
ಪವಿತ್ರಾ ಗೌಡ
ಪವಿತ್ರಾ ಗೌಡಗೆ ಜೈಲೂಟವೇ ಗತಿ: ಮನೆ ಊಟದ ಆದೇಶಕ್ಕೆ ಹೈಕೋರ್ಟ್ ತಡೆ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು, ಕಾನೂನಿನ ಮುಂದೆ ಎಲ್ಲರೂ ಸಮಾನರು ಯಾರೂ ಕಾನೂನಿಗಿಂತ ದೊಡ್ಡವರಲ್ಲ ಎಂದು ಸ್ಪಷ್ಟಪಡಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಅವರಿಗೆ ಜೈಲಿನಲ್ಲಿ ಮನೆ ಊಟ ಸವಿಯುವ ಆಸೆಗೆ ಕರ್ನಾಟಕ ಹೈಕೋರ್ಟ್ ತಣ್ಣೀರೆರಚಿದೆ. ಕೆಳ ನ್ಯಾಯಾಲಯ ನೀಡಿದ್ದ ಮನೆ ಊಟದ ಆದೇಶಕ್ಕೆ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆ ನೀಡಿದ್ದು ``ಕಾನೂನಿನ ಮುಂದೆ ಎಲ್ಲರೂ ಸಮಾನರು, ಯಾರೂ ಕಾನೂನಿಗಿಂತ ದೊಡ್ಡವರಲ್ಲ" ಎಂದು ಆದೇಶ ನೀಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ, ನಾಗರಾಜು ಮತ್ತು ಲಕ್ಷ್ಮಣ್ ಅವರಿಗೆ ವಾರಕ್ಕೊಮ್ಮೆ ಮನೆ ಊಟ ಒದಗಿಸುವಂತೆ 57ನೇ ಸಿಸಿಎಚ್ ನ್ಯಾಯಾಲಯ ಈ ಹಿಂದೆ ಆದೇಶ ನೀಡಿತ್ತು. ಜೈಲೂಟದಿಂದ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ ಎಂಬ ಆರೋಪಿಗಳ ವಾದವನ್ನು ಪುರಸ್ಕರಿಸಿ ಈ ಸೌಲಭ್ಯ ನೀಡಲಾಗಿತ್ತು. ಆದರೆ, ವಿಚಾರಣಾ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಜೈಲು ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದವು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಜೈಲಿನಲ್ಲಿರುವ ಆರೋಪಿಗಳಿಗೆ ಇಂತಹ ವಿಶೇಷ ಸವಲತ್ತು ನೀಡುವುದು ಜೈಲು ನಿಯಮಗಳಿಗೆ ವಿರುದ್ಧವಾದುದು ಎಂದು ಅಭಿಪ್ರಾಯಪಟ್ಟಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಯಾವುದೇ ಕೈದಿಗೆ ಅನಗತ್ಯ ವಿಶೇಷ ಸೌಲಭ್ಯಗಳನ್ನು ನೀಡುವಂತಿಲ್ಲ. ಒಂದು ವೇಳೆ ಒಬ್ಬ ಆರೋಪಿಗೆ ಮನೆ ಊಟಕ್ಕೆ ಅವಕಾಶ ನೀಡಿದರೆ, ಜೈಲಿನಲ್ಲಿರುವ ಇತರ ಸಾವಿರಾರು ಕೈದಿಗಳು ಕೂಡ ಇದೇ ಬೇಡಿಕೆ ಇಡಬಹುದು, ಇದರಿಂದ ಜೈಲಿನ ಶಿಸ್ತು ಮತ್ತು ಭದ್ರತೆಗೆ ಧಕ್ಕೆ ಉಂಟಾಗುತ್ತದೆ ಎಂಬ ಸರ್ಕಾರದ ವಾದವನ್ನು ನ್ಯಾಯಾಲಯ ಎತ್ತಿಹಿಡಿದಿದೆ.
ಪ್ರಸ್ತುತ ಜೈಲಿನಲ್ಲಿ ಎಫ್‌ಎಸ್‌ಎಸ್‌ಎಐ ಮಾನದಂಡದಂತೆ ಉತ್ತಮ ಗುಣಮಟ್ಟದ ಆಹಾರ ನೀಡಲಾಗುತ್ತಿದ್ದು, ವೈದ್ಯಕೀಯ ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಮನೆ ಊಟದ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಹೈಕೋರ್ಟ್‌ನ ಈ ಆದೇಶದಿಂದಾಗಿ ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳಿಗೆ ಈಗ ಮತ್ತೆ ಜೈಲೂಟವೇ ಗತಿಯಾಗಿದೆ.

