
ಪ್ರಕಾಶ್ ರೈ ಹೆಸರೆತ್ತಿದ 'ಮಾಸ್ಕ್ ಮ್ಯಾನ್' ಚಿನ್ನಯ್ಯ
Dharmasthala Row| ಧರ್ಮಸ್ಥಳ ಕೇಸ್‌ನಲ್ಲಿ ಪ್ರಕಾಶ್ ರಾಜ್ ಹೆಸರು; ಆರೋಪ ಅಲ್ಲಗಳೆದ ನಟ
ಧರ್ಮಸ್ಥಳ ಪ್ರಕರಣದ ಅರ್ಜಿಯಲ್ಲಿ ಹೆಸರು ಉಲ್ಲೇಖವಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ನಟ ಪ್ರಕಾಶ್ ರೈ, 2 ದಿನಗಳಲ್ಲಿ ಮಾಧ್ಯಮಗಳ ಮುಂದೆ ಖುದ್ದು ಹಾಜರಾಗಿ ಸತ್ಯ ಬಯಲು ಮಾಡುವುದಾಗಿ ಸವಾಲು ಹಾಕಿದ್ದಾರೆ.
ಧರ್ಮಸ್ಥಳದ ಅಸಹಜ ಸಾವುಗಳ ಪ್ರಕರಣದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಹೆಸರು ಕೇಳಿ ಬರುತ್ತಿರುವುದು ತೀವ್ರ ಸಂಚಲನ ಮೂಡಿಸಿದೆ. ಪ್ರಕರಣದ ಆರೋಪಿ ಚಿನ್ನಯ್ಯ ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ನಟ ಪ್ರಕಾಶ್ ರೈ ಅವರು ತಮ್ಮ ಜೊತೆ ತಮಿಳಿನಲ್ಲಿ ಮಾತನಾಡಿ ಹೇಳಿಕೆ ನೀಡುವಂತೆ ಪ್ರಚೋದಿಸಿದ್ದರು ಎಂದು ಉಲ್ಲೇಖಿಸಿರುವುದು ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ.
ಧರ್ಮಸ್ಥಳ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬರುತ್ತಿದ್ದಂತೆ ಖುದ್ದು ಸ್ಪಷ್ಟನೆ ನೀಡಿರುವ ನಟ ಪ್ರಕಾಶ್ ರಾಜ್ ಅವರು, ಇದು ಅತ್ಯಂತ ಸೂಕ್ಷ್ಮ ವಿಷಯ. ಕೋಟ್ಯಂತರ ಭಕ್ತರ ನಂಬಿಕೆಗೆ ಧಕ್ಕೆ ತಂದಿರುವ ಕಾರಣ ಈ ಬಗ್ಗೆ ಉದ್ಭವಿಸಿರುವ ಸಂಶಯಗಳಿಗೆ ಉತ್ತರಿಸುವುದು ನನ್ನ ಕರ್ತವ್ಯ, ಎರಡು ದಿನಗಳ ಬಳಿಕ ಮಾಧ್ಯಮಗಳ ಮುಂದೆ ಖುದ್ದಾಗಿ ಹಾಜರಾಗಿ ಎಲ್ಲ ಅನುಮಾನಗಳಿಗೆ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ದಾರೆ.
ಪ್ರಸ್ತುತ ತಾವು ದೂರದ ಊರಿನಲ್ಲಿದ್ದು, ಇನ್ನೆರಡು ದಿನಗಳಲ್ಲಿ ಮರಳಿ ಮಾಧ್ಯಮ ಸ್ನೇಹಿತರ ಮೂಲಕ ಪ್ರತ್ಯಕ್ಷವಾಗಿ ಪ್ರತಿಕ್ರಿಯೆ ನೀಡುವುದಾಗಿ ಪ್ರಕಾಶ್ ರೈ ಸ್ಪಷ್ಟಪಡಿಸಿದ್ದಾರೆ. ಅಲ್ಲಿಯವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿ ಮತ್ತು ಕೆಲವರು ಈ ಸುದ್ದಿಗೆ ರೆಕ್ಕೆಪುಕ್ಕ ಜೋಡಿಸಿ ಹರಡುತ್ತಿರುವ ಸುಳ್ಳುಗಳನ್ನು ಸಾರ್ವಜನಿಕರು ನಂಬಬಾರದು ಎಂದು ಮನವಿ ಮಾಡಿದ್ದಾರೆ. ಧರ್ಮಸ್ಥಳ ಸಂಚು ಪ್ರಕರಣದ ಆರೋಪಿ ಚಿನ್ನಯ್ಯ ಎಂಬಾತ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಪ್ರಕಾಶ್ ರೈ ಅವರ ಹೆಸರನ್ನು ಉಲ್ಲೇಖಿಸಿದ ಬೆನ್ನಲ್ಲೇ ನಟನಿಂದ ಈ ಪ್ರತಿಕ್ರಿಯೆ ಬಂದಿದೆ.
ವದಂತಿಗಳಿಗೆ ಕಿವಿಗೊಡದಂತೆ ಮನವಿ
ಪ್ರಕರಣದ ಆರೋಪಿ ಚಿನ್ನಯ್ಯ ತನ್ನ ಅರ್ಜಿಯಲ್ಲಿ, ಕೆಲವು ವ್ಯಕ್ತಿಗಳ ಸೂಚನೆಯಂತೆ ಹೇಳಿಕೆ ನೀಡಲು ತನಗೆ ಒತ್ತಡ ಹೇರಲಾಗಿತ್ತು ಮತ್ತು ಪ್ರಕಾಶ್ ರೈ ಅವರು ತಮ್ಮೊಂದಿಗೆ ತಮಿಳಿನಲ್ಲಿ ಮಾತನಾಡಿದ್ದರು ಎಂದು ಆರೋಪಿಸಿದ್ದಾನೆ. ಅಲ್ಲದೆ, ಜೂನ್ 29 ರಂದು ಬಂದು ನಿನ್ನನ್ನು ತಬ್ಬಿಕೊಳ್ಳುತ್ತೇನೆ ಎಂದು ನಟ ತನಗೆ ಹೇಳಿದ್ದರು ಎಂದೂ ಆತ ಅರ್ಜಿಯಲ್ಲಿ ದೂರಿಕೊಂಡಿದ್ದಾನೆ. ಆದರೆ, ಈ ಎಲ್ಲಾ ಆರೋಪಗಳ ಕುರಿತು ಸದ್ಯದಲ್ಲೇ ಜಂಟಿ ಮಾಧ್ಯಮಗೋಷ್ಠಿ ನಡೆಸಿ ಸತ್ಯಾಸತ್ಯತೆ ಹೊರಹಾಕುವುದಾಗಿ ಪ್ರಕಾಶ್ ರೈ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
2025 ರಲ್ಲಿ ಮಾಜಿ ಪೌರಕಾರ್ಮಿಕನೊಬ್ಬ ನೀಡಿದ ದೂರಿನ ಆಧಾರದ ಮೇಲೆ ಈ ಧರ್ಮಸ್ಥಳ ಸಾಮೂಹಿಕ ಹೂತುಹಾಕುವಿಕೆ ಪ್ರಕರಣ ಬೆಳಕಿಗೆ ಬಂದಿತ್ತು. ಕಳೆದ ಎರಡು ದಶಕಗಳಲ್ಲಿ ನೂರಾರು ಮೃತದೇಹಗಳನ್ನು ಕಾನೂನುಬಾಹಿರವಾಗಿ ಹೂತುಹಾಕಲು ತನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದು ಆರೋಪಿಸಿದ್ದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ದಳ (SIT) ರಚನೆಯಾಗಿ ತನಿಖೆ ಚುರುಕುಗೊಂಡಿದೆ. ಕಾಣೆಯಾದ ವ್ಯಕ್ತಿಗಳು ಮತ್ತು ಅಸ್ಥಿಪಂಜರಗಳ ಪತ್ತೆಯ ರಹಸ್ಯಗಳು ಇಡೀ ದೇಶದ ಗಮನ ಸೆಳೆದಿದ್ದು, ಇದೀಗ ಪ್ರಕಾಶ್ ರೈ ಅವರ ಹೆಸರು ಈ ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವುದು ತೀವ್ರ ಕುತೂಹಲ ಮೂಡಿಸಿದೆ.

