ʼಪಾರುಪಾರ್ವತಿʼಯ ನಾಲ್ಕನೇ ಪಾತ್ರ ಇಸುಜು:  ಈ ಕಾರಿನಲ್ಲಿ ಲಕ್ಷ ಕಿಲೋಮೀಟರ್ ʼನಾಗಿಣಿʼ ಯಾನ
x

ʼಪಾರುಪಾರ್ವತಿʼಯ ನಾಲ್ಕನೇ ಪಾತ್ರ ಇಸುಜು: ಈ ಕಾರಿನಲ್ಲಿ ಲಕ್ಷ ಕಿಲೋಮೀಟರ್ ʼನಾಗಿಣಿʼ ಯಾನ

ಚಿತ್ರದ ಒಂದು ಪ್ರಮುಖ ಭಾಗವಾಗಿರುವ ಈ ಕಾರನ್ನು ಬಳಸಿಕೊಳ್ಳುವುದಕ್ಕೆ ಚಿತ್ರತಂಡ ಯೋಚಿಸಿದೆ. ಈ ಕಾರು ರಾಜ್ಯಾದ್ಯಾಂತ ಸಾವಿರಾರು ಕಿಲೋಮೀಟರ್ ಸುತ್ತಿ, ಚಿತ್ರದ ಕುರಿತು ಪ್ರಚಾರ ಮಾಡಲಿದೆ.


‘ನಾಗಿಣಿ’ ಮತ್ತು ‘ಬಿಗ್‍ ಬಾಸ್‍’ ಖ್ಯಾತಿಯ ದೀಪಿಕಾ ದಾಸ್‍, ಇದೀಗ ‘#ಪಾರುಪಾರ್ವತಿ’ ಎಂಬ ಹೊಸ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಜನವರಿ 31ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ವಿಶೇಷತೆಯೆಂದರೆ ಇಸುಜು ಕಾರು (Isuzu Car).

ಚಿತ್ರದ ಒಂದು ಪ್ರಮುಖ ಭಾಗವಾಗಿರುವ ಈ ಕಾರನ್ನು ಪ್ರಚಾರಕ್ಕೆ ಬಳಸಿಕೊಳ್ಳುವುದಕ್ಕೆ ಚಿತ್ರತಂಡ ಯೋಚಿಸಿದ್ದು, ಅದರಂತೆ ಈ ಕಾರು ರಾಜ್ಯಾದ್ಯಾಂತ ಸಾವಿರಾರು ಕಿಲೋಮೀಟರ್ ಸುತ್ತಿ, ಚಿತ್ರದ ಕುರಿತು ಪ್ರಚಾರ ಮಾಡಲಿದೆ.

ಕನ್ನಡದಲ್ಲಿ ಇದುವರೆಗೂ ಹಲವು ಟ್ರಾವಲ್‍ ಚಿತ್ರಗಳು ಬಂದಿವೆ. ಈ ಸಾಲಿಗೆ ಇದೀಗ ‘#ಪಾರುಪಾರ್ವತಿ’ ಎಂಬ ಹೊಸ ಚಿತ್ರ ಸೇರ್ಪಡೆಯಾಗಿದ್ದು, ಈ ಚಿತ್ರದಲ್ಲಿ ‘ಬಿಗ್‍ ಬಾಸ್‍’ ಖ್ಯಾತಿಯ ದೀಪಿಕಾ ದಾಸ್‍ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಪಾಯಲ್‍ ಎಂಬ ವ್ಲಾಗರ್ ಆಗಿ ಕಾಣಿಸಿಕೊಂಡಿದ್ದಾರೆ.


EIGHTEEN THIRTY SIX ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ. ಪ್ರೇಮನಾಥ್ ನಿರ್ಮಿಸಿ, ರೋಹಿತ್‍ ಕೀರ್ತಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ‘#ಪಾರುಪಾರ್ವತಿ’ಯ ವಿಶೇಷವೆಂದರೆ, ಈ ಚಿತ್ರಕ್ಕಾಗಿ ಎಂಟು ರಾಜ್ಯಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಬೆಂಗಳೂರಿನಲ್ಲಿ ಪ್ರಾರಂಭವಾಗುವ ಕಥೆ, ಉತ್ತರಾಖಾಂಡದಲ್ಲಿ ಮುಗಿಯಲಿದೆ. ಚಿತ್ರದ ಕಥೆಯಲ್ಲಿ ಮೂರು ಪ್ರಮುಖ ಪಾತ್ರಧಾರಿಗಳಿದ್ದು, ನಾಲ್ಕನೇ ಪಾತ್ರಧಾರಿಯಾಗಿ ಇಸುಜು ಕಾರೊಂದು ಕಾಣಿಸಿಕೊಂಡಿದೆ.

ಈ ಕಾರಿನಲ್ಲೇ ಸುಮಾರು ಒಂದು ಲಕ್ಷ ಕಿಲೋಮೀಟರ್ ಪ್ರಯಾಣ ಮಾಡಲಾಗಿದೆ. 20 ಲಕ್ಷ ಬೆಲೆ ಮೌಲ್ಯದ ಈ ಕಾರಿಗೆ, ಇನ್ನೂ 10 ಲಕ್ಷ ಹೆಚ್ಚು ಖರ್ಚು ಮಾಡಿ ರೆಡಿ ಮಾಡಲಾಗಿದೆ. ಇದರಲ್ಲೇ ಬೆಂಗಳೂರಿನಿಂದ ಉತ್ತರಖಾಂಡದವರೆಗೂ ಒಂದು ಲಕ್ಷ ಕಿಲೋಮೀಟರ್‍ ಪ್ರಯಾಣ ಮಾಡಲಾಗಿದೆ.

‘#ಪಾರುಪಾರ್ವತಿ’ ಒಂದು ಟ್ರಾವೆಲ್ ಅಡ್ವೆಂಚರ್ ಡ್ರಾಮ ಎಂದು ಹೇಳುವ ನಿರ್ದೇಶಕ ರೋಹಿತ್ ಕೀರ್ತಿ, ‘ನಮ್ಮ‌ ಚಿತ್ರ ಮೂರು ಪ್ರಮುಖ ಪಾತ್ರಗಳ ಜೊತೆಗೆ ಸಾಗುತ್ತದೆ.‌ ದೀಪಿಕಾ ದಾಸ್, ಪೂನಂ ಸರ್ನಾಯಕ್‌ ಹಾಗೂ ಫವಾಜ್ ಆಶ್ರಫ್ ಮೂರು ಪ್ರಮುಖ ಪಾತ್ರಧಾರಿಗಳು. ಇವರೊಟ್ಟಿಗೆ ಮತ್ತೊಂದು ‌ಪ್ರಮುಖ ಪಾತ್ರಧಾರಿ ಎಂದರೆ ಅದು ಕಾರು. ಟ್ರಾವೆಲ್ ಕಥಾಹಂದರ ಹೊಂದಿರುವ ಚಿತ್ರವಾಗಿರುವುದರಿಂದ ಕಾರು ಸಹ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.


ಈ ಚಿತ್ರದಲ್ಲಿ ಮೂರು ಕಥೆಗಳಿವ. ಮೂವರು ಪಾತ್ರಧಾರಿಗಳಿಗೂ ಒಂದೊಂದು ಕಥೆ ಇರುತ್ತದೆ. ಅವರೆಲ್ಲರೂ ಕಾರಣಾಂತರಗಳಿಂದ ಒಟ್ಟಿಗೆ ಸೇರುತ್ತಾರೆ. ಆ ನಂತರ ಏನೆಲ್ಲಾ ನಡೆಯುತ್ತದೆ ಎಂಬುದೇ ಚಿತ್ರದ ಕಥೆ. ಸಾಮಾನ್ಯವಾಗಿ ಹೀಗೆ ಪ್ರಯಾಣ ಮಾಡುವವರಿಗೆ ಒಂದು ಉದ್ದೇಶವಿರುವುದಿಲ್ಲ. ಸುಮ್ಮನೆ ಜಾಗ ನೋಡಲು ಅಥವಾ ಬೇರೆ ಯಾವುದೋ ಕಾರಣಕ್ಕೆ ಪ್ರಯಾಣ ಮಾಡುತ್ತಾರೆ. ಇಲ್ಲಿ ಒಂದು ಪಾತ್ರಕ್ಕೆ ಉದ್ದೇಶವಿರುತ್ತದೆ. ಆ ಪಾತ್ರ ಹೇಗೆ ತನ್ನ ಉದ್ದೇಶವನ್ನು ಈಡೇರಿಸಿಕೊಳ‍್ಳುತ್ತದೆ ಎನ್ನುವುದೇ ಚಿತ್ರದ ಕಥೆ’ ಎನ್ನುತ್ತಾರೆ.

ಈ ಚಿತ್ರಕ್ಕಾಗಿ 38 ಜನರ ಒಂದು ತಂಡ ಓಡಾಡಿ ಚಿತ್ರೀಕರಣ ಮಾಡಿದೆಯಂತೆ. ‘ಎಂಟು ರಾಜ್ಯಗಳಲ್ಲಿ ಚಿತ್ರೀಕಣ ಮಾಡಲಾಗಿದೆ. ಮೊದಲು ನೇರವಾಗಿ ಕಾರು ತೆಗೆದುಕೊಂಡು ಹೋಗಿ, ಅಲ್ಲಲ್ಲಿ ನಿಲ್ಲಿಸಿ ಚಿತ್ರೀಕರಣ ಮಾಡಿದೆವು. ಆದರೆ, ಅದು ಯಾಕೋ ಸರಿ ಹೋಗಲಿಲ್ಲ. ಕೊನೆಗೆ ಸ್ವಲ್ಪ ದಿನಗಳ ಕಾಲ ಚಿತ್ರೀಕರಣ ನಿಲ್ಲಿಸಿ, ಒಂದಿಷ್ಟು ಅಪರೂಪದ ಲೊಕೇಶನ್‍ಗಳನ್ನು ನೋಡಿಕೊಂಡು ಬಂದು ಅಲ್ಲೇ ಚಿತ್ರೀಕರಣ ಮಾಡಿದ್ದೇವೆ. ಗೋವಾ ಬಿಟ್ಟರೆ, ಮಿಕ್ಕಂತೆ ಬೇರೆ ರಾಜ್ಯಗಳ ಒಂದಿಷ್ಟು ಅಪರೂಪದ ಲೊಕೇಶನ್‍ಗಳನ್ನು ನೋಡಬಹುದು. ಗೋವಾದಲ್ಲಿ ಈಗಾಗಲೇ ಹಲವು ಕನ್ನಡ ಚಿತ್ರಗಳ ಚಿತ್ರೀಕರಣವಾಗಿರುವುದರಿಂದ ಮತ್ತು ಅಲ್ಲಿನ ಬೀಚ್‍ ಮತ್ತು ಇತರೆ ಪ್ರಮುಖ ಲೊಕೇಶನ್‍ಗಳನ್ನು ಈಗಾಗಲೇ ತೋರಿಸಿರುವುದರಿಂದ ವಿಶೇಷ ಎಂದನಿಸದಿರಬಹುದು. ಮಿಕ್ಕಂತೆ ಮಥುರಾ, ಉತ್ತರಖಾಂಡ ಮುಂತಾದ ಸುಂದರ ತಾಣಗಳನ್ನು ಈ ಚಿತ್ರದಲ್ಲಿ ನೋಡಬಹುದು’ ಎನ್ನುತ್ತಾರೆ ರಾಜ್‍ ಕೀರ್ತಿ.

ಈ ಚಿತ್ರದ ಪ್ರಚಾರಕ್ಕಾಗಿ ಥಾರ್ (Thar) ಬೆಂಗಳೂರು ತಂಡದ ಸದಸ್ಯರ ಜೊತೆಗೆ ಸೇರಿ ಚಿತ್ರತಂಡದವರು ಕನಕಪುರದ ಬಳಿ ಇರುವ ಬೆಟ್ಟವೊಂದರ ಮೇಲೆ 40 ಅಡಿ ಎತ್ತರದ ಬೃಹತ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಈ ಚಿತ್ರದಲ್ಲಿ ಬರೀ ಪ್ರವಾಸ ಮಾತ್ರ ಇಲ್ಲ ಎನ್ನುವ ದೀಪಿಕಾ, ‘ಪ್ರೇಕ್ಷಕರು ಕುಟುಂಬ ಸಮೇತ ನೋಡಬಹುದಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಇಲ್ಲೊಂದು ಒಳ್ಳೆಯ ಸಂದೇಶವಿದೆ. ಬರೀ ದುಡ್ಡಿದ್ದರೆ ದೇಶ ಸುತ್ತುವುದಕ್ಕೆ ಆಗುವುದಿಲ್ಲ. ಅದಕ್ಕೊಂದು ಧ್ಯೇಯ ಮುಖ್ಯ. ಧ್ಯೇಯವಿದ್ದರೆ ದುಡ್ಡಿಲ್ಲದಿದ್ದರೂ ಪ್ರಯಾಣ ಮಾಡಬಹುದು. ಇಲ್ಲಿ ನಾನೊಬ್ಬ ಟ್ರಾವಲರ್‍ ಮಾತ್ರವಲ್ಲ, ಒಬ್ಬ ಗಟ್ಟಿ ಮಹಿಳೆಯ ಪಾತ್ರವನ್ನು ನಿರ್ವಹಿಸಿದ್ದೇನೆ. ಇನ್ನು ಕಾರಿನ ಜೊತೆಗೆ ಕರ್ನಾಟಕದಿಂದ ಉತ್ತರ ಖಂಡದವರೆಗೂ ಎಂಟು ರಾಜ್ಯಗಳನ್ನು ಸಂಚರಿಸಿದ ಅನುಭವ ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಕಾರಿನೊಂದಿಗೆ ಅವಿನಾಭಾವ ಸಂಬಂಧವಿದೆ. ಎರಡೂವರೆ ವರ್ಷಗಳ ಕಾಲ ಅದರಲ್ಲಿ ಸುತ್ತಾಡಿದ್ದೇನೆ. ಹಾಗಾಗಿ, ಈ ಕಾರನ್ನು ನನಗೆ ಕೊಡಿ ಎಂದು ನಿರ್ಮಾಪಕರಿಗೆ ಕೇಳುತ್ತಿದ್ದೇನೆ’ ಎನ್ನುತ್ತಾರೆ.

ನಿರ್ಮಾಪಕರು ಈ ಕಾರನ್ನು ಮುಂದೆ ಏನು ಮಾಡಬೇಕು ಎಂದು ಯೋಚಿಸಿದ್ದಾರೋ ಗೊತ್ತಿಲ್ಲ. ಸದ್ಯಕ್ಕೆ ಅದನ್ನು ಶ್ರೀಕಾಂತ್‍ ಎಂಬ ಬ್ಲಾಗರ್‌ಗೆ ಕೊಟ್ಟಿದ್ದಾರೆ. ಅವರು ಈ ಕಾರನ್ನು ಕರ್ನಾಟಕದ ಮೂಲೆಮೂಲೆಗೆ ತೆಗೆದುಕೊಂಡು ಹೋಗಿ, ಚಿತ್ರದ ಕುರಿತು ಪ್ರಚಾರ ಮಾಡಲಿದ್ದಾರಂತೆ. ಜನವರಿ 31ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಲಿದ್ದಾರಂತೆ. ಚಿತ್ರದ ಕುರಿತು ಬೇರೆ ಚಿತ್ರಗಳಲ್ಲಿ ಜನರಿಗೆ ಮನವರಿಕೆ ಮಾಡಿಕೊಡಲಿದ್ದಾರಂತೆ. ಈ ಪ್ರಚಾರಕ್ಕೆ ಇತ್ತೀಚೆಗೆ ಚಾಲನೆ ನೀಡಲಾಗಿದ್ದು, ಶ್ರೀಕಾಂತ್‍ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

Read More
Next Story