ರಾಹುಲ್ ದ್ರಾವಿಡ್‌ಗಾಗಿ ಗಾಯನ ಅನೂಪ್ ಶಂಕರ್ ಕಂಠದಲ್ಲಿ ಮೂಡಿಬಂತು ಜೊತೆಯಲಿ ಗೀತೆ
x

ದ್ರಾವಿಡ್ ಅವರ ಕೋರಿಕೆಯಂತೆ ಅನೂಪ್ ಶಂಕರ್ ಅವರು ಸ್ಯಾಂಡಲ್‌ವುಡ್‌ನ ಅಪ್ರತಿಮ ನಟ ಶಂಕರ್ ನಾಗ್ ಅಭಿನಯದ 'ಗೀತಾ' ಚಿತ್ರದ ʻಜೊತೆಯಲಿ ಜೊತೆ ಜೊತೆಯಲಿʼ ಹಾಡನ್ನು ಹಾಡಿದರು. 

ರಾಹುಲ್ ದ್ರಾವಿಡ್‌ಗಾಗಿ ಗಾಯನ ಅನೂಪ್ ಶಂಕರ್ ಕಂಠದಲ್ಲಿ ಮೂಡಿಬಂತು 'ಜೊತೆಯಲಿ' ಗೀತೆ

ದ್ರಾವಿಡ್ ಅವರ ಕೋರಿಕೆಯಂತೆ ಅನೂಪ್ ಶಂಕರ್ ಅವರು ಸ್ಯಾಂಡಲ್‌ವುಡ್‌ನ ಅಪ್ರತಿಮ ನಟ ಶಂಕರ್ ನಾಗ್ ಅಭಿನಯದ 'ಗೀತಾ' ಚಿತ್ರದ ʻಜೊತೆಯಲಿ ಜೊತೆ ಜೊತೆಯಲಿʼ ಹಾಡನ್ನು ಹಾಡಿದರು.


Click the Play button to hear this message in audio format

ಬೆಂಗಳೂರಿನ ಐತಿಹಾಸಿಕ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಭಾರತೀಯ ಕ್ರಿಕೆಟ್‌ನ ದಿಗ್ಗಜ ರಾಹುಲ್ ದ್ರಾವಿಡ್ ಅವರು ತೋರಿದ ಕನ್ನಡಾಭಿಮಾನ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಕಾರ್ಯಕ್ರಮದ ಭಾಗವಾಗಿ ನಡೆದ ಸಂಗೀತ ಸಂಜೆಯಲ್ಲಿ ಖ್ಯಾತ ಗಾಯಕ ಅನೂಪ್ ಶಂಕರ್ ಅವರು ರಾಹುಲ್ ದ್ರಾವಿಡ್ ಅವರ ಬಳಿ ಬಂದು, "ಸರ್, ನಿಮಗಾಗಿ ಯಾವ ಭಾಷೆಯ ಹಾಡನ್ನು ಹಾಡಲಿ? ಹಿಂದಿ, ತಮಿಳು, ತೆಲುಗು ಅಥವಾ ಕನ್ನಡವೇ?" ಎಂದು ಪ್ರಶ್ನಿಸಿದರು. ಇದಕ್ಕೆ ಕಿಂಚಿತ್ತೂ ಯೋಚಿಸದ ದ್ರಾವಿಡ್, ಮುಗುಳ್ನಗುತ್ತಲೇ ʻಕನ್ನಡʼ ಎಂದು ಉತ್ತರಿಸುವ ಮೂಲಕ ನೆರೆದಿದ್ದವರ ಮನಗೆದ್ದರು.

ರಾಹುಲ್‌ಗಾಗಿ ಕನ್ನಡ ಹಾಡು ಹಾಡಿದ ಖ್ಯಾತ ಗಾಯಕ ಅನೂಪ್ ಶಂಕರ್

ದ್ರಾವಿಡ್ ಅವರ ಕೋರಿಕೆಯಂತೆ ಅನೂಪ್ ಶಂಕರ್ ಅವರು ಸ್ಯಾಂಡಲ್‌ವುಡ್‌ನ ಅಪ್ರತಿಮ ನಟ ಶಂಕರ್ ನಾಗ್ ಅಭಿನಯದ 'ಗೀತಾ' ಚಿತ್ರದ ʻಜೊತೆಯಲಿ ಜೊತೆ ಜೊತೆಯಲಿʼ ಹಾಡನ್ನು ಹಾಡಿದರು. ಈ ಸುಂದರ ಕ್ಷಣಕ್ಕೆ ಸಾಕ್ಷಿಯಾದ ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವು ಕ್ರಿಕೆಟ್ ತಾರೆಯರು ಹಾಡನ್ನು ಆನಂದಿಸಿ ಚಪ್ಪಾಳೆ ತಟ್ಟಿದರು.

ಗಾಯಕ ಅನೂಪ್ ಶಂಕರ್ ಈ ವೀಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, "ಕ್ರಿಕೆಟ್ ದಂತಕಥೆಗಳ ಮುಂದೆ ಹಾಡುವುದು ನನ್ನ ಪಾಲಿನ ಸೌಭಾಗ್ಯ. ದ್ರಾವಿಡ್ ಅವರು ಹೆಮ್ಮೆಯಿಂದ ಕನ್ನಡ ಹಾಡನ್ನು ಆಯ್ಕೆ ಮಾಡಿದ್ದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ" ಎಂದು ಬರೆದುಕೊಂಡಿದ್ದಾರೆ. ಕನ್ನಡಿಗರು ದ್ರಾವಿಡ್ ಅವರ ಈ ನಡೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸುತ್ತಿದ್ದಾರೆ.

ಇತ್ತೀಚೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಐತಿಹಾಸಿಕ ತೀರ್ಮಾನವೊಂದನ್ನು ಪ್ರಕಟಿಸಿದ್ದು, ರಾಜ್ಯದ ಹೆಮ್ಮೆಯ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಶಾಂತಾ ರಂಗಸ್ವಾಮಿ ಅವರಿಗೆ ವಿಶಿಷ್ಟ ಗೌರವ ಸಲ್ಲಿಸಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಗಳಿಗೆ (ಸ್ಟ್ಯಾಂಡ್) ಈ ಮೂವರು ದಿಗ್ಗಜರ ಹೆಸರನ್ನು ಇಡುವ ಮೂಲಕ, ಅವರು ಭಾರತೀಯ ಮತ್ತು ಕರ್ನಾಟಕ ಕ್ರಿಕೆಟ್‌ಗೆ ನೀಡಿದ ಕೊಡುಗೆಯನ್ನು ಅಜರಾಮರವಾಗಿಸಿದೆ. ವೆಂಕಟೇಶ್ ಪ್ರಸಾದ್ ನೇತೃತ್ವದ ಕೆಎಸ್‌ಸಿಎ ಆಡಳಿತ ಮಂಡಳಿ, ಈ ಮೂವರು ಸಾಧಕರ ಹೆಸರನ್ನು ಕ್ರೀಡಾಂಗಣದಲ್ಲಿ ಶಾಶ್ವತವಾಗಿ ಅಚ್ಚೊತ್ತಲು ನಿರ್ಧರಿಸಿದೆ.

ಜಂಬೋ ಮತ್ತು ದ್ರಾವಿಡ್

ಅನಿಲ್ ಕುಂಬ್ಳೆ ಅವರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು, 401 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬರೋಬ್ಬರಿ 953 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು, 'ಭಾರತೀಯ ಕ್ರಿಕೆಟ್‌ನ ಗೋಡೆ' ಖ್ಯಾತಿಯ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಆಗಿದ್ದಾರೆ. 504 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 48 ಶತಕಗಳ ಸಹಿತ 24,064 ರನ್ ಗಳಿಸಿದ ಹೆಗ್ಗಳಿಕೆ ಇವರದ್ದು. ಇಬ್ಬರೂ ದಿಗ್ಗಜರು ಭಾರತ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಲ್ಲದೆ, ಕರ್ನಾಟಕಕ್ಕೆ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ .

Read More
Next Story