
ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಾರಿಜಶ್ರೀ
ಶಾಸ್ತ್ರೋಕ್ತವಾಗಿ ವಾರಿಜಾಶ್ರೀಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಘು ದೀಕ್ಷಿತ್
ರಘು ದೀಕ್ಷಿತ್ ಮತ್ತು ವಾರಿಜಾಶ್ರೀ ಅವರು ಹಲವು ವರ್ಷಗಳಿಂದ ಉತ್ತಮ ಸ್ನೇಹಿತರಾಗಿದ್ದು, ಒಟ್ಟಿಗೆ ಅನೇಕ ಸ್ಟೇಜ್ ಶೋಗಳನ್ನು ನೀಡಿದ್ದಾರೆ. ವಾರಿಜಾಶ್ರೀ ಅವರು ಗಾಯನದ ಜೊತೆಗೆ ಕೊಳಲು ವಾದಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್‌ನ ಪ್ರಸಿದ್ಧ ಗಾಯಕ ರಘು ದೀಕ್ಷಿತ್ ಮತ್ತು ಗಾಯಕಿ ಹಾಗೂ ಕೊಳಲು ವಾದಕಿ ವಾರಿಜಾಶ್ರೀ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉತ್ತಮ ಸ್ನೇಹಿತರಾಗಿದ್ದ ಈ ಜೋಡಿ ಇದೀಗ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದು, ಇವರ ವಿವಾಹದ ಸುದ್ದಿ ಮೊನ್ನೆಯಿಂದಲೇ ಹರಿದಾಡುತ್ತಿತ್ತು.
ಗುರುಹಿರಿಯರ ಸಮ್ಮುಖದಲ್ಲಿ ಮದುವೆ
ಗಾಯಕ ರಘು ದೀಕ್ಷಿತ್ ಮತ್ತು ವಾರಿಜಾಶ್ರೀ ವೇಣುಗೋಪಾಲ್ ಅವರ ವಿವಾಹವು ಎರಡೂ ಮನೆಯ ಗುರುಹಿರಿಯರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ನೆರವೇರಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ರಘು ದೀಕ್ಷಿತ್ ಅವರು 'ಜಸ್ಟ್ ಮಾತ್ ಮಾತ್ ಅಲ್ಲಿ' ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಜೊತೆಗೆ, ಶಿಶುನಾಳ ಶರೀಫರ ತತ್ವ ಪದಗಳನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಹಾಡಿ ಮನೆ ಮಾತಾಗಿದ್ದಾರೆ.
ಸ್ನೇಹ ಪ್ರೀತಿಗೆ ತಿರುಗಿದ ಪಯಣ
ರಘು ದೀಕ್ಷಿತ್ ಮತ್ತು ವಾರಿಜಾಶ್ರೀ ಅವರು ಹಲವು ವರ್ಷಗಳಿಂದ ಉತ್ತಮ ಸ್ನೇಹಿತರಾಗಿದ್ದು, ಒಟ್ಟಿಗೆ ಅನೇಕ ಸ್ಟೇಜ್ ಶೋಗಳನ್ನು ನೀಡಿದ್ದಾರೆ. ವಾರಿಜಾಶ್ರೀ ಅವರು ಗಾಯನದ ಜೊತೆಗೆ ಕೊಳಲು ವಾದಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಈ ಸ್ನೇಹಿತರು ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, "ನನ್ನ ಜೀವನದಲ್ಲಿ ಮತ್ತೊಂದು ಅಧ್ಯಾಯ ಶುರು ಆಗುತ್ತದೆ ಅಂತ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಆಕಸ್ಮಿಕವಾಗಿಯೇ ಈ ಅಧ್ಯಾಯ ಶುರು ಆಗಿದೆ" ಎಂದು ರಘು ದೀಕ್ಷಿತ್ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಯಮುನಾ ಶ್ರೀನಿಧಿ ಶುಭ ಹಾರೈಕೆ
'ಬಿಗ್ ಬಾಸ್' ಖ್ಯಾತಿಯ ನಟಿ ಯಮುನಾ ಶ್ರೀನಿಧಿ ಅವರು ಈ ಜೋಡಿಯ ವಿವಾಹಕ್ಕೆ ಹಾಜರಾಗಿದ್ದರು. ಅವರು ವಧು-ವರರಿಗೆ ಮನಸಾರೆ ಶುಭ ಹಾರೈಸಿ, ಮದುವೆಯ ಸುಂದರ ಕ್ಷಣಗಳ ಕೆಲವು ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಹಂಚಿಕೊಂಡಿದ್ದಾರೆ.
"ಕನ್ನಡ ನಾಡಿನ ಹೆಮ್ಮೆಯ ಸಂಗೀತಗಾರ ರಘು ದೀಕ್ಷಿತ್ ಹಾಗೂ ಪ್ರತಿಭಾವಂತ ಸಂಗೀತಗಾರ್ತಿ ವಾರಿಜಾ ವೇಣುಗೋಪಾಲ್ ಅವರ ವಿವಾಹದ ಈ ಶುಭ ಸಂದರ್ಭದಲ್ಲಿ ಹೃತ್ಪೂರ್ವಕ ಅಭಿನಂದನೆಗಳು! ನಿಮ್ಮ ಜೀವನ ಸಂಗಮವು ಪ್ರೀತಿ, ಸಂತೋಷ ಮತ್ತು ಸಂಗೀತದ ಸುಂದರ ರಾಗಗಳಿಂದ ತುಂಬಿರಲಿ" ಎಂದು ನಟಿ ಯಮುನಾ ಅವರು ನವ ಜೋಡಿಯೊಂದಿಗೆ ಫೋಟೋವನ್ನೂ ಪೋಸ್ಟ್ ಮಾಡಿದ್ದಾರೆ.

