
ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ತಮ್ಮ ಹುಟ್ಟುಹಬ್ಬವನ್ನು ಬೆಂಗಳೂರಿನ ಆರ್‌ಆರ್ ನಗರದಲ್ಲಿರುವ ನಿವಾಸದಲ್ಲಿ ನೂರಾರು ಅಭಿಮಾನಿಗಳೊಂದಿಗೆ ಸಂಭ್ರಮದಿಂದ ಆಚರಿಸಿಕೊಂಡರು.
ನಟಿ ರಚಿತಾ ರಾಮ್‌ಗೆ ಹುಟ್ಟುಹಬ್ಬದ ಸಂಭ್ರಮ; ದರ್ಶನ್ ನೆನೆದು ಭಾವುಕ
ಕನ್ನಡ ಚಿತ್ರರಂಗದಲ್ಲಿ 14 ವರ್ಷಗಳ ಪಯಣ ಪೂರ್ಣಗೊಳಿಸಿರುವ ರಚಿತಾ ರಾಮ್, ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸಿದರು. ಹುಟ್ಟುಹಬ್ಬದ ಸಂಭ್ರಮದ ನಡುವೆಯೇ ನಟ ದರ್ಶನ್‌ರನ್ನು ನೆನೆದ ರಚಿತಾ ರಾಮ್ ಭಾವುಕರಾದರು
ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ತಮ್ಮ ಹುಟ್ಟುಹಬ್ಬವನ್ನು ಬೆಂಗಳೂರಿನ ಆರ್‌ಆರ್ ನಗರದಲ್ಲಿರುವ ನಿವಾಸದಲ್ಲಿ ನೂರಾರು ಅಭಿಮಾನಿಗಳೊಂದಿಗೆ ಸಂಭ್ರಮದಿಂದ ಆಚರಿಸಿಕೊಂಡರು. ರಾತ್ರಿ 12 ಗಂಟೆಗೆ ಕೇಕ್ ಕತ್ತರಿಸಿದ ನಟಿಗೆ ಅಭಿಮಾನಿಗಳು ವಿಶೇಷವಾಗಿ ಶುಭಾಶಯ ಕೋರಿದರು. ಕನ್ನಡ ಚಿತ್ರರಂಗದಲ್ಲಿ 14 ವರ್ಷಗಳ ಪಯಣ ಪೂರ್ಣಗೊಳಿಸಿರುವ ರಚಿತಾ ರಾಮ್, ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸಿದರು. ತಮ್ಮ ನೆಚ್ಚಿನ ನಟಿಯನ್ನು ನೋಡಲು ಆಗಮಿಸಿದ್ದ ಅಭಿಮಾನಿಗಳೊಂದಿಗೆ ಕೆಲಕಾಲ ಸಂಭ್ರಮ ಹಂಚಿಕೊಂಡರು.
ದರ್ಶನ್‌ರನ್ನು ಭೇಟಿಯಾಗಲು ಹೋಗಿ ನಿರಾಸೆ
ಹುಟ್ಟುಹಬ್ಬದ ಸಂಭ್ರಮದ ನಡುವೆಯೇ ನಟ ದರ್ಶನ್‌ರನ್ನು ನೆನೆದ ರಚಿತಾ ರಾಮ್ ಭಾವುಕರಾದರು. ಇತ್ತೀಚೆಗೆ ದರ್ಶನ್‌ರನ್ನು ಭೇಟಿಯಾಗಿ ಆಶೀರ್ವಾದ ಪಡೆಯುವ ಉದ್ದೇಶದಿಂದ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ್ದಾಗಿ ಅವರು ತಿಳಿಸಿದರು. ಜೈಲು ನಿಯಮಗಳ ಪ್ರಕಾರ ವಾರದಲ್ಲಿ ಎರಡು ಬಾರಿ ಮಾತ್ರ ಭೇಟಿಗೆ ಅವಕಾಶವಿದೆ. ತಾವು ಜೈಲಿಗೆ ತೆರಳಿದ್ದ ಸಂದರ್ಭದಲ್ಲಿ ದರ್ಶನ್ ತಮ್ಮ ಕುಟುಂಬದವರನ್ನು ಭೇಟಿಯಾಗಬೇಕಿದ್ದ ಕಾರಣ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ರಚಿತಾ ರಾಮ್ ಹೇಳಿದರು. ಸುಮಾರು ಎರಡೂವರೆ ಗಂಟೆಗಳ ಕಾಲ ಕಾದ ಬಳಿಕವೂ ಭೇಟಿ ಸಾಧ್ಯವಾಗದೆ ವಾಪಸ್ ಬಂದಿದ್ದಾಗಿ ಬೇಸರ ವ್ಯಕ್ತಪಡಿಸಿದರು.
‘ಅವರ ಆಶೀರ್ವಾದ ನನ್ನ ಮೇಲೆಯೇ ಇದೆ’
ದರ್ಶನ್‌ರನ್ನು ಭೇಟಿಯಾಗಲು ಸಾಧ್ಯವಾಗದಿದ್ದರೂ ಅವರ ಆಶೀರ್ವಾದ ತಮ್ಮ ಮೇಲೆಯೇ ಇದೆ ಎಂದು ರಚಿತಾ ರಾಮ್ ಹೇಳಿದರು. ಮುಂದಿನ ದಿನಗಳಲ್ಲಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವುದಾಗಿ ತಿಳಿಸಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್‌ರನ್ನು ಭೇಟಿಯಾಗಲು ರಚಿತಾ ರಾಮ್ ಪರಪ್ಪನ ಅಗ್ರಹಾರಕ್ಕೆ ತೆರಳಿದ್ದರು. ವರದಿಗಳ ಪ್ರಕಾರ, ಹೊರಗಿನಿಂದ ಬಂದ ಇತರ ಆಪ್ತರು ಹಾಗೂ ಚಿತ್ರರಂಗದ ಸಹೋದ್ಯೋಗಿಗಳನ್ನು ಭೇಟಿಯಾಗದಿರಲು ದರ್ಶನ್ ನಿರ್ಧರಿಸಿದ್ದರು. ಹೀಗಾಗಿ ರಚಿತಾ ರಾಮ್‌ಗೂ ಭೇಟಿ ಸಾಧ್ಯವಾಗಲಿಲ್ಲ.
ಅಭಿಮಾನಿಗಳಿಗೆ ರಚಿತಾ ರಾಮ್ ಸಂದೇಶ
ಹುಟ್ಟುಹಬ್ಬಕ್ಕೆ ಆಗಮಿಸಿದ್ದ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸಿದ ರಚಿತಾ ರಾಮ್, ಎಲ್ಲರೂ ಒಳ್ಳೆಯ ಕೆಲಸ ಮಾಡಬೇಕು, ಯಾರಿಗೂ ಕೆಟ್ಟದ್ದನ್ನು ಮಾಡಬಾರದು ಎಂದು ಮನವಿ ಮಾಡಿದರು. ಜೀವನ ಒಂದೇ ಆಗಿರುವುದರಿಂದ ಸಂತೋಷದಿಂದ ಬದುಕಿ, ಒಳ್ಳೆಯ ರೀತಿಯಲ್ಲಿ ಹಣ ಸಂಪಾದಿಸಿ, ಕೈಲಾದಷ್ಟು ಇತರರಿಗೆ ಸಹಾಯ ಮಾಡಿ ಎಂದು ಅಭಿಮಾನಿಗಳಿಗೆ ಸಲಹೆ ನೀಡಿದರು.
