡಿಯೋದಲ್ಲಿ ಅವರು ನಟಿ ಮೀನಾ ಅವರೊಂದಿಗೆ ರಥವನ್ನು ಓಡಿಸುತ್ತಿರುವ ದೃಶ್ಯವಿದೆ. ವಿಡಿಯೋದಲ್ಲಿ ಮೀನಾ ಅವರು "ನಾವು ಸರಿಯಾದ ಹಾದಿಯಲ್ಲೇ ಹೋಗುತ್ತಿದ್ದೇವೆಯೇ?" ಎಂದು ಕೇಳಿದಾಗ, ರಜನಿ ತಮ್ಮದೇ ಶೈಲಿಯಲ್ಲಿ "ಯಾರಿಗೆ ಗೊತ್ತು? ನಾನು ಎಂದಿಗೂ ಹಾದಿಯ ಬಗ್ಗೆ ಚಿಂತಿಸುವವನಲ್ಲ. ನನ್ನ ಭಾರವನ್ನೆಲ್ಲಾ ಆ ದೇವರ ಮೇಲೆ ಹಾಕಿ, ಶಿವನ ನಾಮ ಸ್ಮರಿಸುತ್ತಾ ಅವನು ತೋರಿಸಿದ ಹಾದಿಯಲ್ಲಿ ಸಾಗುತ್ತೇನೆ" ಎಂದು ಹೇಳುವ ಸಂಭಾಷಣೆಯಿದೆ. ಎ.ಆರ್. ರೆಹಮಾನ್ ಅವರ 'ಒರುವನ್ ಒರುವನ್ ಮೊದಲಾಲಿ' ಹಾಡಿನ ಹಿನ್ನೆಲೆ ಸಂಗೀತದೊಂದಿಗೆ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಇನ್ನು ರಜನೀಕಾಂತ್ ಅವರ ಸಿನಿಮಾಗಳ ವಿಷಯಕ್ಕೆ ಬರುವುದಾದರೆ, ಕಳೆದ ವರ್ಷ ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಈ ಸಿನಿಮಾ ವಿಮರ್ಶಾತ್ಮಕವಾಗಿ ಮಿಶ್ರ ಪ್ರತಿಕ್ರಿಯೆ ಪಡೆದರೂ ಸಹ, ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ 2025ರ ಅತಿ ಹೆಚ್ಚು ಗಳಿಕೆ ಕಂಡ ತಮಿಳು ಸಿನಿಮಾ ಎಂಬ ದಾಖಲೆ ಬರೆದಿದೆ.
ಸದ್ಯ ರಜನೀಕಾಂತ್ ಅವರು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಮೂಲಗಳ ಪ್ರಕಾರ, ‘ಜೈಲರ್ 2’ ಸಿನಿಮಾ ಈ ವರ್ಷದ ಜೂನ್ 12ರಂದು ತೆರೆಕಾಣುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆಯಾದರೂ, ಚಿತ್ರತಂಡದಿಂದ ಅಧಿಕೃತ ಘೋಷಣೆ ಬಾಕಿ ಇದೆ.
ಪ್ರತಿ ವರ್ಷದಂತೆ ಈ ಬಾರಿಯೂ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ಅವರು ತಮ್ಮ ಅಭಿಮಾನಿಗಳಿಗೆ ನೇರವಾಗಿ ದರ್ಶನ ನೀಡಿ ಹೊಸ ವರ್ಷದ ಶುಭಾಶಯ ಕೋರುವ ಮೂಲಕ ಗಮನ ಸೆಳೆದಿದ್ದಾರೆ. ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿರುವ ತಮ್ಮ ನಿವಾಸದ ಮುಂದೆ ಜಮಾಯಿಸಿದ್ದ ನೂರಾರು ಅಭಿಮಾನಿಗಳ ಮುಂದೆ ರಜನಿಕಾಂತ್ ಅವರು ಖುದ್ದಾಗಿ ಆಗಮಿಸಿದರು. ಮನೆ ಮುಂದೆ ಸಾಲುಗಟ್ಟಿ ನಿಂತಿದ್ದ ಅಭಿಮಾನಿಗಳತ್ತ ಕೈಬೀಸುತ್ತಾ, ಮುಗುಳ್ನಗೆಯೊಂದಿಗೆ ಹೊಸ ವರ್ಷದ ಶುಭ ಹಾರೈಸಿದರು.
ತಮ್ಮ ನೆಚ್ಚಿನ ನಟನನ್ನು ವರ್ಷದ ಮೊದಲ ದಿನವೇ ಕಣ್ತುಂಬಿಕೊಂಡ ಅಭಿಮಾನಿಗಳ ಸಂತೋಷ ಮುಗಿಲು ಮುಟ್ಟಿತ್ತು. ನೆಚ್ಚಿನ 'ತಲೈವಾ' ನೋಡಿ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಗಳ ಮೂಲಕ ಜಯಘೋಷ ಹಾಕಿದರು. ಈ ಸಂಪ್ರದಾಯವನ್ನು ರಜನೀಕಾಂತ್ ಅವರು ಪ್ರತಿ ವರ್ಷ ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದು, ಈ ಬಾರಿಯೂ ಅವರ ಸರಳತೆ ಮತ್ತು ಅಭಿಮಾನಿಗಳ ಮೇಲಿರುವ ಪ್ರೀತಿ ಕಂಡು ಎಲ್ಲರೂ ಹರ್ಷ ವ್ಯಕ್ತಪಡಿಸಿದ್ದಾರೆ.
ಹೊಸ ವರ್ಷದ ಈ ಆರಂಭವು ರಜನಿ ಅಭಿಮಾನಿಗಳಿಗೆ ದೈವಿಕ ದರ್ಶನದಂತಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಮತ್ತು ಫೋಟೋಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

