
ಧ್ರುವ ಸರ್ಜಾ ಮತ್ತು ರೀಷ್ಮಾ ನಾಣಯ್ಯ ಹೆಜ್ಜೆ ಹಾಕಲಿದ್ದಾರೆ.
ಹೆಜ್ಜೆ ನಿಮ್ದು, ಡ್ಯಾನ್ಸು ಅವರ್ದು; ರೀಲ್ಸ್ ಮಾಡಿ ಕಳಿಸಲು ಪ್ರೇಮ್ ಮನವಿ
ಚಿತ್ರದ ‘ಸೆಟ್ಟಾಗಲ್ಲಾ ಕಣೆ ನಂಗೂ ನಿಂಗೂ …’ ಎಂಬ ಹಾಡನ್ನು ಬಿಡುಗಡೆ ಮಾಡಿದ್ದು, ಆ ಹಾಡಿಗೆ ಹುಕ್ ಸ್ಟೆಪ್ ಹಾಕಲು ಜನರಿಗೆ ಮನವಿ ಮಾಡಿದ್ದಾರೆ. ಯಾರು ಬೇಕಾದರೂ ಹಾಡಿಗೆ ಹೊಂದುವಂತಹ ಹುಕ್ ಸ್ಟೆಪ್ ಮಾಡಿ, ರೀಲ್ಸ್ ಮಾಡಿ ಕಳಿಸಬಹುದು.
ಸಾಮಾನ್ಯವಾಗಿ ಒಂದು ಚಿತ್ರದ ಹಾಡು ಮತ್ತು ಅದರ ನೃತ್ಯ ಯಶಸ್ವಿಯಾಗಿ, ಸೋಷಿಯಲ್ ಮೀಡಿಯಾದಲ್ಲಿ ಜನ ಸಹ ಆ ಹಾಡಿಗೆ ಹೆಜ್ಜೆ ಹಾಕಿ ರೀಲ್ಸ್ ಮಾಡುವುದು ರೂಢಿ. ಆದರೆ, ‘ಕೆಡಿ – ದಿ ಡೆವಿಲ್’ ಚಿತ್ರಕ್ಕೆ ಹೊಸದೊಂದು ಪ್ರಯತ್ನವನ್ನು ಮಾಡುತ್ತಿದ್ದಾರೆ ನಿರ್ದೇಶಕ ಪ್ರೇಮ್.
ಈ ಬಾರಿ ಅವರು ಚಿತ್ರದ ‘ಸೆಟ್ಟಾಗಲ್ಲಾ ಕಣೆ ನಂಗೂ ನಿಂಗೂ …’ ಎಂಬ ಹಾಡನ್ನು ಬಿಡುಗಡೆ ಮಾಡಿದ್ದು, ಆ ಹಾಡಿಗೆ ಹುಕ್ ಸ್ಟೆಪ್ ಹಾಕಲು ಜನರಿಗೆ ಮನವಿ ಮಾಡಿದ್ದಾರೆ. ಯಾರು ಬೇಕಾದರೂ ಹಾಡಿಗೆ ಹೊಂದುವಂತಹ ಹುಕ್ ಸ್ಟೆಪ್ ಮಾಡಿ, ರೀಲ್ಸ್ ಮಾಡಿ ಕಳಿಸಬಹುದು. ಅದು ಇಷ್ಟವಾದರೆ, ಚಿತ್ರತಂಡವು ಅದನ್ನು ಬಳಸಿಕೊಳ್ಳುತ್ತದಂತೆ. ಅಷ್ಟೇ ಅಲ್ಲ, ಧ್ರುವ ಸರ್ಜಾ ಮತ್ತು ರೀಷ್ಮಾ ನಾಣಯ್ಯ ಹೆಜ್ಜೆ ಹಾಕಲಿದ್ದಾರಂತೆ.
‘ಸೆಟ್ಟಾಗಲ್ಲಾ ಕಣೆ ನಂಗೂ ನಿಂಗೂ …’ ಹಾಡಿಗೆ ಮಿಖಾ ಸಿಂಗ್ ಧ್ವನಿಯಾಗಿದ್ದು, ಪ್ರೇಮ್ ಸಾಹಿತ್ಯ ಬರೆದಿದ್ದಾರೆ. ಈ ಲಿರಿಕಲ್ ಹಾಡು ಇದೀಗ ಯೂಟ್ಯೂಬ್‍ನ ಆನಂದ್ ಆಡಿಯೋ ಚಾನಲ್‍ನಲ್ಲಿ ಬಿಡುಗಡೆಯಾಗಿದೆ.
ಈ ಕುರಿತು ಮಾತನಾಡುವ ಪ್ರೇಮ್, ‘ಪ್ರೇಕ್ಷಕರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಪ್ರಯತ್ನ ಇದು. ತಮ್ಮಮೆಚ್ಚಿನ ಸ್ಟಾರ್ ಹೀಗೇ ಡಾನ್ಸ್ ಮಾಡಿದರೆ ಚೆನ್ನಾಗಿರತ್ತೆ ಅಂತ ಅಭಿಮಾನಿಗಳು ಕಲ್ಪಿಸಿಕೊಂಡಿರುತ್ತಾರೆ. ಅದು ನಮಗೂ ಚೆನ್ನಾಗಿದೆ ಎಂದನಿಸಿದರೆ, ಅದನ್ನು ಚಿತ್ರದಲ್ಲಿ ಬಳಸಿಕೊಳ್ಳುತ್ತೇವೆ. ಏಪ್ರಿಲ್ 20ರೊಳಗೆ ಕೆವಿಎನ್ ಪ್ರೊಡಕ್ಷನ್ಸ್ ಅಥವಾ ಆನಂದ್ ಆಡಿಯೋ ಸೋಷಿಯಲ್ ಮೀಡಿಯಾ ಖಾತೆಗಳಿಗೆ ಟ್ಯಾಗ್ ಮಾಡಿ ವೀಡಿಯೋಗಳನ್ನು ಕಳಿಸಬಹುದು. ಇಷ್ಟವಾದ ಹುಕ್ ಸ್ಟೆಪ್‍ನ್ನು ನಾವು ಚಿತ್ರದಲ್ಲಿ ಬಳಸಿಕೊಳ್ಳುವುದರ ಜೊತೆಗೆ, ಆ ಹುಕ್ ಸ್ಟೆಪ್ ಮಾಡಿದವರನ್ನು ಮುಂದಿನ ಸಮಾರಂಭದಲ್ಲಿ ಕರೆದು ಗೌರವಿಸುತ್ತೇವೆ’ ಎಂದರು.
ಅಂದಹಾಗೆ, ‘ಸೆಟ್ಟಾಗಲ್ಲಾ ಕಣೆ ನಂಗೂ ನಿಂಗೂ …’ ಹಾಡಿನ ಚಿತ್ರೀಕರಣ ಇನ್ನೂ ಆಗಿಲ್ಲ. ಈ ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಏಪ್ರಿಲ್ ತಿಂಗಳಲ್ಲಿ Amsterdamನಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಆಗಸ್ಟ್ ತಿಂಗಳಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.
ಕೆ.ವಿ.ಎನ್. ಪ್ರೊಡಕ್ಷನ್ಸ್ ನಿರ್ಮಿಸಿರುವ ‘ಕೆಡಿ – ದಿ ಡೆವಿಲ್’ ಚಿತ್ರವು 1970-75ರ ಸಮಯದಲ್ಲಿ ಬೆಂಗಳೂರಿನಲ್ಲಿ ನಡೆದ ನೈಜಘಟನೆ ಆಧಾರಿತ ಗ್ಯಾಂಗ್‌ಸ್ಟರ್ ಕಥೆಯಾಗಿದೆ. ಚಿತ್ರಕ್ಕಾಗಿಯೇ 18 ಎಕರೆಯಷ್ಟು ಜಾಗದಲ್ಲಿ ಬಹು ಕೋಟಿ ವೆಚ್ಚದಲ್ಲಿ ಟೌನ್ ಹಾಲ್, ಕೆ.ಆರ್. ಮಾರುಕಟ್ಟೆಯ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ.
ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಸಂಜಯ್ ದತ್, ಶಿಲ್ಪಾ ಶೆಟ್ಟಿ, ನೋರಾ ಫತೇಹಿ, ರವಿಚಂದ್ರನ್, ರಮೇಶ್ ಅರವಿಂದ್ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆ ಪ್ರೇಮ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಸಂಗೀತ ಇರುವ ಈ ಚಿತ್ರ ಕನ್ನಡ, ತೆಲುಗು, ತಮಿಳು ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.