ʼಜೇನಿನ ಹೊಳೆಯೋ ಹಾಲಿನ ಮಳೆಯೋʼ ಹಾಡಿಗೆ ಧ್ವನಿಯಾದ ಪೂಜಾಗಾಂಧಿ; ಜೈ ಎಂದ ಕನ್ನಡಿಗರು
ಪೂಜಾ ಡಾ. ರಾಜಕುಮಾರ್ ಅವರ ʼಚಲಿಸುವ ಮೋಡಗಳುʼ ಸಿನಿಮಾದ ʻಜೇನಿನ ಹೊಳೆಯೋ ಹಾಲಿನ ಮಳೆಯೋʼ ಹಾಡಿನ ಸಾಲುಗಳನ್ನು ಹಾಡಿ ಕನ್ನಡಿಗರ ಮನ ಗೆದ್ದಿದಾರೆ.
ಮುಂಗಾರು ಮಳೆ ಸಿನಿಮಾದ ಮೂಲಕ ಕನ್ನಡಿಗರ ಮನೆಮಾತಾಗಿದ್ದ ನಟಿ ಪೂಜಾ ಗಾಂಧಿ ಮೂಲತಃ ಉತ್ತರಪ್ರದೇಶದವರು. ಪೂಜಾ ಹುಟ್ಟಿ ಬೆಳೆದಿದ್ದು ಉತ್ತರಪ್ರದೇಶದಲ್ಲಿ. ʼಕತ್ರೋಂಕಿ ಕಿಲಾಡಿʼ ಬಾಲಿವುಡ್ ಸಿನಿಮಾದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಪೂಜಾ ಗಾಂಧಿಗೆ ಹೆಸರು ತಂದು ಕೊಟ್ಟ ಸಿನಿಮಾ ಕನ್ನಡದ ʼಮುಂಗಾರು ಮಳೆʼ. ಆ ಬಳಿಕ ಹಿಂದಿರುಗಿ ನೋಡದ ಪೂಜಾ ಗಾಂಧಿ ಕನ್ನಡದಲ್ಲಿ ಮಿಲನ, ದಂಡುಪಾಳ್ಯದಂತಹ ಹಿಟ್ ಸಿನಿಮಾ ಸೇರಿ 45ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕನ್ನಡಿಗರು ತನಗೆ ಕೊಟ್ಟ ಪ್ರೀತಿ, ಕನ್ನಡ ಸಿನಿಮಾದಲ್ಲಿ ತನಗೆ ಸಿಕ್ಕ ಅವಕಾಶಗಳನ್ನು ಮರೆಯದ ಪೂಜಾ ಗಾಂಧಿ ಕರ್ನಾಟಕದಲ್ಲೇ ಉಳಿದುಕೊಂಡು ಕನ್ನಡ ತರಗತಿಗೆ ತೆರಳಿ ಕನ್ನಡ ಬರೆಯುವುದನ್ನು ಕೂಡ ಕಲಿತರು. ಕನ್ನಡ ಅಕ್ಷರಮಾಲೆಯಿಂದ ಆರಂಭಿಸಿದ ನಟಿ ಈಗ ಕನ್ನಡದ ಸಾಹಿತ್ಯ ಪುಸ್ತಕಗಳನ್ನು ನಿರರ್ಗಳವಾಗಿ ಓದುವಷ್ಟು ಚತುರರಾಗಿದ್ದಾರೆ. ಕನ್ನಡ ಪರ ಹೋರಾಟಗಳಲ್ಲೂ ಪೂಜಾ ಗಾಂಧಿ ಭಾಗವಹಿಸುತ್ತಿರುತ್ತಾರೆ.
ಇದೀಗ ಪೂಜಾ ಡಾ. ರಾಜಕುಮಾರ್ ಅವರ ಚಲಿಸುವ ಮೋಡಗಳು ಸಿನಿಮಾದ ʻಜೇನಿನ ಹೊಳೆಯೋ ಹಾಲಿನ ಮಳೆಯೋʼ ಹಾಡಿನ ಸಾಲುಗಳನ್ನು ಹಾಡಿ ಕನ್ನಡಿಗರ ಮನ ಗೆದ್ದಿದಾರೆ. ʼಕವಿ ನುಡಿ ಕೋಗಿಲೆ ಹಾಡಿದ ಹಾಗೆ, ಸವಿ ನುಡಿ ತಣ್ಣನೆ ಗಾಳಿಯ ಹಾಗೆ, ಒಲವಿನ ಮಾತುಗಳಾಡುತಲಿರಲು, ಮಲ್ಲಿಗೆ ಹೂಗಳು ಅರಳಿದ ಹಾಗೆ, ಮಕ್ಕಳು ನುಡಿದರೆ ಸಕ್ಕರೆಯಂತೆ, ಅಕ್ಕರೆ ನುಡಿಗಳು ಮುತ್ತುಗಳಂತೆ, ಪ್ರೀತಿಯ ನೀತಿಯ ಮಾತುಗಳೆಲ್ಲ, ಸುಮಧುರ ಸುಂದರ ನುಡಿಯೊ..ʼ ಎಂದು ಹಾಡುವ ಮೂಲಕ ಕನ್ನಡಿಗರ ಮನಸ್ಸನ್ನು ಮತ್ತೆ ಗೆದ್ದಿದ್ದಾರೆ.
ಇವರ ಹಾಡನ್ನು ಕೇಳಿ ಜನ ಸಂತಸ ವ್ಯಕ್ತಪಡಿಸಿದ್ದು ʼಆಹಾ! ಕಿವಿ ಇಂಪಾಯಿತು! ಮನ ತಂಪಾಯಿತು.. ಮನಸ್ಸಿದ್ದರೆ ಮಾರ್ಗವೇನು ಹೆದ್ದಾರಿಯೇ ಕಾಣುತ್ತೆ ಅನ್ನೋದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಬೇಕೇ?ʼ ಎಂದಿದ್ದಾರೆ. ಮತ್ತೊಬ್ಬರು ʼಪೂಜಾಗಾಂಧಿ ಕರ್ನಾಟಕದಲ್ಲಿ ಹುಟ್ಟಿದವರಲ್ಲ ಆದರೆ ಇವರ ಕನ್ನಡದ ಸ್ಪಷ್ಟತೆ ನೋಡಿದ್ರೆ ಕರ್ನಾಟಕದಲ್ಲೇ ಹುಟ್ಟಿ ಬೆಳೆದು ಕಂಗ್ಲಿಷ್ ಮಾತಾಡೋ ಅದೆಷ್ಟೋ ಜನ ಕಮಂಗಿಗಳಿಗೆ ನಾಚಿಕೆ ಆಗ್ಬೇಕು ಹಾಗಿದೆʼ ಎಂದಿದ್ದಾರೆ.
ಕನ್ನಡ- ಕರ್ನಾಟಕ ನಮಗೆ ಮಾತೃಭಾಷೆಗಿಂತ ಜಾಸ್ತಿ ಕೊಟ್ಟಾಗ ಅದನ್ನ ಆರಾಧಿಸಬೇಕು ಅನ್ನೋದನ್ನು ಪೂಜಾ ಗಾಂಧಿಯಿಂದ ಕಲಿಯಬೇಕು ಪ್ರತಿ ಪರರಾಜ್ಯದವರು… ಎಂದು ಜನ ಕಮೆಂಟ್ ಮಾಡಿದ್ದಾರೆ.