
Puneeth Rajkumar | ಅಭಿಮಾನಿಗಳ ಮನ, ಮನೆಯಲ್ಲಿ ಪುನೀತ್ ಸ್ಪೂರ್ತಿಯ ಬೆಳಕು
ಇಂದು ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬ. ಪುನೀತ್ ಹುಟ್ಟಿದ ದಿನವನ್ನು (ಮಾರ್ಚ್ 17) ‘ಸ್ಫೂರ್ತಿ ದಿನ’ವನ್ನಾಗಿ ಸರ್ಕಾರ ಘೋಷಿಸಿದೆ. ಪುನೀತ್ ರಾಜಕುಮಾರ್ ಅವರನ್ನು ಜನ ಯಾಕೆ ಇಷ್ಟೊಂದು ಗೌರವಿಸುತ್ತಾರೆ ಎಂದರೆ ಅದಕ್ಕೆ ಕಾರಣ,. ಪುನೀತ್ ಹಲವರಿಗೆ ಸ್ಪೂರ್ತಿಯಾಗಿದ್ದವರು.
ಇಂದು ಪುನೀತ್ ರಾಜಕುಮಾರ್ ಅವರ 50ನೇ ಹುಟ್ಟುಹಬ್ಬ. ಪುನೀತ್ ಇದ್ದಿದ್ದರೆ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಅವರು ನಮ್ಮ ನಡುವೆ ಇಲ್ಲ ಎಂದು ಆ ಸಂಭ್ರಮಾಚರಣೆಯಲ್ಲೇನೂ ಕಡಿಮೆ ಆಗಿಲ್ಲ. ಈ ಹುಟ್ಟುಹಬ್ಬವೂ ಜೋರಾಗಿಯೇ ನಡೆಯುತ್ತಿದೆ. ಇಷ್ಟಕ್ಕೂ ಪುನೀತ್ ರಾಜಕುಮಾರ್ ಅವರನ್ನು ಯಾಕೆ ಜನ ಅಷ್ಟೊಂದು ಗೌರವಿಸುತ್ತಾರೆ?
ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ನೆನಪಲ್ಲಿ ‘ಅಪ್ಪು ಟ್ಯಾಕ್ಸಿ’ ಎಂಬ ಹೊಸ ಚಿತ್ರ ಘೋಷಣೆ ಮಾಡಲಾಗಿದೆ. ರವಿಕಿರಣ್ ಅಭಿನಯದಲ್ಲಿ ‘ಅಪ್ಪು ಅಭಿಮಾನಿ’ ಎಂಬ ಚಿತ್ರ ತಯಾರಾಗಿದ್ದು, ಇತ್ತೀಚೆಗೆ ಚಿತ್ರತಂಡದವರು ಪುನೀತ್ ರಾಜಕುಮಾರ್ ಅವರ 50 ಅಡಿ ಕಟೌಟ್‍ನ್ನು ನರ್ತಕಿ ಚಿತ್ರಮಂದಿರದಲ್ಲಿ ನಿಲ್ಲಿಸಿದ್ದಾರೆ. ಪುನೀತ್ ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರ ‘ಅಪ್ಪು’ ಇತ್ತೀಚೆಗೆ ಮರುಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪುನೀತ್ ಅವರನ್ನು ದೇವರಂತೆ ಆರಾಧಿಸುವ ಅವರ ಅಭಿಮಾನಿಯ ಕುರಿತಾದ ‘ರತ್ನ’ ಎಂಬ ಚಿತ್ರ ಕಳೆದ ವರ್ಷ ಬಿಡುಗಡೆಯಾಗಿತ್ತು. ಇನ್ನು, ಕಳೆದ ಮೂರೂವರೆ ವರ್ಷಗಳಲ್ಲಿ ಅದೆಷ್ಟು ಚಿತ್ರಗಳ ಆರಂಭದಲ್ಲಿ ಪುನೀತ್ ಅವರನ್ನು ನೆನಪಿಸಿಕೊಳ್ಳಲಾಗಿದೆಯೋ, ಚಿತ್ರಗಳನ್ನು ಅವರಿಗೆ ಅರ್ಪಿಸಲಾಗಿದೆಯೋ ಗೊತ್ತಿಲ್ಲ.
ಪುನೀತ್ ನಿಧನರಾಗಿ ಮೂರೂವರೆ ವರ್ಷಗಳಾದರೂ, ಯಾಕೆ ಅವರ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಈ ಮೂರೂವರೆ ವರ್ಷಗಳಲ್ಲಿ ಪುನೀತ್ ರಾಜಕುಮಾರ್ ಹೆಸರನ್ನು ಹಲವು ಅಂಗಡಿಗಳಿಗೆ ಇಡಲಾಗಿದೆ. ಅವರ ಭಾವಚಿತ್ರಗಳು, ಪುತ್ಥಳಿಗಳು ಎಲ್ಲಾ ಕಡೆ ಕಾಣಸಿಗುತ್ತವೆ. ಸಾವಿರಾರು ಆಟೋಗಳ ಮೇಲೆ ಪುನೀತ್ ಅವರನ್ನು ನೋಡಬಹುದು. ಪುನೀತ್ ರಾಜಕುಮಾರ್ ಅವರನ್ನು ಜನ ಯಾಕೆ ಇಷ್ಟೊಂದು ಗೌರವಿಸುತ್ತಾರೆ ಎಂದರೆ ಅದಕ್ಕೆ ಕಾರಣ, ಪುನೀತ್ ಬರೀ ಒಬ್ಬ ನಟನಾಗಿರಲಿಲ್ಲ. ಪುನೀತ್ ಹಲವರಿಗೆ ಸ್ಪೂರ್ತಿಯಾಗಿದ್ದವರು. ಹಾಗಾಗಿ, ಕರ್ನಾಟಕದ ಜನತೆ ಪುನೀತ್ ಅವರನ್ನು ಅಷ್ಟೊಂದು ಪ್ರೀತಿಸುತ್ತಾರೆ.
ಪುನೀತ್ ರಾಜಕುಮಾರ್ ಅವರನ್ನು ಜನ ಇವತ್ತಿಗೂ ನೆನಪಿಸಿಕೊಳ್ಳುತ್ತಾರೆ ಎಂದರೆ ಬರೀ ಅವರ ನಟನೆಯಿಂದಲ್ಲ. ಅದರಾಚೆಗೂ ಅವರಿಗೊಂದು ವ್ಯಕ್ತಿತ್ವವಿದೆ. ಸಿನಿಮಾದಲ್ಲಿ ನಟಿಸುವುದರ ಹೊರತಾಗಿ ನಿಜ ಜೀವನದಲ್ಲೂ ತಮ್ಮ ಕೆಲಸಗಳ ಮೂಲಕ ಜೀವಂತವಾಗಿದ್ದವರು ಅವರು. ಪುನೀತ್ ಯುವಕರಿಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ ಎಂದರೆ ತಪ್ಪಿಲ್ಲ. ಅವರ ಸರಳತೆ, ನಡೆದುಕೊಳ‍್ಳುತ್ತಿದ್ದ ರೀತಿ, ಅಭಿಮಾನಿಗಳಿಗೆ ತೋರುತ್ತಿದ್ದ ಪ್ರೀತಿ … ಎಲ್ಲರಿಗೂ ಸ್ಫೂರ್ತಿಯಾಗಿದೆ. ಇನ್ನು, ಅವರ ಆಹಾರ ಪ್ರೀತಿ, ದೈಹಿಕ ಕಸರತ್ತಿಗೆ ನೀಡುತ್ತಿದ್ದ ಪ್ರಾಮುಖ್ಯತೆ, ಅವರು ಮಾಡುತ್ತಿದ್ದ ಸಹಾಯಗಳಿಂದಾಗಿ, ಪುನೀತ್ ಅವರನ್ನು ಬರೀ ಪ್ರೀತಿಸುವುದಷ್ಟೇ, ಕರ್ನಾಟಕದಲ್ಲಿ ಆರಾಧಿಸಲಾಗುತ್ತದೆ.
ಪುನೀತ್ ರಾಜಕುಮಾರ್ ಮೂರು ತಿಂಗಳಿದ್ದಾಗಲೇ ಚಿತ್ರರಂಗಕ್ಕೆ ಬಂದವರು. ಒಂದಿಷ್ಟು ಚಿತ್ರಗಳಲ್ಲಿ ಬಾಲನಟರಾಗಿ ಗುರುತಿಸಿಕೊಂಡಿದ್ದರು. ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಬಾಲ ನಟ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಅವರಿಗೊಂದು ಅಭಿಮಾನಿ ವಲಯವಿತ್ತು. ನಂತರ ಪುನೀತ್‍ಗೆ ವ್ಯಾಪಾರದಲ್ಲಿ ಹೆಚ್ಚು ಆಸಕ್ತಿ ಇದ್ದರೂ, ಕುಟುಂಬ ಮತ್ತು ಹಿತೈಷಿಗಳ ಒತ್ತಾಯದ ಮೇಲೆ ಚಿತ್ರರಂಗಕ್ಕೆ ನಾಯಕನಟನಾಗಿ ‘ಅಪ್ಪು’ ಚಿತ್ರದ ಮೂಲಕ ಪ್ರವೇಶ ಮಾಡಿದರು. ಮೊದಲ ಚಿತ್ರವೇ ದೊಡ್ಡ ಯಶಸ್ಸು ಪಡೆಯಿತು. ಸಾಕಷ್ಟು ಚಿತ್ರಗಳಲ್ಲಿ ನಟಿಸಿದರು. ಚಿತ್ರರಂಗಕ್ಕೆ ಬಂದ ಸಮಯದಲ್ಲಿ ಪುನೀತ್‍ಗಿದ್ದ ಇಮೇಜ್‍ಗೂ, ನಂತರದ ದಿನಗಳಲ್ಲಿ ಕ್ರಮೇಣ ಬದಲಾಯಿತು. ಅವರ ನಡವಳಿಕೆ, ಅಭಿಮಾನಿಗಳಿಗೆ ತೋರುತ್ತಿದ್ದ ಪ್ರೀತಿ, ಚಿತ್ರರಂಗದವರನ್ನು ಪ್ರೋತ್ಸಾಹಿಸುತ್ತಿದ್ದ ರೀತಿಯಿಂದ ಅವರನ್ನು ಜನ ನೋಡುವ ರೀತಿಯೇ ಬೇರೆಯಾಯಿತು. ಅಷ್ಟರಲ್ಲಾಗಲೇ, ಪುನೀತ್ ಹಲವರಿಗೆ ಸ್ಫೂರ್ತಿಯಾಗಿದ್ದರು. ಇನ್ನು, ಪುನೀತ್ ನಿಧನದ ನಂತರ ಆ ಕೀರ್ತಿ ಇನ್ನಷ್ಟು ಹೆಚ್ಚಾಯಿತು.
ಅಂಧರ ಕಣ್ಣಲ್ಲಿ ಪುನೀತ್ ಬೆಳಕು
ಪ್ರಮುಖವಾಗಿ, ಪುನೀತ್ ಸಾವಿನ ನಂತರ ಅವರ ಕಣ್ಣುಗಳನ್ನು ದಾನ ಮಾಡಲಾಯಿತು. ಅದರಿಂದ ನಾಲ್ಕು ಜನರಿಗೆ ದೃಷ್ಟಿ ಸಿಕ್ಕಂತಾಯಿತು. ಇದು ಸಾಕಷ್ಟು ಯುವಕರಿಗೆ ಸ್ಫೂರ್ತಿಯಾಯಿತು. ಪುನೀತ್ ನಿಧನದ ನಂತರ ಅವರಿಂದ ಸ್ಫೂರ್ತಿ ಪಡೆದು ಸಾವಿರಾರು ಕುಟುಂಬಗಳು ಮುಂದೆ ಬಂದು ನೇತ್ರದಾನಕ್ಕೆ ಬರೆದುಕೊಟ್ಟಿವೆ. ಪುನೀತ್ ಬದುಕಿದ್ದಾಗ ಸಾಕಷ್ಟು ಸಾಮಾಜಿಕ ಕಾರ್ಯಗಳಿಗೆ ತಮ್ಮದೇ ರೀತಿಯಲ್ಲಿ ಬೆಂಬಲವನ್ನು ವ್ಯಕ್ತಪಡಿಸಿದ್ದರು.
ನಂದಿನಿ ಹಾಲಿನ ರಾಯಭಾರಿಯಾಗಿರುವುದರ ಜೊತೆಗೆ ಸರ್ವ ಶಿಕ್ಷಣ ಅಭಿಯಾನದ ರಾಯಭಾರಿಯೂ ಆಗಿದ್ದರು. ಚುನಾವಣಾ ಆಯೋಗದ ‘ರೈಟ್ ಟು ವೋಟ್’ ಜಾಹೀರಾತುಗಳಲ್ಲಿ ನಟಿಸಿದರು. ಚಾಮರಾಜನಗರದ ರಾಯಭಾರಿಯಾಗಿದ್ದರು. ಯಾವುದೇ ಸಂಭಾವನೆ ಪಡೆಯದೆ ಈ ಅಭಿಯಾನಗಳ ಜೊತೆಗಿದ್ದರು ಪುನೀತ್.
ಸಾಮಾನ್ಯ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಮ್ಮದೇ ರೀತಿಯಲ್ಲಿ ಕೆಲಸ ಮಾಡುತ್ತಿದ್ದ ಪುನೀತ್, ಯಾವೊಂದು ರಾಜಕೀಯ ಪಕ್ಷದ ಜೊತೆಗೂ ಗುರುತಿಸಿಕೊಳ್ಳಲಿಲ್ಲ ಅಥವಾ ರಾಜಕೀಯ ಸಿದ್ಧಾಂತಗಳ ಬಗ್ಗೆ ಬಹಿರಂಗವಾಗಿ ಮಾತನಾಡಲಿಲ್ಲ. ಪುನೀತ್ ಮಾಡಿದ ಸಹಾಯ ಮತ್ತು ದಾನಗಳ ಕುರಿತಾಗಿ ಅವರ ನಿಧನದ ನಂತರ ಸಾಕಷ್ಟು ಚರ್ಚೆಗಳಾದವು. ಇದೆಲ್ಲದರಿಂದ ಅವರ ಖ್ಯಾತಿ ಇನ್ನಷ್ಟು ಹೆಚ್ಚಿತು. ಹಾಗಾಗಿ, ಪುನೀತ್ ನಿಧನರಾಗಿ ಮೂರೂವರೆ ವರ್ಷಗಳಾದರೂ, ಅವರ ನೆನಪು, ನಗು ಸ್ವಲ್ಪವೂ ಮಾಸಿಲ್ಲ.
ಅಂದಹಾಗೆ, ಇಂದು ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬ. ಪುನೀತ್ ಹುಟ್ಟಿದ ದಿನವನ್ನು (ಮಾರ್ಚ್ 17) ‘ಸ್ಫೂರ್ತಿ ದಿನ’ವನ್ನಾಗಿ ಸರ್ಕಾರ ಘೋಷಿಸಿದೆ.