ಆಗಿಲ್ಲ ʼಸಂಜು ವೆಡ್ಸ್ ಗೀತಾ 2’ ಚಿತ್ರದ ಬಿಡುಗಡೆ;  ತೆಲುಗು ನಿರ್ಮಾಪಕರ ಷಡ್ಯಂತ್ರ ಕಾರಣ?
x

ಆಗಿಲ್ಲ ʼಸಂಜು ವೆಡ್ಸ್ ಗೀತಾ 2’ ಚಿತ್ರದ ಬಿಡುಗಡೆ; ತೆಲುಗು ನಿರ್ಮಾಪಕರ ಷಡ್ಯಂತ್ರ ಕಾರಣ?

ಶ್ರೀನಗರ ಕಿಟ್ಟಿ, ರಚಿತಾ ರಾಮ್‍ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಶುಕ್ರವಾರ ಬಿಡುಗಡೆ ಆಗಬೇಕಿತ್ತು. ಚಿತ್ರ ಬಿಡುಗಡೆ ಆಗದಿರುವುದಕ್ಕೆ ತೆಲುಗು ನಿರ್ಮಾಪಕರೊಬ್ಬರ ಷಡ್ಯಂತ್ರ ಕಾರಣ ಎನ್ನಲಾಗಿದೆ.


ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್‍ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಚಿತ್ರವು ಶುಕ್ರವಾರ (ಜನವರಿ 10) ಬಿಡುಗಡೆ ಆಗಬೇಕಿತ್ತು. ಆದರೆ, ಹೈದರಾಬಾದ್‍ನ ನ್ಯಾಯಾಲಯವು ಚಿತ್ರದ ಬಿಡುಗಡೆ ಮೇಲೆ ತಡೆಯಾಜ್ಞೆ ನೀಡಿದ್ದರಿಂದ, ಚಿತ್ರವು ಅಂದುಕೊಂಡಂತೆ ಬಿಡುಗಡೆ ಆಗಲಿಲ್ಲ. ಇದೀಗ ತಡೆಯಾಜ್ಞೆ ರದ್ದಾಗಿದ್ದು, ಚಿತ್ರದ ಬಿಡುಗಡೆ ಆಗದಿರುವುದಕ್ಕೆ ತೆಲುಗು ನಿರ್ಮಾಪಕರೊಬ್ಬರ ಷಡ್ಯಂತ್ರವೇ ಕಾರಣ ಎಂದು ಹೇಳಲಾಗುತ್ತಿದೆ.

‘ಸಂಜು ವೆಡ್ಸ್ ಗೀತಾ 2’ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ವಿಧಿಸಿಲಾಗಿದೆ ಎಂಬ ಸುದ್ದಿಯೊಂದು ಬುಧವಾರ ರಾತ್ರಿ ಕೇಳಿಬಂದಿತ್ತು. ಆದರೆ, ಈ ಕುರಿತು ಚಿತ್ರತಂಡದವರು ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಕೊನೆಗೆ ಗುರುವಾರ ಸಂಜೆಯ ಹೊತ್ತಿಗೆ ಚಿತ್ರತಂಡದವರು, ಚಿತ್ರ ಬಿಡುಗಡೆಯಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು. ಸದ್ಯದಲ್ಲೇ ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಲಾಗುತ್ತದೆ ಎಂದು ಹೊಸ ಪೋಸ್ಟರ್ ಬಿಡುಗಡೆ ಮಾಡಿದರು.

ಇಷ್ಟಕ್ಕೂ ಆಗಿದ್ದೇನು? ಎಂಬುದರ ಕುರಿತು ಸೂಕ್ತ ಮಾಹಿತಿ ಇರಲಿಲ್ಲ. ನಿರ್ಮಾಪಕ ಛಲವಾದಿ ಕುಮಾರ್‍, ಹೈದರಾಬಾದ್ ಮೂಲದ ವ್ಯಕ್ತಿಯಿಂದ ಚಿತ್ರ ನಿರ್ಮಾಣಕ್ಕೆ ಹಣ ಪಡೆದಿದ್ದು, ಅದನ್ನು ಬಿಡುಗಡೆಗೂ ಮುನ್ನ ತೀರಿಸದಿದ್ದರಿಂದ ಅವರು ತಡೆಯಾಜ್ಞೆ ತಂದಿದ್ದಾರೆ ಎಂಬ ಗುಸುಗುಸು ಕೇಳಿಬಂದಿತ್ತು. ಆದರೆ, ಇದೀಗ ನಡೆದಿದ್ದೇನು ಎಂಬ ವಿಷಯವನ್ನು ಸ್ವತಃ ಕುಮಾರ್ ಹೇಳಿಕೊಂಡಿದ್ದಾರೆ.

ಯಾವಾಗ ನ್ಯಾಯಾಲಯವು ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಿತೋ, ತಕ್ಷಣವೇ ಹೈದರಾಬಾದ್‍ಗೆ ತಮ್ಮ ವಕೀಲರೊಂದಿಗೆ ಹೋದ ನಿರ್ಮಾಪಕರು, ನ್ಯಾಯಾಲಯಕ್ಕೆ ಪ್ರಕರಣವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಇದರಿಂದ ಚಿತ್ರದ ಬಿಡುಗಡೆಗೆ ಇದ್ದ ತಡೆಯಾಜ್ಞೆ ತೆರವಾಗಿದೆ. ಸಮಸ್ಯೆಗಳೆಲ್ಲಾ ಬಗೆಹರಿದ ಕಾರಣ, ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ಕುಮಾರ್ ಘೋಷಿಸಿದ್ದಾರೆ. ಬಹುಶಃ ಮುಂದಿನ ಶುಕ್ರವಾರ (ಜನವರಿ 10) ‘ಸಂಜು ವೆಡ್ಸ್ ಗೀತಾ 2’ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇಷ್ಟಕ್ಕೂ ಆಗಿದ್ದೇನು? ಈ ಕುರಿತು ಮಾತನಾಡಿರುವ ಕುಮಾರ್, ‘ನಮ್ಮ ಚಿತ್ರದ ನಿರ್ದೇಶಕ ನಾಗಶೇಖರ್ ಈ ಹಿಂದೆ ತೆಲುಗಿನಲ್ಲಿ ‘ಗುರ್ತುಂಡ ಸೀತಾಕಲಂ’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ನಿರ್ದೇಶನದ ಜೊತೆಗೆ ಅವರು ಚಿತ್ರದ ಸಹನಿರ್ಮಾಪಕರಲ್ಲೊಬ್ಬರಾಗಿದ್ದರು. ಆದರೆ, ಚಿತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಚಿತ್ರದಲ್ಲಾದ ನಷ್ಟವನ್ನು ತುಂಬಿಕೊಡಲು, ಇನ್ನೊಂದು ಚಿತ್ರ ಮಾಡಿಕೊಡುವುದಾಗಿ ಅವರು ಸಹನಿರ್ಮಾಪಕ ರಾಮರಾವ್‍ ಚಿಂತಪಲ್ಲಿ ಎನ್ನುವವರಿಗೆ ಪತ್ರ ಬರೆದುಕೊಟ್ಟಿದ್ದರಂತೆ. ಬೇರೆ ಚಿತ್ರಗಳನ್ನು ಮಾಡಿದರೂ, ಅದರಲ್ಲಿ ಬರುವ ಲಾಭದಲ್ಲಿ ದುಡ್ಡು ಕೊಡುತ್ತೇನೆ ಎಂದು ಹೇಳಿದ್ದರಂತೆ. ಆ ನಂತರ ಅವರು ಕನ್ನಡದಲ್ಲಿ ಎರಡು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ತಮಗೆ ಚಿತ್ರ ಮಾಡಿಕೊಡುವುದಾಗಿ ಹೇಳಿ, ನಾಗಶೇಖರ್‍ ಮಾತು ತಪ್ಪಿದ್ದಾರೆ ಮತ್ತು ಬೇರೆ ಚಿತ್ರ ಮಾಡಿದರೂ ನಷ್ಟವನ್ನು ಭರಿಸಿಲ್ಲ ಎಂದು ರಾಮರಾವ್‍, ನ್ಯಾಯಾಲಯಕ್ಕೆ ಆ ಪತ್ರವನ್ನು ತೋರಿಸಿ ತಮಗೆ ಅನ್ಯಾಯವಾಗಿದೆ ಎಂದು ಹೇಳಿದ್ದರು. ನಮಗೆ ತೊಂದರೆ ಕೊಡುವ ಸಲುವಾಗಿ ವಿನಾಕಾರಣ ನಮ್ಮ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ತಂದರು’ ಎಂದು ಕುಮಾರ್ ಹೇಳಿದ್ದಾರೆ.

ಆದರೆ, ನಾಗಶೇಖರ್ ನಮ್ಮ ಚಿತ್ರದ ನಿರ್ದೇಶಕರಷ್ಟೇ. ಈ ಚಿತ್ರಕ್ಕೆ ನಾನು ಮತ್ತು ನನ್ನ ಮಗ ಅಧಿಕೃತ ನಿರ್ಮಾಪಕರು ಎನ್ನುವ ಅವರು, ‘ಈ ಚಿತ್ರದ ನಿರ್ಮಾಣಕ್ಕೂ ನಾಗಶೇಖರ್‍ ಅವರಿಗೂ ಯಾವುದೇ ಸಂಬಂಧವಿಲ್ಲ. ಈ ಚಿತ್ರವನ್ನು ಪವಿತರ ಫಿಲಂಸ್ ಇಂಟರ್‍ನ್ಯಾಷನಲ್‍ ಸಂಸ್ಥೆಯ ಮೂಲಕ ನಿರ್ಮಿಸಿದ್ದೇವೆ. ಇದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಾಗ, ತಡೆಯಾಜ್ಞೆಯನ್ನು ತೆರವು ಮಾಡಲಾಗಿದೆ. ಇದರಿಂದ ನಮಗೆ ಸಾಕಷ್ಟು ನಷ್ಟವಾಗಿದೆ. ಮೇಲಾಗಿ ಮನಸ್ಸಿಗೆ ತುಂಬಾ ನೋವಾಗಿದೆ. ಸದ್ಯದಲ್ಲೇ ಬೆಂಗಳೂರಿನಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ಮಾಡಿ, ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುತ್ತೇವೆ’ ಎಂದು ಹೇಳಿದ್ದಾರೆ.

‘ಸಂಜು ವೆಡ್ಸ್ ಗೀತಾ 2’ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ರಚಿತಾ ರಾಮ್, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶ್ರೀಧರ್‍ ವಿ. ಸಂಭ್ರಮ್‍ ಸಂಗೀತ ಸಂಯೋಜಿಸಿದ್ದಾರೆ

Read More
Next Story