ತಾರಾ ಚಿತ್ರಗಳು ತೆರೆಗೆ ಬರಲು ಓಟಿಟಿ, ಟಿವಿ  ʻದೊರೆʼಗಳ ಅಪ್ಪಣೆಯೇ?
x

ತಾರಾ ಚಿತ್ರಗಳು ತೆರೆಗೆ ಬರಲು ಓಟಿಟಿ, ಟಿವಿ ʻದೊರೆʼಗಳ ಅಪ್ಪಣೆಯೇ?


ಕಳೆದ ಈ ಐದು ತಿಂಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ವಾಡಿಕೆಗಿಂತ ಹೆಚ್ಚು ʼಮಳೆಯಾಗಿದೆʼ. ಆದರೆ ಮಳೆಯ ನೀರು ಅಂತರ್ಜಲವಾಗಿ ಪರಿವರ್ತನೆಗೊಂಡು ಕನ್ನಡ ಚಿತ್ರರಂಗಕ್ಕೆ ಅಮೃತ ಸಿಂಚನ ಮಾಡುವಲ್ಲಿ ವಿಫಲವಾಗಿವೆ. ಬಂಗಾರದ ಬೆಳೆ ತೆಗೆಯಲು ಸಾಧ್ಯವಾಗಿಲ್ಲ ಎನ್ನುವ ಕೊರಗನ್ನು ಉಳಿಸಿಬಿಟ್ಟಿವೆ. ಜೊತೆಗೆ ʼದೇಶಾದ್ಯಂತʼ (Pan Indian) ಚಿತ್ರದ ಈ ಯುಗದಲ್ಲಿ ʻಅತ್ಯಂತʼ ಗುಣಮಟ್ಟದ ಸಿನಿಮಾಗಳನ್ನು ನೀಡಬೇಕು ಎನ್ನುವ ಕಾರಣಕ್ಕಾಗಿ ಕೆಲವು ಚಿತ್ರಗಳ ಬಿಡುಗಡೆ ತಡವಾಗುತ್ತಿದೆ ಎಂದು ಚಿತ್ರೋದ್ಯಮದ ಮೂಲಗಳು ಹೇಳುತ್ತವೆ. ಆದರೆ “ಗುಣಮಟ್ಟದ” ಎಂಬ ವ್ಯಾಖ್ಯಾನದ ವ್ಯಾಪ್ತಿ ವಿಸ್ತಾರ ಮಾತ್ರ ಯಾರಿಗೂ ಅರ್ಥವಾಗುತ್ತಿಲ್ಲ

ಈ ವರ್ಷದ ಕಳೆದ ನೂರೈವತ್ತೂ ಪ್ಲಸ್‌ ದಿನಗಳಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ; ಹೀಗೆಂದು ಹೇಳಬಹುದು. “ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ”. ಈ ವರ್ಷ ಐದು ತಿಂಗಳು ಮುಗಿಯುವ ವೇಳೆಗೆ 104 ಚಿತ್ರಗಳು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದು, ʻಎಂಥಾ ಕಥೆ ಮಾರಾಯʼ ಎನ್ನುವ ಚಿತ್ರವೊಂದು ನೇರವಾಗಿ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಇದಲ್ಲದೆ, 5 ತುಳು ಚಿತ್ರಗಳು, ಬಿಡುಗಡೆಯಾಗಿದೆ. (ಬಿಡುಗಡೆಯಾದ ಚಿತ್ರಗಳನ್ನು ಚಿತ್ರೋದ್ಯಮ ಲೆಕ್ಕಕ್ಕೆ ತೆಗೆದುಕೊಳ್ಳುವಾಗ ತುಳು ಚಿತ್ರಗಳನ್ನು ಏಕೆ ಲೆಕ್ಕಕ್ಕೆ ತೆಗೆದುಕೊಳ್ಳವುದಿಲ್ಲ? ಎಂಬ ಪ್ರಶ್ನೆ ತುಳು ಚಿತ್ರೋದ್ಯಮದ್ದು. ಕರ್ನಾಟಕ ಚಿತ್ರರಂಗ ಎಂದು ಇಡಿಯಾಗಿ ನೋಡಿದಾಗ ತುಳು ಚಿತ್ರವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬಹುದು ಎಂಬುದು ಚಿತ್ರರಂಗದ ವಾದ). ಕಳೆದ ವರ್ಷ ಬಿಡುಗಡೆಯಾದ ಚಿತ್ರಗಳು ನೂರರ ಗಡಿ ದಾಟಲು ಸರಿಯಾಗಿ ಅರ್ಧ ವರ್ಷ ಕಾಯಬೇಕಾಯಿತು.

ಇದುವರೆಗೆ ಬಿಡುಗಡೆಯಾಗಿರುವ ಈ 104 ಚಿತ್ರಗಳಲ್ಲಿ ಗೆದ್ದಿದ್ದೆಷ್ಟು? ಸೋತಿದ್ದೆಷ್ಟು? ಹಾಕಿದ ಬಂಡವಾಳವನ್ನು ಹಿಂದಿರುಗಿಸಿದ ಚಿತ್ರಗಳೆಷ್ಟ? ಹುಡುಕುತ್ತಾ ಹೋದರೆ, ಮರುಭೂಮಿಯಲ್ಲಿ ನೀರು ಹುಡುಕಿಕೊಂಡು ಅಲೆದಾಡಿದಂತಾಗುತ್ತದೆ. ಈ ಚಿತ್ರಗಳ ಮೇಲೆ ಹೂಡಿದ ಬಂಡವಾಳವನ್ನು ಲೆಕ್ಕಹಾಕಿ ನೊಡೋಣ! ಒಂದು ಚಿತ್ರಕ್ಕೆ ಸರಾಸರಿ 2.5 ಕೋಟಿಯಿಂದ ಆರಂಭವಾಗಿ ಮೂರೂವರೆ ಕೋಟಿ ರೂಪಾಯಿವರೆಗೆ ಬಂಡವಾಳ ಹಾಕಿರುವ ಲಕ್ಷಣಗಳು ಕಾಣುತ್ತವೆ. ಕೆಲವು ಚಿತ್ರಗಳು ಮಾತ್ರ 5 ಕೋಟಿಯ ಗಡಿ ದಾಟಿವೆ. ಹಾಗಾಗಿ 105 ಕನ್ನಡ ಚಿತ್ರಗಳ ಮೇಲೆ ಹೂಡಿರುವ ಬಂಡವಾಳದ ಮೊತ್ತ ಸುಮಾರು 250 ಕೋಟಿ ರೂಪಾಯಿಗಳು ಎಂದು ಸಿನಿಮಾ ಪಂಡಿತರ ಲೆಕ್ಕಾಚಾರ. ಈ ನಡುವೆ ಚಿತ್ರಮಂದಿರಗಳು ಒಂದೆರಡು ಕಾಸು ನೋಡುವಂತಾದದ್ದು ಚಿಕ್ಕಣ್ಣ ಅಭಿನಯಿಸಿದ ʻಉಪಾಧ್ಯಕ್ಷʼ, ದೀಕ್ಷಿತ್‌ ಶೆಟ್ಟಿ ಅಭಿನಯದ ʻಬ್ಲಿಂಕ್‌ʼ ಮಾತ್ರ. ʻಯುವʼ, ʻಅವತಾರ ಪುರುಷʼ, ʻಕೆಟಿಎಂʼ, ʻಒಂದು ಸರಳ ಪ್ರೇಮ ಕಥೆʼ ಚಿತ್ರಗಳು ಓಟಿಟಿಯಲ್ಲಿ ಬಿಡುಗಡೆಯಾಗಿ ನಿಟ್ಟುಸಿರು ಬಿಟ್ಟಿವೆ. ಆದರೆ ಒಂದು ಅಂದಾಜಿನ ಪ್ರಕಾರ ಹಿಂದಕ್ಕೆ ಬಂದಿರುವ ಹಣ ಕೇವಲ 50 ಕೋಟಿ ಮಾತ್ರ. ಉಳಿದ 200 ಕೋಟಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ನಿರ್ಮಾಪಕರೊಬ್ಬರು ಹೇಳುತ್ತಾರೆ.

ತಾರಾ ಚಿತ್ರಗಳು ತೆರೆ ಕಾಣಲಿಲ್ಲ

ಮಾರ್ಚಿ ತಿಂಗಳ ಮೊದಲ ವಾರ ಶಿವರಾಜ್‌ ಕುಮಾರ್‌ ಮತ್ತು ಪ್ರಭುದೇವ ಅಭಿನಯದ ʻಕರಟಕ-ದಮನಕʼ ಚಿತ್ರವನ್ನು ಹೊರತು ಪಡಿಸಿದರೆ, ಈ ಐದು ತಿಂಗಳಲ್ಲಿ ಯಾವುದೇ ತಾರಾ ನಟರ ಚಿತ್ರ ಬಿಡುಗಡೆಯಾಗಿಲ್ಲ ಎನ್ನುವ ನೋವು ಪ್ರದರ್ಶಕರನ್ನು, ನಿರ್ಮಾಪಕರನ್ನು ಕಾಡುತ್ತಿದೆ. ಸದ್ಯಕ್ಕಂತೂ ಯಾವುದೇ ತಾರಾ ನಟರ ಚಿತ್ರ ಬಿಡುಗಡೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ರವಿಚಂದ್ರನ್‌ ಅವರ ʼಜಡ್ಜ್‌ಮೆಂಟ್‌ʼ ಚಿತ್ರ ಬಿಡುಗಡೆಯಾಗಿದ್ದರೂ, ಅದನ್ನು ʻತಾರಾನಟʼ ರ ಚಿತ್ರ ಎಂದು ಕರೆಯಲು ಯಾರೂ ಸಿದ್ಧರಿಲ್ಲ ಎನ್ನುವುದು ರವಿಚಂದ್ರನ್‌ ಅವರಿಗೆ ಅಸಮಾಧಾನವಾಗಿದ್ದರೆ, ಅವರ ಕೋಪ ಮತ್ತು ಅಸಮಾಧಾನಕ್ಕೆ ಸೂಕ್ತ ಅರ್ಥವೂ ಇದೆ. ಈಗಿನ ತಾರಾನಟರು ಬರುವ ಮುನ್ನವೇ ರವಿಚಂದ್ರನ್‌ ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು, ಹೊಸ ವಿನ್ಯಾಸ ತೋರಿಸಿ, ಹೊಸ ಅಲೆಯನ್ನು ಸೃಷ್ಟಿಸಿದ ತಾರಾ ನಟ. ಸ್ವತಂತ್ರ ದಿನಾಚರಣೆಯ ದಿನ ಅಂದರೆ ಆಗಸ್ಟ್‌ ೧೫ ಕ್ಕೆ ಮತ್ತೆ ಶಿವರಾಜ್‌ ಕುಮಾರ್‌ ಅವರ ʻಭೈರತಿ ರಣಗಲ್‌ʼ ಚಿತ್ರ ಬಿಡುಗಡೆ ಮಾಡುವ ಇಚ್ಛಾ ಶಕ್ತಿ ಆ ಚಿತ್ರದ ನಿರ್ಮಾಪರದು. ಅಲ್ಲಿಗೆ ರಾಜ್ಯದ ಚಿತ್ರಮಂದಿರಗಳು ಸಂಕ್ರಾಂತಿ, ಯುಗಾದಿ ಕಳೆದರೂ, ತಾರಾ ಚಿತ್ರಗಳಿಲ್ಲದೆ ಅರ್ಧ ವರ್ಷ ಪೂರೈಸಿದಂತಾಗುತ್ತದೆ.

ತೆರೆಗೆ ಬರಲಪ್ಪಣೆ ಇಲ್ಲವೇ ದೊರೆಯೇ?

ಈ ಐದು ತಿಂಗಳಲ್ಲಿ ಕೆಲ ಸದಭಿರುಚಿಯ ಚಿತ್ರಗಳು ಬಿಡುಗಡೆಗೊಂಡಿದ್ದರೂ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲಿಲ್ಲ. “ಹಾಗಾಗಿ ಕನ್ನಡ ಚಿತ್ರರಂಗಕ್ಕೆ ನಿಜವಾಗಿ ಸಂಕ್ರಾಂತಿ, ಯುಗಾದಿ ಹಬ್ಬವಾಗಬೇಕೆಂದರೆ ಒಂದೆರಡಾದರೂ ತಾರಾ ಚಿತ್ರಗಳು ಬಿಡುಗಡೆಯಾಗಬೇಕು” ಎನ್ನುತ್ತಾರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಎಂ. ಎನ್. ‌ ಸುರೇಶ್. ‌ ಆದರೆ ವಿಷಾದದ ಸಂಗತಿಯೆಂದರೆ, ತಾರಾ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ಎಲ್ಲ ತಂಡಗಳು ಚಿತ್ರ ಬಿಡುಗಡೆ ಮಾಡದಿರಲು ತಮ್ಮದೇ ಕಾರಣಗಳನ್ನು ಮುಂದುಮಾಡುತ್ತಿವೆ. ಕೆಲವು ತಾರಾ ಚಿತ್ರಗಳು ಓಟಿಟಿ ಮತ್ತು ಸ್ಯಾಟಲೈಟ್‌ ಹಕ್ಕುಗಳು ಮಾರಾಟವಾಗದ ಕಾರಣ, ತೆರೆಗೆ ಬರಲು ʼಅವರಪ್ಪಣೆʼಗೆ ಕಾಯುತ್ತಿವೆ. ಜೊತೆಗೆ ʼದೇಶಾದ್ಯಂತʼ (Pan Indian) ಚಿತ್ರದ ಈ ಯುಗದಲ್ಲಿ ʻಅತ್ಯಂತʼ ಗುಣಮಟ್ಟದ ಸಿನಿಮಾಗಳನ್ನು ನೀಡಬೇಕು ಎನ್ನುವ ಕಾರಣಕ್ಕಾಗಿ ಇನ್ನೂ ಕೆಲವು ಚಿತ್ರಗಳ ಬಿಡುಗಡೆ ತಡವಾಗುತ್ತಿದೆ ಎಂದು ಚಿತ್ರೋದ್ಯಮದ ಮೂಲಗಳು ಹೇಳುತ್ತವೆ. ಆದರೆ “ಗುಣಮಟ್ಟದ” ಎಂಬ ವ್ಯಾಖ್ಯಾನದ ವ್ಯಾಪ್ತಿ ವಿಸ್ತಾರ ಮಾತ್ರ ಯಾರಿಗೂ ಅರ್ಥವಾಗುತ್ತಿಲ್ಲ.

ಕಣ್ಣು ಮಿಟುಕಿಸಿ ಅಚ್ಚರಿಗೊಳಿಸಿದ ʻಬ್ಲಿಂಕ್‌ʼ

ಈ ನಡುವೆಯೂ ಕನ್ನಡದ ʻಬ್ಲಿಂಕ್‌ʼ ಚಿತ್ರ ತನ್ನ ಆರ್ಥಿಕ ಮತ್ತು ಕಲಾತ್ಮಕ ಲಾಭ-ನಷ್ಟಗಳ ಲೆಕ್ಕಾಚಾರದ ಕಾರಣದಿಂದ ಸದ್ದು ಹಾಗೂ ಸುದ್ದಿ ಮಾಡಿತು. ಚಿತ್ರಮಂದಿರದಲ್ಲಿ ಐವತ್ತು ದಿನಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತು. ಈಗ ಓಟಿಟಿ ವೇದಿಕೆಯಲ್ಲಿಯೂ ಪ್ರೇಕ್ಷಕರ ಮೆಚ್ಚಿಗೆಗಳಿಸಿ, ಸಿನಿಮಾ ಪಂಡಿತರು ಈ ಯಶಸ್ಸಿನ ಕಾರಣ ಹುಡುಕುವಂತೆ ಮಾಡಿದೆ.

“ತಾರಾ ಚಿತ್ರಗಳಿಲ್ಲದೆ ರಾಜ್ಯದ ಕೆಲವು ಚಿತ್ರಮಂದಿರಗಳು ಮುಚ್ಚುವ ಸ್ಥಿತಿಯಲ್ಲಿವೆ. ಅಂದಾಜು ನೂತೈವತ್ತು ಚಿತ್ರಮಂದಿರಗಳು ಈಗಾಗಲೇ ಮುಚ್ಚಿವೆ. ಈ ಚಿತ್ರಕ ಬೆಳವಣಿಗೆಯಿಂದಾಗಿ ಪ್ರದರ್ಶಕರು ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎರಡು ತಿಂಗಳಿಗೊಂದು ತಾರಾ ಚಿತ್ರಗಳು ತೆರೆಗೆ ಬಂದರೆ ಚಿತ್ರಮಂದಿರಗಳು ಜೀವಂತವಾಗಿರಲು ಸಾಧ್ಯ”, ಎನ್ನುತ್ತಾರೆ, ವೀರೇಶ್‌ ಚಿತ್ರಮಂದಿರದ ಮಾಲೀಕರಾದ ಕೆ. ವಿ. ಚಂದ್ರಶೇಖರ್. ‌

ಒಂದಾನೊಂದು ಕಾಲದಾಗ…

ʻಬ್ಲಿಂಕ್‌ʼ ಚಿತ್ರದ ಯಶಸ್ಸಿನ ಕಾರಣ ಕೇಳಿದರೆ, ಆ ಚಿತ್ರದ ನಿರ್ಮಾಪಕ ರವೀಂದ್ರ ಹೇಳುವುದು ಅರ್ಥಪೂರ್ಣ ಎನ್ನಿಸುತ್ತದೆ. ಅವರ ಮಾತುಗಳನ್ನು ಕೇಳಿಸಿಕೊಳ್ಳಿ; “ಸಿನಿಮಾದ ಬಗ್ಗೆ ತಿಳುವಳಿಕೆ ಇಲ್ಲದವರೇ ಇಂದು ಚಿತ್ರರಂಗದಲ್ಲಿ ಹೆಚ್ಚಿದ್ದಾರೆ. ಯಾರೂ ಸಿನಿಮಾ ನಿರ್ಮಾಣ, ಮಾರುಕಟ್ಟೆ, ತಲುಪಿಸುವ ರೀತಿ (ಪ್ರಚಾರ ಎಂದು ಹೇಳಬಹುದು) ಬಗ್ಗೆ ಹೆಚ್ಚಾಗಿ ತಿಳಿದುಕೊಂಡಂತೆ ಕಾಣುತ್ತಿಲ್ಲ. ನಿರ್ದೇಶಕರು ನಿರ್ಮಾಪಕರನ್ನು ಹುಡುಕಿಕೊಂಡು ಹೋಗುವ ಪರಿಪಾಠ ನಿಂತು, ನಿರ್ಮಾಪಕ ನಿರ್ದೇಶಕರನ್ನು ಹುಡುಕಿಕೊಂಡು ಹೋಗಬೇಕು, ನಿರ್ದೇಶಕ ಕಥೆಯ ಪಾತ್ರಕ್ಕೆ ಅಗತ್ಯವಾ ಕಲಾವಿದರನ್ನು, ತಂತ್ರಜ್ಞರನ್ನು ಹುಡುಕಿಕೊಂಡು ಹೋಗಬೇಕು. ಆದರೆ ಚಿತ್ರರಂಗದಲ್ಲಿ ಎಲ್ಲ ʼಉಲ್ಟಾಪಲ್ಟಾʼ. ಕನ್ನಡ ಚಿತ್ರರಂಗದ ಇಂದಿನ ಸ್ಥಿತಿಗೆ ಇದೇ ಕಾರಣ”. ಅಂದರೆ, ಒಂದು ಕಾಲದಲ್ಲಿ ನಿರ್ಮಾಪಕರು, ಸಿದ್ದಲಿಂಗಯ್ಯ, ಪುಟ್ಟಣ್ಣ ಕಣಗಾಲ್‌, ಎಂ. ಆರ್. ‌ ವಿಠಲ್‌, ಎನ್. ‌ ಲಕ್ಷ್ಮೀನಾರಾಯಣ್‌ರಂಥವರನ್ನು ಹುಡುಕಿಕೊಂಡು ಹೋಗಿ ಚಿತ್ರಮಾಡಿಕೊಡಿ ಎಂದು ಕೇಳುತ್ತಿದ್ದರು. ಹಾಗಾಗೇ ಕನ್ನಡ ಚಿತ್ರರಂಗದತ್ತ ಭಾರತದ ಚಿತ್ರರಂಗ ತಿರುಗಿ ನೋಡುತ್ತಿತ್ತು. ಹೌದು, ಒಂದಾನೊಂದು ಕಾಲದಾಗ... ಏಸೊಂದು ಮುದವಿತ್ತ, ಮುದಕೊಂದು ಹದವಿತ್ತ…” ಎಂಬ ಚಲನಚಿತ್ರ ಗೀತೆ ನೆನಪಾದರೂ ಅಚ್ಚರಿಯಿಲ್ಲ. ಬ್ಲಿಂಕ್‌ ಚಿತ್ರದ ಕಥೆಯಲ್ಲಿ ಕಾಲ ಹಿಂದಕ್ಕೆ ಸರಿದಂತೆ, ಅಂದಿನ ವಾತಾವರಣ ನಿರ್ಮಾಣವಾದರೆ, ಕನ್ನಡ ಚಿತ್ರರಂಗದ ಪುನಶ್ಚೇತನ ಸಾಧ್ಯ ಎನ್ನಬಹುದು. ‌

ಪುನಚ್ಚೇತನ ಚರ್ಚೆಯಲ್ಲಿ ಮುಷ್ಠಿ ಕಾಳಗ

ಮುರುಟುತ್ತಿರುವ ಕನ್ನಡ ಚಿತ್ರರಂಗವನ್ನು ಪುನಶ್ಚೇತನಗೊಳಿಸುವುದು ಹೇಗೆ? ಎಂಬ ಚರ್ಚೆ ಈಗ ದೀರ್ಘವಾಗಿ ನಡೆಯುತ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಗಳನ್ನು ನಡೆಸುತ್ತಿದೆ. ಅದಕ್ಕಾಗಿಯೇ ದೂರದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ತಾಣವಾದ ಗೋವಾದಲ್ಲಿ ಚರ್ಚಿಸಿ, ʼಚಚ್ಚಾಟʼ ಕೂಡ ಘಟಿಸಿ, ಒಬ್ಬಿಬ್ಬರನ್ನು ಘಾಸಿಗೊಳಿಸಿದೆ ಎಂಬುದು ಚರ್ಚೆಯ ಫಲಿತಗಳಲ್ಲೊಂದು.

ಈ ಚರ್ಚೆಯ ಹೂರಣ ಇಷ್ಟೇ, ತಾರಾ ಚಿತ್ರಗಳು ಕಡಿಮೆಯಾಗುತ್ತಿರುವುದೇ ಕನ್ನಡ ಚಿತ್ರರಂಗದ ಇಂದಿನ ಸ್ಥಿತಿಗೆ ಕಾರಣ. ಇದರಿಂದಾಗಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ. “ಅನಿಷ್ಠಕ್ಕೆಲ್ಲ ಶನೀಶ್ವರನೇ ಕಾರಣ” ಎನ್ನುವಂತೆ ಎಲ್ಲ ತಪ್ಪು ತಾಪತ್ರಯಗಳಿಗೆ ತಾರಾ ನಟರನ್ನೇ ಹೊಣೆ ಮಾಡಲಾಗುತ್ತಿದೆ. ತಾರಾ ಚಿತ್ರಗಳು ಚಿತ್ರಮಂದಿರಗಳಲ್ಲಿ ನಿಲ್ಲದಿದ್ದರೂ ಚಿತ್ರಮಂದಿರಗಳು ಉಳಿಯುತ್ತವೆ ಎಂಬುದು, ಸಂದೇಶ್‌ ನಾಗರಾಜ್‌ ಎಂಬ ನಿರ್ಮಾಪಕರ ಸಂಶೋಧನ ವರದಿ ಕಂಡುಕೊಂಡ ಸತ್ಯ. ಎಲ್ಲರ ಬೇಡಿಕೆ ಇಷ್ಟೇ. ತಾರಾ ನಟರು ವರ್ಷಕ್ಕೆ ಕನಿಷ್ಠ ಮೂರು ಚಿತ್ರಗಳನ್ನಾದರೂ ಮಾಡಬೇಕು. ಹಾಗೆಂಬ ಬೇಡಿಕೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಾರಾ ಕಲಾವಿದರ ಮುಂದಿಟ್ಟಿದೆ.

ಹತ್ತು ಸಿನಿಮಾ ಮಾಡಲು ಸಿದ್ಧ: ರವಿಚಂದ್ರನ್

ಚಿತ್ರರಂಗದ ಈ ʻತಿಳುವಳಿಕೆʼಯುಕ್ತ ವಾದವನ್ನು ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರು ಬಾಳೇ ಕಂದು ಕತ್ತರಿಸುವ ಕ್ರಮದಲ್ಲಿಯೇ ಕತ್ತರಿಸಿ ಎಸೆದುಬಿಟ್ಟಿದ್ದಾರೆ. “ನಾನು ನಾಳೆಯಿಂದಲೇ ಹತ್ತು ಸಿನಿಮಾ ಮಾಡಲು ಸಿದ್ಧ. ಆದರೆ ನಿರ್ಮಾಪಕರು ಸಿದ್ಧವಾಗಿದ್ದಾರೆಯೇ? ಎಂದು ಪ್ರಶ್ನಿಸುವ ಅವರು. ಅವರಿಗೆಲ್ಲ, ಯಶ್‌, ದರ್ಶನ್‌, ಸುದೀಪ್‌ ಮತ್ತು ಇನ್ನಿತರ ತಾರಾ ನಟರೇ ಬೇಕು. ತಾರಾ ನಟರೆಂಬ ಅವರ ಕಲ್ಪನೆಯೇ ದೋಷಪೂರ್ಣವಾದುದು. ಯಾರು ಎಷ್ಟು ಸಿನಿಮಾ ಮಾಡಬೇಕೆಂಬುದು ಆಯಾ ಕಲಾವಿದರಿಗೆ ಸಂಬಂಧಿಸಿದ ಸಂಗತಿ. ಹಾಗೆ ಯಾರನ್ನೂ ಕಡ್ಡಾಯ ಪಡಿಸಲು ಸಾಧ್ಯವಿಲ್ಲ. ಸಿನಿಮಾ ಮಾಡೋಕೆ ಕಥೆ ಸಿದ್ಧವಾಗಬೇಕು, ಕಥೆಯೇ ಇಲ್ಲದೆ ಬರೀ ಹಣವಿದ್ದರೆ ಚಿತ್ರವಾಗುವುದಿಲ್ಲ. ಆದರೂ ಅದು ನೆಲೆ ನಿಲ್ಲುವುದಿಲ್ಲ”.

“ರವಿಚಂದ್ರನ್‌ ಮಾತುಗಳು ಅಪ್ಪಟ ನಿಜವಾದರೂ, ಒಟ್ಟಾರೆಯಾಗಿ ಕನ್ನಡ ಚಿತ್ರರಂಗದ ದೃಷ್ಟಿಯಿಂದ ತಾರಾ ಕಲಾವಿದರು ಕನ್ನಡ ಚಿತ್ರರಂಗದ ಅನಿವಾರ್ಯ. ಏಕೆಂದರೆ ತಾರಾ ವ್ಯವಸ್ಥೆಯನ್ನು ಈ ಚಿತ್ರರಂಗ ಅನಾದಿ ಕಾಲದಿಂದಲೂ ಅವಲಂಬಿಸಿಯೇ ಬಂದಿದೆ. ಏಕಾಏಕಿ ಆ ಮನಃಸ್ಥಿತಿ ಬದಲಾಗಲು ಸಾಧ್ಯವಿಲ್ಲ.” ಎನ್ನುತ್ತಾರೆ, ಹಿರಿಯ ಚಲನಚಿತ್ರ ಪತ್ರಕರ್ತ ಚೇತನ್‌ ನಾಡಿಗೇರ್. ‌

ಒಟ್ಟಾರೆಯಾಗಿ ಈ ಹಗ್ಗ ಜಗ್ಗಾಟ ನಿಲ್ಲಬೇಕಿದೆ. ತೊಂಭತ್ತು ತುಂಬಿದ ಕನ್ನಡ ಚಿತ್ರರಂಗಕ್ಕೆ ಇದು ಆತ್ಮಾವಲೋಕನದ ಕಾಲವೆನ್ನಿಸಿದೆ. ಕನ್ನಡ ಚಿತ್ರರಂಗವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವ ವಾಣಿಜ್ಯ ಮಂಡಳಿ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಕೂತು ಚರ್ಚಿಸಿ, ಘಾಸಿಗೊಂಡಿರುವ ಚಿತ್ರರಂಗಕ್ಕೆ ಮದ್ದು ಅರೆಯುವ ಕೆಲಸ ಮಾಡಬೇಕಿದೆ.

Read More
Next Story